ಕರ್ನಾಟಕದ ದಕ್ಷಿಣ ಭಾಗದಲ್ಲಿ ಒಬ್ಬ ಭಕ್ತನಿದ್ದ. ಆತನ ತಾಯಿಗೆ ವಯಸ್ಸಾಗಿತ್ತು. ಆಕೆ ಕಾಶಿಗೆ ಹೋಗಿ ವಿಶ್ವನಾಥನ ಮಡಿಲಲ್ಲಿ ಸಾಯಬೇಕು ಅಂತ ಬಯಸುತ್ತಾ ಇದ್ದಳು. ತನ್ನ ಇಡೀ ಜೀವನದಲ್ಲಿ ಏನನ್ನು ಕೇಳಿರದ ಆಕೆ ತನ್ನ ಮಗನ ಹತ್ತಿರ ಇದನ್ನೊಂದು ಕೇಳಿಯೇ ಬಿಟ್ಟಳು. ನನ್ನನ್ನು ಕಾಶಿಗೆ ಕರೆದುಕೊಂಡು ಹೋಗು, ನನಗೂ ವಯಸ್ಸಾಗಿದೆ. ನಾನು ಅಲ್ಲಿ ಹೋಗಿ ಸಾಯಬೇಕು ಅಂತ. ಹಾಗಾಗಿ ಇವನು ತನ್ನ ವೃದ್ಧ ತಾಯಿಯನ್ನು ಕರೆದುಕೊಂಡು ಹೊರಟ. ದಕ್ಷಿಣ ಕರ್ನಾಟಕದಿಂದ ಕಾಶಿವರೆಗೆ ಕಾಡಿನ ದಾರಿಯಲ್ಲಿ ನಡೆಯೋದು ಅಂದರೆ, ಅದು ತುಂಬಾನೇ ದೂರ. ವಯಸ್ಸಾಗಿದ್ದರಿಂದ ನಡೆದು ನಡೆದು ತಾಯಿ ಅಸ್ವಸ್ಥಗೊಳ್ಳುತ್ತಾಳೆ. ಹಾಗಾಗೀ ತಾಯಿಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೊರಟನು. ನಡೆದಿದ್ದರಿಂದ ಆತನ ಶಕ್ತಿಯೂ ಕುಂದುತ್ತಾ ಬರುತ್ತಿತ್ತು. ಮುಂದೆ ಹೋಗೋಕೆ ಅವನಿಗಿದ್ದ ಒಂದೇ ಒಂದು ದಾರಿ ಎಂದರೆ ಶಿವ ಶಿವ ಎಂದು ಜಪಿಸೋದು. ಈ ಒಂದು ಪ್ರಯತ್ನದಲ್ಲಿ ನನ್ನನ್ನು ಸೋಲೋಕೆ ಬಿಡಬೇಡ, ನನ್ನ ತಾಯಿ ನನ್ನ ಬಳಿ ಕೇಳಿದ ಏಕೈಕ ವಿಚಾರವಿದು. ಇದನ್ನು ಪೂರೈಸೋ ಹಾಗೆ ಮಾಡು. ಅವಳನ್ನು ಕಾಶಿಗೆ ಕರೆದುಕೊಂಡು ಕರೆದೊಯ್ಯಬೇಕು. ನಿನಗಾಗಿಯೇ ಬರುತ್ತಿದ್ದೇವೆ, ದಯವಿಟ್ಟು ನನಗೆ ಹೆಚ್ಚು ಶಕ್ತಿ ಕೊಡು ಎಂದನು. ಆತ ನಡೆದುಕೊಂಡು ಹೋಗುತ್ತಿರುವಾಗ ಒಂದು ಘಂಟೆ ಸದ್ದು ಕೇಳಿಸುತ್ತದೆ. ಈ ಸದ್ದಿನ ನಡುವೆ ಕಾಡಿನಲ್ಲಿ ಒಂದೇ ಎತ್ತಿನ ಗಾಡಿ ಅಂದರೆ… ವಿಚಿತ್ರ ! ಆದರೆ, ನಮಗೆ ಹೆಚ್ಚು ಆಯಾಸವಾದಾಗ ಈ ಸೂಕ್ಷ್ಮ ವಿಷಯಗಳ ಕುರಿತು ಗಮನ ವಹಿಸಲ್ಲ. ಗಾಡಿ ಮಾಲೀಕನ ಮುಖ ಕಾಣಿಸಲಿಲ್ಲ. ಮುಖ ಹೆಚ್ಚು ಮಂಜಾಗಿದ್ದು ಆತ ಮುಸುಕು ಹಾಕಿಕೊಂಡಿದ್ದನು. ನನ್ನ ತಾಯಿ ಅಸ್ವಸ್ಥಲಾಗಿದ್ದಾಳೆ. ಹೇಗಿದ್ದರೂ ನಿಮ್ಮ ಗಾಡಿ ಖಾಲಿಯೇ ಇದೆ. ನಿಮ್ಮ ಜೊತೆ ಪ್ರಯಾಣಿಸಬಹುದಾ ? ಎಂದು ಕೇಳಿದ. ಅವನು ಸರಿ ಎಂದನು, ಇಬ್ಬರೂ ಹತ್ತಿಕೊಂಡರು. ಗಾಡಿ ಮುಂದೆ ಸಾಗಿತು. ಸ್ವಲ್ಪ ಸಮಯದ ಅನಂತರ ಕಾಡಿನ ದಾರಿಯಾದರೂ ಗಾಡಿ ತುಂಬಾ ನಯವಾಗಿ ಹೋಗುತ್ತಿರುವುದನ್ನು ಗಮನಿಸಿದ. ಹೇಗಿರಬೇಕಿತ್ತೋ ಹಾಗೆ ಬಿರುಸಾಗಿರಲಿಲ್ಲ. ಗಾಡಿ ಓಡಿಸುವವನ ಕಡೆ ನೋಡಿದ ಬರೀ ಮುಸುಕು ಮಾತ್ರ ಇತ್ತು ಬೇರೆ ಯಾರು ಇರಲಿಲ್ಲ. ತನ್ನ ತಾಯಿ ಕಡೆಗೆ ನೋಡಿದ. ಅವಳಂದಳು ಮೂರ್ಖ ನಾವು ಆವಾಗಲೇ ತಲುಪಿದ್ದೇವೆ. ಇನ್ನೆಲ್ಲೂ ಹೋಗಬೇಕಾಗಿಲ್ಲ, ಇದೇ ಆ ಜಾಗ. ನಾನಿನ್ನು ಹೊರಡುತ್ತೇನೆ ಎಂದು ಸ್ಥಳದಲ್ಲೇ ದೇಹವನ್ನು ತ್ಯಜಿಸಿದಳು.
ಎತ್ತು, ಗಾಡಿ, ಚಾಲಕ ಎಲ್ಲರೂ ಮಾಯವಾಗುತ್ತಾರೆ. ಅವನು ವಾಪಸ್ಸಾದನು. ಜನರು ಇವನು ತಾಯಿಯನ್ನು ಎಲ್ಲೋ ಹೊತ್ತು ಹಾಕಿ ಬಂದ. ಇಷ್ಟು ಬೇಗ ಬಂದ ಅಂದ್ರೆ ಕಾಶಿಗೆ ಹೋಗಿಲ್ಲ ಎಂದುಕೊಂಡರು. ನೀವೇನು ಯೋಚಿಸುತ್ತೀರಿ ಎನ್ನುವುದು ಮುಖ್ಯವಲ್ಲ, ದೇವ ಬಂದ ಅಷ್ಟೇ, ನನ್ನ ಜೀವನ ಬೆಳಗಿತು. ನನಗೆ ದೇವರು ಬಂದಿದ್ದರೆಂದು ಗೊತ್ತಿರಲಿಲ್ಲ, ನಾನು ಮುಸುಕು ಹಾಕಿದ ಮುಖವನ್ನು ಮಾತ್ರ ನೋಡಿದ್ದು ಎಂದು ಹೇಳಿದ.
ಅಲ್ಲಿ ಯಾವುದೇ ಮುಖವಿರಲಿಲ್ಲ. ಅವನು ಸುಮ್ಮನೇ ಹೀಗೆ ಕುಳಿತ್ತಿದ್ದ ಎಂದು ಹೇಳಿ ಆತನು ಅದೇ ರೀತಿ ಕುಳಿತುಕೊಂಡ. ಧಿಡೀರನೆ ಎಲ್ಲರೂ ಆತನ ಬಟ್ಟೆಯನ್ನೇ ನೋಡಿದರು. ಅವನು ಅಲ್ಲಿ ಇರಲಿಲ್ಲ. ಮುಂದೆ, ಅವನು ದಕ್ಷಿಣ ಭಾರತದ ಮಹಾನ್ ಜ್ಞಾನಿಯಾದ. ಅನಂತರ ಅಲ್ಲಿ ಇಲ್ಲಿ ಪ್ರಯಾಣಿಸುತ್ತಾನೆ. ಎಲ್ಲೇ ಹೋದರೂ ಜನ ಆತನನ್ನು ಖಾಲಿ ಮುಖದವನು ಎಂದು ಗುರುತಿಸುತ್ತಿದ್ದರು. ಯಾವುದಕ್ಕೂ ಸಮರ್ಪಿಸಿಕೊಂಡ ಹೊರತು ಯಾರೋ ತಮ್ಮ ಜೀವನದಲ್ಲಿ ಏನೋ ಮಹತ್ವ ಪೂರ್ಣವಾದದ್ದನ್ನು ಮಾಡಿಲ್ಲ. ಅದು ಕಲೆ, ಕ್ರೀಡೆ, ಸಂಗೀತ, ರಾಜಕೀಯ, ಅಧ್ಯಾತ್ಮ ಅಥವಾ ಇನ್ನೇನಿದ್ದರೂ ಇರಲಿ. ನಾವು ಅದಕ್ಕೆ ಸಮರ್ಪಿತರಾಗಿದ್ದೇವೆ ಹೊರತು ಮಹತ್ವ ಪೂರ್ಣವಾದದ್ದು ಏನು ಆಗಲ್ಲ. ಏಕೆಂದರೆ, ಸಮರ್ಪಣ ಭಾವ ಇಲ್ಲದೇ ಇದ್ದರೆ ನಾವು ಯಾರು ಅನ್ನುವ ಬೇಲಿನ ದಾಟೋಕಾಗಲ್ಲ. ಯಾವುದಕ್ಕೆ ಸಮರ್ಪಿತರಾಗಿದ್ದೀರಿ ಎನ್ನುವುದು ಅಪ್ರಸ್ತುತ. ನಾವೇನೇ ಆಗಿರಲಿ, ನಮ್ಮ ಭಕ್ತಿಯ ಗುಣಮಟ್ಟ ನಮ್ಮನ್ನು ರೂಪಾಂತರಿಸುತ್ತದೆ. ಭಕ್ತಿ ಇಲ್ಲದೇ ನಿಜವಾದ ರೂಪಾಂತರಣೆ ಇಲ್ಲ. ಭಕ್ತಿ ಇಲ್ಲದೇ ಒಬ್ಬ ಮನುಷ್ಯ ಸಂಪೂರ್ಣ ಸಶಕ್ತನಾಗುವುದಿಲ್ಲ. ಭಕ್ತಿ ಎನ್ನುವುದನ್ನು ಪ್ರತಿಯೊಬ್ಬ ಮನುಷ್ಯನು ಅನುಭವಿಸಿ ಅರ್ಥ ಮಾಡಿಕೊಳ್ಳಬೇಕು. ಅದು ಒಂದು ಧಾರ್ಮಿಕ ಪ್ರಕ್ರಿಯೆ ಅಲ್ಲ, ಭಕ್ತಿನೇ ಒಂದು ರೀತಿಯ ಪ್ರೇಮ. ಅಲ್ಲಿ ನಮಗೆ ಆಯ್ಕೆ ಅನ್ನುವುದು ಇರಲ್ಲ. ಪ್ರೀತಿ ಅಂದರೆ ಅಲ್ಲಿ ನಮಗೆ ಹೆಚ್ಚು ಆಯ್ಕೆ ಎನ್ನುವ ಪ್ರಶ್ನೆ ಬರುವುದಿಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ಅದರಿಂದ ಹೊರಬರಬಹುದು. ಭಕ್ತಿ ಎನ್ನುವುದು ಒಂದು ಪ್ರೇಮ. ಅದನ್ನು ಯಾವತ್ತೂ ಕೂಡಾ ಬಿಡಿಸೋಕ್ಕಾಗಲ್ಲ. ಪೂರ್ಣವಾಗಿ ಅದರಲ್ಲಿ ಲೀನವಾಗುತ್ತೇವೆ, ಶೂನ್ಯವಾಗುತ್ತೇವೆ. ಶೂನ್ಯವಾಗಿರುವುದರಿಂದ ಎಲ್ಲವೂ ಕೂಡ ನಾವೇ ಆಗುತ್ತೇವೆ.
ವೀಕ್ಷಿತಾ ವಿ. ಆಳ್ವಾಸ್ ಕಾಲೇಜು,
ಮೂಡುಬಿದಿರೆ