ವಿದ್ಯಾಗಿರಿ: ಆಯುರ್ವೇದ ವೈದ್ಯ ಪದ್ದತಿಯಲ್ಲಿ ಮಾನವ ದೇಹದ ನಿರ್ದಿಷ್ಟವಾದ ಅಂಗಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಪರಿಣಾಮಕಾರಿ ಫಲಿತಾಂಶ ಪಡೆಯಲು ಮರ್ಮ ಶಾಸ್ತ್ರ- ಶ್ರೇಷ್ಠ ವೈದ್ಯಕೀಯ ಪದ್ದತಿಯಾಗಿದೆ ಎಂದು ಡಿಐಎಸ್ಎಮ್ನ ನಿವೃತ್ತ ಮರ್ಮ ಚಿಕಿತ್ಸಕ ಡಾ.ಎನ್.ವಿ ಶ್ರೀವತ್ಸ ಹೇಳಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ಶಲ್ಯ ತಂತ್ರ ಮತ್ತು ಶರೀರ ರಚನಾ ವಿಭಾಗದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಮರ್ಮ ಅಭ್ಯಾಸ-2024ರ ರಾಷ್ಟ್ರೀಯ ಮಟ್ಟದ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಕ್ಯುಪಂಕ್ಚರ್, ಆಕ್ಯು ಪ್ರೇಶರ್ ಮೂಲ ಮರ್ಮ ಶಾಸ್ತ್ರ. ಆದರೆ ಇಂದು ಮರ್ಮ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿಯುವ ಹಾಗೂ ಕಲಿಸುವ ವರ್ಗ ಕ್ಷೀಣಿಸುತ್ತಿದೆ. ನಮ್ಮ ಕಾಲದ ಶಿಕ್ಷಕರು ಉದಾರ ಮನಸ್ಸಿನಿಂದ ಈ ವಿದ್ಯೆಯನ್ನು ನಮಗೆ ಕಲಿಸಿದರು. ಆದರೆ ಇಂದಿನ ಯುವಜನತೆ ಈ ಕ್ಷೇತ್ರದಿಂದ ದೂರ ಸರಿಯುತ್ತಿರುವುದು ದುಃಖಕರ ಎಂದರು. ರೋಗವನ್ನು ನಿರ್ಣಯಿಸಲು, ಚಿಕಿತ್ಸೆ ಪಡೆಯಲು, ಹಾಗೂ ರೋಗದ ಮುನ್ಸೂಚನೆ ಪಡೆಯಲು ಈ ವೈದ್ಯ ಪದ್ದತಿ ಸಹಕಾರಿಯಾಗಿದೆ.
ಮರ್ಮಶಾಸ್ತ್ರದ ಜ್ಞಾನವನ್ನು ಪುನಃಸ್ಥಾಪಿಸುವ ಕೆಲಸ ಮಾಡಬೇಕಿದೆ. ಈ ರಾಷ್ಟ್ರೀಯ ಕಾರ್ಯಗಾರದ ಮೂಲಕ ಈ ಕ್ಷೇತ್ರದ ಮಾಹಿತಿ ಇನ್ನಷ್ಟು ನಮ್ಮ ನಡುವೆ ಚರ್ಚಿಸುವಂತಾಗಲಿ. ಸ್ಥೂಲವಾಗಿ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮರ್ಮ ವಿಜ್ಞಾನ ಉಪಯುಕ್ತ. ಈ ಶಾಸ್ತ್ರವನ್ನು ವಿಶ್ವದಲ್ಲಿಪ್ರಚುರ ಪಡಿಸಿದ ಖ್ಯಾತಿ ದಕ್ಷಿಣ ಭಾರತದವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ್ ಆಳ್ವ ಆತ್ಮವಿಶ್ವಾಸ ಯಾವಾಗಲೂ ಮಹತ್ತರ ಆಕಾಂಕ್ಷೆ, ಚೇತೋಹಾರಿ ಮನಸ್ಸು ಹಾಗೂ ಸ್ವಯಂ ನಂಬಿಕೆಯ ಉಪಉತ್ಪನ್ನ.
ಇಲ್ಲಿ ನೆರೆದಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇದಕ್ಕೆ ತಕ್ಕ ಉದಾಹರಣೆ ಎಂದರು. ಡಿಐಎಸ್ಎಮ್ನ ನಿವೃತ್ತ ಮರ್ಮ ಚಿಕಿತ್ಸಕ ಡಾ ಎನ್ ವಿ ಶ್ರೀವತ್ಸಾ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮರ್ಮ ಚಿಕಿತ್ಸಾ ತಜ್ಞ ಡಾ ಸೈಫುದ್ದೀನ್ ಗುರುಕ್ಕಲ್, ಸೌಕ್ಯ ಆಯುರ್ವೇದ ಆಸ್ಪತ್ರೆಯ ಸಿಎಂಒ ಡಾ ಅನಸೂಯಾ ಚೈತನ್ಯ, ಕೇರಳದ ಆಮಿಯಾ ಆಯುರ್ವೇದ ನಸಿರ್ಂಗ್ ಹೋಂನ ಮುಖ್ಯ ವೈದ್ಯಾಧಿಕಾರಿ ಡಾ ವಿನೋದ್ ಕೃಷ್ಣನ್ ಕಾರ್ಯಗಾರವನ್ನು ನಡೆಸಿಕೊಟ್ಟರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಮಂಜುನಾಥ್ ಭಟ್, ಪ್ರಭಾರ ಪ್ರಾಂಶುಪಾಲ ಹಾಗೂ ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ ಸುಬ್ರಹ್ಮಣ್ಯ ಪದ್ಯಾಣ, ರಚನಾ ಶರೀರ ವಿಭಾಗದ ಮುಖ್ಯಸ್ಥೆ ಡಾ. ಸ್ವಪ್ನ ಇದ್ದರು. ಕಾರ್ಯಕ್ರಮವನ್ನು ಡಾ ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿ, ಡಾ. ಗೀತಾ ಮಾಕರ್ಂಡೆ ನಿರೂಪಿಸಿ, ಡಾ. ಮಂಜುನಾಥ್ ಭಟ್ ವಂದಿಸಿದರು.