ತುಳುನಾಡ ಪೌಂಡೇಶನ್ ಪುಣೆ ಹಾಗೂ ಕನ್ನಡ ಮಾಧ್ಯಮ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಜಂಟಿ ಆಯೋಜನೆಯಲ್ಲಿ ಡಾ. ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲಿನ ತಳ ಮಹಡಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಸಂಘದ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ನಿಟ್ಟೆ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಒಂದು ಪುಣ್ಯದ ಕಾರ್ಯವಾಗಿದೆ. ರಕ್ತದಾನದ ಮೂಲಕ ಎಷ್ಟೋ ಜನರ ಜೀವವನ್ನು ಉಳಿಸಬಹುದಾಗಿದೆ. ವಿಜ್ಞಾನ ಯುಗದಲ್ಲಿ ಯಾವುದೇ ಪದಾರ್ಥಗಳನ್ನು ಕೃತಕವಾಗಿ ತಯಾರಿಸಬಹುದು. ಆದರೆ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದುದರಿಂದ ರಕ್ತದಾನ ಶ್ರೇಷ್ಠವಾದ ದಾನವಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಸ್ವಾಗತಿಸಿ ಮಾತನಾಡಿ, ರಕ್ತದಾನ ಶ್ರೇಷ್ಠವಾದ ಮಹಾದಾನವಾಗಿದೆ. ಸಮಾಜದ ಜನರ ಬದುಕಿಗೆ ನೆರವಾಗುವ ಇಂತಹ ಕಾರ್ಯಗಳು ನಡೆಯುತ್ತಿರಲಿ. ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಮಾಧ್ಯಮ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕ ವೃಂದಕ್ಕೂ ವಂದನೆಗಳು ಎಂದರು. ಕನ್ನಡ ಮಾಧ್ಯಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆಯವರು ಮಾತನಾಡಿ, ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಪ್ರತೀ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬರಲಾಗಿದೆ. ಈ ವರ್ಷ ತುಳುನಾಡ ಫೌಂಡೇಶನ್ ನೊಂದಿಗೆ ಸೇರಿ ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು ರಕ್ತದಾನದ ಮಹತ್ವವನ್ನು ವಿವರಿಸಿದರು.
ಸಂಘದ ಅಧ್ಯಕ್ಷ ರೋಹನ್ ಶೆಟ್ಟಿ ತುಳುನಾಡ ಫೌಂಡೇಶನ್ ವತಿಯಿಂದ ನಡೆಯುವ ಕಾರ್ಯಚಟುವಟಿಕೆಗಳಿಗೆ ಸರ್ವರ ಸಹಕಾರ ಬಯಸುತ್ತಾ ರಕ್ತದಾನಿಗಳಿಗೆ ವಂದನೆ ಸಲ್ಲಿಸಿದರು. ಈ ಸಂದರ್ಭ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ, ನ್ಯಾಯವಾದಿ ಪದ್ಮನಾಭ ಬೆಳ್ಚಡ, ಪುರುಷೋತ್ತಮ ಶೆಟ್ಟಿ, ಪ್ರೇಮಾ ಶೆಟ್ಟಿ, ವಿಕೇಶ್ ರೈ ಶೇಣಿ, ಸಮಿತಾ ವಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸದಾನಂದ ತಾವರಗೆರೆ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ತುಳುನಾಡು ಫೌಂಡೇಶನ್ ಕಾರ್ಯದರ್ಶಿ ಸುಜಯ ಶೆಟ್ಟಿ, ರತನ್, ರವಿರಾಜ್, ಕಿರಣ್, ಆನಂದ್, ವಿನೀತ್, ಪ್ರತೀಕ್, ಸ್ನೇಹ ಕಾರ್ಯಕ್ರಮ ಯಶಸ್ವಿಗಾಗಿ ಸಹಕರಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.