ಪ್ರಸ್ತುತ ದಿನಮಾನಗಳಲ್ಲಿ ಸಮಾಜ ಸುಧಾರಕರ, ಮಹನೀಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ಅವರ ತತ್ವಾದರ್ಶಗಳನ್ನು ಮರೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ವಿಷಾದಿಸಿದರು. ಕೃಷ್ಣಮೂರ್ತಿ ಪುರಂನ ನಮನ ಕಲಾಮಂಟಪದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು- ಚಾಮರಾಜನಗರ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಕಾಯಕದಲ್ಲಿ ನಿಷ್ಠೆ ತೋರಿಸುವ ಐವರಿಗೆ ಕಾಯಕ ಶ್ರೇಷ್ಠ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿಯೇ ಸಮಾನತೆಗಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದರು. ಇಂದು ಅದೇ ಮೀಸಲಾತಿ ಮತಗಳಿಕೆಯ ಆಸ್ತ್ರವಾಗಿದೆ. ಕೆಲವೇ ಕುಟುಂಬಗಳ ಸ್ವತ್ತಾಗಿದ್ದ ಇದು ನ್ಯಾಯವಲ್ಲ. ಮೀಸಲಾತಿ ಆರ್ಹ ಬಡವರಿಗೆ ತಲುಪಬೇಕು. ಮತ ಗಳಿಕೆಗಾಗಿ ಜಾತಿಯ ವಿಷ ಬೀಜ ಬಿತ್ತುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು. ಮೈಸೂರು ವಿಶ್ವವಿದ್ಯಾನಿಲಯ ಸರ್ ಎಂ. ಜಿ. ಬಸವರಾಜ ಮಾತನಾಡಿ, ರೈತರು ಕೆಟ್ಟ ದಾರಿಗೆ ಹೋಗಬಾರದು. ಪರಸ್ಪರ ಸಹಕಾರಿಗಳಾಗಿ ಒಳ್ಳೆಯ ಆಲೋಚನೆ ಮಾಡಬೇಕು, ಭೂಮಿ ತಾಯಿಗೆ ಗೌರವ ಕೊಡಬೇಕು. ಸಾವಯವ, ಸಮಗ್ರ ಕೃಷಿ ಮಾಡಬೇಕು, ದನಕರುಗಳನ್ನು ಸಾಕಿ, ಸಹಜೀವನ ನಡೆಸಬೇಕು ಎಂದು ತಿಳಿಸಿದರು.
ಜೆ ಎಸ್ ಎಸ್ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಕ ಡಾ ಶ್ಯಾಮ ಪ್ರಸಾದ್ ಶೆಟ್ಟಿ ಸೇರಿದಂತೆ ಐದು ಜನ ಸಾಧಕರಿಗೆ ಕಾಯಕ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಕ್ಕೂಟದ ರಾಜ್ಯ ಖಜಾಂಚಿ ಎಂ.ಬಿ.ಚೇತನ್ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲಿಯೂ ಕೆರೆಗಳನ್ನು ಗುರುತಿಸಬೇಕು. ಅವುಗಳಿಗೆ ನೀರು ತುಂಬಿಸುವಂತೆ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಅತ್ತಹಳ್ಳಿ ದೇವರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಹೇಶ್ ಮತ್ತು ತಂಡದವರು ರೈತಗೀತೆ ಹಾಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಬರಡನಪುರ ನಾಗರಾಜ್ ಸ್ವಾಗತಿಸಿದರು. ಶರಣು ವಿಶ್ವವಚನ ಫೌಂಡೇಶನ್ ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.