ವಿದ್ಯಾಗಿರಿ: ಪ್ರಪಂಚದಲ್ಲಿ ನಿಮ್ಮನ್ನು ಸೋಲಿಸುವಂತಹ ಶಕ್ತಿ ಯಾವುದು ಇಲ್ಲ, ಶಿಸ್ತು ಎಂಬ ಸನ್ಮಾರ್ಗವನ್ನು ಪಾಲಿಸಿದರೆ ಸಾಕು, ಯಶಸ್ಸು ನಿಮ್ಮಪಾಲಾಗಲಿದೆ ಎಂದು ಬೆಂಗಳೂರಿನ ಆರ್ ವಿ ಶಿಕ್ಷಣ ಸಂಸ್ಥೆಗಳ ರಾಷ್ಟೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ನಿರ್ದೇಶಕ ಡಾ.ಟಿ.ವಿ.ರಾಜು ಹೇಳಿದರು. ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ -2024 ರಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಮೊದಲು ತಮ್ಮ ಗುರಿ, ಮುಂದಿನ ನಿಲುವೇನು ಎನ್ನುವುದರ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕು. ಅದು ನಿಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಲಿದೆ. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ನೀವು ಕೂಡ ಸ್ಪರ್ಧಿಗಳಾಗಿ, ನಿಮ್ಮ ಉದ್ದೇಶ, ಸತತ ಪ್ರಯತ್ನ ನಿಮ್ಮನ್ನು ಯಶಸ್ಸಿನ ತುತ್ತತುದಿಯನ್ನು ತಲುಪಲು ಸಹಾಯಮಾಡುತ್ತದೆ.


ನನಗಿದು ಅಸಾಧ್ಯ, ನನ್ನ ಕೈಲಾದಷ್ಟು ಮಾಡುತ್ತೇನೆ ಎಂದು ಮುನ್ನಡೆಯುವುದು ತಪ್ಪು. ನಿಮ್ಮ ಪಯಣ ಎಂಬುದು
ಯಾವಾಗಲೂ ನಿಮ್ಮ ಗುರಿಯ ದಿಕ್ಕಿನೆಡೆಗೆ ಧೈರ್ಯದಿಂದ ಸಾಗಬೇಕು. ನಿಮ್ಮ ಕುರಿತು ನೀವು ಮೊದಲು ಧನಾತ್ಮಕವಾಗಿ ಯೋಚಿಸಿ, ನಿಮಲ್ಲಿರುವ ಶಕ್ತಿಯನ್ನು ನೀವೂ ಮೊದಲು ಅರಿಯಿರಿ. ಅದರ ಜೊತೆಗೆ ನಿಮ್ಮ ಸರ್ವತೋಮುಖ ಬೆಳವಣಿಗೆಯ ಶೈಕ್ಷಣಿಕ ಕೌಶಲ್ಯಗಳು ಪ್ರತ್ಯಕ್ಷ ಪಾತ್ರವನ್ನು ವಹಿಸುತ್ತವೆ. ಪೂರ್ವಜರ ಮಾತಿನಂತೆ ನೀವು ಏನಾದರೂ ಸಾಧಿಸಬೇಕಾದರೆ ಅತೀನಿದ್ರೆ, ಆಲಸ್ಯ, ಹೆದರಿಕೆ, ಬೇಜವಾಬ್ದಾರಿತನ, ಕೆಲಸ ಮುಂದೂಡುವುದು ಇವುಗಳನ್ನು ತೊರೆದು ಮಾಡಬೇಕು ಇಲ್ಲವಾದರೆ ಜೀವನದಲ್ಲಿ ಏನನ್ನು ಸಾಧಿಸಲಾರಿರಿ ಎಂದರು.

ಕಾಲೇಜಿನ ಮೌಲ್ಯಮಾಪನ ಕುಲಸಚಿವ ಡಾ. ನಾರಾಯಣ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಅವಕಾಶಗಳು ದೊರೆಯುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಪರಿಶ್ರಮ ಪಡುವುದು, ನಿಮ್ಮ ಕೈಲಾದಷ್ಟನ್ನು ಮಾಡುವುದು ಒಳ್ಳೆಯದು. ಆಗ ಮಾತ್ರ ಒಬ್ಬ ಸಾಧಕರಾಗಲು ಸಾಧ್ಯ ಮತ್ತು ಇದೇ ನಿಮ್ಮ ಸಾಧನೆಯ ಮೂಲ ಮಾರ್ಗವಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ವಾರ್ಷಿಕ ವರದಿ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ವಿಧ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ 7 ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ , ಪಂಜಾಬ್ನ ಲೂಧಿಯಾನ್ ನಲ್ಲಿ ನಡೆದ ರಾಷ್ಟಮಟ್ಟದ ಯುವ ಜನ ಉತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ 15 ವಿಧ್ಯಾರ್ಥಿಗಳಿಗೆ ಸಾಂಸ್ಕತಿಕ ಕ್ಷೇತ್ರದಲ್ಲಿ ಹಾಗೂ ಅಸ್ಸಾಂ, ಬಿಹಾರ, ಭುವನೇಶ್ವರ ,ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರಮಟ್ಟದ ವಿವಿಧ ಸ್ಫರ್ಧೆಗಳಲ್ಲಿ ಸಾಧನೆಗೈದ 24ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಸ್ಪಂದನಾ ಹಾಗೂ ಸುಜನ್ ಶೆಟ್ಟಿ ನಿರೂಪಿಸಿ, ಅಭಯ ಹೆಗ್ಡೆ ಅತಿಥಿ ಪರಿಚಯ ಮಾಡಿದರು, ಅನಘಾ ಸ್ವಾಗತಿಸಿ, ಸ್ಪರ್ಶಾ ವಂದಿಸಿದರು. ತದನಂತರ ಕಾಲೇಜು ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.





































































































