ಒಂದು ಸಮುದಾಯದ ಪ್ರತಿನಿಧಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ ಕ್ರಮೇಣ ಒಟ್ಟು ಸಮಾಜದ ಸೇವಾದೀಕ್ಷೆಗೆ ಬದ್ಧರಾದ ಬಂಟ ಬಾಂಧವರು ಅನೇಕ ಮಂದಿ ಇದ್ದಾರೆ. ಹೌದು ಇಂಥಹ ಜನಪ್ರಿಯ ಸಾಮಾಜಿಕ ಮುಂದಾಳುಗಳ ಸಾಲಿನಲ್ಲಿ ಲಯನ್ ಅಶೋಕ್ ಕುಮಾರ್ ಶೆಟ್ಟರದ್ದು ಬಹುಶ್ರುತ ಹೆಸರು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುಮಾರು ನಾಲ್ಕು ದಶಕಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ತನ್ನ ಜೀವನವನ್ನು ಸಮಾಜಸೇವೆ, ಸಮುದಾಯದ ಸಂಘಟನೆಗೆ ಮುಡಿಪಾಗಿಟ್ಟವರು. ಲಯನ್, ಜೇಸೀಸ್ ಇಂತಹ ಸಮಾಜಸೇವಾ ಹಾಗೂ ನಾಯಕತ್ವ ತರಬೇತಿ ಸಂಸ್ಥೆಗಳ ನಂಟು ಬೆಳೆಸಿಕೊಂಡು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಕುಮಾರ್ ಶೆಟ್ಟಿ ಅವರು ಪ್ರಸ್ತುತ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸ್ದಾನ ಅಲಂಕರಿಸಿದ್ದಾರೆ.
ಶ್ರೀ ಮಂಜಯ್ಯ ಶೆಟ್ಟಿ ಮತ್ತು ಅವರಾಲ್ ಬೊಳಿಂಜೆ ಶ್ರೀಮತಿ ವಾರಿಜಾ ಎಂ ಶೆಟ್ಟಿ ದಂಪತಿಯ ಸುಪುತ್ರನಾಗಿ ಜನಿಸಿದ ಶೆಟ್ಟರು ವಿಜ್ಞಾನ ಪದವೀಧರರು. ಇವರ ತೀರ್ಥರೂಪರು ಮೂಲ್ಕಿ ಆರೋಗ್ಯ ಸೇವಾ ಕೇಂದ್ರದಲ್ಲಿ ಉದ್ಯೋಗಕ್ಕಿದ್ದರು. ಬಾಲ್ಯದಲ್ಲೇ ತಾನು ಹುಟ್ಟಿದ ಕುಟುಂಬದ ಶಿಸ್ತು ಹಾಗೂ ಉತ್ತಮ ಸಂಸ್ಕಾರದ ಹಿನ್ನೆಲೆಯಿದ್ದ ಕಾರಣ ಅಶೋಕ್ ಶೆಟ್ಟಿ ಅವರ ಜೀವನ ಶಿಸ್ತು ಬದ್ಧವಾಗಿ ರೂಪುಗೊಂಡಿತ್ತು. ಮೂಲ್ಕಿಯ ಮೆಡಲಿನ್ ಸ್ಕೂಲ್ ಹಾಗೂ ಹೈಸ್ಕೂಲ್ ಗಳಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಬಳಿಕ ಮೂಲ್ಕಿ ವಿಜಯಾ ಕಾಲೇಜು ಮುಖಾಂತರ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಮುಗಿಸಿ ಕೊಂಡರು. ಬಳಿಕ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಶ್ರೀಯುತರು ಸುಮಾರು ವರ್ಷಗಳ ಕಾಲ ಅಧಿಕಾರಿಯಾಗಿ ನಂತರ ಕಲ್ಲಮುಂಡ್ಕೂರು ಶಾಖೆಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ತನ್ನ ವೃತ್ತಿ ಜೀವನದಲ್ಲಿ ಓರ್ವ ಅತ್ಯುತ್ತಮ ಅಧಿಕಾರಿ ಆಗಿದ್ದು, ದಾಖಲೆ ಠೇವಣಿ ಸಂಗ್ರಹ ಮೂಲಕ ಗೌರವಕ್ಕೆ ಪಾತ್ರರಾಗಿದ್ದರು. ಪ್ರಬಂಧಕರಾಗಿರುವ ಸಮಯ ವಲಯದ ಅತ್ಯುತ್ತಮ ಕಾರ್ಯಪಟು ಎಂಬ ಪ್ರಶಸ್ತಿಗೆ ಭಾಜನರಾಗಿದ್ದರಲ್ಲದೆ, ರಾಜ್ಯ ಸಿಂಡಿಕೇಟ್ ಬ್ಯಾಂಕ್ ನೌಕರ ಸಂಘಧ ಸದಸ್ಯರಾಗಿದ್ದರು. ಮೂಲ್ಕಿ ಜೇಸೀಸ್ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ನಂತರದ ವರ್ಷಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ತನ್ನ ಸೇವಾವಧಿಯಲ್ಲಿ ಉತ್ತಮ ಜೇಸೀ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಮೂಲ್ಕಿ ವಿಜಯಾ ಕಾಲೇಜು ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿಯೂ ಅರ್ಥಪೂರ್ಣ ಸೇವೆ ಸಲ್ಲಿಸಿದ್ದಾರೆ. ಮೂಲ್ಕಿ ಮೆಡಲಿನ್ ಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಹಾಗೂ ಕಾರ್ಯದರ್ಶಿಯಾಗಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ತೋಕೂರು ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಪಾಲಕ ಸಂಘದ ಅಧ್ಯಕ್ಷ ಸ್ದಾನದಲ್ಲಿ ಮಹತ್ತರ ಯೋಗದಾನ ನೀಡಿದ್ದಾರೆ. ವಿಜಯಾ ಕಾಲೇಜಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇವರು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿದ್ದು ಉತ್ತಮ ರೀತಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ್ದರು. ಮೂಲ್ಕಿ ರೋಟರಿ ಕ್ಲಬ್ ಇದರ ಎಲ್ಲಾ ಮಹತ್ವದ ಹುದ್ದೆಗಳನ್ನಲಂಕರಿಸಿ ಅಧ್ಯಕ್ಷರಾಗಿ ಸಮಾಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ.
ಉತ್ತಮ ಕ್ರೀಡಾ ಪಟುವೂ ಆಗಿದ್ದ ಶೆಟ್ಟಿ ಅವರು ಅನೇಕ ಬಹುಮಾನಗಳನ್ನು ಪಡೆದಿದ್ದರು. ಉತ್ತಮ ಶಟ್ಲ್ ಆಟಗಾರರಾದ ಇವರು ರೋಟರಿ ವಿಜಯಾ ಕಾಲೇಜು ಹಳೆವಿದ್ಯಾರ್ಥಿ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳನ್ನು ಪ್ರತಿನಿಧಿಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೂಲ್ಕಿ ಬಂಟರ ಸಂಘದ ಕಾರ್ಯದರ್ಶಿ, ಕೋಶಾಧಿಕಾರಿ ಬಳಿಕ ಇದೀಗ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು ತನ್ನ ಹಿಂದಿನ ಸಮಾಜಸೇವೆ ಸಂಘಟನೆ ಜನಸಂಪರ್ಕಗಳಿಂದ ಪ್ರಸಿದ್ಧರಾಗಿದ್ದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಅರ್ಹ ಆಯ್ಕೆಯಾಗಿದೆ ಎಂದು ಪರಿಸರದ ಜನ ಆಡಿಕೊಳ್ಳುತ್ತಿದ್ದಾರೆ.
ಇವರ ಭವಿಷ್ಯದ ಕನಸುಗಳು ಸಾಕಾರಗೊಂಡು ಸಮುದಾಯಕ್ಕೆ ಹಾಗೂ ಒಟ್ಟು ಸಮಾಜಕ್ಕೆ ಸೇವಾ ಭಾಗ್ಯ ಲಭ್ಯವಾಗುವುದರಲ್ಲಿ ಸಂಶಯವಿಲ್ಲ. ಸಾಂಸಾರಿಕ ಜೀವನದಲ್ಲಿ ಶ್ರೀಮತಿ ಜ್ಯೋತಿ ಶೆಟ್ಟಿ ಜೀವನ ಸಂಗಾತಿಯಾಗಿ ಇವರ ಪ್ರತಿ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾರೆ. ದೀಕ್ಷಾ ದಿಶಾ ಎಂಬಿಬ್ಬರು ಹೆಣ್ಣು ಮಕ್ಕಳು ಪ್ರತಿಭಾವಂತರಾಗಿದ್ದು ಇಂಜಿನಿಯರಿಂಗ್ ಪದವಿಧರೆಯರಾಗಿದ್ದು ಅವರಿಗೂ ವೃತ್ತಿ ಜೀವನದಲ್ಲಿ ಉಜ್ವಲ ಭವಿಷ್ಯವಿದೆ. ಶ್ರೀಯುತರ ಕುಟುಂಬ ಪರಿವಾರಕ್ಕೆ ಭಗವಂತ ಸದಾ ಸನ್ಮಂಗಲವನ್ನುಂಟು ಮಾಡಲಿ. ಇವರ ಭವಿಷ್ಯ ಜೀವನ ಸಂತಸ ಸಂಭ್ರಮದಿಂದ ಕೂಡಿರಲಿ. ಮುಂಬರುವ ನವೀನ ವತ್ಸರ ಶುಭವನ್ನೇ ತರಲೆಂದು ಸಮಾಜ ಬಾಂಧವರೊಂದಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಶುಭಂ ಭದ್ರಂ ಮಂಗಲಂ
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು