ಮೂಡುಬಿದಿರೆ: ‘ನಾ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎಂಬ ಮನುಸ್ಮತಿಯ ನಾಲ್ಕನೇ ಸಾಲನ್ನು ಮಾತ್ರ ಅರಿತರೆ ಸಾಲದು, ಆ ಶ್ಲೋಕದ ಮೊದಲ ಮೂರು ಸಾಲುಗಳಲ್ಲಿ ಗಂಡು- ತಂದೆಯಾಗಿ, ಗಂಡನಾಗಿ ಕೊನೆಗೆ ಮಗನಾಗಿ ಹೆಣ್ಣನ್ನು ಪೋಷಿಸುವ ಜವಾಬ್ದಾರಿ ಪುರುಷನಿಗಿದೆ ಎಂಬ ಸಾರವನ್ನು ಅರಿಯಬೇಕು ಎಂದು ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ ಕೆ ನುಡಿದರು.

ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ'ದಲ್ಲಿ ಅವರು ‘ಮಹಿಳೆ ಮತ್ತು ಕಾನೂನು ಎಂಬ ವಿಷಯದ ಕುರಿತು ಮಾತನಾಡಿದರು. ಮನೆಯಲ್ಲಿ ಯಾವುದೇ ತಪ್ಪಾದಾಗ ಮೊದಲು ಹೆಣ್ಣು ದೂಷಣೆಗೆ ಒಳಗಾಗುತ್ತಾಳೆ. ಮದುವೆಯ ನಂತರ ಹೆಣ್ಣು ಗಂಡನ ಸೊತ್ತು ಎಂಬ ಕಲ್ಪನೆಯು ತಪ್ಪು. ವರದಕ್ಷಿಣೆ ನಿಷೇಧ ಕಾಯಿದೆ 1961ರಲ್ಲಿ ಬಂತಾದರೂ ಇಂದು ಕೆಲಸದಲ್ಲಿರುವ ಹೆಣ್ಣನ್ನು ಮದುವೆ ಆಗುವ ಮೂಲಕ ಪರೋಕ್ಷ ವರದಕ್ಷಿಣೆ ಶೋಷಣೆ ನಡೆಯುತ್ತಿದೆ. ಅನಗತ್ಯವಾಗಿ ಕಾನೂನಿನ ಮೊರೆ ಹೋಗಬಾರದು, ಆದರೆ ನಮ್ಮ ಮೇಲೆ ದೌರ್ಜನ್ಯವಾದಾಗ ಸಮರ್ಥವಾಗಿ ಬಳಸಿಕೊಳ್ಳಬೇಕು. ನಮಗೆ ತೊಂದರೆ ಕೊಡುವವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿನಾಕಾರಣ ಸುಳ್ಳು ದೂರು ನೀಡಿದರೂ ಅಪರಾಧವೆನಿಸಿಕೊಳ್ಳುತ್ತದೆ. ಫೋಕ್ಸೋ ಕಾಯಿದೆಯ ಪ್ರಕಾರ ಹುಡುಗಿಯೇ ಹುಡುಗನಿಗೆ ಪ್ರಚೋದಿಸಿದರೂ
ಹುಡುಗನ ವಿರುದ್ಧವೇ ದೂರು ದಾಖಲಾಗುತ್ತದೆ. ಅಹಿಂಸೆ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳಂತಹ ವ್ರತಗಳನ್ನು ಪಾಲಿಸಿದರೆ ಕಾನೂನಿನ ಅವಶ್ಯಕತೆಯೇ ಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ.ಮೊಹಮದ್ ಸದಾಕತ್, ವಿದ್ಯಾರ್ಥಿಗಳು ದೃಢತೆಯಿಂದ ಪರೀಕ್ಷಾ ತಯಾರಿಯನ್ನು ಮಾಡಿಕೊಂಡರೆ ಪರೀಕ್ಷೆಯು ಸುಲಭವಾಗಿರುತ್ತದೆ. ಯಾರು ಇರಲಿ ಅಥವಾ ಬಿಡಲಿ ನಮ್ಮ ಕೆಲಸಗಳನ್ನು ನಾವು ಮಾಡಿಕೊಳ್ಳಬಲ್ಲೆವು ಎಂಬ ಆತ್ಮಸ್ಥೈರ್ಯ ಇದ್ದರೆ ಬೆಳೆಯಲು ಸಾಧ್ಯ. ಸರಿಯಾದ ದಾರಿಯಲ್ಲಿ ನಡೆದು ಸಾಧಿಸಿದರೆ ಮೊದಲು ಸಂತೋಷಪಡುವುದು ನಮ್ಮೆಲ್ಲರ ತಾಯಂದಿರು. ಆದ್ದರಿಂದ ವಿದ್ಯಾರ್ಥಿಗಳು ಸಾಧನೆ ಕಡೆ ಗಮನಹರಿಸಬೇಕು ಎಂದರು.
ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕಿ ಶ್ವೇತಾ ಆರ್ ಇದ್ದರು. ಕಾರ್ಯಕ್ರಮದ ಸಂಯೋಜಕಿ ಡಾ ಸುಲತಾ ಸ್ವಾಗತಿಸಿದರು. ಉಪನ್ಯಾಸಕಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಉಷಾ. ಬಿ ವಂದಿಸಿದರು.








































































































