ನಮ್ಮ ನಾಡಿನಲ್ಲಿ ಅದೆಷ್ಟೋ ವೈದ್ಯರು ವಿವಿಧ ಬಗೆಯ ರೋಗಿಗಳ ಆರೋಗ್ಯ ಕಾಳಜಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇವಲ ಹಣ ಸಂಪಾದನೆ ಮಾತ್ರ ತಮ್ಮ ವೃತ್ತಿಯ ಲಕ್ಷ್ಯವಲ್ಲವೆಂದು ಸಾಬೀತು ಪಡಿಸಿ ಜನರ ಪ್ರೀತಿ ವಿಶ್ವಾಸ ಗೆದ್ದಿದ್ದಾರೆ. ಅಂಥವರ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿ ಅವರನ್ನು ಹೆಸರಿಸಬಹುದು.
ಡಾ ಸುಧಾಕರ್ ಶೆಟ್ಟಿಯವರು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಮಸ್ಯೆಗಳಿಗೆ ಸದಾ ಪರಿಹಾರ ಕಾರ್ಯಗಳಲ್ಲಿ ತಕ್ಷಣ ಸ್ಪಂದಿಸುತ್ತಾರೆ. ಬಡವರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಸೇವೆಯಲ್ಲಿ ಸುಖ ಕಾಣುವ ಇವರು ಆಧುನಿಕ ರೀತಿಯ ವೈದ್ಯೋಪಚಾರಗಳಿಂದ ವಂಚಿತರಾಗಿರುವ ಪ್ರದೇಶದ ಜನರ ಬಗ್ಗೆ ಅತೀವ ಕಾಳಜಿ ವಹಿಸುತ್ತಾ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಆರೋಗ್ಯ ಕುರಿತಂತೆ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಸೂಕ್ತ ಚಿಕಿತ್ಸೆ, ವ್ಯವಸ್ಥೆ ಮಾಡುವಂಥಹ ಒಂದು ನವೀನ ಅಭಿಯಾನವನ್ನು ಡಾ. ಸುಧಾಕರ್ ಶೆಟ್ಟರು ಹಮ್ಮಿಕೊಂಡಿದ್ದು ವೇಣೂರಿನ ಬಜ್ರೆ ಎಂಬಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ತಿಂಗಳ ಅಭಿಯಾನವನ್ನು ಎಪ್ರಿಲ್ 2 ರಂದು ಚಾಲನೆ ನೀಡಿದರು.
ಪುಣೆಯ ಖ್ಯಾತ ಮಕ್ಕಳ ವೈದ್ಯರಾಗಿರುವ ಡಾ. ಸುಧಾಕರ ಶೆಟ್ಟಿ ಅವರ ಸೂಕ್ತ ಸಲಹೆ ಸಹಕಾರದೊಂದಿಗೆ ಮೂಡಬಿದಿರೆಯ ಡಾ. ವಿನಯ ಆಳ್ವ ಅವರ ಸಂಯೋಜನೆಯಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್ ನ ಆಡಳಿತಾಧಿಕಾರಿ ಡಾ ಭಾಸ್ಕರ್ ರಾವ್, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ ಸಜಿತ್, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಡಾ ರೋಷನ್ ಮೊದಲಾದವರ ಸಹಕಾರದೊಂದಿಗೆ ಕಾರ್ಯೋನ್ಮುಖರಾಗಿದ್ದು ಮೂಡಬಿದಿರೆ ವೇಣೂರು ಪರಿಸರದ ವಿದ್ಯಾರ್ಥಿಗಳು ಹಾಗೂ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಪ್ರಕಟನೆ ತಿಳಿಸಿದೆ.