“ಕಾಪಾಡುವ ಧೈವವೇ ಕಾಡುವ ವಿಧಿ ಆದಾಗ ಹಿಡಿದ ಹೂಮಾಲೆಯೂ ಹಾವಾಗಿ ಕಾಡುತ್ತೆ” ಅನ್ನುವುದಕ್ಕೆ ಸಾಕ್ಷಿ ಆದವರು ಕುಂದಾಪುರದ ಕಂಡ್ಲೂರು ಸಮೀಪದ ಜಯರಾಮ ಶೆಟ್ಟಿ. ಮುಂಬಯಿಯಿಂದ ಇವತ್ತು ಬಹಳ ಸುಲಭವಾಗಿ ನಾವು ಕರಾವಳಿಗೆ ತಲುಪಲು ಕೊಂಕಣ ರೈಲ್ವೆ ಇದೆ. ಆ ಕೊಂಕಣ ರೈಲ್ವೆಯ ಕಾಮಗಾರಿಯಲ್ಲಿ ತನ್ನ ಬದುಕನ್ನು ಕಳೆದುಕೊಂಡ ಜಯರಾಮಣ್ಣನ ಕರುಣಾಜನಕ ಕಥೆಯಿದು.
ಹತ್ತಿರ ಹತ್ತಿರ ಮೂವತ್ತೈದು ವರ್ಷಗಳ ಹಿಂದೆ ಒಬ್ಬ ಸಜ್ಜನ ವ್ಯಕ್ತಿ ವಿಧಿಯ ಕ್ರೂರತೆಗೆ ಸಿಕ್ಕಿ ಬದುಕು ಮೂರಾ ಬಟ್ಟೆಯಾಗಿಸಿಕೊಂಡವರು.ಕೊಂಕಣ ರೈಲ್ವೆಯ ಹೊಸ ಮಾರ್ಗದ ಶರವೇಗದ ಕಾರ್ಯ ನಡೆಯುತ್ತಿತ್ತು. ರೈಲ್ವೆ ಹಳಿ ಹೊದಿಸುವ ಜವಾಬ್ದಾರಿ ಒಂದು ಖಾಸಗಿ ಸಂಸ್ಥೆಗೆ ಸರಕಾರ ಕಾಂಟ್ರಾಕ್ಟ್ ಕೊಟ್ಟಿತ್ತು. ಆ ಖಾಸಗಿ ಕಂಪೆನಿಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದ ಜಯರಾಮ ರೈಲ್ವೆ ಹಳಿಯ ಮೇಲ್ವಿಚಾರಣೆ ಜವಾಬ್ದಾರಿಯಲ್ಲಿ ನಿರತರಾಗಿದ್ದಾಗ ದೊಡ್ಡದೊಂದು ಬಂಡೆ ಅವರ ಬೆನ್ನ ಮೇಲಿ ಬಿದ್ದು ಜಯರಾಮರನ್ನು ಮತ್ತೆಂದೂ ಮೇಲೇಳದಂತೆ ಮಾಡಿ ವಿಧಿ ತನ್ನ ಅಟ್ಟಹಾಸ ಮೆರೆದಿತ್ತು. ಭವಿಷ್ಯದ ಬಗ್ಗೆ ಒಂದಷ್ಟು ಕನಸು ಕಂಡಿದ್ದ ಜಯರಾಮ ಹಾಸಿಗೆ ಹಿಡಿದು ಬಿಟ್ಟರು. ಕಳೆದ ಮೂರೂವರೆ ದಶಕದಿಂದ ಇನ್ನೊಬ್ಬರ ಸಹಾಯವಿಲ್ಲದೆ ತನ್ನ ನಿತ್ಯ ಕರ್ಮಗಳನ್ನೂ ಪೂರೈಸಲಾಗದ ದುಸ್ಥಿತಿ ಜಯರಾಮರದ್ದು. ವೈದ್ಯಕೀಯ ಲೋಕಕ್ಕೂ ಆಶ್ಚರ್ಯ ಎಂಬ ರೀತಿಯಲ್ಲಿ ಇವತ್ತು ಅವರು ಬದುಕಿ ಉಳಿದಿದ್ದಾರೆ. ಕಡ್ಡಿ ಕೋಲಿನಂತಿರುವ ಅವರನ್ನು ಕಂಡಾಗ ಕರುಳು ಚುರ್ ಎಂದಿತು. ಕಣ್ಣಾಲಿಗಳು ತುಂಬಿ ಬಂದವು. ಬೆಡ್ ಸೌರ್ಸ್ ಆಗಿ ಮೈ ಎಲ್ಲಾ ಗಾಯ ಗಾಯ. ಜೀವದಲ್ಲಿ ಮಾಂಸವಿಲ್ಲದೆ ಮೂಳೆಗಳು ತಾಮುಂದು ನಾಮುಂದು ಎಂದು ತಮ್ಮ ಇರುವಿಕೆಯನ್ನು ಹೊರ ಜಗತ್ತಿಗೆ ತೋರಿಸುತ್ತಿವೆ. ಮನೆಯ ಸ್ಲಾಪಿನ ಮೇಲಿನಿಂದ ಹೊತ್ತಿ ಉರಿಯುವ ಬಿಸಿಯಲ್ಲಿ ಆ ಜೀವ ಹೇಗೆ ಬದುಕುತ್ತಿದೆಯೋ ಭಗವಂತ ಬಲ್ಲ.
ಜಯರಾಮಣ್ಣನ ತಾಯಿ ಬದುಕಿದಷ್ಟು ಕಾಲ ಮಗನ ಸೇವೆ ಮಾಡಿದರು. ತೊಂಬತ್ತ ಮೂರು ವರ್ಷ ಬದುಕಿದ ಹೆತ್ತಮ್ಮ ತೀರಿ ಹೋದ ಮೇಲೆ ಜಯರಾಮ ಅವರ ಎಲ್ಲಾ ಕೆಲಸಗಳನ್ನು ಅವರ ಅಕ್ಕ, ಭಾವ, ಸೊಸೆ ಇವರಲ್ಲದೇ ಅವರ ಸೇವೆಗೆ ಧಾವಿಸಿ ಬರುವ ಅವರ ಗೆಳೆಯ ನಾಗೇಶ ಇವರುಗಳನ್ನು ಮನದಾಳದಿಂದ ಅಭಿನಂದಿಸಬೇಕು. ಇವತ್ತಿನ ದಿನ ಮಾನಸದಲ್ಲಿ ಇಂತಹ ದೇವತಾ ಮನಸ್ಸುಗಳೂ ಈ ಲೋಕದಲ್ಲಿ ಇದ್ದಾರಲ್ಲ ಇಂತಹವರ ಇರುವಿಕೆಯಿಂದಾಗಿ ಮಳೆ ಬೆಳೆ ಸಮಯಕ್ಕನುಗುಣವಾಗಿ ಆಗುತ್ತಿದೆ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ರಾಜ್ಯ ಹಾಗು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಅವರ ಬದುಕಿನ ಕತೆ ಬಿತ್ತರಿಸಿದವು. ND TV ಬಿತ್ತರಿಸಿದ ಸುದ್ದಿ ಕಂಡು ನಾನು ಹರಸಾಹಸ ಪಟ್ಟು ಅವರನ್ನು ಪರಿಚಯಿಸಿಕೊಂಡೆ. ಯಾರಾದರೂ ಒಂದು ವಾಹನ ಕೊಟ್ಟರೆ ನನ್ನ ಗೆಳೆಯ ನಾಗೇಶ ಬಾಡಿಗೆ ಮಾಡಿ ನನ್ನ ಔಷದಿಯ ಖರ್ಚಿಗೆ ಸಹಾಯ ಮಾಡಿದಲ್ಲಿ ಉಪಕಾರ ಆಗುತ್ತೆ ಅಂದಾಗ ನನ್ನ ಊರಿನಲ್ಲಿದ್ದ ಒಂದು ಕಾರನ್ನು ಕವಿ ಶಾಂತಾರಾಮಣ್ಣನ ಮೂಲಕ ಜಯರಾಮಣ್ಣನಿಗೆ ತಲುಪಿಸಿದೆ. ಆ ಕಾರಿನಿಂದ ಅವರ ಕಷ್ಟ ಎಷ್ಟು ದೂರಾಯಿತೋ ಗೊತ್ತಿಲ್ಲ.
ಹಾಗೆಯೇ ಅರಬ್ ದೇಶದಲ್ಲಿ ತುಳು ನಾಡಿನ ಶ್ರೇಷ್ಠ ಉದ್ಯಮಿಯಾದ ರವಿ ಶೆಟ್ಟಿಯವರು ಸಹ ಜಯರಾಮಣ್ಣನ ಕಷ್ಟಕ್ಕೆ ಮುಂದೆ ಬಂದರು. ಒಂದಷ್ಟು ವರ್ಷಗಳಿಂದ ಪ್ರತಿ ತಿಂಗಳು ನನ್ನ ಅಮ್ಮನಿಗೆ ಹಣ ಕಳಿಸುವ ಹೊತ್ತಲ್ಲಿ ನನ್ನ ಶಕ್ತ್ಯಾನುಸಾರ ಅಣ್ಣನ ಮದ್ದಿಗಾಗಿ ತಪ್ಪದೇ ಹಣ ಕಳಿಸುತ್ತಾ ಬಂದಿರುವೆ. ಸರಕಾರದ ಯಾವುದೇ ಸವಲತ್ತು ಅವರಿಗೆ ಸಿಗುತ್ತಿಲ್ಲ. ಒಂದಷ್ಟು ಜನ ನಾವಾಗುತ್ತೇವೆ ನಿಮ್ಮ ಕಷ್ಟಕ್ಕೆ ಅಂದದ್ದು ಟೊಳ್ಳು ಭರವಸೆಗೆ ಸೀಮಿತವಾಯಿತು. ವಿದೇಶದಲ್ಲಿ ಕೆಲಸಕ್ಕಿದ್ದು ಅವರ ಸಹಾಯಕ್ಕೆ ಬರುತ್ತಿದ್ದ ಅವರ ಸೊಸೆಯ ಗಂಡ ಕಳೆದ ನಾಲ್ಕು ತಿಂಗಳ ಹಿಂದೆ ತೀರಿ ಹೋದ ಮೇಲೆ ಮತ್ತೆ ಜಯರಾಮಣ್ಣ ಕುಗ್ಗಿದ್ದಾರೆ. ಜಗ್ಗಿದ್ದಾರೆ. ಸೊಸೆಯ ಸಣ್ಣ ಸಣ್ಣ ಮಕ್ಕಳ ಭವಿಷ್ಯ ಅವರ ಕಣ್ಣೆದುರು ಬಂದಾಗ ಜಯರಾಮಣ್ಣ ಕನಲುತ್ತಾರೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಜಯರಾಮಣ್ಣನ ಜೀವನ ನಮಗೆ ಸ್ಪೂರ್ತಿದಾಯಕ. ನಾವು ಆ ಕಷ್ಟ ಈ ಕಷ್ಟ ಅನ್ನುವವರು ಅಣ್ಣನ ಕಷ್ಟ ನೋಡಿದರೆ ಅದರೆದುರು ನಮ್ಮದು ಏನೂ ಅಲ್ಲ ಅನ್ನುವುದು ಸತ್ಯ. ಹದಿನೈದು ವರ್ಷಗಳಿಂದ ಅವರನ್ನು ಫೋನಿನಲ್ಲಿಯೇ ವಿಚಾರಿಸುತ್ತಿದ್ದ ನಾನು ಇವತ್ತು ಅವರನ್ನು ಮುಖತ: ಭೇಟಿಯಾದೆ. ಒಂದಷ್ಟು ಹೊತ್ತು ಅವರೊಂದಿಗಿದ್ದು ಅವರ ನೋವನ್ನು ಕಂಡು ಬಂದೆ. ಅವರೊಂದಿಗೆ ಮಾತನಾಡಿ ಬರುವಾಗ ಮನಸ್ಸು ಭಾರ ಭಾರ. ಇಷ್ಟೇಲ್ಲಾ ನೋವು ಅವರಲ್ಲಿದ್ದರೂ ಅವರ ಮಾತಿನಲ್ಲಿ ಒಂದು ತರದ ಜೀವನ ಧೈರ್ಯ ಕಂಡು ಆಶ್ಚರ್ಯ ಚಕಿತನಾದೆ. ಜಯರಾಮ ಶೆಟ್ಟಿ ಅವರಿಗೆ ಸಹಕರಿಸಿ ಅಂತ ನಾನು ಈ ಬರಹ ಬರೆದಿಲ್ಲ. ಸಹಕರಿಸುವ ಶ್ರೇಷ್ಠ ಮನಸ್ಸು ನಿಮ್ಮದೆಂಬುದು ನನಗೆ ಗೊತ್ತು. ಹಾಗೆಯೇ ಯಾವತ್ತಾದರೂ ನಿಮಗೆ ಸಮಯ ಸಿಕ್ಕಾಗ ಅವರೊಂದಿಗೆ ಒಂದಷ್ಟು ಹೊತ್ತು ಮಾತಾಡಿ. ಅವರ ನೋವಿಗೆ ನಿಮ್ಮ ಸಿಹಿ ಮಾತೆರಡು ಮದ್ದಾಗಲಿ. ನಿಮ್ಮ ಮಾತು ಅವರಿಗೆ ಖುಷಿ ತರುವಂತಿರಲಿ. ಜಯರಾಮಣ್ಣನಿಗೆ ನೂರ್ಕಾಲದ ಆಯುಷ್ಯ ನಾನು ಹಾರೈಸಲ್ಲ. ಈ ಜಗತ್ತಿನ ಋಣ ಇದ್ದಷ್ಟು ದಿನ ಅವರು ಆರೋಗ್ಯದಿಂದ ಇರಬೇಕು. ಕ್ಷಣ ಕ್ಷಣಕ್ಕೂ ನೋವಿನ ಬಟ್ಟಲೂಟದಲ್ಲಿರುವ ಅವರ ನೋವನ್ನು ಭಗವಂತ ಕಡಿಮೆಗೊಳಿಸಬೇಕು ಎನ್ನುವುದು ನನ್ನ ಪ್ರಾರ್ಥನೆ. ನೀವು ಜಯರಾಮಣ್ಣನಲ್ಲಿ ಮಾತಾಗುವಿರಿ ಎಂಬ ತುಂಬು ಭರವಸೆಯೊಂದಿಗೆ ಅವರ ದೂರವಾಣಿ ಸಂಖ್ಯೆ ಹಂಚಿಕೊಂಡಿರುವೆ.
+91 99459 44893
ನಿಮ್ಮವ
ಪೇತ್ರಿ ವಿಶ್ವನಾಥ ಶೆಟ್ಟಿ