ವಿದ್ಯಾಗಿರಿ: ಪರಿಸರ ಮಾಲಿನ್ಯಕ್ಕೆ ನಾವೇ ಕಾರಣೀಕರ್ತರು, ಇದರ ಪರಿಣಾಮವನ್ನು ನಾವೇ ಎದುರಿಸಬೇಕು ಎಂದು ಆಳ್ವಾಸ್ಕಾ ಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್)ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ನಾವು ತಿನ್ನುವ ಆಹಾರವೂ ಕಲುಷಿತಗೊಂಡಿದೆ. ಇದರಿಂದಾಗಿ ಅನಾರೋಗ್ಯದ ಸಮಸ್ಯೆಯೂ ಹೆಚ್ಚಿದೆ ಎಂದರು. ಭಾರತದಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗಿದೆ. ನಮ್ಮ ದೇಶದ ಸಮತೋಲನಕ್ಕೆ ಕನಿಷ್ಠ ಶೇಕಡ 20ರಷ್ಟು ಕಾಡಿನ ಅವಶ್ಯಕತೆ ಇದೆ. ಆದರೆ ಪ್ರಸ್ತುತವಾಗಿ ಕೇವಲ ಶೇ.8 ರಿಂದ 9 ಮಾತ್ರ ಕಾಡಿನ ಪ್ರಮಾಣವಿರುವುದು ಅಪಾಯದ ಸಂಕೇತ ಎಂದರು. ಪರಿಸರ ದಿನವಾದರೂ ಒಬ್ಬ ವ್ಯಕ್ತಿ ಒಂದು ಗಿಡವನ್ನು ಬೆಳೆಸುವುದರಿಂದ ಪರಿಸರಕ್ಕೆ ಆತ ನೀಡುವ ಕೊಡುಗೆ ಅಪಾರವಾಗಿರುತ್ತದೆ.
ನೀರನ್ನು ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪಡೆಯುವ ಸಮಯ ದೂರ ಇಲ್ಲ.. ಇನ್ನಾದರೂ ಜನತೆ ಎಚ್ಚರರಾಗಿ ನೀರನ್ನು ಮಿತವಾಗಿ ಬಳಸ ಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಗೂಡುಗಳನ್ನು ರಚಿಸಲು ಪರಿಸರಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಆದರೆ ಮಾನವನಿಗೆ ಆಸರೆಯಾಗಿರುವ ಭೂಮಿಯನ್ನು ಆತನೇ ಹಾಳು ಮಾಡುತ್ತಿದ್ದಾನೆ ಎಂದರು. ದೇಶದ ರಾಜದಾನಿ ದೆಹಲಿಯಲ್ಲಿ ಪ್ರಸ್ತುತವಾಗಿ ಜನರು ಆಮ್ಲಜನಕವನ್ನು ಖರೀದಿಸುತ್ತಿದ್ದಾರೆ. ಮುಂದಿನ ಪೀಳಿಗೆ ದೇಶದ ಎಲ್ಲಾ ಭಾಗಗಳಲ್ಲಿ ಆಮ್ಲಜನಕವನ್ನು ಖರೀದಿಸುವ ಪರಸ್ಥಿತಿ ಬರಬಹುದು ಎಂದು ಹೇಳಿದರು. ಪರಿಸರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇನ್ನು ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯದ ಪ್ರಮಾಣ ಹೆಚ್ಚಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್ಮೂರ್ತಿ ಎಚ್. ಕೆ ಇದ್ದರು. ಪ್ರಶಿಕ್ಷಣಾರ್ಥಿ ಸುರೇಶ್ ಸ್ವಾಗತಿಸಿ, ಸಮರ್ಥ್ ನಿರೂಪಿಸಿದರು.