ಯೋಗ ಆಧ್ಯಾತ್ಮಿಕ ಚಿಕಿತ್ಸೆಯಾಗಿ ಮನುಷ್ಯನ ವಿಕಾಸದ ಪ್ರಕ್ರಿಯೆಗೆ ಪ್ರಾಯೋಗಿಕ ವಿಧಾನವಾಗಿದೆ. ಮನಸ್ಸನ್ನು ಸಮತೋಲನಗೊಳಿಸಲು ಯೋಗ ಸಹಕಾರಿ. ವ್ಯಕ್ತಿಯ ಶಕ್ತಿಯನ್ನು ಸಂತುಲಿತ ರೀತಿಯಲ್ಲಿ ಸುಧಾರಿಸಲು ಮತ್ತು ಸದೃಢಗೊಳಿಸುವಲ್ಲಿ ರಾಮಬಾಣವಾಗಿ ಯೋಗ ಇಂದು ದೇಶ ಮತ್ತು ವಿದೇಶದಲ್ಲಿ ಪ್ರಚಲಿತವಾಗಿದೆ. ಪ್ರಧಾನಿ ಮೋದಿಯವರ ಸಂಕಲ್ಪದಂತೆ ಭಾರತದಲ್ಲಿ ಯೋಗ ದಿನಾಚರಣೆಯ ಪರ್ವ ಪ್ರಾರಂಭವಾಗಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ಯೋಗಕ್ಕೆ ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಶಕ್ತಿ ಇದೆ. ಪ್ರತೀ ದಿನ ಯೋಗಾಸನ ಮಾಡಿದಾಗ ನಾವು ಆರೋಗ್ಯವಂತರಾಗಿರಬಹುದು. ಮಹಿಳೆಯರು ತಮ್ಮ ಮನೆ ಕೆಲಸದ ನಡುವೆ ಯೋಗಾಭ್ಯಾಸ ಮಾಡಬೇಕು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ. ಯೋಗವು ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೇ ಮಾನಸಿಕ ಶಾಂತಿ ನೀಡುವುದರೊಂದಿಗೆ ನಮ್ಮ ಮಾನಸಿಕ ಒತ್ತಡ ಕಡಿಮೆಗೊಳಿಸುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ತಿಳಿಸಿದರು.
ಜೂಯಿನಗರದ ಬಂಟ್ಸ್ ಸೆಂಟರ್ ನಲ್ಲಿ ಜೂನ್ 21ರಂದು ಅಪರಾಹ್ನ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದವರ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಮಾಜದ ಮಹಿಳೆಯರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಯೋಗದ ಮೂಲಕ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೇ, ಸಣ್ಣಪುಟ್ಟ ಖಾಯಿಲೆಗಳ ವಿರುದ್ಧ ಹೋರಾಡಲು ಶಕ್ತಿ ಬರುತ್ತದೆ. ಯೋಗ ಮತ್ತು ಧ್ಯಾನದಲ್ಲಿ ಅತೀ ದೊಡ್ಡ ರೋಗಗಳಿಗೆ ಪರಿಹಾರಗಳಿವೆ. ಯೋಗ ಒಂದು ದಿನಕ್ಕೆ ಸೀಮಿತವಾಗಿರದೇ ಅದು ನಮ್ಮ ದೈನಂದಿನ ಕೆಲಸವಾಗಬೇಕು. ಇಂತಹ ಕಾರ್ಯಕ್ರಮಗಳಿಗೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಸಹಕಾರ ಸದಾ ಇದೆ ಎಂದು ತಿಳಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿ ಸ್ವಾಗತಿಸಿ, ಯೋಗದ ಬಗ್ಗೆ ಮಾಹಿತಿ ನೀಡಿ, ಆರೋಗ್ಯವನ್ನು ಕಾಪಾಡುವಲ್ಲಿ ಯೋಗ ಉಪಯುಕ್ತವಾಗಿದೆ. ಆದ್ದರಿಂದ ಪ್ರತೀ ದಿನ ಸಮಯ ಮಾಡಿಕೊಂಡು ಯೋಗ ಮಾಡಬೇಕು. ಮಹಿಳಾ ವಿಭಾಗದ ಸದಸ್ಯೆಯರು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಯೋಗ ಮತ್ತು ಪ್ರಾಣಯಾಮದ ಧನಾತ್ಮಕ ಪರಿಣಾಮಗಳನ್ನು ನಾವು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ. ತಾವೆಲ್ಲರೂ ಯೋಗದ ಮಹತ್ವ ತಿಳಿದುಕೊಳ್ಳಬೇಕು ಮತ್ತು ಅದನ್ನು ಜೇವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಮಹಿಳಾ ವಿಭಾಗದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಿಮ್ಮೆಲ್ಲರ ಸಹಕಾರ ಮುಂದೆಯೂ ಸದಾ ಇರಲಿ ಎಂದರು.
ಈ ಸಂದರ್ಭ ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಶಾಂತಾ ಎನ್.ಶೆಟ್ಟಿ, ಜತೆ ಕಾರ್ಯದರ್ಶಿ ಲಲಿತಾ ಶೆಟ್ಟಿ, ಕೋಶಾಧಿಕಾರಿ ಉಷಾ ಶೆಟ್ಟಿ, ಜತೆ ಕೋಶಾಧಿಕಾರಿ ಮಾಯಾ ಎಸ್.ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಯೋಗ ಪಟು ಸ್ವಾತಿ ಶೆಟ್ಟಿ ಘಾಟ್ಕೋಪರ್ ಅವರು ಯೋಗಭ್ಯಾಸ ನಡೆಸಿಕೊಟ್ಟು, ಯಾವ ಯೋಗ ಧ್ಯಾನದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ಸ್ವಾತಿ ಶೆಟ್ಟಿ ಅವರನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಗೌರವಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.