ಬಂಟರು ಇಂದು ಒಂದು ಪ್ರಬಲ ಸಮುದಾಯದ ಜನತೆ ಎಂಬ ಮನೋಭಾವ ಸಾಧಾರಣ ರಾಷ್ಟ್ರವ್ಯಾಪಿ ಮಾತ್ರವಲ್ಲ ವಿದೇಶಿ ಮುಖ್ಯರಿಗೂ ಮನವರಿಕೆಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಆದರೆ ಇದು ತಮ್ಮ ಸಾಂಘಿಕ ಶಕ್ತಿಯಿಂದಲ್ಲ, ವೈಯಕ್ತಿಕ ಸಾಮರ್ಥ್ಯ ಪ್ರತಿಭೆಯಿಂದ ಎಂಬ ವಿಚಾರ ಯಾರೂ ಅಲ್ಲಗಳೆಯಲಾರರು. ಅಪ್ರತಿಮ ಪ್ರತಿಭೆಯ ತಂತ್ರಜ್ಞಾನಿಗಳು, ವೈದ್ಯಶಾಸ್ತ್ರ ಪ್ರಭೃತಿ, ಅನುಪಮ ಆಡಳಿತ ತಜ್ಞರು, ಅಸಾಧಾರಣ ಚಾಣಾಕ್ಷ ಅರ್ಥ ಶಾಸ್ತ್ರಿಗಳು, ಸಾಹಿತಿಗಳು, ಕಲಾವಿದರು, ನಟರು ಹೀಗೆ ತಮ್ಮ ವೈಯಕ್ತಿಕ ಪ್ರತಿಭಾ ಸಾಮರ್ಥ್ಯಗಳಿಂದ ಬಂಟರ ಕೀರ್ತಿ ಪತಾಕೆಯನ್ನು ವಿಶ್ವದಗಲ ಹಾರಿಸಿದ್ದಾರೆ. ನಮ್ಮ ಒಗ್ಗಟ್ಟು, ಸಾಂಘಿಕ ಶಕ್ತಿ, ಪರಸ್ಪರ ಸದ್ಭಾವ ಇವೆಲ್ಲವೂ ಈ ದಿನದವರೆಗೂ ಪ್ರಶ್ನಾರ್ಹವಾಗಿಯೇ ಉಳಿದಿದೆ.
ಇದಕ್ಕೆ ಕಾರಣವೇನಿರಬಹುದೆಂಬ ಚಿಂತನೆ ಆತ್ಮಾವಲೋಕನ ಇಂದು ಎಂದಿಗಿಂತ ಹೆಚ್ಚಿದೆ. ಬಂಟರನ್ನು ಭಾವನಾತ್ಮಕವಾಗಿ ಬೆಸೆಯುವ ಕೆಲಸ ಇನ್ನೂ ಆಗಬೇಕಾಗಿದೆ. ಇಂದು ಬಂಟ ಸಂಘಟನೆಗಳಲ್ಲಿ ದುಡಿಯುವವರ ಸಂಖ್ಯೆ ಶೇಕಡಾ ಇಪ್ಪತ್ತರಷ್ಟೂ ಇಲ್ಲ. ಈ ಸಂಖ್ಯೆ ಇತರ ಬಂಟರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸಮರ್ಥ ಇರಬಹುದೆ? ಇಂದು ಬಂಟ ಸಮಾಜದ ಹಿರಿಯರನ್ನು ಬಿಟ್ಟರೆ ಇತರ ಯುವಶಕ್ತಿ ವಿದೇಶಗಳಲ್ಲಿ ನೆಲೆಯಾಗಿ ತಮ್ಮ ಮೂಲ ಸಂಸ್ಕೃತಿಯ ವಿಸ್ಮರಣೆಯಲ್ಲಿರುವವರೇ ಹೆಚ್ಚು. ಅವರ ಸಂಪಾದನೆಯ ಅಂಶ ಹೇಳುವಷ್ಟರ ಮಟ್ಟಿಗೆ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಹರಿದು ಬರುತ್ತಿಲ್ಲ. ಬಂಟರ ಸಂಘದ ಸಕ್ರಿಯ ಹಿರಿಯ ಕಾರ್ಯಕರ್ತರ, ಪದಾಧಿಕಾರಿಗಳ ಮಕ್ಕಳಿಗೆ, ಕುಟುಂಬಿಕರಿಗೆ ಈ ತನಕ ಬಂಟರ ಸಂಘಗಳ ನಂಟು ಇಲ್ಲ ಎಂಬಂತೆಯೇ ಇದೆ.
ಇತ್ತೀಚಿನ ನಮ್ಮ ಬಂಟರ ಸಂಘಟನೆಯ ನಾಯಕರುಗಳು ಸಮುದಾಯದ ಪ್ರಗತಿಗೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಸಂಘಟನೆಯನ್ನು ಬಲಪಡಿಸಲು ಹೆಣಗುತ್ತಿದ್ದಾರೆ ಎಂಬ ಆಶಾಕಿರಣ ಒಂದನ್ನು ಬಿಟ್ಟರೆ ಅವರ ನಂತರ ಇನ್ನು ಯಾರು?? ಎಂಬ ಪ್ರಶ್ನೆ ಓರ್ವ ಸಾಮಾನ್ಯ ಬಂಟನಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಬಂಟ ಯುವಕರು ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡದ್ದು ಏನೇನೂ ಸಾಲದು. ವರ್ಷಕ್ಕೆ ನಾಲ್ಕೈದು ಕಾರ್ಯಕ್ರಮಗಳನ್ನು ಸಂಯೋಜಿಸುವ ಮಾತ್ರದಿಂದ ಸಮುದಾಯದ ಸರ್ವಾಂಗೀಣ ಪ್ರಗತಿ ಸಾಧ್ಯ ಆಗದು. ಈಗಲೂ ನಮ್ಮ ಸಂಘಟನೆಗಳು ಊರಿಗೊಂದು ಮಿತ್ರ ಮಂಡಳಿ, ಯುವಕ ಸಂಘ ಅಥವಾ ಮಿತ್ರರ ಕೂಟ ಎನ್ನುವುದಕ್ಕಿಂತ ವಿಸ್ತೃತ ಅರ್ಥ ವ್ಯಾಪ್ತಿಯನ್ನು ಹೊಂದಿಲ್ಲ ಏನು ಕಾರಣ?!!!
ಈಗ ಜಾಗತಿಕ ಬಂಟರ ಸಂಘ ಅಸ್ತಿತ್ವಕ್ಕೆ ಬಂದಿದೆ. ಆದರೆ ಅದರ ಏಳಿಗೆಗೆ ಎಷ್ಟು ಜನ ಬಂಟರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ? ಕೇವಲ ಬೆರಳೆಣಿಕೆಯ ನಾಯಕರು ಸಮಾಜದ ದಾನಿಗಳಿಂದ ಹಣ ಕೇಳಿ ಪಡೆದು ಎಷ್ಟು ಸಮಯದವರೆಗೆ ಸಂಘ ನಡೆಸಬಹುದು? ಈಗಿನ ಕೆಲವರು ಸಮರ್ಥರಿದ್ದಾರೆ. ಧನವಂತರಿಂದ ಪಡೆಯುವ ಗುಣ ಸಾಮರ್ಥ್ಯ ಇದೆ. ಆದರೆ ಮುಂದೇನು? ನಮ್ಮ ಸಂಘದಿಂದ ಸಮುದಾಯದ ಸದಸ್ಯರಿಗೆ ಬಹಳಷ್ಟು ನಿರೀಕ್ಷೆ ಇದೆ. ಆದರೆ ಬಂಟರ ಸಂಘದಲ್ಲಿ ನಮ್ಮ ಕರ್ತವ್ಯ ಬದ್ಧತೆ ಏನು ಎಂಬ ಆತ್ಮ ವಿಮರ್ಶೆ ಯಾರೂ ಮಾಡುತ್ತಿಲ್ಲ. ಆದುದರಿಂದ ನಮ್ಮ ಅಧ್ಯಕ್ಷರು ಪದೇ ಪದೇ ಹೇಳುತ್ತಾರೆ ಬಂಟರ ಸಂಘ ಬಂಟರಿಂದ ನಡೆಯಬೇಕು. ಬಂಟರ ಸಂಘ ಸಮುದಾಯದ ಎಲ್ಲಾ ಹೊಣೆಗಾರಿಕೆ ಹೊರಲಾರದು. ಹೊರಲೂ ಬಾರದು. ಬಂಟರ ಸಂಘದ ನಿರಂತರ ಪ್ರಗತಿ ನಮ್ಮ ಐಕ್ಯ ಮಂತ್ರವಾಗಬೇಕು. ಬಂಟರ ಸಂಘದ ಪದವಿ, ಲಾಲಸೆ, ಕೀರ್ತಿ ಕಾಂಕ್ಷೆಗಿಂತಲೂ ಮುಖ್ಯವಾಗಿ ಪ್ರಾಮಾಣಿಕ ಪ್ರಯತ್ನ ಮೌನಸೇವಾ ಕ್ರಾಂತಿ ಆಗಬೇಕಾಗಿದೆ.
ಇಂದಿಗೂ ನಮ್ಮ ಸಮುದಾಯಕ್ಕೆ ಅಂಟಿದ ಶಾಪವಾಗಿ ಕಾಡುವುದು ಪರಸ್ಪರ ಈರ್ಷ್ಯೆ. ಒಬ್ಬನ ಪ್ರಗತಿಗೆ ಅಡ್ಡಗಾಲು ಇಡುವುದು. ಸಮುದಾಯದ ಒಬ್ಬ ಸಮರ್ಥ ವ್ಯಕ್ತಿ ಯಾರದೋ ಶಡ್ಯಂತ್ರಕ್ಕೆ ಬಲಿಯಾಗಿ ಕಷ್ಟ ಪಟ್ಟರೆ ತಾವು ಒಳಗೊಳಗೆ ವಿಕೃತ ಆನಂದ ಪಡುವುದು. ಹೀಗೆ ನಮ್ಮವರ ಋಣಾತ್ಮಕ ಅಂಶವನ್ನು ಹೇಳುತ್ತಾ ಹೋದರೆ ನಮ್ಮವರ ನಿಷ್ಠುರಕ್ಕೆ ಗುರಿಯಾಗಬಹುದು. ಇನ್ನು ಕೆಲವರನ್ನು ರಾಜಕೀಯವಾಗಿ ಮುಗಿಸಲು ಅನ್ಯ ಸಮುದಾಯವನ್ನು ಬಳಸಿಕೊಳ್ಳುವುದು. ಇತರರ ಕಾಲೆಳೆದು ಮೇಲೇರುವುದು. ತಮ್ಮವರನ್ನೇ ವಂಚಿಸುವುದು. ಇವು ನಮ್ಮಲ್ಲಿರುವಷ್ಟು ಅನ್ಯರಲ್ಲಿಲ್ಲ ಎಂಬುದು ಓರ್ವ ಸಮುದಾಯದ ಸಮಾಜದ ಪ್ರತಿ ಸ್ಪಷ್ಟ ಸದ್ಭಾವ ಹೊಂದಿದ ನನ್ನ ಅಭಿಪ್ರಾಯ. ಮುಂದೇನು?
ನಮ್ಮದೇ ಸಂಘಟನೆಗಳನ್ನು, ಪದಾಧಿಕಾರಿಗಳನ್ನು ಠೀಕಿಸಿ ಅವರ ಉತ್ಸಾಹಕ್ಕೆ ತಣ್ಣೀರೆರಚುವ ಬದಲು ಬಂಟರ ಸಂಘಟನೆಗಳ ಪ್ರಗತಿಗೆ ನಮ್ಮ ಕೊಡುಗೆ ಏನು? ಜವಾಬ್ದಾರಿ ಏನು? ಹೀಗೆ ನಮ್ಮನ್ನು ನಾವು ಪ್ರಶ್ನಿಸಿ ಕೊಳ್ಳೋಣ. ಕೇವಲ ಅಧ್ಯಕ್ಷರು ಪದಾಧಿಕಾರಿಗಳ ಖಾಸಗಿ ಆಡಳಿತ ಮಂಡಳಿ ಬಂಟರ ಸಂಘ ಅಲ್ಲ. ಪ್ರತಿಯೋರ್ವ ಬಂಟನ ಪರಿಶ್ರಮದ ಇಟ್ಟಿಗೆಗಳ ಒಟ್ಟು ಮಾಡಿ ಬಂಟರ ಸಂಘ ಕಟ್ಟೋಣ. ಠೀಕೆ ಟಿಪ್ಪಣಿ ಬೇಡ. ನಾನು ಬಂಟರ ಸಂಘದ ಅವಿಭಾಜ್ಯ ಅಂಗ ಎಂಬ ಮನೋಭಾವ ದೃಢವಾಗಲಿ. ಶ್ರೀಮಂತರು, ಮಧ್ಯಮ ವರ್ಗದವರು, ಅತೀ ಬಡವರೆಂಬ ಮೂರೂ ವರ್ಗಗಳು ಅಸಮಾನತೆ ಸ್ಥಾನ ಮರ್ಯಾದೆ ಅಹಮಿಕೆಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಸಂಘದ ಪ್ರಗತಿಗೆ ಕಟಿ ಬದ್ಧರಾಗೋಣ. ನಮ್ಮ ದುಡಿತದ ಒಂದಂಶವನ್ನು ಉಳಿಸಿಕೊಂಡು ಬಂಟರ ಸಂಘಕ್ಕೆ ಅರ್ಪಿಸೋಣ. ಸಂಘದ ಪ್ರತಿ ಅರ್ಪಣಾ ಭಾವ ಮೆರೆಸೋಣ. ಬೇಧ ಭಾವ ಸಾಮಾಜಿಕ ಅಂತಸ್ತು ಒಣ ಪ್ರತಿಷ್ಠೆ ಮರೆಯೋಣ ನಾವೆಲ್ಲಾ ಒಂದೆಂಬ ಭಾವ ಬೆಸೆಯೋಣ. ಬಡವರ ಹಿಂದುಳಿದವರ ಬಾಳಿನ ಭಾಗ್ಯೋದಯ ಕಾರ್ಯಕ್ಕೆ ನಮ್ಮ ಸಂಘವನ್ನು ವೇದಿಕೆಯಾಗಿಸೋಣ.
ಜೈ ಬಂಟ್ಸ್..
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು