ಮಹಾಸಿಂಹ ಮೂವೀಸ್ ಲಾಂಛನದಲ್ಲಿ ತಯಾರಾದ ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಕನ್ನಡ ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಟಿ ಉಷಾ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕನ್ನಡದ ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ತಾಣಗಳಲ್ಲಿ ಕೆಟಿಎಂ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ ಎಂದು ಉಷಾ ಭಂಡಾರಿ ತಿಳಿಸಿದರು. ಕೆಟಿಎಂ ಸಿನಿಮಾ ಟೈಟಲ್ ನಿಂದ ಗಮನ ಸೆಳೆಯುತ್ತಿದೆ. ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ ಕೆಟಿಎಂ ಸಿನಿಮಾದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದ್ದು ಪ್ರೇಕ್ಷಕರಲ್ಲಿ ಸಿನಿಮಾದ ಕುರಿತು ಆಸಕ್ತಿ ಮೂಡಿದೆ.
ಒಂದು ಸುಂದರ ಪ್ರೇಮಕಥೆ. ಈ ಕಥೆಯಲ್ಲಿ ಒಬ್ಬ ನಾಯಕ ಇಬ್ಬರು ನಾಯಕಿಯರು. ಪ್ರೀತಿಗಾಗಿ ಪರಿತಪಿಸುವ ನಾಯಕ. ಅವನಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕಿಯರು. ನಾಯಕನ ಜೀವನದಲ್ಲಿ ನಡೆದ ಏರಿಳಿತಗಳು ಕೆಟಿಎಂ ಸಿನಿಮಾದ ಹೈಲೆಟ್ಸ್. ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಸನಿಲ್ ಗುರು, ಬಾಬು ಹಿರಣ್ಮಯ್ಯ, ಬಿಗ್ ಬಾಸ್ ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಅಥರ್ವ ಸಿನಿಮಾ ನಿರ್ದೇಶಿಸಿದ್ದ ಅರುಣ್ ಕೆಟಿಎಂ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಪ್ರಯತ್ನ. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ನವೀನ್ ಕ್ಯಾಮೆರಾ, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ.
ಕೆಟಿಎಂ ಸಿನಿಮಾದ ಟೀಸರ್ ಅನ್ನು ಏಕ ಕಾಲದಲ್ಲಿ 70 ಕ್ಕೂ ಹೆಚ್ಚು ಕನ್ನಡ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ರಿಷಬ್ ಶೆಟ್ಟಿ, ಡಿಂಪಲ್ ಕ್ಲೀನ್ ರಚಿತಾರಾಮ್, ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ, ಮಲಯಾಳಂ ನಟ ಶೈನ್ ಟಾಮ್ ಚಾಕೋ, ತೆಲುಗಿನ ನಾನಿ, ರಾಹುಲ್ ರವೀಂದ್ರನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ. ದೀಕ್ಷಿತ್ ಶೆಟ್ಟಿ ಕನ್ನಡದ ಜೊತೆಗೆ ತೆಲುಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ, ಗರ್ಲ್ ಫ್ರೆಂಡ್, ಬ್ಲಿಂಕ್, ಕಿಂಗ್ ಜಾಕಿ ಕ್ವೀನ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ತೆರೆಕಾಣಲಿದೆ. ದಿಯಾ ಸಿನಿಮಾದ ಬಳಿಕ ನಾಲ್ಕು ವರ್ಷಗಳ ಬಳಿಕ ನನ್ನ ಸಿನಿಮಾ ತೆರೆಗೆ ಬರುತ್ತಿದೆ. ಹೊಸತನದ ಸಿನಿಮಾ ಮಾಡಬೇಕು, ಚಾಲೆಂಜಿಂಗ್ ಪಾತ್ರ ನಿರ್ವಹಿಸಬೇಕು. ಅದಕ್ಕಾಗಿ ಒಂದಷ್ಟು ತಯಾರಿ ನಡೆಸಿ ಕೆಟಿಎಂ ಸಿನಿಮಾ ಮಾಡಲಾಗಿದೆ. ದಿಯಾ ಸಿನಿಮಾದ ಬಳಿಕ ಜವಾಬ್ದಾರಿ ಹೆಚ್ಚಿದೆ. ಕೆಟಿಎಂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವೂ ಇದೆ. ಕೆಟಿಎಂ ಸಿನಿಮಾದ ಟೈಟಲ್ ಏನು ಎಂಬುದನ್ನು ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ಗೊತ್ತಾಗುತ್ತದೆ ಎಂದು ದೀಕ್ಷಿತ್ ಶೆಟ್ಟಿ ತಿಳಿಸಿದರು. ಸೀರಿಯಲ್ ಗಳಲ್ಲಿ ಈಗ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ತಾನು ಪ್ರಾರಂಭಿಸುವ ಅಭಿನಯ ತರಬೇತಿ ಶಾಲೆಯಲ್ಲೇ ಬಿಝಿ ಆಗಿರುವುದರಿಂದ ಧಾರಾವಾಹಿ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಉಷಾ ಭಂಡಾರಿ ತಿಳಿಸಿದರು.