ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆನುವಂಶಿಕ ಮೊಕ್ತೇಸರರನ್ನಾಗಿ ಉದ್ಯಮಿ ಅರುಣ್ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್ತು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. 52 ವರ್ಷಗಳಿಗಿಂತಲೂ ಅಧಿಕ ಕಾಲ ಅರುಣ್ ಶೆಟ್ಟಿ ಅವರೇ ಈ ದೇವಸ್ಥಾನದ ಆಡಳಿತ ನಡೆಸುತ್ತಿದ್ದರು. ಖಾಸಗಿ ಆಡಳಿತದಲ್ಲಿದ್ದ ದೇವಸ್ಥಾನ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟು, ಬಳಿಕ ಆದಾಯದಲ್ಲಿ “ಎ’ ಶ್ರೇಣಿಯಲ್ಲಿ ಗುರುತಿಸಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆನುವಂಶಿಕ ಮೊಕ್ತೇಸರರು ಎಂದು ತಮ್ಮ ಮನೆತನವನ್ನು ಘೋಷಿಸಬೇಕೆಂದು ಅವರು ಇಲಾಖೆಗೆ ಮನವಿ ಮಾಡಿದ್ದರು.
10 ವರ್ಷಗಳ ಬಳಿಕ ಈ ಬಗ್ಗೆ ಆದೇಶ ಹೊರಬಿದ್ದಿದ್ದು ಈ ದೇವಾಲಯಕ್ಕೆ ಆನುವಂಶಿಕ ಮೊಕ್ತೇಸರರನ್ನು ನೇಮಕ ಮಾಡುವ ವಿಚಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲೆಂದೇ ಅ. 13ರಂದು 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಮೊದಲ ಸಭೆ ಸೇರಿತ್ತು. ಅದರಲ್ಲಿ ವಿಸ್ತೃತ ಚರ್ಚೆ ನಡೆದು, ಅಭಿಪ್ರಾಯಗಳ ಮಂಡನೆಯಾಗಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಕಾಯ್ದೆ 2011 ಅನ್ವಯ ಆನುವಂಶಿಕ ಮೊಕ್ತೇಸರರನ್ನಾಗಿ ಮಾಡಿ ತೀರ್ಮಾನಿಸಲಾಗಿದೆ. ಅರುಣ್ ಶೆಟ್ಟಿ ಅವರು ಕುಂದಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದಾರೆ.