ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಬಡವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಒಕ್ಕೂಟದ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಜೆ ಶೆಟ್ಟಿ ಅವರು ಶ್ಲಾಘಿಸಿದರು.
ಅವರು ಜೂನ್ 30ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟರ ಮಾತೃಸಂಘವು 100 ವರ್ಷವನ್ನು ದಾಟಿ ಬೆಳೆದಿದೆ. ಇಂದು ಪ್ರತಿ ತಾಲೂಕು, ಜಿಲ್ಲೆ, ರಾಜ್ಯ ದೇಶ-ವಿದೇಶಗಳಲ್ಲಿ ಬಂಟರ ಸಂಘ ಹೊಂದಿದೆ. ಆದರೆ ಐಕಳ ಹರೀಶ್ ಶೆಟ್ಟಿ ಅವರು ಮುಂಬೈನಲ್ಲಿದ್ದರೂ ಊರಿಗೆ ಬಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ವೈದ್ಯಕೀಯ, ಶಿಕ್ಷಣ, ಮನೆ ನಿರ್ಮಾಣ, ಮದುವೆಗೆ ಸಹಾಯ ಹೀಗೆ ಅನೇಕ ರೀತಿಯಲ್ಲಿ ಉತ್ತಮ ಕಾರ್ಯ ವಿತರಣೆ ಮಾಡುವುದು ಸಾಮಾನ್ಯದ ಕಾರ್ಯವಲ್ಲ ಅವರ ಸಂಘಟನಾ ಚತುರತೆ ಸಾಮರ್ಥ್ಯದಿಂದ ಸಾಧ್ಯವಾಗಿದೆ. ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಪರಊರಿನ ದಾನಿಗಳ ಸಹಾಯ ಅಗತ್ಯ. ಎಲ್ಲಾ ದಾನಿಗಳ ಬೆಂಬಲದಿಂದ ಒಕ್ಕೂಟದ ಕೆಲಸಕ್ಕೆ ಶಕ್ತಿ ದೊರೆಯುತ್ತದೆ. ತಾನು ಕೂಡ ಒಕ್ಕೂಟಕ್ಕೆ 5 ಲಕ್ಷ ರೂ. ನೀಡುತ್ತಿರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಒಕ್ಕೂಟದ ಕಾರ್ಯದಲ್ಲಿ ಕೈ ಜೋಡಿಸುತ್ತೇನೆ. ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆ ಮುಂದುವರಿಯಲಿ ಎಂದು ಎಜೆ ಶೆಟ್ಟಿ ಶುಭ ಹಾರೈಸಿದರು.
ಹುಬ್ಬಳ್ಳಿ-ಧಾರಾವಾಡ ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ (ಸುಗ್ಗಿ) ಮಾತನಾಡಿ, ಮೂವತ್ತು ವರ್ಷಗಳ ಕಾಲ ಸಮಾಜದ ಸೇವೆ ಮಾಡುತ್ತಾ ಬಂದಿದ್ದೇವೆ. ನಮ್ಮ ಸಮಾಜದವರೆ ನಮ್ಮ ಜತೆಯಲ್ಲಿರುವುದಿಲ್ಲ. ದೇಶದ ಬಂಟ ಸಂಘಗಳ ಪ್ರಮುಖರು ಒಂದಾಗಿ ಸಮಾಜದ ಬಗ್ಗೆ ಚರ್ಚೆ ಮಾಡಬೇಕಾಗಿದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಮಾಜಕ್ಕಾಗಿ ಒಂದಾಗಬೇಕಾಗಿದೆ. ಇದು ಐಕಳ ಹರೀಶ್ ಶೆಟ್ಟಿ ಅವರಿಂದ ಮಾತ್ರ ಸಾಧ್ಯ ಬಂಟ ಸಮಾಜದಲ್ಲೂ ಬಡತನದ ಕುಟುಂಬಗಳಿವೆ ಅವರಿಗೆ ನಾವು ಆಶ್ರಯವಾಗಬೇಕು. ಸಮಾಜದ ವಿಷಯಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಮೂಲಕ ಮಾಡುವ ಕೆಲಸವನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಐಕಳ ಹರೀಶ್ ಶೆಟ್ಟಿ ವಹಿಸಿದ್ದರು
ಕಾರ್ಯಕ್ರಮದಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಡಾ| ರಾಜೇಂದ್ರ ಕುಮಾರ್ ಅವರು ಒಕ್ಕೂಟಕ್ಕೆ ನೀಡಿದ 25 ಲಕ್ಷ ರೂ.ಗಳ ಚೆಕ್ಕನ್ನು ಒಕ್ಕೂಟಕ್ಕೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ 99 ಶೇಕಡಾ ಫಲಿತಾಂಶ ಪಡೆದ 13 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣ, ಮನೆ ರಿಪೇರಿ ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ ಒಟ್ಟು 40ಲಕ್ಷಕ್ಕೂ ಮಿಕ್ಕಿ ಪರಿಹಾರ ಧನದ
ಚೆಕ್ ಗಳನ್ನು ವಿತರಿಸಲಾಯಿತು.
ಆರ್.ಜೆ ಭಾಗ್ಯರಾಜ್ ಶೆಟ್ಟಿ, ಡಾ. ಮಂಜುಳಾ ಶೆಟ್ಟಿ, ಡಾ| ಪ್ರಿಯಾ ಶೆಟ್ಟಿ, ಸಾಯಿನಾಥ್ ಶೆಟ್ಟಿ, ಆರ್.ಜೆ ನಯನಾ ಶೆಟ್ಟಿ, ಕವಿತಾ ಪಕ್ಕಳ ಸನ್ಮಾನ ಪತ್ರ ವಾಚಿಸಿದರು.
ಸಮಾರಂಭದ ವೇದಿಕೆಯಲ್ಲಿ ನವಿ ಮುಂಬೈಯ ಮಾಜಿ ನಗರಸೇವಕ. ನೆರೋಲ್ ರಂಗೋಲಿ ಹೋಟೆಲ್ ಮಾಲಕ ಸುರೇಶ್ ಗೋಪಾಲ್ ಶೆಟ್ಟಿ ಎರ್ಮಲ್ ಉಪಸ್ಥರಿದ್ದರು.
ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತುಗಳನ್ನಾಡಿದರು. . ಜತೆ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲ್ ಸಮಾಜ ಕಲ್ಯಾಣ ಕಾರ್ಯಕ್ರಮದ ಫಲಾನುಭವಿಗಳ ಚೆಕ್ ವಿತರಣೆಯ ಮಾಹಿತಿ ತಿಳಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ವಿವಿಧ ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಫಲಾನುಭವಿಗಳು ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಗೌರವ ಸನ್ಮಾನ :
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ದಿನಕರ ಶೆಟ್ಟಿ ಎಸಿಪಿ ಮಂಗಳೂರು ದಕ್ಷಿಣ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರೀತ ಶೆಟ್ಟಿ, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ವರದಿಗಾರ ಪುಷ್ಪರಾಜ್ ಬಿ.ಎನ್. ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಪ್ರತಿಭಾ ರೈ, ಜೆಸಿಐ ಸುರತ್ಕಲ್ ಅಧ್ಯಕ್ಷರು ರಾಜೇಶ್ವರಿ ಡಿ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿತರ ನುಡಿ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಸನ್ಮಾನ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಮೂಲಕ ಉತ್ತಮ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಮೂರು ವರ್ಷಗಳಲ್ಲಿ ಐಕಳ ಅವರು ಮಾಡಿರುವ ಕಾರ್ಯ ನೋಡಿದಾಗ ನಾವು ಒಕ್ಕೂಟದಲ್ಲಿದ್ದಾಗ ಇಂತಹ ಕಾರ್ಯ ಮಾಡಬೇಕಿತ್ತು ಅನಿಸುತ್ತದೆ. ಮುಂದೆ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ನಮ್ಮ ಇತಿಮಿತಿಯಲ್ಲಿ ತಮ್ಮಿಂದಾಗುವ ಸಹಾಯ ಮಾಡುವ ಭರವಸೆ ನೀಡಿದರು.
200 ವರ್ಷಗಳಲ್ಲಿ ಬಂಟ ಸಮಾಜ ನಾಶವಾಗುವ ಅಪಾಯದಲ್ಲಿದೆ: ಎಸಿಪಿ ದಿನಕರ ಶೆಟ್ಟಿ ಪಡ್ರೆ
ದಿನಕರ ಶೆಟ್ಟಿ ಎಸಿಪಿ ಮಂಗಳೂರು ದಕ್ಷಿಣ ಮಾತನಾಡಿ, ಪೊಲೀಸ್ ಅಧಿಕಾರಿಯಾಗಿದ್ದರೂ ಕೆಲವೊಂದು ಭಾರಿ ನಮ್ಮ ಸಮಾಜದ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತರ್ಜಾತೀಯ ವಿವಾಹ, ವಿವಾಹಕ್ಕೆ ಯೋಗ್ಯ ವಧು-ವರ ದೊರೆಯದಿರುವುದು, ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು, ಮತಾಂತರ ಇನ್ನಿತರ ವಿಚಾರಗಳಿಂದ ಬಂಟರ ಸಂಖ್ಯೆ ಕಡಿಮೆಯಾಗಿ ಮುಂದಿನ 200 ವರ್ಷಗಳಲ್ಲಿ ಬಂಟ ಸಮಾಜ ನಾಶವಾಗುವ ಅಪಾಯವಿದೆ. ಇದನ್ನು ನಿರ್ಲಕ್ಷ್ಯ ಮಾಡದೆ ನಮ್ಮ ಸಮಾಜಕ್ಕೆ ಮುಂದೊದಗುವ ಅಪಾಯವನ್ನು ಅರಿತು ಸಮಾಜ ಉಳಿಸಲು ಕೆಲಸ ಮಾಡಬೇಕಿದೆ. ವೈಮನಸ್ಸು ಮರೆತು ಒಳ್ಳೆಯ ಕೆಲಸಕ್ಕೆ ಜತೆಯಾಗಬೇಕಿದೆ ಎಂದರು. ಒಂದು ಕಾಲದಲ್ಲಿ ಜೈನರು ಅನೇಕ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಇಂದು ಅವರ ಸಂಖ್ಯೆಯೂ ಕಡಿಮೆಯಾಗಿದೆ. ನಾವು ಇವತ್ತು ಜೈನರ ಬಸದಿಗಳನ್ನು ನೋಡಿದಾಗ ತಿಳಿಯುತ್ತದೆ ಎಂದರು
ಸಮಾಜದಿಂದ ಪಡೆದ ಸಹಾಯದ ಋಣವನ್ನು ಮುಂದಿನ ದಿನಗಳಲ್ಲಿ ತೀರಿಸುವ ಕೆಲಸವಾಗಬೇಕಿದೆ.:ಕೆ.ಪಿ. ಸುಚರೀತ ಶೆಟ್ಟಿ
ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರೀತ ಶೆಟ್ಟಿ ಮಾತನಾಡಿ, ಒಕ್ಕೂಟದ ಕಾರ್ಯಕ್ರಮ ಅವಿಸ್ಮರಣೀಯವಾದುದು. ಸಮಾಜದ ಭವಿಷ್ಯದ ಅಸ್ತಿತ್ವದ ಬಗ್ಗೆ, ಜನಸಂಖ್ಯೆಯ ಬಗ್ಗೆ ಯೋಚನೆ ಮಾಡಬೇಕಾಗಿದೆ. ಸಮಾಜದಿಂದ ಪಡೆದ ಸಹಾಯದ ಋಣವನ್ನು ಮುಂದಿನ ದಿನಗಳಲ್ಲಿ ತೀರಿಸುವ ಕೆಲಸವಾಗಬೇಕಿದೆ. ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಮುಂದಿನ ದಿನಗಳಲ್ಲಿ ಕೋಟಿಗಿಂತ ಹೆಚ್ಚು ಹಣ ಅಶಕ್ತರಿಗೆ ನೀಡುವಂತಾಗಲಿ ಎಂದು ಹಾರೈಸಿದರು.
ಐಕಳ ಹರೀಶ್ ಶೆಟ್ಟಿ ಅವರು ಸಮಾಜವನ್ನು ಉದ್ಧರಿಸುವ ಕಾರ್ಯ ಆರಂಭಿಸಿದ್ದಾರೆ : ಪುಷ್ಪರಾಜ್ ಬಿ.ಎನ್ ಪತ್ರಕರ್ತ
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ವರದಿಗಾರ ಪುಷ್ಪರಾಜ್ ಬಿ.ಎನ್. ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ದಿ. ಜಯಪಾಲ್ ಶೆಟ್ಟಿ ಅವರಂತೆ ಸಮಾಜವನ್ನು ಉದ್ಧರಿಸುವ ಕಾರ್ಯ ಆರಂಭಿಸಿದ್ದಾರೆ. ಜಯಪಾಲ್ ಶೆಟ್ಟಿ ಅವರು ಬಂಟ ಸಮಾಜದ ಬಗ್ಗೆ ಅತೀಯಾದ ಪ್ರೀತಿ ಹೊಂದಿದ್ದರು. ಸಾಮಾಜಿಕ ನ್ಯಾಯ ದೊರೆಯಲು ಸಮಾಜದ ಬಗ್ಗೆ ಪರಿಪೂರ್ಣ ಮಾಹಿತಿ ಇರಬೇಕಾಗಿದೆ. ಅಳಿದು ಹೋಗುತ್ತಿರುವ ಸಮಾಜದಲ್ಲಿ ಬಂಟ ಸಮಾಜವು ಸೇರಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದರು.
ಒಕ್ಕೂಟವು ಸಾಧನೆ ಗುರುತಿಸಿ ಸನ್ಮಾನಿಸಿದಕ್ಕೆ ಅಭಾರಿಯಾಗಿದ್ದೇನೆ : ಡಾ ಪ್ರತಿಭಾ ರೈ
ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಪ್ರತಿಭಾ ರೈ ಮಾತನಾಡಿ, ಒಕ್ಕೂಟವು ಸಾಧನೆ ಗುರುತಿಸಿ ಸನ್ಮಾನಿಸಿದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ತನ್ನಿಂದಾಗುವ ಸೇವೆ ಮಾಡಲು ಬದ್ಧರಿರುವುಗಾಗಿ ತಿಳಿಸಿದರು.
ಹರೀಶಣ್ಣ ಸ್ಮಾರ್ಟ್ ವರ್ಕ್’ ಸಮಾಜಕ್ಕೆ ಆದರ್ಶ:
ರಾಜೇಶ್ವರಿ ಡಿ ಶೆಟ್ಟಿ
ಜೆಸಿಐ ಸುರತ್ಕಲ್ ಅಧ್ಯಕ್ಷರು ರಾಜೇಶ್ವರಿ ಡಿ ಶೆಟ್ಟಿ ಮಾತನಾಡಿ, ಹರೀಶಣ್ಣ ಸ್ಮಾರ್ಟ್ ವರ್ಕ್’ನಿಂದ ತಮ್ಮ ನಾಯಕತ್ವ ಗುಣದಿಂದ ಇಂತಹ ಸಮಾಜಮುಖಿ ಕೆಲಸಗಳು ಸಾಧ್ಯವಾಗಿದೆ. ಅವರು ಒಕ್ಕೂಟದ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಗಳು ಮಾಡಲಿ ಎಂದು ಶುಭ ಹಾರೈಸಿದರು.
ಪ್ರತಿ ತಿಂಗಳು 40 ಲಕ್ಷ ರೂಪಾಯಿ ವಿತರಿಸಲು ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ : ಐಕಳ ಹರೀಶ ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ಮಾತನಾಡಿ, ಇಂದು ಪ್ರತಿಯೊಬ್ಬರೂ ಒಕ್ಕೂಟದ ಕಾರ್ಯಕ್ರಮಗಳಿಗೆ ಸಮಾಜದ ಮೇಲಿನ ಪ್ರೀತಿಯಿಂದ ಬಂದು ಕೆಲಸ ಮಾಡುತ್ತಾರೆ. ದಾನಿಗಳು ಅದಷ್ಟು ಜಾಗಗಳನ್ನು ಒಕ್ಕೂಟಕ್ಕೆ ದಾನ ಮಾಡಿದರೆ ಬಡವರಿಗೆ ನೀಡಲು ಸಹಾಯವಾಗುತ್ತದೆ. ಮುಂಬೈ ದಾನಿಗಳ, ಬಂಟರ ಸಂಘಗಳ ಅಧ್ಯಕ್ಷರುಗಳ ಸಹಕಾರದಿಂದ ಸಮಾಜದ ಕೆಲಸ ಮಾಡುವುದಕ್ಕೆ ತೃಪ್ತಿಯಿದೆ, ದೇವರ ಆಶೀರ್ವಾದಿಂದ ಈ ಕಾರ್ಯಕ್ರಮವನ್ನು ಮುಂದುವರೆಸುತ್ತೇವೆ .ಡಾ| ರಾಜೇಂದ್ರ ಕುಮಾರ್ ಅವರು ಬೇರೆ ಸಮಾಜದವರಾದರೂ ಒಕ್ಕೂಟದ ಮೇಲಿನ ಪ್ರೀತಿಯಿಂದ 25 ಲಕ್ಷ ರೂ ನೀಡಿರುವುದು ಸಂತೋಷ ತಂದಿದೆ. ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಸಮಾಜಕ್ಕೆ ಶಕ್ತಿ ಬರುತ್ತದೆ. ಪಠ್ಯಪುಸ್ತಕದಲ್ಲಿನ ಕಯ್ಯಾರರ ತಿದ್ದುಪಡಿ, ಎ.ಬಿ ಶೆಟ್ಟಿ ಸರ್ಕಲ್ ಮರುಸ್ಥಾಪನೆ ಬಗ್ಗೆ ಎಲ್ಲರೂ ಒಂದಾಗಿ ಚರ್ಚಿಸಿ ನಿರ್ಧರಿಸೋಣ. ಮಾತೃ ಸಂಘದ ಅಜಿತ ರೈ ಅವರ ಜತೆ ನಾವಿದ್ದೇವೆ. ಎಲ್ಲರೂ ಒಂದಾಗಿ ಸಮಾಜಕ್ಕಾಗಿ ಕೆಲಸ ಮಾಡೋಣ. ನಮ್ಮ ಸಮಾಜದೊಂದಿಗೆ ಇತರ ಸಮಾಜವನ್ನು ಸಹಬಾಳ್ವೆಯಿಂದ ಪ್ರೀತಿಸೋಣ ಎಂದರು.
ಸಹಾಯಧನ ಪಡೆದ ಎಲ್ಲಾ ಬಂಧುಗಳು ತಮ್ಮ ಬದುಕಿನಲ್ಲಿ ಅನುಕೂಲವಾದಾಗ ಸಮಾಜಕ್ಕೆ ಕೊಡುವುದನ್ನು ಮರೆಯಬಾರದು:
ಸುರೇಶ್ ಗೋಪಾಲ್ ಶೆಟ್ಟಿ ಎರ್ಮಾಳ್
ನವಿ ಮುಂಬೈ ಮಾಜೀ ಕಾರ್ಪೋರೇಟರ್
ಸುರೇಶ್ ಜಿ ಶೆಟ್ಟಿ ಎರ್ಮಾಳ್ ಮತನಾಡಿ, ಐಕಳ ಹರೀಶ್ ಶೆಟ್ಟಿ ಮತ್ತು ಕರ್ನಿರೆ ವಿಶ್ವನಾಥ್ ಶೆಟ್ಟಿ ಶಾಲಾ ದಿನಗಳಲ್ಲಿ ನನ್ನ ಆತ್ಮೀಯರಾಗಿದ್ದರು ಅವರಿಬ್ಬರು ಲವ ಕುಶರಂತೆ ಸಮಾಜದಲ್ಲಿ ಬೆಳೆದವರು. ಅವರಿಬ್ಬರು ಯಾವುದೇ ಕೆಲಸವನ್ನು ಯೋಜನೆಗಳನ್ನು ರೂಪಿಸಿಕೊಂಡರೆ ಅದು ಯಶಸ್ವಿಯಾಗುತ್ತದೆ.ಐಕಳ
ಸಮಾಜದ ನಾಯಕರಾಗಿ ಕಣ್ಣೊರೆಸುವ ಕಾರ್ಯ ಮಾಡುತ್ತಿದ್ದಾರೆ. ಐಕಳರು ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿದ್ದಾಗ ಇಡೀ ಸಂಘದ ಚಿತ್ರಣ ಬದಲಾಯಿಸಿದರು. ಇಂದು ಒಕ್ಕೂಟದಿಂದ ಸಾಕಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ದಾನಿಗಳು ಒಕ್ಕೂಟಕ್ಕೆ ಇನ್ನಷ್ಟು ದಾನ ನೀಡುವ ಬುದ್ಧಿ ದೇವರು ನೀಡಲಿ, ನಾವು ಎನಿದ್ದರೂ ಹಂಚಿಕೊಂಡು ಬಾಳೋಣ . ಸಹಾಯಧನ ಪಡೆದ ಎಲ್ಲಾ ಬಂಧುಗಳು ತಮ್ಮ ಬದುಕಿನಲ್ಲಿ ಅನುಕೂಲವಾದಾಗ ಸಮಾಜಕ್ಕೆ ಕೊಡುವುದನ್ನು ಮರೆಯಬಾರದು ಎಂದರು ನುಡಿದರು.