ವಿದ್ಯಾಗಿರಿ: ಉಚಿತ ವೈದ್ಯಕೀಯ ಶಿಬಿರಗಳು ಸಾಮಾನ್ಯ ಜನರಿಗೆ ಸಹಕಾರಿ. ಮೂಡುಬಿದಿರೆಯಲ್ಲಿ ಇಂತಹ ಅನೇಕ ಶಿಬಿರಗಳನ್ನು ಆಯೋಜಿಸುವ ಡಾ.ಎಂ ಮೋಹನ ಆಳ್ವ ಅವರ ಕಾರ್ಯವೈಖರಿಗೆ ಅವರೇ ಸಾಟಿ ಎಂದು ಎಸ್ಕೆಎಫ್ಎ ಲಿಕ್ಸರ್ ಇಂಡಿಯಾ ಆಡಳಿತ ನಿರ್ದೇಶಕ ರಾಮಕೃಷ್ಣ ಜಿ. ಆಚಾರ್ ಹೇಳಿದರು.
ಇಲ್ಲಿನ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್, ಶ್ರೀ ಕಾಳಿಕಾಂಬ ಸೇವಾ ಸಮಿತಿ, ಶ್ರೀ ಕಾಳಿಕಾಂಬ ಮಹಿಳಾ ಸಮಿತಿ, ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆ, ಶ್ರೀಗುರು ಕಾಷ್ಠಶಿಲ್ಪ ಸಮಿತಿ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ
ಕಣ್ಣಿನ ಆಸ್ಪತ್ರೆ ಮತ್ತು ನೇತ್ರಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಉಚಿತ ನೇತ್ರ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜ ಸೇವೆಯನ್ನು ಮಾಡುವ ಬಗೆಯಲ್ಲಿ ಆಳ್ವರು ಅನೇಕ ಜನರಿಗೆ ಆದರ್ಶವಾಗಿದ್ದಾರೆ’ ಎಂದು ಅವರು
ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ, ‘’ ಇದು ಈ ತಿಂಗಳಿನ ಮೂರನೇ ಶಿಬಿರವಾಗಿದ್ದು, ಹಿಂದಿನ ಎರಡು ಶಿಬಿರಗಳ ಅನುಭವ ಖುಷಿ ನೀಡಿದೆ. ಮನುಷ್ಯನಿಗೆ ತನ್ನ ದೇಹದ ಎಲ್ಲಾ ಅಂಗಗಳು ಮುಖ್ಯ. ಅದರಲ್ಲಿ ಕಣ್ಣು ಯಾವುದೇ ಒಂದು ವಿಷಯವನ್ನು ಅನುಭವಿಸಲು ಅವಶ್ಯಕವಾಗಿದೆ ಎಂದರು.
‘ಮೂಡುಬಿದಿರೆಯಲ್ಲಿ ಶಿಬಿರ ಆಗಬೇಕು. ಸಮಾಜದ ಕಟ್ಟ ಕಡೇಯ ವ್ಯಕ್ತಿಗೂ ತಲುಪಬೇಕು ಎಂಬುದು ನಮ್ಮ ಕನಸಾಗಿದೆ’ ಎಂದರು. ಈ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಏಪ್ರಿಲ್ 4 ಹಾಗೂ ಮುಸ್ಲಿಂ ಸಮುದಾಯದವರಿಗೆ ಏಪ್ರಿಲ್ 29ರಂದು ಉಚಿತ ನೇತ್ರ ತಪಾಸಣಾ ಶಿಬಿರ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ನಡೆಯಲಿದೆ. ಈ ಶಿಬಿರದ ಸಂಪೂರ್ಣ ಉಪಯೋಗವನ್ನು ಪಡೆಯುವಂತೆ ತಿಳಿಸಿದರು.
ಮೂಡುಬಿದಿರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್. ಆರ್. ಹರೀಶ್ ಆಚಾರ್ಯ, ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಗುರುಪ್ರಸಾದ್, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ. ಸಜಿತ್ ಎಂ. ಇದ್ದರು.
ಡಾ. ನಮ್ರತಾ ಕುಲಾಲ್ ನಿರೂಪಿಸಿದರು ಹಾಗೂ ಪತ್ರಕರ್ತ ಹಾಗೂ ಕಾರ್ಯಕ್ರಮದ ಸಂಚಾಲಕ ಬಿ. ಸೀತಾರಾಮ ಆಚಾರ್ಯ ವಂದಿಸಿದರು. ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಮಂಜುನಾಥ್ ಭಟ್
ಸ್ವಾಗತಿಸಿದರು. ಇಂದಿನ ಶಿಬಿರದಲ್ಲಿ 193 ಸಾರ್ವಜನಿಕರು ಪಾಲ್ಗೊಂಡು, ಇದರಲ್ಲಿ 106 ಜನರಿಗೆ ಕನ್ನಡಕದ ವ್ಯವಸ್ಥೆಯನ್ನು ಮಾಡಲಾಯಿತು. 23 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ನೋಂದಾಯಿಸಿಕೊಂಡರು.