ತುಳುನಾಡಿನಲ್ಲಿ ಅದೆಷ್ಟೋ ಜಾತಿ, ಧರ್ಮ, ಭಾಷೆ ಆಚಾರ ವಿಚಾರ ಬಹು ಸಂಸ್ಕಾರಗಳಿದ್ದರೂ ಅನೇಕತೆಯಲ್ಲಿ ಏಕತೆಯ ನೆಲ. ದೈವ ದೇವರ ಸಂಗಮ ಭೂಮಿ. ಇಲ್ಲಿನ ಎಲ್ಲಾ ದೇವಸ್ಥಾನಗಳ ವಿಶೇಷ ಎಂದರೆ ಮಾಂಸಾಹಾರಿ ದೈವಗಳಿಗೆ ಗರ್ಭಗುಡಿಯ ಬಲ ಭಾಗದಲ್ಲೇ ನೆಲೆ ನೀಡಿರುವುದು. ಆದ್ದರಿಂದಲೇ ಆ ತನಕ ಯಾವುದೇ ಮಾರಕ ಪ್ರಾಕೃತಿಕ ವಿಕೋಪಗಳು ಇಲ್ಲಿಗೆ ಬಾಧಿಸಿದ ಚರಿತ್ರೆಯಿಲ್ಲ. ಇಲ್ಲಿನ ಯಾವುದೇ ಅತೀ ಪುರಾತನ ದೇವಾಲಯದ ಇತಿಹಾಸ ಸಂಶೋಧಿಸಿದಾಗ ಹೆಚ್ಚೆಂದರೆ 800 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ತಿಳಿಯುತ್ತದೆ. ಆದರೆ ಅದಕ್ಕಿಂತ ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಆದಿ ದ್ರಾವಿಡರು ನೆಲೆಯಾಗಿದ್ದರೆಂದೂ, ಕಾಡಾಡಿಗಳಾದ ಆ ಜನಾಂಗ ಸ್ವಂತ ಬೆಳೆ ಬೆಳೆದು (ಕೃಷಿ) ಬದುಕಲು ಬಯಲು ಪ್ರದೇಶಕ್ಕೆ ಬರುವಾಗ ತಮ್ಮ ವನ ಸಂಸ್ಕಾರದ ನಾಗ ದೈವಗಳನ್ನು ನಾಡಿನಲ್ಲಿಯೂ ಆರಾಧಿಸುತ್ತಿದ್ದರೆಂದೂ, ಆ ಕಾಲವನ್ನು ಇದಮಿತ್ಥ ಎನ್ನಲು ಅಸಾಧ್ಯ. ಆದರೆ ಇಷ್ಟು ಮಾತ್ರ ಸತ್ಯ. ನೇಗಿಲ ಸಂಸ್ಕಾರವೇ ನಾಗರಿಕತೆಯ ಮೂಲ ಆಗಿರಬೇಕಲ್ಲವೇ?
ಸರಿ ಸುಮಾರು 1400 ವರ್ಷಗಳಷ್ಟು ಸುಧೀರ್ಘ ಕಾಲ ತೌಳವ ದೇಶವನ್ನು ಸಮರ್ಥರಾದ ಆಲೂಪರ ಆಳಿದ ಚರಿತ್ರೆ ಇದೆ. ತುಳುನಾಡಿಗೆ ಜಾತಿ ಪಂಗಡದವರಿಗೂ ದೈವರಾಧನೆಯೊಂದಿಗೆ ಅವರವರ ಜಾತಿ ಪದ್ಧತಿಗನುಸಾರವಾಗಿ ಅಲಿಖಿತ ರೂಪವನ್ನು ಕೊಟ್ಟವರು. ಆನಂತರದಲ್ಲಿ ಆಳಿದ ಕದಂಬ, ಕೆಳದಿ ರಾಜರ ಕಾಲದಲ್ಲೂ ಅಷ್ಟೊಂದು ಸಂಸ್ಕಾರ ಬದಲಾವಣೆ ಆಗಲಿಲ್ಲ ಎಂಬುದು ಸಂತೋಷದ ಸಂಗತಿ. ಇಲ್ಲಿ ಪ್ರಸ್ತಾಪಿಸಲು ಹೊರಟ ಮುಖ್ಯ ವಿಷಯ ಎಂದರೆ, ಸಾಧಾರಣ ಅರ್ಧ ಶತಮಾನದಿಂದ ಈಚೆಗೆ ಬಹುಸಂಖ್ಯಾತ ತುಳುವರಾದ ಬಂಟರು, ಬಿಲ್ಲವರು, ಮೊಗವೀರರು ಇತ್ಯಾದಿ ವರ್ಗದವರು ಮುಂಬಯಿ, ಗುಜರಾತ್ ಮುಂತಾದ ಸ್ಥಳಗಳಲ್ಲಿ ಮುಖ್ಯವಾಗಿ ಹೋಟೆಲ್ ಉದ್ಯಮದಿಂದ ಆರ್ಥಿಕವಾಗಿ ಬಲಿಷ್ಠರಾದಂತೆ ತಮ್ಮನ್ನು ಹೆತ್ತ ಹೊತ್ತ ತಾಯ್ನೆಲದ ಸಂಸ್ಕಾರವನ್ನು ಕ್ರಮೇಣ ಎಳ್ಳುನೀರು ಬಿಟ್ಟು ವೈದಿಕ ಆಚರಣೆಗೆ ಆಕರ್ಷಿತರಾದರು. ಇಲ್ಲಿ ಚಿಂತಿಸಬೇಕಾದ ಅಂಶವೆಂದರೆ, ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಕಾಲದಲ್ಲಿ ಪಾಲಿಸಿಕೊಂಡು ಬಂದಿದ್ದ ಜಾತಿಪದ್ಧತಿಯ ವಿವಾಹ, ಉತ್ತರಕ್ರಿಯೆ ಮತ್ತು ದೈವರಾಧನೆಯನ್ನು ಬ್ರಾಹ್ಮಣ ವೈದಿಕರಿಗೆ ಹಸ್ತಾಂತರ ಮಾಡುತ್ತಿರುವುದನ್ನು ನೋಡುವಾಗ ಹೊಸ ನಾಗರಿಕತೆಯ ಆರಂಭ ಎನ್ನಬೇಕೋ? ಅಥವಾ ಪವಿತ್ರ ಜಾತಿ ಪರಂಪರೆಯ ಅಂತ್ಯಸಂಸ್ಕಾರ ಎನ್ನಬೇಕೋ? ಅರಿತವರು ಚಿಂತಿಸುವಂತಾಗಲಿ.
ಇದೇ ಸ್ಥಿತಿ ಮುಂದುವರೆದರೆ, ಅಂದರೆ ಈಗಾಗಲೇ ಬ್ರಾಹ್ಮಣರ ಜನಸಂಖ್ಯೆ ಕುಂಠಿತವಾಗುತ್ತಿದೆ. ಅದರಲ್ಲಿ ವೈದಿಕ ವೃತ್ತಿಗೆ ಹೋಗುವವರು ಅತಿ ವಿರಳ. ಸಂಪಾದನೆ ಎಷ್ಟಿದ್ದರೂ ಪೂಜೆಯವರನ್ನು ವರಿಸಲು ಕುಲವಧು ಒಪ್ಪುವುದಿಲ್ಲ. ದೇವಸ್ಥಾನದಿಂದ ಹೆಚ್ಚಾಗಿ ಊರಲ್ಲಿ ದೈವಸ್ಥಾನ, ನಾಗವನ, ದೈವವನ ಪ್ರತಿಷ್ಠೆ, ಶೂದ್ರರ ತರವಾಡು ಬ್ರಹ್ಮಕಲಶ, ಪ್ರತಿಷ್ಠ ವಾರ್ಷಿಕ ಶೂದ್ರರ ಮದುವೆ, ಉತ್ತರಕ್ರಿಯೆ ಇತ್ಯಾದಿ ನೂರಾರು ಕಾರ್ಯಭಾರದ ಹೊರೆಯನ್ನು ತಂತ್ರಿ ವರ್ಗದವರಿಗೆ ಹೊರಿಸಿದ್ದು ಅಕ್ಷಮ್ಯವಲ್ಲವೇ? ಮಾತ್ರವಲ್ಲ, ದಿನನಿತ್ಯ ಹೊಸ ದೇವಸ್ಥಾನ, ಭಜನಾ ಮಂದಿರದಲ್ಲೂ, ಕೊರಗಜ್ಜ, ಗುಳಿಗನ ಕಲ್ಲಿಗೂ ಬ್ರಹ್ಮಕಲಶಕ್ಕೆ ಕರೆಯುತ್ತಿದ್ದಾರೆ. ಅದಕ್ಕಾಗಿ ಅಲ್ಪಸ್ವಲ್ಪ ವೈದಿಕ ಕಲಿತವರನ್ನು ತಂತ್ರಿಗಳು ತಮ್ಮ ಕಾರ್ಯಕ್ಷೇತ್ರಕ್ಕೆ ಕರೆಸುತ್ತಿರುವಾಗ ನಿತ್ಯಪೂಜೆಗೆ ಹೆಚ್ಚಿನ ದೇವಸ್ಥಾನಕ್ಕೆ ಅರ್ಚಕರಿಲ್ಲದ ಸ್ಥಿತಿ. ಕೆಲವು ಶ್ರೀಮಂತ ದೇವಾಲಯಗಳಿಗೂ ಯೋಗ್ಯ ಅರ್ಚಕರಿಲ್ಲದಿರುವಾಗ ಗ್ರಾಮ ದೇವಸ್ಥಾನಕ್ಕೆ ಕರೆಯುವಾಗ ಕಂಬಿ ಇಲ್ಲದ ಕಾರಾಗೃಹ (ಹಳ್ಳಿ ದೇವಸ್ಥಾನದ ಪೂಜಾ ವೃತ್ತಿ) ಎಂದು ಯಾರೂ ಬರಲು ಒಪ್ಪುವುದಿಲ್ಲ. ಪೂಜಾ ಕ್ಷೇತ್ರದಲ್ಲಿ ನಿರತರಾಗಿರುವ ಅದೆಷ್ಟು ವಿವಾಹ ವಯಸ್ಸು ಮೀರಿದ ಯೋಗ್ಯರನ್ನು ಮಾತಾಡಿಸಿದಾಗ ಇನ್ಯಾರಿಗೂ ಈ ದುರ್ಗತಿ ಬಾರದಿರಲಿ ಎನ್ನದಿರುವರೇ? ಈ ಸಮಸ್ಯೆಗೆ ಪರಿಹಾರ ಇಲ್ಲವೇ?
ಪರಿಹಾರ ಇದ್ದೇ ಇದೆ. ಬಂಟರು, ಬಿಲ್ಲವರು, ಮೊಗವೀರರು ಹಾಗೂ ತಾಂತ್ರಿಕ ಶ್ರೇಷ್ಠರು ಒಂದೇ ವೇದಿಕೆಯಲ್ಲಿ ಚಿಂತಿಸಿದರೆ ಸಮಸ್ಯೆ ನಿವಾರಣೆ ಕಷ್ಟ ಸಾಧ್ಯವಲ್ಲ. ಅಂದರೆ ಅವರಿಗೆ ಅನುಕೂಲವಾಗಲು ನಮ್ಮ ವಿವಾಹ, ಉತ್ತರ ಕ್ರಿಯೆಗಳನ್ನು ನಮ್ಮ ಪೂರ್ವ ಪದ್ಧತಿಯಂತೆ ನಾವೇ ಮಾಡಿಕೊಳ್ಳುವುದು, ಮಾತ್ರವಲ್ಲ ಮಾಂಸಾಹಾರಿ ದೈವಗಳ ಯಾವ ಕಾರ್ಯವನ್ನೂ ಅವರಿಗೆ ಹೇರಬಾರದು. ಅನಗತ್ಯ ಭಜನಾ ಮಂದಿರ, ಗುಡಿಗೋಪುರ (ಆಧುನಿಕ) ಗಳಿಗೆ ಬ್ರಹ್ಮಕಲಶ ಅಗತ್ಯವೇನೆಂದು ಚರ್ಚಿಸುವುದು. ಅಂತಿಮವಾಗಿ ಶೂದ್ರರೆಲ್ಲರೂ ಚಿಂತಿಸಬೇಕಾದ ವಿಷಯ ಅಷ್ಟಮಂಗಳ ಹಾಗೂ ಇನ್ನಿತರ ಪ್ರಶೆಯೇ ನಮ್ಮ ಬದುಕಿಗೆ ದಾರಿ ಎಂಬ ಮೂಢತೆಯಿಂದ ಹೊರಗೆ ಬಂದಾಗ ಇದಕ್ಕೆಲ್ಲ ಶಾಶ್ವತ ಪರಿಹಾರ ಆಗಲಿದೆ.
ಕಡಾರು ವಿಶ್ವನಾಥ್ ರೈ