ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮ ಅಂತರ್ಜಾಲ ಮಾಧ್ಯಮ ಸಂಸ್ಥೆ ಬಂಟ್ಸ್ ನೌ ತಾನು ಒಂದೂವರೆ ದಶಕ ಪೂರೈಸಿದ ಸಂಭ್ರಮವನ್ನು ತ್ರಿಪಂಚಕ ಅನುಬಂಧ ಎಂಬ ವಿಶೇಷ ಶೀರ್ಷಿಕೆಯಡಿ ದೇಶ ವಿದೇಶಗಳ ಪ್ರತಿಷ್ಠಿತ ಘಟಾನುಘಟಿ ಬಂಟ ನಾಯಕರ ಉಪಸ್ಥಿತಿಯಲ್ಲಿ ವಿಜೃಭಣೆಯಿಂದ ಆಚರಿಸಿ ಜಾಗತಿಕ ಮಟ್ಟದ ಬಂಟ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.
ಅಂದು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಬಂಟ ನಾಯಕ ಮಣಿಗಳನ್ನು ಬಂಟರತ್ನ, ಬಂಟ ವಿಭೂಷಣ ಹಾಗೂ ಯುವ ಬಂಟ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಜೊತೆಗೆ ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಸಾಧನೆ ತೋರಿ ಗಮನ ಸೆಳೆಯುತ್ತಿರುವ ವ್ಯಕ್ತಿಗಳನ್ನು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸತ್ಕರಿಸಿ ಸ್ಮರಣಿಕೆ ನೀಡಲಾಯಿತು.
ರಂಜಿತ್ ಶೆಟ್ಟಿ ಸ್ಥಾಪಿಸಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ಸ್ ನೌ ಅಂತರ್ಜಾಲ ಮಾಧ್ಯಮ ಬಂಟ ಬಾಂಧವರ ಚಟುವಟಿಕೆಗಳನ್ನು ಎಚ್ಚರಿಕೆ ಕಣ್ಣುಗಳಿಂದ ಗಮನಿಸುತ್ತಾ ವರದಿ ಮಾಡುವುದರ ಜೊತೆಗೆ ವಿಶೇಷ ಸುದ್ಧಿಗಳು, ವೈಚಾರಿಕ ಸಾಂದರ್ಭಿಕ ಲೇಖನಗಳು, ಅಂಕಣ ಬರಹಗಳು, ವ್ಯಕ್ತಿ ಪರಿಚಯ, ಸಾಧಕರ ಪರಿಚಯ ಹಾಗೂ ಬಂಟ ಬಾಂಧವರ ವ್ಯಾಪಾರ ಉದ್ದಿಮೆಗಳಿಗೆ ಸಂಬಂಧ ಪಟ್ಟ ಜಾಹೀರಾತುಗಳನ್ನು ಪ್ರಕಟಿಸುತ್ತಾ ವಿಶ್ವ ಮಟ್ಟದಲ್ಲಿ ಬಂಟ ಸಮುದಾಯದ ಗಮನ ಸೆಳೆಯುತ್ತಿದೆ.
ಮೇ 19 ಮಂಗಳೂರು ಪುರಭವನದಲ್ಲಿ ಮೇಳವಿಸಿ ಕಳೆಗಟ್ಟಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ವಹಿಸಿದ್ದು, ಬಂಟ್ಸ್ ನೌ ಮಾಧ್ಯಮ ಬಳಗ ಅದರಲ್ಲೂ ಮುಖ್ಯವಾಗಿ ರಂಜಿತ್ ಶೆಟ್ಟಿ ಅವರ ಪರಿಶ್ರಮ ಸಾಧನೆ ಹಾಗೂ ಧ್ಯೇಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಮಾತಾಡುತ್ತಾ, ರಂಜಿತ್ ಅವರೊಬ್ಬ ಭಿನ್ನ ಚಿಂತನೆಯ ಆದರ್ಶ ಪತ್ರಕರ್ತ.
ಸಮಾಜದವರ ಸಹಕಾರವನ್ನು ಮರೆಯದೆ ಅದರ ಋಣ ಸಂದಾಯ ಜೊತೆಗೆ ವಿಶ್ವ ಬಂಟರ ಏಕತೆ ಸಮಗ್ರತೆಗೆ ಟೊಂಕ ಕಟ್ಟಿದ ಒಬ್ಬಂಟಿ ಹೋರಾಟಗಾರರು.
ಇಂಥವರ ಕೆಲಸಕ್ಕೂ ತೊಡಕುಂಟು ಮಾಡಿ ವಿಘ್ನ ಸಂತೋಷಿಗಳಾಗಿ ಸಂತೋಷ ಪಡುವ ಕೀಳು ಮಾನಸಿಕತೆಗಳೂ ಇವೆ ಎಂಬ ವಿಚಾರ ಖೇದಕರ ಎಂದರಲ್ಲದೇ ರಂಜಿತ್ ದಂಪತಿ ಹಾಗೂ ಅವರ ಬಳಗದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು.
ಅಂದಿನ ಸುಂದರ ಸಂಧ್ಯಾ ಸಂಧಿಯಲ್ಲಿ ಅನುಸಂಧಿಸಿದ ಅನುಬಂಧ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಗೌರವ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟಿಸ್ ಶ್ರೀ ಸಂತೋಷ್ ಹೆಗ್ಡೆ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಚಂದ್ರಹಾಸ ಶೆಟ್ಟಿ, ಹರಿಪ್ರಸಾದ್ ರೈ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಲೋಕಯ್ಯ ಶೆಟ್ಟಿ, ಭವ್ಯ ಎ ಶೆಟ್ಟಿ ಮೊದಲಾದವರು ಉಪಸ್ಥತರಿದ್ದು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.
ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಗೌರವಾಧ್ಯಕ್ಷ ಡಾ.ಎ ಸದಾನಂದ ಶೆಟ್ಟಿ, ಶ್ರೀ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮೊದಲಾದವರು ಆಗಮಿಸಿದ್ದರು.
ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ರಂಜಿತ್ ಶೆಟ್ಟಿ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಬಂಟರ ಒಗ್ಗಟ್ಟನ್ನು ಬಲಪಡಿಸುವುದಾಗಿದ್ದು ಸಮಾಜಕ್ಕೆ ಉಪಕಾರ ಮಾಡಿದ ಸಮಾಜದ ಸದಸ್ಯರನ್ನು ಗುರುತಿಸಿ ಸತ್ಕರಿಸುವುದು ಎಂದರು. ಚೇಳ್ಯಾರುಗುತ್ತು ದಿವಾಕರ್ ಸಾಮಾನಿ ಆಗಮಿಸಿದ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ವಿಶೇಷ ಗೌರವ ಅತಿಥಿಗಳು, ಸಂಮಾನ ಸ್ವೀಕರಿಸಲಿದ್ದ ಗಣ್ಯರನ್ನು ಹಾಗೂ ಸಾಧಕರನ್ನು ಶಾಲು ಹೊದಿಸಿ ಹೆಸರಾಂತ ಲೇಖಕರು ಬರೆದ ಪುಸ್ತಕಗಳನ್ನು ನೀಡಿ ಗೌರವಿಸಿದರು.
ಯಕ್ಷಗಾನ ಭಾಗವತ ಧೀರಜ್ ರೈ ಸಂಪಾಜೆ ಅವರ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿ ಮುಂದಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉದ್ಘಾಟಕರಲ್ಲಿ ಒಬ್ಬರಾದ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಮಾತಾಡುತ್ತಾ, ಕೇವಲ ಹಣ ಅಂತಸ್ತುಗಳನ್ನಷ್ಟೇ ಗೌರವಿಸುವುದಲ್ಲದೇ ಸಮಾಜದಲ್ಲಿ ಸಾಮಾನ್ಯರಾದರೂ ತಾವು ಸ್ವಾಭಿಮಾನದಿಂದ ಸತ್ಯ ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದರೊಂದಿಗೆ ತಮ್ಮ ವಿಶೇಷ ಸಾಮರ್ಥ್ಯಗಳಿಂದ ಗುರುತಿಸಿಕೊಂಡರೆ ಮಾಧ್ಯಮಗಳು ಅವರನ್ನು ಗುರುತಿಸಿ ಗೌರವಿಸುವ ಒಂದು ಹೊಸ ಪರಂಪರೆ ಆರಂಭವಾಗಬೇಕು. ಅದು ಬಂಟ್ಸ್ ನೌ ಮಾಧ್ಯಮ ಮೂಲಕ ರಂಜಿತ್ ಶೆಟ್ಟಿ ಮಾಡಿ ತೋರಿಸಿದ್ದಾರೆ ಎಂದರಲ್ಲದೆ ಬಂಟ ಸಮುದಾಯದ ಏಳಿಗೆಗೆ ಒಗ್ಗಟ್ಟಿಗೆ ಶ್ರಮಿಸುವ ಸಂಘಟಕರನ್ನು ಮಹಾದಾನಿಗಳನ್ನು ಪೋಷಕರನ್ನು ಸನ್ಮಾನಿಸಬೇಕು. ಇದರಿಂದ ಸಮಾಜದ ಇತರ ಬಂಧುಗಳಿಗೆ ಒಂದು ಸಂದೇಶ ಹಾಗೂ ಪ್ರೇರಣೆ ದೊರೆತಂತಾಗುತ್ತದೆ ಎಂದರು.
ಇತರ ಗೌರವ ಅತಿಥಿಗಳು ಸಂದರ್ಭೋಚಿತವಾಗಿ ಮಾತಾಡುತ್ತಾ ಇದೊಂದು ಆದರ್ಶ ಮಾದರಿ ಕಾರ್ಯಕ್ರಮ. ಇಂದು ದೇಶದ ಭದ್ರತೆಗೆ ಪ್ರಾಣ ಪಣವೆಂಬ ಸಿದ್ಧಾಂತದ ಕರ್ನಲ್, ಹಿರಿಯ ಕೃಷಿಕರು, ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ, ಸಮಾಜಕ್ಕೆ ಅತೀ ವಿಶಿಷ್ಟ ಸೇವೆ ಸಲ್ಲಿಸುತ್ತಿರವ ವಿಶು ಶೆಟ್ಟಿ ಅಂಬಲಪಾಡಿ, ಹೀಗೆ ಭಿನ್ನವೂ ಮಾದರಿಯೂ ಆದ ರೀತಿಯ ಸಂಮಾನ ಹಾಗೂ ಸಾಧಕರಿಗೆ ನೀಡುತ್ತಿರುವ ಬಂಟರತ್ನ ಬಂಟ ವಿಭೂಷಣ ಬಿರುದುಗಳು ಇತರರಿಗೆ ಉತ್ತಮ ಕೆಲಸ ಮಾಡಲು ನೀಡುವ ಉತ್ತೇಜನ ಎಂದು ಏಕಮತದಿಂದ ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಬಂಟರತ್ನ ಪ್ರಶಸ್ತಿ ಪಡೆದ ಕರ್ನಲ್ ಜಗಜೀವನ್ ಭಂಡಾರಿ, ಡಾ.ಆರ್.ಕೆ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಸಿ.ಎ. ಎಸ್ ಬಿ ಶೆಟ್ಟಿ ಮೊದಲಾದ ಸಮಾಜದ ಗಣ್ಯರಾದರೆ, ಬಂಟ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಮಹನೀಯರು ವಿಶು ಶೆಟ್ಟಿ ಅಂಬಲಪಾಡಿ, ಮುರಳಿ ಮೋಹನ ಶೆಟ್ಟಿ, ರಾಜೇಂದ್ರ ವಿ ಶೆಟ್ಟಿ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ ಉಮೇಶ್ ಶೆಟ್ಟಿ ಹಾಗೂ ಶ್ರೀ ಪ್ರಭಾಕರ್ ವಿ ಶೆಟ್ಟಿ ಪುಣೆ. ಅದರಂತೆ ಯುವ ಸಾಧಕರಿಗೆ ಕೊಡ ಮಾಡುವ ಯುವ ಬಂಟರತ್ನ ಪ್ರಶಸ್ತಿ ಸ್ವೀಕರಿಸಿದ ಗಣ್ಯರು ಹಾರಾಡಿ ಮಂದರ ಶೆಟ್ಟಿ, ಎಚ್ ಪ್ರಸನ್ನ ಚಂದ್ರ ಶೆಟ್ಟಿ ಹಾಗೂ ಡಾ.ಹರ್ಷಕುಮಾರ್ ರೈ ಮಾಡಾವು. ಪ್ರಶಸ್ತಿ ಸ್ವೀಕರಿಸಿ ಉತ್ತರ ರೂಪದಲ್ಲಿ ಮಾತಾಡಿದವರೆಲ್ಲರೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಯ ಈ ವಿಶಿಷ್ಟ ಕಾರ್ಯಕ್ರಮವನ್ನು ಮನ ತುಂಬಿ ಕೊಂಡಾಡಿದರಲ್ಲದೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಸಮಾಜಪರ ಕಾರ್ಯೋನ್ಮುಖರಾಗುವ ಭರವಸೆ ನೀಡಿದರು. ಹಿರಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ತನ್ನ ಭಾಷಣದಲ್ಲಿ ಬಂಟರು ನಡೆದು ಬಂದ ದಾರಿ, ಅವರ ವಿಶೇಷ ನಾಯಕತ್ವ ಗುಣ, ಸಮಾಜದಲ್ಲಿ ಅವರಿಗೆ ದೊರೆಯುವ ಸ್ಥಾನ ಮಾನಗಳಿಗೆ ಮುಂದೆಯೂ ಕುಂದಾಗದಂತೆ ನಮ್ಮ ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ನೀಡಿದರು.
ಪ್ರವೀಣ್ ಭೋಜ ಶೆಟ್ಟಿಯವರು ಅಧ್ಯಕ್ಷ ಭಾಷಣ ಸಂದರ್ಭದಲ್ಲಿ ರಂಜಿತ್ ಶೆಟ್ಟಿ ಅವರ ಸಂಘಟನಾ ಕೌಶಲವನ್ನು ಕಥನ ಪ್ರಯೋಗ ಮೂಲಕ ಕೊಂಡಾಡುತ್ತಾ, ಯುವಕ ರಂಜಿತ್ ಅವರ ಹಿಂದೆ ಮೂವರು ತರುಣಿಯರು ಹಿಂದೆ ಬಿದ್ದಿದ್ದರು. ಅವರು ಯಾರೆಂದರೆ ಯಕ್ಷಿಣಿ, ಯಶಸ್ವಿನಿ, ಸಂಪ್ರೀತಿನಿ. ಮೂವರನ್ನು ನಾನು ಸ್ವೀಕರಿಸುವುದು ಸಾಧ್ಯವಿಲ್ಲ. ಸಂಪ್ರೀತಿನಿ ನನ್ನ ಜೊತೆ ಬರಲಿ. ಹೀಗೆಂದ ಕೂಡಲೇ ಸಂಪ್ರೀತಿ ಜೊತೆಗೆ ಇತರ ಇಬ್ಬರೂ ಅವರನ್ನು ಹಿಂಬಾಲಿಸಿಕೊಂಡು ಬಂದರು. ಇದರ ಸಾರ ರಂಜಿತ್ ಎಲ್ಲರನ್ನೂ ಪ್ರೀತಿಸಿದರು. ಆದ ಕಾರಣ ಯಶಸ್ಸು ಕಲೆಗಳು ಅವರನ್ನು ಕೂಡಿಕೊಂಡವು ಎಂದು ಭಾವಪೂರ್ಣವಾಗಿ ನುಡಿದು ಮೆಚ್ಚುಗೆ ಹೇಳಿದುದರ ಜೊತೆಗೇ ರಂಜಿತ್ ದಂಪತಿಗಳನ್ನು ನಾವೆಲ್ಲ ಸಂಮಾನಿಸಲೇ ಬೇಕು. ಕಾರಣ ಅವರು ಇತರರನ್ನು ಸಂಮಾನಿಸುತ್ತ ತಾನು ತನಗಾಗಿ ವೇದಿಕೆ ಮೇಲೆ ಒಂದು ಆಸನವನ್ನೂ ಇಟ್ಟುಕೊಂಡಿಲ್ಲ ಎಂದರು. ರಂಜಿತ್ ದಂಪತಿಗೆ ಸಭಾಸದರ ಸನ್ಮಾನಿತರ ಪ್ರಶಸ್ತಿ ವಿಭೂಷಿತರ ಪರವಾಗಿ ಆತ್ಮೀಯವಾಗಿ ಸಂಮಾನಿಸಿದರು. ಅದೇ ರೀತಿ ತನ್ನ ಅಮೂಲ್ಯ ಸಮಯವನ್ನು ನೀಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಹೃದಯಸ್ಪರ್ಶಿ ರೀತಿಯಲ್ಲಿ ಅಭಿಮಾನ ಪೂರ್ವಕವಾಗಿ ಸಂಮಾನಿಸಲಾಯಿತು.
ಪ್ರಚಾರ ಸಮಿತಿ ಸಂಚಾಲಕ ಸಂಕಬೈಲ್ ಮಂಜುನಾಥ ಅಡಪ ಹಾಗೂ ಸ್ವಾಗತ ಸಮಿತಿಯ ಸಂಚಾಲಕ ಚೇಳ್ಯಾರು ಗುತ್ತು ದಿವಾಕರ ಸಾಮಾನಿ ಹಾಗೂ ವಿಶೇಷ ಸಹಕಾರ ನೀಡಿದ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಮಾತಾಡಿ ಮೆಚ್ಚುಗೆ ಸೂಚಿಸಿದರು. ಕದ್ರಿ ನವನೀತ ಶೆಟ್ಟಿ, ಡಾ.ಪ್ರಿಯಾ ಹರೀಶ್ ಶೆಟ್ಟಿ, ಆರ್ ಜೆ ನಯನಾ ಶೆಟ್ಟಿ ಹಾಗೂ ಯುವ ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗಲು ಸಹಕರಿಸದ ನಾಲ್ವರು ನಿರೂಪಕರನ್ನು ಗೌರವಿಸಲಾಯಿತು. ದಿವಾಕರ ಸಾಮಾನಿ ಚೇಳ್ಯಾರು ಗುತ್ತು ಅಭಾರ ಮನ್ನಿಸಿದರು. ಮನರಂಜನೆ ಅಂಗವಾಗಿ ಸಂಗೀತಾ ರಸಮಂಜರಿ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ ಹಾಗೂ ಕಲ್ಜಿಗದ ಮಾಯ್ಕರೆ ಪಂಜುರ್ಲಿ ನಾಟಕ ಪ್ರದರ್ಶಿಸಲ್ಪಟ್ಟು ಕೊನೆಯಲ್ಲಿ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.