ಮೂಡುಬಿದಿರೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ವಿಜಯನಗರದ ಸಾಧನಾ ಕೋಚಿಂಗ್ ಕೇಂದ್ರದ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗುರುವಾರ ಇಲ್ಲಿ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಗೆ ಸಹಿ ಮಾಡಿದ ಬಳಿಕ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ‘ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ, ಐಎಎಸ್, ಐಪಿಎಸ್, ಕೆಪಿಎಸ್ಸಿ ಸೇರಿದಂತೆ ಪ್ರಮುಖ ನಾಗರಿಕ ಸೇವೆಗಳ ಪರೀಕ್ಷೆಗೆ ನಮ್ಮ ಕ್ಯಾಂಪಸ್ನಲ್ಲೇ ಗುಣಮಟ್ಟದ ಕೋಚಿಂಗ್ ನೀಡಲಾಗುವುದು’ ಎಂದರು.
‘ವಿವಿಧ ಹಂತದ ಪರೀಕ್ಷೆಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನೇಮಕ ಮಾಡಲಾಗುವುದು ಹಾಗೂ ಅಧ್ಯಯನಕ್ಕೆ ಪೂರಕವಾಗಿ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಭಾಗದ, ಆರ್ಥಿಕವಾಗಿ ಹಿಂದುಳಿದ ಸೇರಿದಂತೆ ತಳಸ್ತರದ ವಿದ್ಯಾರ್ಥಿಗಳು ಉನ್ನತ ಆಡಳಿತಾತ್ಮಕ ಹುದ್ದೆಗಳಿಗೆ ತೆರಳಬೇಕು ಎಂಬುದು ನಮ್ಮ
ಆಶಯ. ಈ ನಿಟ್ಟಿನಲ್ಲಿ ಒಡಂಬಡಿಕೆ ಮಾಡಲಾಗಿದೆ’ ಎಂದು ವಿವರಿಸಿದರು.
2011ರಲ್ಲಿ ಡಾ. ಜ್ಯೋತಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಸಾಧನಾ ಕೋಚಿಂಗ್ ಈಗಾಗಲೇ ರಾಜ್ಯದ ವಿವಿಧೆಡೆ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡುತ್ತಿದೆ. ಈ ಒಡಂಬಡಿಕೆ ಅನ್ವಯ ಪದವಿ ಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಆರು ತಿಂಗಳ ಫೌಂಡೇಶನ್ ಕೋರ್ಸ್, ಪದವಿ ವಿದ್ಯಾರ್ಥಿಗಳಿಗೆ 3 ವರ್ಷದ
ಸಮಗ್ರ ಕೋಚಿಂಗ್ ಮತ್ತು ಪದವಿ ನಂತರದ ವಿದ್ಯಾರ್ಥಿಗಳಿಗೆ 9 ತಿಂಗಳ ದೀರ್ಘಕಾಲಿನ ಕೋಚಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಧನಾ ಕೋಚಿಂಗ್ ಕೇಂದ್ರವು ನೀತಿ ಆಯೋಗದ ಸಹಕಾರದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಯಾದಗಿರಿಯಲ್ಲಿ ತರಬೇತಿ ನೀಡಿ ಯಶಸ್ವಿಯಾಗಿತ್ತು.
ರಾಜ್ಯದ ವಿವಿಧೆಡೆಯ ಕೊಳಗೇರಿ, ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಈಗ ಕೋಚಿಂಗ್ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಸಾಧನಾ ಕೋಚಿಂಗ್ ಕೇಂದ್ರದ ಡಾ.ಜ್ಯೋತಿ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಇದ್ದರು.