ವಿದ್ಯಾದೇವಿ ಸರಸ್ವತಿಯನ್ನು ಆರಾಧಿಸುವಂತಹ ಸಂಸ್ಕಾರವನ್ನು ಅಳವಡಿಸುವ ದೇಗುಲ ಆಗಬೇಕು. ಅದು ಈ ಪಲ್ಲಿಪ್ಪಾಡಿಯಲ್ಲಿ ನಿರ್ಮಾಣವಾಗಲಿದೆ. ಆದರ್ಶವಾಗಿರುವಂತಹ ವಿದ್ಯಾರ್ಥಿಗಳು ಈ ವಿದ್ಯಾದೇಗುಲದಿಂದ ಹೊರಬರಲಿ ಎಂದು ಮಂಗಳೂರು ರಾಮಕೃಷ್ಣ ಮಠದ ಅಧಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ರವರು ತಿಳಿಸಿದರು. ಅವರು ಆದಿತ್ಯವಾರ ನಡೆದ ಬಂಟ್ವಾಳ ತಾಲೂಕಿನ ಪಲ್ಲಿಪಾಡಿಯಲ್ಲಿ ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ಆಶ್ರಯದಲ್ಲಿ ೬ ಎಕರೆ ಜಮೀನಿನಲ್ಲಿ ರೂ. ೭೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗುರುಕುಲ ಮಾದರಿಯ ‘ರಾಮಕೃಷ್ಣ ವಿದ್ಯಾದೇಗುಲ’ಕ್ಕೆ ಶಿಲಾನ್ಯಾಸ ಮಾಡಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಒಳ್ಳೆಯ ಜವಾಬ್ದಾರಿ ಅರಿತ, ಒಳೆಯ ವ್ಯಕ್ತಿತ್ವ ಹೊಂದಿರುವ, ಉತ್ತಮ ಗುರಿಯನ್ನು ಹೊಂದಿರುವ ಒಂದು ಆಶಾ ಮನೋಭಾವ ಹೊಂದಿರುವ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ವಿದ್ಯಾಭ್ಯಾಸ ಇಂದಿನ ಮಕ್ಕಳಿಗೆ ಸಿಗಬೇಕು. ಅದು ಈ ವಿದ್ಯಾದೇಗುಲದಿಂದ ನೆರವೇರಲಿ ಎಂದು ಹಾರೈಸಿದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ ಪಾರಂಪರಿಕ ಭಾಷೆಯಾದ ಸಂಸ್ಕೃತ, ರಾಷ್ಟ್ರಭಾಷೆಯಾದ ಹಿಂದಿ, ಮಾತೃಭಾಷೆಯಾದ ಕನ್ನಡ ಮತ್ತು ಪ್ರಸ್ತುತ ಜಗತ್ತಿನಲ್ಲಿ ಬದುಕುಲು ಅನಿವಾರ್ಯವಾದ ಇಂಗ್ಲೀಷ್ ಈ ನಾಲ್ಕು ಭಾಷೆಗಳನ್ನು ಕಲಿತು ಈ ವಿದ್ಯಾದೇಗುಲದ ವಿದ್ಯಾರ್ಥಿಗಳು ಪರಿಣಿತರಾಗುತ್ತಾರೆ. ಈ ವಿದ್ಯಾ ದೇಗುಲದಲ್ಲಿ ಗುರುಕುಲ ಶಿಕ್ಷಣ, ಹಾಸ್ಟೆಲ್ ಹಾಗೂ ಆಧ್ಯಾತ್ಮಿಕವಾದ ಕಲಿಕೆಗೆ ಸಂಬಂಧಿಸಿದ ಬೇರೆ ಬೇರೆ ರೀತಿಯ ಕಟ್ಟಡಗಳು ನಿರ್ಮಾಣವಾಗಲಿದೆ. ಆಟ, ಪಾಠದ ಜೊತೆಯಲ್ಲಿ ಕ್ರೀಡೆ, ಕೃಷಿಗೆ ಪೂರಕವಾದ ವಾತವಾರಣ ಈ ವಿದ್ಯಾದೇಗುಲದಲ್ಲಿ ಸಿಗಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಿಟ್ಟೆ ಪರಿಗಣಿತ ವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ, ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಮಂತ್ರಿ ಬಿ.ರಮಾನಾಥ ರೈ, ಬಡಗ ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಶ್ರೀ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಉಪಸ್ಥಿತರಿದ್ದರು. ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಪ್ರಾಧ್ಯಾಪಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.