ವಿದ್ಯಾಗಿರಿ (ಮೂಡುಬಿದಿರೆ): ‘ಕಾಲೇಜುಗಳ ಹೊರ ನೋಟವನ್ನು ಹೋಲಿಕೆ ಮಾಡುವ ಬದಲು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಗಮನಿಸಿ. ಆ ಫಲಿತಾಂಶದ ಹಿಂದಿನ ಪರಿಶ್ರಮವನ್ನು ಹೋಲಿಕೆ ಮಾಡುವುದು ಉತ್ತಮ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.ಆಳ್ವಾಸ್ ಕಾಲೇಜಿನ ಮುಂಡ್ರೆದುಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಗುರುವಾರ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕರ – ಶಿಕ್ಷಕರ ಸಭೆ’ಯಲ್ಲಿಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಹಲವಾರು ವಿದ್ಯಾಸಂಸ್ಥೆಗಳಿವೆ. ಆದರೆ, ಹೆಚ್ಚಿನ ಸಂಸ್ಥೆಗಳಲ್ಲಿ 1 ರಿಂದ 12 ನೇ ತರಗತಿಗೆ ಪೂರಕವಾಗುವ ವಾತಾವರಣ ಮತ್ತು ಸಮಗ್ರ ವ್ಯವಸ್ಥೆಯನ್ನು ಕಲ್ಪಿಸಿಲ್ಲ . ನಮ್ಮ ಪ್ರತಿಷ್ಠಿತ ಸಂಸ್ಥೆಯನ್ನು ಇಲ್ಲಿನ ಇತರ ಕಾಲೇಜುಗಳೊಂದಿಗೆ ಹೋಲಿಕೆ ಮಾಡುವುದು ದೊಡ್ಡ ತಪ್ಪು. ನಮ್ಮ ಸಂಸ್ಥೆಯಲ್ಲಿ ಎನ್ಸಿಆರ್ಟಿ ಪಠ್ಯಕ್ರಮದ
ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಗುರಿ ಸಾಧಿಸುವ ಛಲದ ಹಾಗೂ ಪರಿಶ್ರಮವನ್ನು ರೂಪಿಸಲಾಗುತ್ತದೆ ಎಂದರು.
ನಮ್ಮ ಸಂಸ್ಥೆಯಲ್ಲಿ ಒಟ್ಟು 22 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅದರಲ್ಲಿ 20 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ಇದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು. ಪದವಿ ಪೂರ್ವ ಶಿಕ್ಷಣದಲ್ಲಿ ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಛಲದ ಮನೋಭಾವ
ನಮ್ಮಲ್ಲಿರುವುದು ಅತ್ಯವಶ್ಯಕ. ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ತಯಾರಿಯನ್ನು ಮಾಡಬೇಕು. ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನುಡಿದಂತೆ ನಡೆದಿದೆ. ದತ್ತು ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಶುಲ್ಕ ರಿಯಾಯಿತಿ ಸೇರಿದಂತೆ ಇನ್ನಿತರ ಯೋಜನೆಯನ್ನು ಕೊಟ್ಟಿರುವ ಮಾತಿನಂತೆ ವಿದ್ಯಾರ್ಥಿಗಳಿಗೆ ಸಮಗ್ರ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಸದಾಕತ್ , ಉಪ ಪ್ರಾಂಶುಪಾಲೆ ಝಾನ್ಸಿ ಪಿ. ಎನ್., ಸಂಯೋಜಕಿ ವಿದ್ಯಾ ಕೆ , ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ , ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಎಂ.ಡಿ. ಇದ್ದರು.ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮನಿರೂಪಿಸಿದರು .