ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್ ನಲ್ಲಿ “ಪಟ್ಲ ಸಂಭ್ರಮ 2024” ಅದ್ದೂರಿಯಾಗಿ ಯಶಸ್ವಿಯಾಗಿ ನಡೆದ ಹಿನ್ನಲೆಯಲ್ಲಿ ಅಡ್ಯಾರ್ ನ ಸಂಭ್ರಮ ಸಭಾಂಗಣದಲ್ಲಿ ಧನ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಪಟ್ಲ ಸಂಭ್ರಮ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯಲು 40 ಘಟಕಗಳು ಅವಿರತವಾಗಿ ದುಡಿದಿರುವುದೇ ಕಾರಣವಾಗಿದೆ. ಬಂಧುಗಳ ಸಹಕಾರಕ್ಕಾಗಿ ಸದಾ ಚಿರಋಣಿಯಾಗಿದ್ದೇನೆ. ನನ್ನನ್ನು ಪ್ರೀತಿಸುವ ಬಂಧುಗಳನ್ನು ನನ್ನ ಹೃದಯದಲ್ಲಿ ಆರಾಧಿಸುತ್ತೇನೆ ಎಂದು ಭಾವನಾತ್ಮಕವಾಗಿ ನುಡಿದರು. ಎಲ್ಲರೂ ಸ್ವಇಚ್ಛೆಯಿಂದ ದುಡಿದಿದ್ದಾರೆ. ಚಲನಚಿತ್ರ ನಟ ಕಿಚ್ಚ ಸುದೀಪ್ ಸಮಾರಂಭದಲ್ಲಿ ಭಾಗವಹಿಸಿರುವುದರಿಂದ ಜನರನ್ನು ನಿಯಂತ್ರಿಸಲು ಸ್ವಲ್ಪ ಕಷ್ಟವಾಯಿತು. ಫೌಂಡೇಶನ್ ನ ಕಾರ್ಯಕ್ರಮವನ್ನು ನೋಡಿ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮುಂದಿನ ವರ್ಷ ಪಟ್ಲ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಎಷ್ಟು ದಿನ ಮಾಡಬೇಕು, ಕಾರ್ಯಕ್ರಮ ಯಾವ ರೀತಿ ನಡೆಯಬೇಕು ಎಂಬುದನ್ನು ಎಲ್ಲಾ ಘಟಕಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಚಂದ್ರಹಾಸ ಶೆಟ್ಟಿ ರಂಗೋಲಿ, ಸರಪಾಡಿ ಅಶೋಕ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಕಿಶೋರ್ ಡಿ ಶೆಟ್ಟಿ, ಪುಷ್ಪರಾಜ ಶೆಟ್ಟಿ ಕುಡುಂಬೂರು, ಆರತಿ ಆಳ್ವ, ನಿವೇದಿತಾ ಶೆಟ್ಟಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಭುಜಬಲಿ ಧರ್ಮಸ್ಥಳ, ದಿವಾಕರ ಶೆಟ್ಟಿ ಅಡ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ನೂತನ ಟ್ರಸ್ಟಿಗಳಾಗಿ ನೇಮಕಗೊಂಡ ಪುಷ್ಪರಾಜ ಶೆಟ್ಟಿ ಕುಡುಂಬೂರು, ಧನಂಜಯ ಶೆಟ್ಟಿ ಸುರತ್ಕಲ್, ಶೈಲಾ ಶಂಕರ್ ಶೆಟ್ಟಿ ಸುರತ್ಕಲ್, ಚಿತ್ರಾ ಜೆ ಶೆಟ್ಟಿ ಸುರತ್ಕಲ್, ಮಂಜುಶ್ರೀ ಚಂದ್ರಹಾಸ ಶೆಟ್ಟಿ, ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ಮೊದಲಾದವರನ್ನು ಪಟ್ಲ ಸತೀಶ್ ಶೆಟ್ಟಿ ಅವರು ಶಾಲು ಹೊದಿಸಿ ಗೌರವಿಸಿದರು. ಪ್ರದೀಪ್ ಆಳ್ವ ವಂದಿಸಿದರು.