ಮಾನವೀಯ ಮೌಲ್ಯಗಳಿಲ್ಲದ ಮನುಷ್ಯ ಚಿಗುರೊಡೆಯದ ಕೊರಡಿನಂತೆ, ಬರಡಾದ ಬಂಜರು ಭೂಮಿಯಂತೆ, ಘಮವಿಲ್ಲದ ಹೂವಿನಂತೆ, ಎಲೆಗಳಿಲ್ಲದ ಬೋಳು ವೃಕ್ಷದಂತೆ..! ಹೌದು, ಘಮವಿಲ್ಲದ ಹೂವಿನಲ್ಲಿ ಪರಿಮಳವನ್ನು ಆಘ್ರಾಣಿಸಲು ಸಾಧ್ಯವೇ? ಬೋಳು ವೃಕ್ಷದಲ್ಲಿ ನಿಸರ್ಗದ ಸೊಬಗನ್ನು ಆಸ್ವಾದಿಸಬಹುದೇ? ಬಂಜರು ಭೂಮಿಯಲ್ಲಿ ಸೃಷ್ಟಿಯ ಚೆಲುವನ್ನು ಸವಿಯಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ…! ಹಾಗೆಯೇ ಒಬ್ಬ ವಿದ್ಯಾವಂತನಾಗಿದ್ದು ಹಣವಂತನಾಗಿದ್ದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರೂ ಕೂಡಾ ಆತನಲ್ಲಿ ಉತ್ತಮ ನಡವಳಿಕೆಗಳು, ಸಂಸ್ಕಾರವು ಇಲ್ಲದಿದ್ದರೆ ಆತನು ಮೃಗಗಳಿಗೆ ಸಮಾನ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಒಬ್ಬ ವ್ಯಕ್ತಿಯ ಬದುಕನ್ನು ಸುಂದರವಾಗಿಸುವುದಲ್ಲದೆ ಸಮಾಜದಲ್ಲಿ ಗೌರವ, ಘನತೆ ವೃದ್ಧಿಸಿ ಆತನನ್ನು ಉಚ್ಚ ಮಟ್ಟಕ್ಕೇರಿಸುತ್ತದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾದರೆ ಮಾತ್ರ ಅವರು ಸದ್ಗುಣ ಸಂಪನ್ನರಾಗಬಹುದು. ಇವನ್ನೆಲ್ಲಾ ಮನಗಂಡು ಮಕ್ಕಳಿಗಾಗಿ ಸಂಸ್ಕೃತಿ ಸಂಸ್ಕಾರವನ್ನು ತಿಳಿಸಿ ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಬೇಕೆಂಬ ಹಿತಾಸಕ್ತಿಯಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ಚಿಣ್ಣರ ಬಿಂಬ. ಅಂತಹ ಒಂದು ವಿಶೇಷವಾದ ಶಿಕ್ಷಣವನ್ನು ನೀಡುವ ಗುರುಕುಲದಂತೆ ಕೆಲಸ ಮಾಡಿ ಇದು ಮಾನ್ಯತೆ ಪಡೆಯುತ್ತದೆ.
ಚಿಣ್ಣರ ಬಿಂಬವು ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ಚಿಣ್ಣರ ಮುಖಾಂತರ ಕಲರವವನ್ನು ಮಾಡುತ್ತಿರುವ ಸಂಸ್ಥೆ. ಸುಮಾರು 21 ವರ್ಷಗಳ ಹಿಂದೆ 2003ರಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಆ ಸಮಯದಲ್ಲಿ ಮುಂದಿನ ಭವಿಷ್ಯವಾಗಿರುವ ಮಕ್ಕಳ ಬಾಳ ಭವಿಷ್ಯ ಉಜ್ವಲವಾಗಬೇಕು ಎಂಬ ಸದುದ್ಧೇಶದಿಂದ ಸ್ಥಾಪಿಸಲ್ಪಟ್ಟಿದೆ. ತುಳು ಕನ್ನಡಿಗರ ಮಕ್ಕಳು ತಮ್ಮ ತಾಯ್ನಾಡಿನ ಸಂಸ್ಕೃತಿ ಸಂಸ್ಕಾರಕ್ಕೆ ಬದ್ಧರಾಗಿರಬೇಕು. ತಮ್ಮ ಸಂಪ್ರದಾಯವನ್ನು ಹೊರನಾಡಿನಲ್ಲಿದ್ದರೂ ಕೂಡಾ ಉಳಿಸಿ ಬೆಳೆಸಬೇಕು. ಮಕ್ಕಳು ಸಮಾಜದ, ದೇಶದ ಉತ್ತಮ ನಾಗರೀಕರಾಗಬೇಕು ಎಂಬುವುದೇ ಇದರ ಧ್ಯೇಯೋದ್ದೇಶ. ಮಕ್ಕಳು ಸಂಸ್ಕಾರವಂತರಾದರೆ ಅದು ಅವರ ಬಾಳ ಭವಿಷ್ಯಕ್ಕೆ ಗಟ್ಟಿಯಾದ ಅಡಿಪಾಯವನ್ನು ಹಾಕಿ ಭದ್ರ ಬುನಾದಿಯನ್ನು ಹೊಂದಿರುತ್ತದೆ. ಆ ಮಕ್ಕಳಿಂದ ಕುಟುಂಬ, ಸಮಾಜ, ರಾಷ್ಟ್ರವು ಪ್ರಗತಿ ಹೊಂದಲು ಸಾಧ್ಯ ಎಂಬ ಪರಿಕಲ್ಪನೆಯ ಚಿಂತನೆಯೇ ಈ ಚಿಣ್ಣರಬಿಂಬದ ಹುಟ್ಟಿಗೆ ಕಾರಣವಾಗಿದೆ. ಇದನ್ನು ಆಳವಾಗಿ ಪರಿಶೀಲಿಸಿ, ಮಕ್ಕಳ ಬಾಳ ಭವಿಷ್ಯದ ಬಗ್ಗೆ ಯೋಚಿಸಿ, ಅವರ ಹಿತಾಸಕ್ತಿಗಳನ್ನು ಮನಗಂಡು ರೂವಾರಿಗಳಾದ ಪ್ರಕಾಶ್ ಭಂಡಾರಿ, ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ವಿಜಯ್ ಕುಮಾರ್ ಶೆಟ್ಟಿಯವರ ಭಾವನಾ ಲಹರಿಯಿಂದ ಒಡಮೂಡಿದ ಅದ್ಭುತ ಪರಿಕಲ್ಪನೆಯೇ ಈ ಚಿಣ್ಣರ ಬಿಂಬ.
ಚಿಣ್ಣರ ಬಿಂಬಕ್ಕೀಗ ಪ್ರಬುದ್ಧ 21 ರ ಹರೆಯ. 21 ವರ್ಷದಿಂದ ಸುಮಾರು 7000ಕ್ಕಿಂತ ಅಧಿಕ ಮಕ್ಕಳು ಕುಣಿದು ನಲಿದಾಡಿ ಸಂಭ್ರಮಿಸಿದ ಹರುಷದ ತಾಣ. ಅವರ ಪಾಲಕ, ಪೋಷಕರು ಮಕ್ಕಳ ಮುಂದಿನ ಜೀವನಕ್ಕೆ ಉತ್ತಮ ತಳಹದಿಯನ್ನು ಕಂಡುಕೊಂಡ ಹೆಮ್ಮೆಯ ಕುಟುಂಬ. ಇಲ್ಲಿ ಬಡವ, ಬಲ್ಲಿದನೆಂಬ ಭೇದ ಭಾವವಿಲ್ಲ. ಜಾತಿ, ಮತ, ಧರ್ಮವೆಂಬ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಂದೇ ಎನ್ನುವ ಸಮಾನತೆಯ ಭಾವವಿದೆ. ಭ್ರಾತೃತ್ವದ ಒಲವಿನ ಸಿಂಚನವಿದೆ. ಪ್ರತಿಭೆಯ ಅನಾವರಣಕ್ಕೆ ವೇದಿಕೆಯೆಂಬ ಭವ್ಯ ರಂಗ ಮಂಟಪವಿದೆ. ಅವರ ಪರಿಶ್ರಮಕ್ಕೆ ಮುಗ್ಧ ಪ್ರಶಂಸೆಯಿದೆ. ಮಕ್ಕಳ ಅದ್ಭುತ ಯಶಸ್ಸಿಗೆ ಸಾವಿರಾರು ಕರಗಳ ಕರತಾಡನವಿದೆ. ಚಿಣ್ಣರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸದಾ ಪ್ರೋತ್ಸಾಹವನ್ನು ನೀಡುವ ಲಕ್ಷಾಂತರ ಸಹೃದಯರ ಆಶೀರ್ವಾದವಿದೆ. ಪುಟಾಣಿಗಳ ಕಲೆಗೆ, ಆಸಕ್ತಿಗೆ ಎಂದೂ ಬರಡಾಗದಿರುವ ಜ್ಞಾನ ಭಂಡಾರದ ಕಣಜವಿದೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು” ಎಂಬ ಕುವೆಂಪುರವರ ಮಾತಿನಂತೆ ಚಿಣ್ಣರ ಬಿಂಬದ ಮುಖಾಂತರ ಮುಂಬಯಿ ಮಾಯಾ ನಗರಿಯು ಎಲ್ಲೆಲ್ಲೂ ಕನ್ನಡಮಯವಾಗಿದೆ. ಕನ್ನಡದ ಕಂಪನ್ನು ವಿವಿಧೆಡೆ ಪಸರಿಸುತ್ತಿದೆ. ಚಿಣ್ಣರ ಮುಖೇನ ಕನ್ನಡದ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪ್ರತಿ ಅದಿತ್ಯವಾರ ಕನ್ನಡ ತರಗತಿಗಳನ್ನು ನಡೆಸಿ, ಕನ್ನಡ ಅಕ್ಷರ ಜ್ಞಾನವನ್ನು ಮಕ್ಕಳಿಗೆ ಕಲಿಸಿ ಮಾತೃ ಬಾಷೆಯಲ್ಲಿಯೇ ಸಂವಹನ ನಡೆಸಿ ಕನ್ನಡ ಕಲಿಯಲು ಪ್ರೇರೇಪಿಸುವ ಮನೋಭಾವವಿದೆ. ನಾಲ್ಕು ವರ್ಷ ಪರೀಕ್ಷೆಗಳನ್ನು ನಡೆಸಿ ಕೊನೆಗೆ ಸರ್ಟಿಫಿಕೇಟ್ ಗಳನ್ನು ನೀಡುವುದು ಕೂಡಾ ಅಭಿಮಾನದ ಸಂಗತಿಯಾಗಿದೆ. ಹೊರನಾಡನಲ್ಲಿಯೂ ತುಳು ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಯಲು ಅವಕಾಶ ಸಿಕ್ಕಿರುವುದು ಕನ್ನಡಾಸಕ್ತರ ಮತ್ತು ಅವರ ಮಕ್ಕಳ ಭಾಗ್ಯವಲ್ಲದೇ ಮತ್ತೇನು?
ಚಿಣ್ಣರ ಬಿಂಬದಲ್ಲಿ ಮಕ್ಕಳದ್ದೇ ರಾಜ್ಯ. ಇದು ಮಕ್ಕಳಿಗಾಗಿಯೇ ಇರುವಂತಹ ಸಂಸ್ಥೆ. ಇಲ್ಲಿ ಪುಟಾಣಿಗಳೇ ಆಧಾರ ಸ್ತಂಭಗಳು. ಬಾನಂಗಳದಲ್ಲಿ ತಾರೆಗಳು ಹೊಳೆಯುತ್ತಾ ರಾರಾಜಿಸುವಂತೆ ಇಲ್ಲಿ ಚಿಣ್ಣರು ತಮ್ಮ ಸಂಸ್ಕಾರ ಮತ್ತು ಪ್ರತಿಭೆಗಳಿಂದ ವಿಜೃಂಭಿಸುತ್ತಾರೆ. ಅವರ ವಾಕ್ಚಾತುರ್ಯಕ್ಕೆ ಅಸ್ಖಲಿತ, ನಿರರ್ಗಳ ಮಾತುಗಾರಿಕೆಗೆ ಕನ್ನಡಾಭಿಮಾನಿಗಳು ಆಶ್ಚರ್ಯಚಕಿತರಾಗುತ್ತಾರೆ. ಭಾಷಣ, ನಿರೂಪಣೆ, ಏಕಪಾತ್ರಾಭಿನಯ, ಕಿರುಪ್ರಹಸನ, ಶ್ಲೋಕ ಪಠಣ, ಜಾನಪದ ಗೀತೆ, ಭಾವಗೀತೆಗಳ ಮೋಡಿಗೆ ಭಾವಪರವಶರಾಗಿ ಇವರು ಆಂಗ್ಲಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳೇ ಎಂದು ಬೆರಗಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಅತಿಥಿಗಳನ್ನು ಪರಿಚಯಿಸುವ ಚಿಣ್ಣರ ಅಮೋಘ ಪರಿಗೆ ಅತಿಥಿಗಳು ಆನಂದ ತುಂದಿಲರಾಗಿ ಪುಟಾಣಿಗಳ ಪ್ರತಿಭೆಯನ್ನು ಪ್ರಶಂಸಿಸುತ್ತಾರೆ. ನಿಜವಾಗಿಯೂ ಚಿಣ್ಣರಬಿಂಬದ ಸಾಧನೆಗೆ ಇದು ಹೆಗ್ಗಳಿಕೆಯ ಪ್ರತೀಕವಾಗಿದೆ. ಭಜನೆಯ ಸುಮಧುರ ರಾಗ, ತಾಳ, ಲಯಕ್ಕೆ ಪ್ರೇಕ್ಷಕರು ತನ್ಮಯತೆಯಿಂದ ತಲ್ಲೀನರಾಗಿ ಭಕ್ತಿ ಪರವಶರಾಗುತ್ತಾರೆ. ಜಾನಪದ ನೃತ್ಯ, ಕಂಸಹಾಳೆ, ವೀರಗಾಸೆ, ಯಕ್ಷಗಾನವನ್ನು ಕೂಡಾ ಲೀಲಾಜಾಲವಾಗಿ ವೇದಿಕೆಯಲ್ಲಿ ವಿಜೃಂಭಿಸಿ ಕನ್ನಡ ಮನಸ್ಸುಗಳು ಮೂಕವಿಸ್ಮಿತರನ್ನಾಗುವಂತೆ ಮಾಡುತ್ತಾರೆ. ಇದು ಚಿಣ್ಣರಬಿಂಬದ ಸೃಷ್ಟಿಗೆ ಸಾರ್ಥಕ್ಯದ ಭಾವವನ್ನು ತಂದುಕೊಟ್ಟಿದೆ ಎನ್ನುವುದು ಪ್ರತಿಶತ ಸತ್ಯವಾದ ಮಾತು ..!
ಶಿಲ್ಪಿಯ ಕೈಚಳಕಕ್ಕೆ ಹೇಗೆ ಸುಂದರ ಮೂರ್ತಿಯು ರೂಪುಗೊಳ್ಳುತ್ತದೋ ಅದೇ ರೀತಿ ಚಿಣ್ಣರ ಬಿಂಬದಲ್ಲಿ ಮಕ್ಕಳಿಗೆ ಯೋಗ್ಯ ತರಬೇತಿ ಸಿಕ್ಕಿ ಮಾನಸಿಕವಾಗಿ , ದೈಹಿಕವಾಗಿ ಸದೃಢರಾಗಿ ಸಬಲರಾಗಿ ಆತ್ಮವಿಶ್ವಾಸ ಮತ್ತು ಮನೋಬಲ ತುಂಬಿ ತುಳುಕಿ ಪರಿಪೂರ್ಣತೆಯನ್ನು ಪಡೆಯುತ್ತಾರೆ. ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೆ ಅದರ ಜೊತೆಗೆ ಮಾನವೀಯ ,ನೈತಿಕ ಮೌಲ್ಯಗಳು, ಸದಾಚಾರ, ವಿನಯತೆ, ಸರಳತೆ, ಸಜ್ಜನಿಕೆ, ಮನುಷ್ಯತ್ವ, ಸಚ್ಚಾರಿತ್ರ, ಸದ್ಭಾವನೆ, ಹೊಂದಾಣಿಕೆ, ಸಹಾಯ ಮಾಡುವುದು ಇವೆಲ್ಲಾ ಗುಣಗಳು ಮೇಳೈಸಿದರೆ ಮಾತ್ರ ಒಬ್ಬ ವ್ಯಕ್ತಿ ಮೇರು ವ್ಯಕ್ತಿತ್ವವನ್ನು ಸಂಪಾದಿಸಬಲ್ಲ. ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಲ್ಲ. ಉತ್ತಮ ವ್ಯಕ್ತಿತ್ವವೇ ಆತನನ್ನು ಉತ್ತುಂಗಕ್ಕೆ ಏರಿಸಬಲ್ಲುದು ಎಂಬುವುದಕ್ಕೆ ಅದ್ಭುತ ಸಾಧನೆಯನ್ನು ಮಾಡಿದ ಚಿಣ್ಣರ ಬಿಂಬದ ಮಕ್ಕಳೇ ಸಾಕ್ಷಿಯಾಗಿದ್ದಾರೆ…! ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ, ಉತ್ತಮ ಸಲಹೆಗಳು, ಒಳ್ಳೆಯ ವಿಷಯಗಳನ್ನು ತಿಳಿಸುವ ಪರಿ ಮಕ್ಕಳನ್ನು ಸುವಿಚಾರದೆಡೆಗೆ ಚಿಂತಿಸುವಂತೆ ಮಾಡುತ್ತದೆ. ಋಣಾತ್ಮಕ ಯೋಚನೆಗಳು ನಶಿಸಿ ಹೋಗಿ ಧನಾತ್ಮಕ ಅಂಶಗಳಿಗೆ ಪ್ರಚೋದನೆ ನೀಡುವಂತಹ ಕೆಲಸವನ್ನು ಮಾಡುತ್ತದೆ. ಚಿಣ್ಣರೇ ಚಿಣ್ಣರ ಬಿಂಬದ ಜೀವಾಳ. ಇಂದಿನ ಆಧುನಿಕ, ಸ್ಪರ್ಧಾತ್ಮಕ ಕಾಲದಲ್ಲಿ ತಂದೆ ತಾಯಿಗಳಿಬ್ಬರೂ ಉದ್ಯೋಗಕ್ಕೆ ಹೋಗುವ ಅನಿವಾರ್ಯ ಪರಿಸ್ಥಿತಿ ಎಲ್ಲರದ್ದಾಗಿದೆ. ಮನೆಯ ಒಳಗೂ, ಹೊರಗೂ ದುಡಿಯುವ ಪರಿಸ್ಥಿತಿ ಇರುವುದರಿಂದ ತಮ್ಮ ಕಂದಮ್ಮಗಳಿಗೆ ತಮ್ಮ ನಾಡಿನ ರೀತಿ, ನೀತಿ, ಸಂಪ್ರದಾಯ ಪರಂಪರೆಯನ್ನು ತಿಳಿಸುವಷ್ಟು ಸಮಯ ಮತ್ತು ವ್ಯವಧಾನ ಹೆತ್ತವರಲ್ಲಿ ಇರುವುದಿಲ್ಲ. ಆಧುನಿಕತೆಯ ಸೋಗಿಗೆ ಮಾರು ಹೋಗುವ ಮೊದಲೇ ಎಳವೆಯಲ್ಲಿಯೇ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ “ಹಲವು ಮಕ್ಕಳ ತಾಯಿ ಚಿಣ್ಣರ ಬಿಂಬ” ಎಂದು ಗಣ್ಯಾತಿಗಣ್ಯರಿಂದ ಕರೆಸಲ್ಪಟ್ಟು ಚಿಣ್ಣರ ಬಿಂಬದ ಘನತೆಯನ್ನು ಹೆಚ್ಚಿಸಿದೆ.
ಮುಂಬಯಿಯಲ್ಲಿ ಚಿಣ್ಣರ ಬಿಂಬವನ್ನು ಮುನ್ನಡೆಸಿ ಈ ಸಫಲತೆಯ ಮೆಟ್ಟಿಲನ್ನು ಏರಿಸಿದ ಕೀರ್ತಿ ನಿವೃತ್ತ ಪೋಲಿಸ್ ಅಧಿಕಾರಿ, ಶಿಸ್ತಿನ ಸಿಪಾಯಿ, ಸಮರ್ಥ ನಾಯಕತ್ವದ ಚುಕ್ಕಾಣಿ ಹಿಡಿದಿರುವ ಪ್ರಕಾಶ್ ಭಂಡಾರಿಯವರಿಗೆ ಸಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಹಲವು ವರ್ಷಗಳವರೆಗೆ ಕನ್ನಡವು ಬೆಳೆದು ಉಳಿಯಲು ಸಾಧ್ಯವಿದೆ. ಯಾಕೆಂದರೆ ಚಿಣ್ಣರ ಬಿಂಬದ ಮಕ್ಕಳು ಅದನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆಯೂ ಪ್ರಕಾಶ್ ಭಂಡಾರಿಯವರಿಗೆ ಇದೆ. ಅವರ ಪತ್ನಿ ರೇಣುಕಾ ಭಂಡಾರಿ, ಮಕ್ಕಳಾದ ಪೂಜಾ, ನೈನಾ ಇವರೆಲ್ಲರ ಸೇವಾ ಮನೋಭಾವವು ಶ್ರೇಯಕ್ಕೆ ಕಾರಣವಾಗಿದೆ. ಅವರ ಜೊತೆಗೆ ಸುರೇಂದ್ರ ಕುಮಾರ್ ಹೆಗ್ಡೆ, ಗೀತಾ ಹೇರಳ, ಡಾ.ಪೂರ್ಣಿಮಾ ಶೆಟ್ಟಿ, ರಮೇಶ್ ರೈ, ಆಶಾಲತಾ ಕೊಠಾರಿ, ಸುಮಿತ್ರಾ ದೇವಾಡಿಗ, ಪದಾಧಿಕಾರಿಗಳು, ಕನ್ನಡ ಶಿಕ್ಷಕಿಯರು, ಭಜನೆ ಶಿಕ್ಷಕಿಯರು, ಸ್ವಯಂ ಸೇವಕರು, ಪಾಲಕರು ಹೀಗೆ ಎಲ್ಲರೂ ಮಕ್ಕಳ ಏಳಿಗೆಗಾಗಿ ಶ್ರಮವಹಿಸುತ್ತಾರೆ. ಈ ಪರಿಶ್ರಮದ ಫಲವೋ ಎಂಬಂತೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿದ್ದು ಇದರ ಸಾಧನೆಗೆ ಸಿಕ್ಕ ಹಿರಿಮೆಯ ಗರಿಯಾಗಿದೆ. ಇದರ ಕಾರ್ಯಬಾಹುಳ್ಯದಿಂದಾಗಿ ಇದಕ್ಕಿಂತ ಮೊದಲೇ ಪ್ರಶಸ್ತಿಗೆ ಭಾಜನರಾಗಬೇಕಿತ್ತು. ಚಿಣ್ಣರಿಗೆಂದೇ ಸ್ಥಾಪಿಸಲ್ಪಟ್ಟ ಸಂಸ್ಥೆ ಇದು ಬೇರೆ ಸಂಘ ಸಂಸ್ಥೆಗಳಿಗಿಂತ ಭಿನ್ನ ವಿಭಿನ್ನವಾಗಿ ಗೋಚರಿಸುತ್ತಿದೆ. ಈ ವರ್ಷ ಚಿಣ್ಣರ ಬಿಂಬದ ಪರಿವಾರಕ್ಕೊಂದು ಸಂತಸದ ಭಾವ, ಸಂಭ್ರಮದ ಪುಳಕ, ಸಡಗರದ ಹರ್ಷೋಲ್ಲಾಸ. ಆ ಸಂಭ್ರಮವನ್ನು ಪರಸ್ಪರ ಹಂಚಿಕೊಳ್ಳಲು, ಮೊಗದಲ್ಲಿ ರಂಗೇರಿದ ಮಂದಹಾಸದೊಡನೆ ಒಬ್ಬರಿಗೊಬ್ಬರು ಸಂತೋಷದಲ್ಲಿ ಬೆರೆದುಕೊಳ್ಳಲು ಚಿಣ್ಣರ ಬಿಂಬದ ಪೂರಾ ಪರಿವಾರವೇ ಸಜ್ಜಾಗಿದೆ ಎಂದರೂ ಉತ್ಪ್ರೇಕ್ಷೆಯಲ್ಲ..! ಹೊರನಾಡಿನಲ್ಲಿದ್ದೂ ಕನ್ನಡದ ಕೈಂಕರ್ಯವನ್ನು ಮಾಡಿ ತನ್ನ ಕಾರ್ಯಕ್ಷಮತೆ, ಕಾರ್ಯವೈಖರಿಯಿಂದ ಜನಮನ್ನಣೆ ಗಳಿಸಿದ್ದು, ಯಶಸ್ಸಿನ ಉತ್ತುಂಗಕ್ಕೆರಿದ್ದು ಸಾಮಾನ್ಯ ವಿಷಯವಂತೂ ಖಂಡಿತಾ ಅಲ್ಲ..!!
ಇದೇ ಬರುವ ಜನವರಿ 7 ಅದಿತ್ಯವಾರದಂದು ಮಕ್ಕಳ ವಾರ್ಷಿಕ ಪರ್ವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಸಂಭ್ರಮಾಚರಣೆಯು ಕುರ್ಲಾ ಬಂಟರ ಸಂಘದಲ್ಲಿ ನಡೆಯಲಿದೆ. ಅದಕ್ಕೆ ತುಳು – ಕನ್ನಡಿಗರೆಲ್ಲಾ ಸಾಕ್ಷಿಯಾಗಿ ಅಂದಿನ ಆ ಉತ್ಸವದಲ್ಲಿ ಎಲ್ಲರೂ ಭಾಗಿಯಾಗೋಣ. ಈ ಪರ್ವದ ನೆನಪುಗಳನ್ನು ಜೀವಮಾನವಿಡೀ ಮನದಲ್ಲಿ ಬಚ್ಚಿಟ್ಟುಕೊಳ್ಳೋಣ ಅಲ್ಲವೇ? ಚಿಣ್ಣರಿಗಾಗಿಯೇ ಸ್ಥಾಪಿಸಲ್ಪಟ್ಟ ಚಿಣ್ಣರ ಬಿಂಬದ ಕೀರ್ತಿಯು ಜಗದಗಲ ಹರಡಿ ಉತ್ತುಂಗ ಶಿಖರಕ್ಕೇರಲಿ. ಚಿಣ್ಣರ ಬಿಂಬದ ಮಕ್ಕಳು ಹೆತ್ತವರ, ಸಮಾಜದ ಭಾರತಾಂಬೆಯ ಸೇವೆಗೈಯುತ್ತಾರೆ ಎನ್ನುವ ಆಶೋತ್ತರದೊಂದಿಗೆ ಭಾರತ ದೇಶವು ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟವಾಗುವಂತೆ ಸಾಧನೆಗೈಯಲಿ ಎನ್ನುವ ಶುಭ ಹಾರೈಕೆ.
ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು