ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆಬ್ರವರಿ 11ರಂದು ಕುಂದಾಪುರ ರೂರಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣ, ಯುವ ಮೆರಿಡಿಯನ್ ಸಂಕೀರ್ಣ, ಕೋಟೇಶ್ವರ ಇಲ್ಲಿ ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮ ನಡೆಯಲಿದೆ. ಇದು ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವ ಮೊದಲ ಬಂಟರ ಸಮಾವೇಶವಾಗಿದ್ದು, ವಿದೇಶಗಳನ್ನೂ ಒಳಗೊಂಡಂತೆ ಭಾರತದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಂಟ ಸಮುದಾಯ ಬಾಂಧವರು ಈ ಮಹಾಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಈ ಬಂಟರ ಮಹಾಸಮಾಗಮದ ಪ್ರಧಾನ ಸಂಚಾಲಕರಾಗಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಆಯ್ಕೆಯಾಗಿದ್ದು ಇವರು ಸಂಘದ ಉಪಾಧ್ಯಕ್ಷರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ವಿದ್ಯಾರ್ಥಿವೇತನ ನಿರ್ವಹಣಾ ಸಮಿತಿ ಸಂಚಾಲಕರಾಗಿ, ಸಂಘದ ವತಿಯಿಂದ ಪ್ರಕಟಿಸಲಾಗುತ್ತಿರುವ ಯುವ ಚೈತನ್ಯ ಸಂಚಿಕೆಯ ಸಂಪಾದಕರಾಗಿ ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಂಟರ ಮಹಾಸಮಾಗಮದ ಅಂಗವಾಗಿ ಅಂದು ಬಂಟರ ಸಾಂಸ್ಕೃತಿಕ ಸಂಭ್ರಮ ಎಂಬ ರಾಷ್ಟ್ರ ಮಟ್ಟದ ವೈವಿಧ್ಯಮಯ ಸಮೂಹನೃತ್ಯ ಸ್ವರ್ಧೆ ನಡೆಯಲಿದೆ. ವಿದ್ಯಾದೀವಿಗೆ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ನವಚೇತನ ಯೋಜನೆಯಡಿ ವಿಶೇಷಚೇತನರಿಗೆ ಪ್ರೋತ್ಸಾಹಧನ ವಿತರಣೆ ನಡೆಯಲಿದೆ. ಮಂಗಳೂರಿನ ಎ.ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ಪ್ರಸಾದ್ ನೇತ್ರಾಲಯ ಹಾಗೂ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ವಿಶೇಷ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ವೈವಿಧ್ಯಮಯ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಾಗಿ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ವರ್ಧೆ, ರಂಗೋಲಿ ಸ್ವರ್ಧೆ ಹಾಗೂ ಧ್ಯೇಯವಾಕ್ಯ ರಚನಾ ಸ್ವರ್ಧೆಯನ್ನು ಸಂಘಟಿಸಲಾಗಿದೆ.
ಬಂಟರ ಮುಂದಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳು ಎಂಬ ಪರಿಕಲ್ಪನೆಯಡಿ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಎಂ.ಡಿ ಪಲ್ಲವಿ, ಮಾನಸ ಹೊಳ್ಳ ಮೊದಲಾದವರು ಭಾಗವಹಿಸಲಿದ್ದಾರೆ ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಮತ್ತು ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.