ಇಂದು ಬಂಟರು ಕೇವಲ ಹೋಟೆಲ್ ಉದ್ಯಮಕ್ಕೆ ಸೀಮಿತರಾಗಿಲ್ಲ. ಬಂಟರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಕ್ರೀಡೆಯಲ್ಲಿ ಜಯ ಅಪಜಯ ಮುಖ್ಯವಲ್ಲ. ಇಲ್ಲಿ ಎಲ್ಲಾ ವಿಧದಲ್ಲೂ ಅಂದರೆ ತಳಮಟ್ಟದಲ್ಲಿ ಶ್ರಮಿಸಿದವರ ಯೋಗದಾನವನ್ನು ಪರಿಗಣಿಸಬೇಕಾಗುತ್ತದೆ. ಯಶಸ್ಸಿನಲ್ಲಿ ಎಲ್ಲರ ಪಾಲು ಕಾರಣವಾಗುತ್ತದೆ ಎಂದು ಶಾಸಕ ಹಿತೇಂದ್ರ ಠಾಕೂರ್ ನುಡಿದರು.
ಅವರು ಮೀರಾ ದಹಾಣೂ ಬಂಟ್ಸ್ ಇದರ ವಾರ್ಷಿಕ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಕ್ರೀಡೆ ಬದುಕಿನ ಏಕತೆಯನ್ನು ಮೂಡಿಸುತ್ತದೆ. ಕ್ರೀಡೆಯು ಸ್ಪರ್ಧಿಗಳ ಮನೋಕಾಮನೆಯ ಮಹಾದಾಸೆಯನ್ನು ಪೂರೈಸುವ ಶ್ರಮದ ಅಂಗಳವಾಗಿದೆ. ಬಂಟ ಕ್ರೀಡಾಳುಗಳು ಕೇವಲ ತನ್ನ ಸಮಾಜದಲ್ಲಿ ಮಾತ್ರವಲ್ಲದೇ ಜಯ ಅಪಜಯದ ಯಶಸ್ಸನ್ನು ಕ್ರಮೇಣವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಣುವಂತಾಗಬೇಕು ಮೀರಾ ದಹಾಣೂ ಬಂಟ್ಸ್ ನ ಎಲ್ಲಾ ಬಂಟ ಬಾಂಧವರ ವೇದಿಕೆಗೆ ನನ್ನ ಸಂಪೂರ್ಣ ಸಹಕಾರ ಸದಾ ಲಭ್ಯ ಎಂದು ಭಾಗವಹಿಸಿದ ಬಂಟ ಕ್ರೀಡಾಪಟುಗಳಿಗೆ ಯಶಸ್ಸನ್ನು ಕೋರಿದರು.
ಸಂಸ್ಥೆಯ ಗೌ. ಅಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡುತ್ತಾ 2009 ರಲ್ಲಿ ಸ್ಥಾಪನೆಗೊಂಡ ಮೀರಾ ದಹಾಣೂ ಬಂಟ್ಸ್ ಸಮಾಜದ ಜನತೆಗೆ ಸರ್ವ ರೀತಿಯಲ್ಲೂ ಎಲ್ಲಾ ರೀತಿಯ ಅನುದಾನಗಳು ಸಿಗುವಂತಾಗಲಿ ಎಂಬ ಉದ್ದೇಶದಿಂದ ಸ್ಥಾಪನೆಯಾದ ಈ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಈ ಕ್ರೀಡಾ ಮಹೋತ್ಸವವನ್ನು ಆಯೋಜಿಸುತ್ತಿದೆ. ಎಲ್ಲರ ಪ್ರೇರಣೆಯಿಂದ ಅಂದು 5000 ಕ್ಕಿಂತಲೂ ಹೆಚ್ಚು ಪರಿಸರದ ಸಮಾಜ ಬಾಂಧವರು ಸೇರಿ ಉದ್ಘಾಟನೆಯಾದ ಈ ಸಂಸ್ಥೆಯು ಮೀರಾರೋಡಿನಿಂದ ದಹಾಣೂ ತನಕ ತನ್ನ ನಾಲ್ಕು ವಲಯಗಳ ಸಮಾಜ ಬಾಂಧವರಿಗೆ ಸರ್ವ ರೀತಿಯ ಸಮಾಜ ಸೇವೆಯನ್ನು ಗೈಯುತ್ತಾ ಬಂದಿದೆ. ಸಂಸ್ಥೆ ಸ್ಥಾಪಿಸುವುದು ಮುಖ್ಯ ಅಲ್ಲ ಅದನ್ನು ಯಶಸ್ವಿ ಪಥದಲ್ಲಿ ಮುನ್ನಡೆಸಿಕೊಂಡು ಹೋಗುವುದು ಸಂಸ್ಥೆಯ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬಲು ಅಗತ್ಯ ಎಂದರು. ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಳುಗಳಿಗೆ ಶುಭೇಚ್ಛೆಯನ್ನು ಹರಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಸಾಯಿ ತಾಲೂಕಿನ ಮಾಜಿ ನಗರಾಧ್ಯಕ್ಷ ಪ್ರವೀಣ್ ಶೆಟ್ಟಿಯವರು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ 1990 ರಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಕ್ರೀಡಾ ಕೂಟ ಹಿತೇಂದ್ರ ಠಾಕೂರ್ ರವರ ಮುಂದಾಳತ್ವದಲ್ಲಿ ಜರುಗಿ ಅಲ್ಲಿಂದ ಮುಂದುವರಿಯುತ್ತಾ ಕ್ರೀಡೆಯಲ್ಲಿ ಇಲ್ಲಿನ ಬಹು ಮಂದಿ ಕ್ರೀಡಾಳುಗಳು ಉನ್ನತ ಮಟ್ಟವನ್ನು ತಲುಪಿದ್ದಾರೆ. ಮುಂದೆಯೂ ಇಂತಹ ಕ್ರೀಡಾ ಆಯೋಜನೆಗಳು ಫಲಪ್ರದಾಯಕವಾಗಲಿ ಎಂದು ಶುಭಾಶಗಳನ್ನು ಕೋರಿದರು. ಅತಿಥಿ ಜಾಗತಿಕ ಆರ್ಯಭಟ್ ಪುರಸ್ಕೃತ ಮೋರ್ಲ ರತ್ನಾಕರ್ ಶೆಟ್ಟಿ ತನ್ನ ಅಭಿಪ್ರಾಯದಲ್ಲಿ ಕ್ರೀಡಾಕೂಟದಲ್ಲಿ ಕ್ರೀಡಾ ಯಶಸ್ಸಿಗಾಗಿ ಶ್ರಮಿಸಿದವರನ್ನು ಅಭಿನಂದಿಸಬೇಕು. ಕ್ರೀಡೆಯಿಂದ ಪ್ರೀತಿ-ಸೌಹಾರ್ಧತೆ ಮೂಡಿಬರುತ್ತದೆ. ಪೋಷಕರು ಮಕ್ಕಳ ಆಸಕ್ತಿಗನುಸಾರ ಪ್ರೊತ್ಸಾಹ ನೀಡಬೇಕು. ಇಂದು ಸರ್ವ ಕ್ರೀಡೆಯಲ್ಲೂ ಉಜ್ವಲ ಭವಿಷ್ಯವಿದೆ. ನಮ್ಮ ಸಮಾಜ ಬಾಂಧವರು ಮಕ್ಕಳನ್ನು ಶಿಕ್ಷಣದೊಂದಿಗೆ ಇತರ ಚಟುವಟಿಗಳಲ್ಲಿಯೂ ಭಾಗವಹಿಸುವ ಅವಕಾಶವನ್ನು ಕಲ್ಪಿಸುವಂತಾಗಬೇಕು ಎಂದರು.
ಇನ್ನೋರ್ವ ಅತಿಥಿ ಬಂಟ್ಸ್ ಫೋರಮ್ ಮೀರಾ ಭಯಂದರ್ ನ ಅಧ್ಯಕ್ಷ ಉದಯ ಎಂ. ಶೆಟ್ಟಿ ಮಲಾರಬೀಡು ಮಾತನಾಡುತ್ತಾ ಕ್ರೀಡೆಯೆಂಬುದು ಜೀವನದ ಭವಿಷ್ಯವನ್ನು ರೂಪಿಸಬಹುದು. ಸದಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಮೊಬೈಲ್ ಮುಂತಾದ ದುಷ್ಠ ಚಟಗಳಿಗೆ ಬಲಿಯಾಗದೆ ಯೋಗ್ಯರೆನಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಬಗ್ಗೆ ಪೋಷಕರು ಸದಾ ಜಾಗೃತರಾಗಬೇಕೆಂದು ಸಲಹೆ ಇತ್ತರು. ಬೆಳಿಗ್ಗೆ 7 ಗಂಟೆಯಿಂದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು ವೈಯುಕ್ತಿಕ ಹಾಗೂ ಸಂಘಟಿತ ವಿವಿಧ ಕ್ರೀಡೆಗಳು ಉತ್ಸಾಹದಿಂದ ನೆರವೇರಿತು. ಇದೇ ಸಂದರ್ಭದಲ್ಲಿ ಕ್ರೀಡೆಗಾಗಿ ಯೋಗದಾನವನ್ನಿತ್ತ ಮಹನೀಯರುಗಳನ್ನು ಗೌರವಿಸಲಾಯಿತು. ಕ್ರೀಡೆಗೆ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ ಕ್ರೀಡಾ ಕಾರ್ಯಾಧ್ಯಕ್ಷ ಮುಕೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ನವೀನ್ ಶೆಟಿ ವಸಾಯಿ, ಹರೀಶ್ ರೈ ಮೀರಾರೋಡ್ ರವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನಾಲಸೋಪರ ಶಾಸಕ ಕ್ಷಿತಿಜ್ ಠಾಕೂರ್, ಅಧ್ಯಕ್ಷರಾದ ಪ್ರಕಾಶ್ ಎಮ್. ಹೆಗ್ಡೆ, ಉಪಾಧ್ಯಕ್ಷರಾದ ಕರ್ನೂರು ಶಂಕರ್ ಆಳ್ವ, ಸಂಚಾಲಕ ನಾಗರಾಜ್ ಶೆಟ್ಟಿ, ಟಸ್ಟಿ ಭುಜಂಗ ಶೆಟ್ಟಿ, ಒಡಿಪರಗುತ್ತು ಅನಿಲ್ ಶೆಟ್ಟಿ, ಹರೀಶ್ ಶೆಟ್ಟಿ ಕಾಪು, ರಮೇಶ್ ಶೆಟ್ಟಿ ವಿರಾರ್, ಪ್ರವೀಣ್ ಶೆಟ್ಟಿ ಬೊಯಿಸರ್, ಕಾರ್ಯದರ್ಶಿ ಸುಕೇಶ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಜಿ. ಶೆಟ್ಟಿ, ವಲಯ ಕಾರ್ಯಾಧ್ಯಕ್ಷರುಗಳಾದ ವಿಜಯ್ ಆನಂದ ಶೆಟ್ಟಿ, ಬೊಯಿಸರ್ ರವೀಂದ್ರ ಶೆಟ್ಟಿ, ಅಶೋಕ್ ಕೆ. ಶೆಟ್ಟಿ ವಸಾಯಿ, ವಸಂತ್ ಶೆಟ್ಟಿ ಮೀರಾರೋಡ್, ವಿಭಾಗ ಕಾರ್ಯಾಧ್ಯಕ್ಷೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಶೇಖರ್ ವಿ. ಶೆಟ್ಟಿ, ನಾಗರಾಜ್ ಶೆಟ್ಟಿ, ರವಿ ರೈ ಬೊಯಿಸರ್, ಸುಕೇಶ್ ರೈ ಜಂಟಿಯಾಗಿ ನಿರ್ವಹಿಸಿದರು. ಉಪಾಧ್ಯಕ್ಷ ಕರ್ನೂರ್ ಶಂಕರ್ ಆಳ್ವರವರು ಧನ್ಯವಾದಗೈದರು.
ಚಿತ್ರ ವರದಿ : ವೈ ಟಿ ಶೆಟ್ಟಿ ಹೆಜಮಾಡಿ