ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮಾದರಿ ಬ್ರಹ್ಮಕಲಶೋತ್ಸವಾಗಿ ಆಗಬೇಕೆಂಬ ನಿಟ್ಟಿನಲ್ಲಿ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕರ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಮುಖ್ಯ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣವಾಗಿದೆ.
ವಲ್ಮೀಕದಲ್ಲಿ ನೆಲೆನಿಂತ ದೇವರು ಶ್ರೀಸುಬ್ರಹ್ಮಣ್ಯ ಸ್ವಾಮಿ: ಪ್ರಕೃತಿ ಸೌಂದರ್ಯದ ನೆಲೆ ಬೀಡು, ತಂಪು ತಂಪು ಹಸಿರಿನಿಂದ, ಬೆಟ್ಟ, ಗುಡ್ಡ ಬಯಲುಗಳಿಂದ ಸಮೃದ್ಧವಾದ, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವಿದೆ. ಇಲ್ಲಿ ಗುಹೆಯ ರೂಪದಲ್ಲಿದ್ದ ಸ್ಥಳದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾ ಬರುತ್ತಿರುವ ಪುಣ್ಯ ತಾಣ. ಇಲ್ಲಿ ವಲ್ಮೀಕ(ಹುತ್ತ)ದ ರೂಪದಲ್ಲಿ ನೆಲೆ ನಿಂತ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನ ಪರಮ ಪವಿತ್ರವಾಗಿದ್ದು, ಭಕ್ತರ ಶ್ರದ್ಧಾ ಭಕ್ತಿ, ಶಕ್ತಿಯ ತಾಣವಾಗಿದೆ. ತನ್ನ ಕಾರಣಿಕ ಶಕ್ತಿಯಿಂದ ನಂಬಿ ಬಂದ ಭಕ್ತ ಜನರಿಗೆ ತಾಯಿ ಸಮಾನ ನೆಲೆಯಾಗಿದೆ. ಪೌರಾಣಿಕ ಹಿನ್ನಲೆಯ ಪ್ರಕಾರ ತಾರಕಾಸುರ, ಪದ್ಮಾಸುರ ಮೊದಲಾದ ದೈತ್ಯ ರಾಕ್ಷಸರನ್ನು ಸಂಹಾರ ಮಾಡಿ, ಲೋಕ ಕಲ್ಯಾಣವನ್ನುಂಟು ಮಾಡಿದ ಶ್ರೀ ಕುಮಾರ ಸ್ವಾಮಿಯೇ ಶ್ರೀಸುಬ್ರಹ್ಮಣ್ಯ ದೇವರಾಗಿ ತನ್ನನ್ನು ನಂಬಿರುವ ಭಕ್ತ ಜನರ ಅಭೀಷ್ಠಗಳನ್ನು ನೆರವೇರಿಸಿ, ದುಃಖ ದುಮ್ಮಾನಗಳನ್ನು ದೂರಮಾಡಿ ವಿದ್ಯೆ, ಬುದ್ದಿ, ಸ್ಥಾನ ಮಾನ ಗೌರವಗಳನ್ನು ನೀಡಿ ಅನುಗ್ರಹಿಸುತ್ತಾ ಬರುತ್ತಿದ್ದಾನೆ ಎಂಬ ಪವಿತ್ರ ನಂಬಿಕೆ ಎಲ್ಲಾ ಭಕ್ತ ಸಮುದಾಯದವರದ್ದು.
ವಲ್ಮೀಕಕ್ಕೆ ಪೂಜೆ ಸಲ್ಲುವ ಶ್ರೀ ಕ್ಷೇತ್ರ ನಳೀಲಿನಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಸುಮಾರು ಐದರಿಂದ ಐದೂವರೆ ಅಡಿ ಎತ್ತರವಿರುವ ವಲ್ಮೀಕ ಹುತ್ತದಲ್ಲಿ ನೆಲೆ ನಿಂತು ದಿನ ನಿತ್ಯ ಅರ್ಚಕರಿಂದ ಪೂಜೆ ಕೈಗೊಳ್ಳುವರು. ಆಳೆತ್ತರಕ್ಕೆ ಬೆಳೆದು ನಿಂತ ಈ ವಲ್ಮೀಕವು ಕೆಲವೊಮ್ಮೆ ಪವಾಡ ಸದೃಶವಾಗಿ ಕಿರಿದಾಗುವುದೂ ಇದೆ. ನಾಗರಾಧನೆ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಪವಿತ್ರ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿರುವುದು, ಎಲ್ಲರ ಭಕ್ತಿ, ಶ್ರದ್ಧೆ, ನಂಬಿಕೆಗಳಿಗೆ ಕಾರಣವಾಗಿದೆ. ತನ್ನದೇ ಆದ ಕಾರಣಿಕ ಶಕ್ತಿ ಹೊಂದಿರುವ ಶ್ರೀ ಕ್ಷೇತ್ರದ ದೇವರು ಶ್ರೀ ಸುಬ್ರಹ್ಮಣ್ಯ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ, ವಿವಾಹ ಆಗದವರಿಗೆ ಕಂಕಣ ಭಾಗ್ಯ ,ಶನಿದೋಷ ನಿವಾರಣೆ, ಸರ್ಪದೋಷ ನಿವಾರಣೆಗಾಗಿ ಪ್ರಾರ್ಥಿಸುವ ತನ್ನ ಭಕ್ತ ಜನರಿಗೆ ಅನುಗ್ರಹ ನೀಡುತ್ತಾ ಬರುತ್ತಿದ್ದಾರೆ ಎಂಬ ನಂಬಿಕೆ ಸದಾ ಜೀವಂತವಾಗಿದೆ. ಶ್ರೀ ಸುಬ್ರಹ್ಮಣ್ಯ ದೇವರು ನಂಬಿದವರನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಇಲ್ಲಿಯ ಬೆಳವಣಿಗೆಯೇ ಕಾರಣ ನಿದರ್ಶನವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿಗೆ ಬರುವಾಗ ಬಯಲು ದಾರಿಯಾಗಿ ಬರಬೇಕಾಗಿತ್ತು. ಇದೀಗ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ.
ಬರಗಾಲದಲ್ಲೂ ಇಲ್ಲಿ ನೀರ ಸೆಲೆ: ಕ್ಷೇತ್ರದ ಸುತ್ತ ಮುತ್ತ ಬಯಲು ಗದ್ದೆ ತೋಟಗಳು ಬರಗಾಲದ ಕಾಲದಲ್ಲೂ ಹಚ್ಚ ಹಸಿರಾಗಿರುವ ತಾಣ, ದೇವಸ್ಥಾನದ ಸುತ್ತೆಲ್ಲಾ ಜಿಣುಗುವ ನೀರ ಸೆಲೆ ಇಲ್ಲಿಯ ವಿಶೇಷತೆ.
ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆಯಾಗುವ ಏಕೈಕ ಕ್ಷೇತ್ರ: ಶ್ರೀ ಕ್ಷೇತ್ರ ನಳೀಲಿನಲ್ಲಿ ಪ್ರಧಾನವಾಗಿ ಹುತ್ತಕ್ಕೆ ಪೂಜೆ ಸಲ್ಲುತ್ತದೆ. ಇಲ್ಲಿ ಸಂತಾನ ಭಾಗ್ಯಕ್ಕಾಗಿ, ಕಂಕಣ ಭಾಗ್ಯ, ಜಲ ಪ್ರಾಪ್ತಿಗೆ ವಿಶೇಷವಾಗಿ ಪ್ರಾರ್ಥಿಸಿಕೊಂಡು ತಮ್ಮ ಇಷ್ಟಾರ್ಥ ಈಡೇರಿಸಿಕೊಂಡ ಭಕ್ತರು ಹಲವರಿದ್ದಾರೆ.
ಹೊರ ರಾಜ್ಯದಿಂದಲೂ ಭಕ್ತರ ಆಗಮನ: ಶ್ರೀ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ವಿಶೇಷ ಸೇವೆ ಮಾಡಿಸುತ್ತಿದ್ದಾರೆ. ಶ್ರೀ ಕ್ಷೇತ್ರಕ್ಕೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದಲೂ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ವಿವಿಧ ತರವಾಡು ಕ್ಷೇತ್ರಗಳ ಪ್ರಶ್ನಾ ಚಿಂತನೆಯಲ್ಲೂ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಕುರಿತೂ ಕಂಡು ಬರುತ್ತಿದೆ. ಹೀಗೆ ಶ್ರೀ ಕ್ಷೇತ್ರಕ್ಕೆ ಉತ್ಸವದ ಸಮಯದ ಹೊರತಾಗಿಯೂ ಇತರ ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ವಿಶೇಷವಾಗಿ ನಾಗರಪಂಚಮಿ, ಗಣೇಶ ಚತುರ್ಥಿ, ಚಂಪಾ ಷಷ್ಠಿ ಮಹೋತ್ಸವ, ದೀಪಾವಳಿ ಉತ್ಸವ, ಸಂಕ್ರಮಣದಂದು ರಂಗಪೂಜೆ, ಸಂಕಷ್ಠಿಯಂದು ಗಣಹೋಮ, ವಾರ್ಷಿಕ ಜಾತ್ರೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.
20 ವರ್ಷಗಳಲ್ಲಿ ಬೆಳಗಿದ ಕ್ಷೇತ್ರ: ಇಪ್ಪತ್ತು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವದ ನಂತರ ಶ್ರೀ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಅರ್ಚಕರ ಮನೆ, ಅತಿಥಿ ಗೃಹ, ಪಾಕ ಶಾಲೆ, ಅನ್ನ ಛತ್ರ, ದೇವಸ್ಥಾನದ ಸುತ್ತು ಚಪ್ಪರ ನಿರ್ಮಿಸುವ ಮೂಲಕ ದೇವಸ್ಥಾನದ ಪರಿಧಿಯನ್ನು ನಿರ್ಮಿಸಿಕೊಂಡು ಅಭಿವೃದ್ಧಿ ಕಾರ್ಯಗಳು ನಡೆದಿರುತ್ತದೆ. ಬಂದು ಹೋಗಲು ಸುಸಜ್ಜಿತವಾದ ಮಾರ್ಗ ನಿರ್ಮಾಣಗೊಂಡಿದೆ. ಭಕ್ತ ಜನರ ವಿಶಾಲ ಮನೋಭಾವನೆಯೊಂದಿಗೆ ದೈವಾನುಗ್ರಹ ಲಭಿಸಿದೆ.
ಇದೀಗ ಶ್ರೀ ಕ್ಷೇತ್ರವು ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಫೆ. 17 ರಿಂದ 24 ರವರೆಗೆ ನಡೆಯಲಿದೆ.
ದೇವಸ್ಥಾನದ ಗರ್ಭಗುಡಿ ಹಾಗೂ ಪ್ರಸಾದ ಮಂಟಪಕ್ಕೆ ತಾಮ್ರ ಹೊದಿಸಲಾಗಿದೆ. ನೆಲಕ್ಕೆ ಗ್ರಾನೈಟ್ ಅಳವಡಿಸಲಾಗಿದೆ. ಸುಂದರವಾದ ಭಕ್ತಿ ಪ್ರಧಾನ ವಸಂತ ಮಂಟಪವು ನಿರ್ಮಾಣಗೊಂಡಿದೆ. ಇಲ್ಲಿನ ದೈವಸ್ಥಾನದ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ರುದ್ರ ಚಾಮುಂಡಿ, ಶ್ರೀ ರಕ್ತೇಶ್ವರಿ ಗುಡಿ, ಶ್ರೀ ಗುಳಿಗ, ಪರಿವಾರ ದೈವಗಳಾಗಿ ಭಕ್ತ ಜನರ ಬದುಕನ್ನು ಪಾವನಗೊಳಿಸಿದೆ. ಶ್ರೀ ನಾಗನ ಕಟ್ಟೆ ನಿರ್ಮಾಣಗೊಂಡಿದ್ದು ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ರಂಗ ಪೂಜೆ, ಕಾರ್ತಿಕ ಪೂಜೆ ನಾಗ ತಂಬಿಲ ಮೊದಲಾದ ಸೇವೆಗಳು ಯಥಾ ಪ್ರಕಾರವಾಗಿ ನಡೆಯುತ್ತವೆ. ಭಕ್ತ ವೃಂದದವರಿಂದ ಕಳೆದ ಹಲವು ತಿಂಗಳುಗಳಿಂದ ಕರ ಸೇವೆ ನಡೆಯುತ್ತಿದ್ದು ಹಬ್ಬದ ವಾತಾವರಣ ಶ್ರೀ ಕ್ಷೇತ್ರದಲ್ಲಿ ಆರಂಭಗೊಂಡಿರುವುದು ಜನ- ಮನದ ಭಕ್ತಿ, ಶ್ರದ್ಧೆ ಉತ್ಸಾಹಗಳಿಗೆ ಕಾರಣವಾಗಿದೆ. ಮನೆ-ಮನಗಳಲ್ಲಿ ಸಂಭ್ರಮೋಲ್ಲಾಸ ಮನೆ ಮಾಡಿದೆ.
ಗಿರಿಧರ ಶೆಟ್ಟಿ ಅವರ ಸೇವಾರೂಪದಲ್ಲಿ ಮಹಾದ್ವಾರ ನಿರ್ಮಾಣ:. ಮಾಡಾವು – ಬೆಳ್ಳಾರೆ ರಸ್ತೆಯ ಅಂಕತಡ್ಕದಿಂದ ಸ್ವಲ್ಪ ಮುಂದಕ್ಕೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನೂತನ ಮಹಾದ್ವಾರ ನಿರ್ಮಾಣವಾಗಬೇಕೆಂಬ ಆಡಳಿತ ಮಂಡಳಿಯ ಕನಸಿಗೆ ಕೈ ಜೋಡಿಸಿದ್ದು ಮಂಗಳೂರು ಸಾಗರ್ ಕನ್ ಸ್ಟ್ರಕ್ಷನ್ ನ ಗಿರಿಧರ ಶೆಟ್ಟಿ ಅವರು. ಸಾಮಾಜಿಕ ಹಾಗೂ ಧಾರ್ಮಿಕ, ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಚತುರತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಗಿರಿಧರ ಶೆಟ್ಟಿ ಅವರು ಶ್ರೀ ಕ್ಷೇತ್ರಕ್ಕೆ ಮಹಾದ್ವಾರವನ್ನು ಸೇವಾ ರೂಪದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಇದರ ನಿರ್ಮಾಣ ಕಾಮಗಾರಿಯನ್ನು ಪುತ್ತೂರಿನ ಕುಂಕುಮ್ ಅಸೋಸಿಯೇಟ್ಸ್ ನವರು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ್ದಾರೆ.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದ್ದಾಗ ದೇವಸ್ಥಾನದ ಸಂಪರ್ಕ ರಸ್ತೆಯೂ ಕಾಂಕ್ರಿಟೀಕರಣವಾಗಬೇಕೆಂಬ ಬಯಕೆ ಊರ ಭಕ್ತರಲ್ಲಿತ್ತು. ಇದಕ್ಕೆ ಪೂರಕವಾಗಿ ಕ್ಷೇತ್ರದ ಭಕ್ತರೂ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವಿಗಳೂ ಆಗಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದ್ದರು. ಕ್ಷೇತ್ರದ ಭಕ್ತಾದಿಗಳ ಹಾಗೂ ಆಡಳಿತ ಮಂಡಳಿಯ ಆಶಯದಂತೆ ಅಶೋಕ್ ಕುಮಾರ್ ರೈ ಅವರನ್ನು ಶ್ರೀ ಕ್ಷೇತ್ರ ನಳೀಲು ಇದರ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದಕ್ಕೆ ಪೂರಕವಾಗಿ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಬ್ರಹ್ಮಕಲಶೋತ್ಸವಕ್ಕೆ ಮುನ್ನ ಅಭಿವೃದ್ಧಿ ಮಾಡುವ ಭರವಸೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೀಡಿದ್ದರು. ಭರವಸೆಯಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡಿದ್ದು ರಸ್ತೆಯ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ 10 ಲಕ್ಷ ರೂ ಅನುದಾನ
ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯ ಭಾಗ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು ಆ ಭಾಗದಲ್ಲಿ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತವೃಂದ ಶಾಸಕಿ ಭಾಗೀರಥಿ ಮುರುಳ್ಯ ಅವರಲ್ಲಿ ಮನವಿ ಮಾಡಿದಾಗ ಮನವಿ ಪೂರಕವಾಗಿ ಸ್ಪಂದಿಸಿ 10 ಲಕ್ಷ ರೂ ಅನುದಾನ ನೀಡಿದ್ದಾರೆ. ಅದರ ಗುದ್ದಲಿ ಪೂಜೆ ನಡೆದಿದ್ದು, ಬ್ರಹ್ಮಕಲಶೋತ್ಸವದ ಬಳಿಕ ಕಾಮಗಾರಿ ಆರಂಭವಾಗಲಿದೆ.
ಸಾಂಸ್ಕೃತಿಕ ಲೋಕದ ಅನಾವರಣ : ಫೆ. 17 ರಂದು ಸಂಜೆ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇವರು ಅರ್ಪಿಸುವ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯರೂಪಕ ಫೆ. 18 ರಂದು ಬೆಳಿಗ್ಗೆ 11 ರಿಂದ ಪಾಲಕ್ಕಾಡ್ ಕೈಲಾಸಪತಿ,. ವಿದ್ವಾನ್ ಸಿ.ಪಿ.ವ್ಯಾಸವಿಠಲ್, ವಿದ್ವಾನ್ ನಿಕ್ಷಿತ್, ಕುಮಾರಿ ಪ್ರಾರ್ಥನಾ, ಕು.ಆರಾಧನಾ ಇವರಿಂದ ಗಾಯನ ಗೋಷ್ಟಿ ಮದ್ಯಾಹ್ನ ಗಂಟೆ 1.30 ರಿಂದ ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5 ರಿಂದ ವಿಶ್ವಮೋಹನ ನೃತ್ಯ ಕಲಾ ಶಾಲೆ ಕಡಬ ಇವರಿಂದ ನೃತ್ಯ ವೈಭವ, ರಾತ್ರಿ 9 ರಿಂದ ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ಕಲಾವಿದರಿಂದ ನಾಟಕ – ಪುದರ್ ದೀದಾಂಡ್ ನಡೆಯಲಿದೆ. ಫೆ. 19 ರಿಂದ ಧೀ ಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ಸಂಜೆ 4 ರಿಂದ ಮಣಿಕ್ಕರ ಹಿ. ಪ್ರಾ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 5 ರಿಂದ ಸುಸ್ವರ ಮೆಲೋಡಿಯಸ್ ಉಪ್ಪಿನಂಗಡಿ ಇವರಿಂದ ಭಕ್ತಿ- ಭಾವ -ಸಂಗಮ, ರಾತ್ರಿ 9 ರಿಂದ ಕಲಾ ಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ಪ್ರದರ್ಶನವಾಗಲಿದೆ. ಫೆ.20 ರಂದು ಮಧ್ಯಾಹ್ನ 1.30 ರಿಂದ ಶ್ರವಣರಂಗ ಸಾಂಸ್ಕೃತಿಕ ಪ್ರತಿಷ್ಠಾನ ಸವಣೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4 ರಿಂದ ಮಣಿಕ್ಕರ ಸರಕಾರಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 5 ರಿಂದ ಜಾಝ್ ಮ್ಯೂಸಿಕ್ ಪಾಲ್ತಾಡು ಇವರಿಂದ ಶರಣ ಸೇವಾ ರತ್ನ- ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ, ಫೆ. 21 ರಂದು ಮಧ್ಯಾಹ್ನ 2 ರಿಂದ ಧೀಶಕ್ತಿ ಬಾಲಿಕಾ ಯಕ್ಷ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ಪಾಲ್ತಾಡಿ ಸ.ಹಿ.ಪ್ರಾ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 5 ರಿಂದ ಕಲಾಮಂದಿರ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ, ರಾತ್ರಿ 9 ರಿಂದ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ…!ಬುಡಿಯೆರ್ಗೆ… ನಾಟಕ ಪ್ರದರ್ಶನವಾಗಲಿದೆ. ಫೆ.22 ರಂದು ಮಧ್ಯಾಹ್ನ 2 ರಿಂದ ಗುರುಕುಲಾ ಕಲಾ ಕೇಂದ್ರ ಪುರುಷರ ಕಟ್ಟೆ ಇವರಿಂದ ನೃತ್ಯ -ಗಾನ- ಸಂಭ್ರಮ, ಸಂಜೆ 5.30 ರಿಂದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಷಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದಲ್ಲಿ ಕಲ್ಯಾಣತ್ರಯ ಯಕ್ಷಗಾನ ಬಯಲಾಟ ನಡೆಯಲಿದೆ.
ಭಜನಾ ಸಂಕೀರ್ತನೆ: ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.