ಇವತ್ತು ಮಲ್ಯಾಡಿ ಶಿವರಾಮ ಶೆಟ್ಟರ ಹುಟ್ಟಿದ ಹಬ್ಬವಂತೆ. ಮಲ್ಯಾಡಿ ಶಿವರಾಮ ಶೆಟ್ಟರು ನಮ್ಮ ಪರಿಸರದ ಜನಸಾಮಾನ್ಯರ ಪರ ಬಡಿದಾಡುವ ರಾಜಕಾರಣಿ ಮಾತ್ರವೇ ಅಲ್ಲ ಅವರೊಬ್ಬ ಧಾರ್ಮಿಕ ಮುಂದಾಳು, ಇವತ್ತು ಸಂಜೆ ಐದೂವರೆ ಗಂಟೆಗೆ ಮಲ್ಯಾಡಿಯ ಗಣಪತಿ ದೇವಸ್ಥಾನಕ್ಕೆ ಹೋದರೂ ಶಿವರಾಮಣ್ಣ ಈ ಪ್ರಾಯದಲ್ಲಿಯೂ ತನ್ನ ಪಂಚೆಯನ್ನ ಗಟ್ಟಿಯಾಗಿ ಕಟ್ಟಿಕೊಂಡು ಹದಿನೆಂಟರ ಹುಡುಗರನ್ನ ನಾಚಿಸುವಂತೆ ಭಜನೆ ಕುಣಿಯುತ್ತಾರೆ.
ಒಮ್ಮೆ ಶಿವರಾಮಣ್ಣನ ಜೊತೆಗೆ ಎಲ್ಲೋ ದೂರ ಹೋಗುವ ಸಂದರ್ಭ ಬಂದಿತ್ತು. ಬರುವಾಗ ತಡವಾಗಿತ್ತು ಊಟ ಮಾಡೋಣ ಶಿವರಾಮಣ್ಣ ಅಂದ್ರೆ ’ಇಲ್ಲ ನೀವೆಲ್ಲ ಊಟ ಮಾಡಿ, ನಾನು ಮನೆಗೆ ಹೋಗಿ ಭಜನೆ ಮಾಡಿದ ಮೇಲೇ ನನ್ನ ಊಟ’ ಎಂದರು. ಈ ಬದ್ಧತೆ ಯಾರಲ್ಲಿದೆ ಹೇಳಿ? ರಾತ್ರಿಯ ಭಜನೆ ಮಾಡದೆ ಊಟವೇ ಮಾಡದಿರುವ ಶಿವರಾಮಣ್ಣನಿಗಿಂತಲೂ ದೊಡ್ಡ ಧಾರ್ಮಿಕ ವ್ಯಕ್ತಿ ಬೇಕಿದೆಯಾ?
ಇವತ್ತು ಮಲ್ಯಾಡಿ ಶಿವರಾಮಣ್ಣನನ್ನ ರಾಜಕೀಯದ ಕಾರಣಕ್ಕೆ ದೂರುವವರಿರಬಹುದು. ರಾಜಕಾರಣವೇ ಹಾಗೆ, ಅಲ್ಲಿ ಶತ್ರುಗಳ ಸಾಮ್ರಾಜ್ಯವೇ ವಿನಾಕಾರಣ ಬೆಳೆದು ನಿಲ್ಲುತ್ತದೆ. ರಾಜಕೀಯವಾಗಿ ಅವರ ಮತ್ತು ನನ್ನ ನಿಲುವುಗಳು ಭಿನ್ನ, ಕುಶಾಲಿಗೆ ಅವರ ಜೊತೆ ನನ್ನ ವಾದವೂ ಇರುತ್ತದೆ, ಆದರೆ ಅದರಾಚೆಗೆ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದೇ ಬರುವುದು ನಾನು. ಮನುಷ್ಯನ ವೈಯಕ್ತಿಕ ಸಿದ್ದಾಂತಗಳ ಆಚೆಗೂ ವ್ಯಕ್ತಿಗತವಾದ ಸ್ನೇಹಪರತೆ ಎಲ್ಲರಲ್ಲೂ ಇರಬೇಕಲ್ಲವೆ?. ಹಾಲಾಡಿಯಂತ ಹಾಲಾಡಿಯವರ ಅಬ್ಬರದ ಕಾಲದಲ್ಲಿಯೂ ಮಲ್ಯಾಡಿ ಶಿವರಾಮಣ್ಣನ ಪಂಚಾಯತ್ ಶಕ್ತಿಯನ್ನ ಅಲುಗಾಡಿಸಲಿಕ್ಕೇ ಆಗಿರಲಿಲ್ಲ, ಒಂದು ಸೀಟಿಗಾಗಿ ಅಲ್ಲಿ ಕೊಟ್ಟ ಹೋರಾಟದ ಕಥೆ ನನಗೂ ಗೊತ್ತಿದೆ. ಅದು ಶಿವರಾಮ ಶೆಟ್ಟರ ತಾಕತ್ತು.
ರಸ್ತೆಯಲ್ಲಿ ಓಡುತ್ತಿರುವ ಲಾರಿಯನ್ನ ನೋಡಿ ಇದು ಎಷ್ಟು ಸಾವಿರ ಕಿಲೋಮೀಟರ್ ಓಡಿದೆ ಎನ್ನುವುದನ್ನ ಅಂದಾಜಿನಲ್ಲೇ ಹೇಳಬಲ್ಲ ಅನುಭವ ಅವರದ್ದು. ಅರವತ್ತರ ದಶಕದಲ್ಲೇ ಮಹಾದೇವಿಪ್ರಸಾದ್ ಮಲ್ಯಾಡಿ ಎನ್ನುವ ಟ್ರಾನ್ಸ್ಪೋರ್ಟ್ ವ್ಯಹವಾರ ಶುರುಮಾಡಿದವರು ಅವರು. ಇವತ್ತೂ ಕೂಡ ಬೆಳಿಗ್ಗೆ ಪೂಜೆ ಮಾಡಿದವರು ದೂಪದ ಗಿಂಡಿಗೆ ಹಿಡಿದು ತನ್ನ ಅವಿಷ್ಟೂ ಗಾಡಿಗೆ ಪೂಜೆ ಮಾಡಿ ನಮಸ್ಕಾರ ಮಾಡುತ್ತಾರೆ! ಅವರ ಹಳೆಕಾಲದ ಲಾರಿಯನ್ನ ಧರ್ಮಸ್ಥಳದ ಮ್ಯೂಸಿಯಮ್ಮಿಗೆ ಖಾವಂದರು ಕೇಳಿದರು ಎಂದು ಅದನ್ನ ಅಲ್ಲಿಗೆ ಕಳುಹಿಸಿ ಕೊನೆಯದಾಗಿ ಆ ಗಾಡಿಗೆ ಉದ್ಧಂಡವಾಗಿ, ತೀರ ಭಾವುಕವಾಗಿ ಮಲ್ಯಾಡಿಯವರು ಅಡ್ಡಬಿದ್ದು ನಮಸ್ಕಾರ ಮಾಡಿದ್ದು ನೋಡಿದರೆ ತನ್ನಲ್ಲಿರುವ ವಸ್ತುಗಳ ಜೊತೆಗೂ ಈ ಮನುಷ್ಯ ಅದೆಷ್ಟು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾನೆ ಎನ್ನುವುದು ಅರ್ಥವಾಗುತ್ತದೆ.
ಇದೂ ಕೂಡ ಒಂದು ಯಶಸ್ಸಿನ ಮಂತ್ರ ಎನ್ನುವುದನ್ನ ನೀವು ಎಂದೂ ಮರೆಯಕೂಡದು. ನಿಮ್ಮ ವಸ್ತುಗಳನ್ನ ಪ್ರೀತಿಸಿ, ಉದಾಹರಣೆಗೆ ನಾನೊಬ್ಬನೇ ಹೋಗುತ್ತಿರುವಾಗ ನನ್ನ ಕಾರಿನ ಜೊತೆಗೆ ನಾನೇ ಮಾತಾಡಿಕೊಳ್ಳುತ್ತಾ ಹೋಗುತ್ತೇನೆ! ಹುಚ್ಚಾ ಅಂತೀರಾ? ನನ್ನ ಹುಚ್ಚು ಇಂಥವೆ! ನನ್ನೂರಿನ ಪದ್ಧಜ್ಜಿ ತನ್ನ ದನಗಳ ಜೊತೆಗೆ ನಿರಂತರವಾಗಿ ಮಾತಾಡುತ್ತಿದ್ದಳು, ಅವಳ ತೆಂಗಿನ ಮರದ ಜೊತೆಗೆ ಮಾತಾಡುತ್ತಿದ್ದಳು, ತುಳಸಿ ಕಟ್ಟೆಯ ಜೊತೆಗೆ ಮಾತಾಡುತ್ತಿದ್ದಳು, ಈ ಜಗತ್ತಿನ ಪ್ರತಿಯೊಂದು ವಸ್ತುವೂ ಯೂನಿವರ್ಸ್ ಜೊತೆಗೆ ಕನೆಕ್ಟ್ ಆಗಿರುತ್ತದೆ, ಅದರ ಬಗ್ಗೆಲ್ಲ ನಾನು ಲೈಪ್ ಇಸ್ ಜಿಂಗಲಾಲ ಪುಸ್ತಕದಲ್ಲಿ ಬರೆದೂ ಇದ್ದೇನೆ. ಮಲ್ಯಾಡಿಯವರು ತನ್ನ ವಸ್ತು,ವಾಹನಗಳನ್ನ ಅಷ್ಟು ಪೂಜ್ಯ ಭಾವದಿಂದ ನೋಡುವವರು ಎನ್ನುವುದಕ್ಕೆ ಉದಾಹರಣೆ ಕೊಟ್ಟೆ.
ಪ್ರತೀ ವರ್ಷ ಮಲ್ಯಾಡಿಯವರ ಮನೆಯಲ್ಲಿ ಧರ್ಮಸ್ಥಳದ ಮೇಳದ ಯಕ್ಷಗಾನ ಆಗುತ್ತದೆ, ಈಗ ಎಲ್ಲಾ ಕಡೆಯೂ ಆಗುತ್ತದೆ. ಆದರೆ ಆಗ? ತೆಂಕಿನ ಮೇಳ ಕರಾವಳಿಗೆ ಬಂತೆಂದರೆ ಜನ ಮನೆಯಲ್ಲಿ ಮೀನು,ಮಾಂಸ ಮಾಡದೆ ಕಣಕ್ಕೆ ಸಗಣಿ ಸಾರಿಸುತ್ತಿದ್ದರು! ತೆಂಕಿನ ದೇವರ ರಥವೇ ನಮ್ಮೂರಿಗೆ ಬಂತು ಎನ್ನುವ ಭಾವ ನಮ್ಮೂರಿನ ಸಜ್ಜನರಲ್ಲಿತ್ತು. ಆ ಕಾಲದಿಂದಳು ಮಲ್ಯಾಡಿಯವರ ಮನೆಯಲ್ಲಿ ಧರ್ಮಸ್ಥಳ ಮೇಳದ ಆಟದ ಖದರ್ರೆ ಬೇರೆ.
ತೆಕ್ಕಟ್ಟೆ ಮಲ್ಯಾಡಿಯ ವ್ಯಾಪ್ತಿಯಲ್ಲಿ ಶಿವರಾಮ ಶೆಟ್ಟರು ಅದೆಷ್ಟೋ ಮನೆಗೆ ತನ್ನ ಗಾಡಿಯಲ್ಲಿ ಕಲ್ಲು,ಮಣ್ಣು, ಹೆಂಚು ಹಾಕಿಸಿದ್ದರೂ ಇಂದಿಗೂ ನೂರಾರು ಕುಟುಂಬ ಮಲ್ಯಾಡಿಯವರ ಋಣದಲ್ಲಿದೆ. ಇವತ್ತು ಶಿವರಾಮ ಶೆಟ್ಟರ ಹುಟ್ಟಿದ ಹಬ್ಬ, ಅವರ ಮೂಲ ಊರು ಕಾವಡಿ, ಮಲ್ಯಾಡಿಗೆ ಬಂದು ನೆಲೆಯಾದದ್ದು ಶೆಟ್ಟರ ಹಿರಿಯರು. ಅವರಂತವರು ಈ ಸಮಾಜಕ್ಕೆ ಬೇಕು, ಅವರ ಆಯಸ್ಸು ವೃದ್ಧಿಯಾಗಲಿ, ಶೆಟ್ಟರ ಎಲ್ಲಾ ಪ್ರಾರ್ಥೆನೆಗಳೂ ಸಿದ್ದಿಯಾಗಲಿ.
-ವಸಂತ್ ಗಿಳಿಯಾರ್