ಸುಮಾರು ಎರಡು ತಾಸಿಗೂ ಮಿಕ್ಕಿ ಮುಂಬಯಿ ಮಹಾನಗರದ ಕಲಾವಿದರ ಅದ್ಭುತ ನಟನೆಯನ್ನು ಈ ವೇದಿಕೆಯಲ್ಲಿ ನೋಡಿದ್ದೇನೆ. ಸ್ಥಾನೀಯ ಕಲಾವಿದರಿಗೆ, ನಾಟಕ ತಂಡಗಳಿಗೆ ಅವಕಾಶಗಳನ್ನು ನೀಡಿದಾಗ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಬಹುದು. ಮಹಾನಗರದ ಕಲಾ ಪ್ರೇಮಿಗಳು ಇಂದು ಉತ್ತಮ ಸಂದೇಶ ಭರಿತ ನಾಟಕವನ್ನು ನೋಡಿ ಆನಂದಿಸಿದ್ದಾರೆ. ಸದಾ ಗಂಭೀರ ಪಾತ್ರಗಳನ್ನು ಮಾಡುವ ಸುರೇಂದ್ರ ಕುಮಾರ್ ಹೆಗ್ಡೆಯರಂತಹ ಶ್ರೇಷ್ಠ ಕಲಾವಿದ ಇಂದು ಹಾಸ್ಯ ಪಾತ್ರವನ್ನು ಬಹು ಅಚ್ಚುಕಟ್ಟಾಗಿ ನಿಭಾಯಿಸಿ ಕಲಾ ರಸಿಕರನ್ನು ರಂಜಿಸಿದ್ದಾರೆ. ಪನ್ವಿ ಕ್ರಿಯೇಶನ್ಸ್ ನ ಸ್ಥಾಪಕ ಹರೀಶ್ ಶೆಟ್ಟಿ ಓರ್ವ ಉತ್ತಮ ಗಾಯಕ ಹಾಗೂ ರಂಗನಟ. ಈ ತಂಡಕ್ಕೆ ಕಲಾ ಮಾತೆಯ ಅನುಗ್ರಹ ಸದಾ ಲಭಿಸಲಿ. ಇದೇ ರಿತೀಯ ಉತ್ತಮ ಹಾಸ್ಯಮಯ ನಾಟಕ ಮತ್ತಷ್ಟು ಮೂಡಿ ಬರಲಿ ಎಂದು ಖ್ಯಾತ ಜೋತಿಷಿ ಅಶೋಕ್ ಪುರೋಹಿತ್ ನುಡಿದರು. ಅವರು ಜ.8ರ ಸೋಮವಾರದಂದು ಸಂಜೆ ಮಾಟುಂಗಾದ ಮೈಸೂರ್ ಅಸೋಸಿಯೇಷನ್ ನ ಸಭಾಗೃಹದಲ್ಲಿ ಪನ್ವಿ ಕ್ರಿಯೇಶನ್ಸ್ ಮುಂಬಯಿ ಇದರ ಯೋಜನೆಯಲ್ಲಿ ಕೆ. ವಿ. ಎಸ್ ಎಂಟರ್ಟೈನ್ಮೆಂಟ್ ನ ಪ್ರಬುದ್ಧ ಕಲಾವಿದರಿಂದ ‘ಈ ರಾತ್ರೆಗ್ ಪಗೆಲ್ಗ್ ಯಾನ್’ ನಾಟಕದ ಮಧ್ಯಂತರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅತಿಥಿ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಎಲ್. ವಿ. ಅಮಿನ್ ಮಾತನಾಡುತ್ತಾ, ಉತ್ತಮ ಹಾಸ್ಯಮಯ ನಾಟಕ ಇಂದು ಈ ವೇದಿಕೆಯಲ್ಲಿ ನಡೆದಿದೆ. ಮಹಾನಗರದ ಕಲಾವಿದರು ಹಗಲಿನಲ್ಲಿ ತಮ್ಮ ತಮ್ಮ ಕೆಲಸಗಳನ್ನು ಮಾಡಿ ಬಿಡುವಿನ ಸಮಯದಲ್ಲಿ ನಾಟಕದ ಅಭ್ಯಾಸವನ್ನು ಮಾಡಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಇಂತಹ ಕಲಾವಿದರಿಗೆ ಹಾಗೂ ನಾಟಕಕ್ಕೆ ಕಲಾ ಪೋಷಕರು ಸದಾ ಪ್ರೋತ್ಸಾಹ ನೀಡಬೇಕು. ಇಂದು ಹಾಸ್ಯದ ಟಾನಿಕ್ ನೀಡಿದ ಈ ತಂಡದಿಂದ ಇನ್ನಷ್ಟು ಉತ್ತಮ ನಾಟಕ ಮೂಡಿ ಬರಲಿ ಈ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು. ಅತಿಥಿ ತ್ರಿಮೂರ್ತಿ ಕ್ಯಾಟರರ್ಸ್ ಮೂಲಕ ಅಶೋಕ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ, ನಾನು ಕಲಾಜಗತ್ತು ತಂಡದ ಓರ್ವ ಸದಸ್ಯ. ಮಹಾನಗರದಲ್ಲಿ ಉತ್ತಮ ನಾಟಕ ತಂಡ ಹಾಗೂ ಸಂದೇಶ ಭರಿತ ನಾಟಕಗಳಿವೆ. ಇಂತಹ ನಾಟಕಗಳಿಗೆ, ನಾಟಕ ತಂಡಗಳಿಗೆ ಹಾಗೂ ಕಲಾವಿದರಿಗೆ ನಾವು ಸದಾ ಬೆಂಬಲ ಪ್ರೋತ್ಸಾಹ ನೀಡಬೇಕು. ಕೆ. ವಿ.ಎಸ್ ಎಂಟರ್ಟೈನ್ಮೆಂಟ್ ನ ಪ್ರಬುದ್ಧ ಕಲಾವಿದರಿಂದ ಇನ್ನಷ್ಟು ಹಾಸ್ಯಭರಿತ ನಾಟಕಗಳು ಪ್ರದರ್ಶಗೊಳ್ಳಲಿ ಎಂದರು.
ಅತಿಥಿ ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ದೇವಾಡಿಗ ಮಾತನಾಡುತ್ತಾ, ಈ ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಪಾತ್ರಧಾರಿಗಳು ನಮ್ಮವರೇ. ಮಹಾನಗರದಲ್ಲಿ ಬಹಳ ಸಮಯದ ನಂತರ ಸಂದೇಶ ಭರಿತ ಹಾಸ್ಯ ನಾಟಕ ಪ್ರದರ್ಶನಗೊಂಡಿದೆ. ಇಂತಹ ನಾಟಕಗಳು ಇನ್ನೂ ಹೆಚ್ಚು ಪ್ರದರ್ಶನಗೊಳ್ಳಲಿ ಎಂದರು. ಇದೇ ಸಂದರ್ಭದಲ್ಲಿ ಶ್ರೇಷ್ಠ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ, ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಮತ್ತಿತರರನ್ನು ವಿಶೇಷವಾಗಿ ಗೌರವಿಸಲಾಯಿತು. ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೆಟ್ಟಿ ಎರ್ಮಾಲ್ ವಂದಿಸಿದರು. ವೇದಿಕೆಯಲ್ಲಿ ಅಶೋಕ್ ಪುರೋಹಿತ, ಎಲ್.ವಿ. ಅಮೀನ್, ಅಶೋಕ್ ಶೆಟ್ಟಿ ಮುಂಡ್ಕೂರು, ಪಿ.ಡಿ ಶೆಟ್ಟಿ, ಕಿಶೋರ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ, ಜಯಂತಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.