ನಮ್ಮ ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಮಹಾನಗರ ಮುಂಬಯಿಯಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿ ವಿಶೇಷರ ಸಾಲಿನಲ್ಲಿ ಗುರುತಿಸಲ್ಪಡುವ ಹೆಸರು ನವೀನ್ ಶೆಟ್ಟಿ ಇನ್ನ ಬಾಳಿಕೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನ ಬಾಳಿಕೆ ಎಂಬ ಪ್ರತಿಷ್ಠಿತ ಬಂಟ ಕುಟುಂಬದ ವಿಠಲ ಶೆಟ್ಟಿ ಮತ್ತು ಅಡ್ವೆ ಕೆಳಗಿನ ಮನೆ ಶ್ರೀಮತಿ ಸುಲೋಚನಾ ವಿ.ಶೆಟ್ಟಿ ದಂಪತಿಯರ ಮೂವರು ಮಕ್ಕಳಲ್ಲಿ ದ್ವಿತೀಯರಾಗಿ ಜನಿಸಿದ ನವೀನ್ ಅವರು ಅಡ್ವೆ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಇನ್ನದ ಎಂ.ವಿ.ಶಾಸ್ತ್ರಿ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಪೂರೈಸುವ ಉದ್ದೇಶದಿಂದ 1987 ರಲ್ಲಿ ತನ್ನ ಸೋದರತ್ತೆಯ ಜೊತೆ ಮುಂಬಯಿಗೆ ಆಗಮಿಸಿ, ತನ್ನ ಸಂಬಂಧಿಯೋರ್ವರ ಹೋಟೆಲಿನಲ್ಲಿ ದುಡಿಯುತ್ತಾ ಹೋಟೆಲ್ ಉದ್ಯಮ ಕುರಿತ ಮಹತ್ತರ ಅನುಭವ ಸಂಪಾದಿಸಿದರು.
ಶಿವ್ಡಿಯ ಲಕ್ಷ್ಮಿ ಹೋಟೆಲ್ ಮಾಲಕರು ಇವರ ಸಂಬಂಧಿಕರಾದ ಕಾರಣ ಕೆಲಕಾಲ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಪ್ರೀತಿ ವಿಶ್ವಾಸ ಗಳಿಸಿಕೊಂಡರು. ಇದು ಅವರಿಗೆ ತನ್ನ ಮುಂದಿನ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಕಾರಿಯಾಯಿತು. ಭವಿಷ್ಯ ಜೀವನದ ಕುರಿತಂತೆ ಮಹತ್ವಾಕಾಂಕ್ಷೆ ಹೊಂದಿದ್ದ ಬಾಲಕ ತನ್ನ ಕಿಶೋರಾವಸ್ಥೆಯಲ್ಲೇ ಸಂಘರ್ಷದ ಬಾಳಿಗೆ ಮುನ್ನುಡಿ ಬರೆದರು. ಹಗಲು ಕೆಲಸ ಮಾಡುತ್ತಲೇ ರಾತ್ರಿ ಪರೇಲ್ ನ ಪ್ರೋಗ್ರೆಸಿವ್ ನೈಟ್ ಹೈಸ್ಕೂಲು ಮತ್ತು ಪದವಿ ಪೂರ್ವ ಕಾಲೇಜು ಮುಖಾಂತರ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಪೂರೈಸಿ, ಬಳಿಕ ಉದ್ಯಮ ಜೀವನ ಪ್ರವೇಶಿಸಿ ನಗರದ ಹಲವೆಡೆ ಕ್ಯಾಂಟೀನ್, ಹೋಟೆಲ್ ನಡೆಸಿಕೊಂಡು ಜೀವನ ಪಥದಲ್ಲಿ ವೇಗದ ನಡೆಯಿಂದ ಮುಂದುವರಿಯುತ್ತಾ ಮಲಾಡ್ ನಲ್ಲಿ ಶ್ರೀಲಕ್ಷ್ಮಿ ಬಾರ್ ನ್ನು ನಡೆಸುವುದಕ್ಕೆ ಪಡೆದುಕೊಂಡು ಕೆಲವು ಸಮಯ ಸಂಚಾಲಕರಾಗಿ ಹೊಟೆಲ್ ಉದ್ಯಮವನ್ನು ಮುನ್ನಡೆಸಿಕೊಂಡು ಹೋದರು.
ಬಲು ಮಹತ್ವದ ವರ್ಷಾರಂಭದ ಇಸವಿ 2000 ದಲ್ಲಿ ತೆಳ್ಳಾರ್ ನ ಚಾಂಟು ಶೆಟ್ಟಿ ಎಂಬವರ ಸುಪುತ್ರಿ ಬೇಬಿಶೆಟ್ಟಿ ಅವರು ನವೀನ್ ಶೆಟ್ಟರ ದಾಂಪತ್ಯ ಜೀವನಕ್ಕೆ ಜೊತೆಯಾದರು. ಈ ದಂಪತಿಯರ ಅನುರಾಗ ದಾಂಪತ್ಯದ ಫಲವಾಗಿ ನಿತಿನ್ ತನಿಷ್ಕಾ ಎಂಬ ಎರಡು ಮಕ್ಕಳನ್ನು ಪಡೆದು ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಹೊಂದಿದವರು ಇಂದು ನಗರದ ಪರಿಶ್ರಮಿ ಯಶಸ್ವಿ ಹೋಟೆಲ್ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ಬಿಡುವಿಲ್ಲದ ಉದ್ಯಮ ವ್ಯವಹಾರಗಳ ನಡುವೆಯೂ ದೈವದೇವರ ಕುರಿತಂತೆ ಅಪಾರ ಶ್ರದ್ಧಾಭಕ್ತಿ ಇರುವ ನವೀನ್ ಶೆಟ್ಟರು ನಗರದ ಆಸ್ತಿಕ ಬಾಂಧವರ ಶ್ರದ್ಧಾ ಕೇಂದ್ರ ಎನಿಸಿದ ಪಂತ್ ನಗರ ದುರ್ಗಾಕಾಳಿ ಮಂದಿರದ ಆಡಳಿತ ಸಮಿತಿ ಸೇರಿಕೊಂಡು, ಅದರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಇಂದು ಅದರ ಸಮಿತಿಯ ಮಹತ್ವದ ಸ್ಥಾನಮಾನ ಪಡೆದು ಕೊಂಡು ದೇವತಾ ಕೈಂಕರ್ಯದಲ್ಲಿ ಭಾಗವಹಿಸಿ ಸಹಕರಿಸುತ್ತಿದ್ದಾರೆ.
ಸುಮಾರು ಅರುವತ್ತೇಳು ವರ್ಷಗಳ ಪೂರ್ವ ಸ್ಥಾಪನೆಗೊಂಡಿದ್ದ ಘಾಟ್ ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಮಧ್ಯದಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡ ಸಂದರ್ಭದಲ್ಲಿ ನವೀನ್ ಶೆಟ್ಟರು ಅದನ್ನು ಮತ್ತೆ ಅದರ ಚಟುವಟಿಕೆ ಪುನರುತ್ಥಾನ ಪಡೆಯುವಂತೆ ಶ್ರಮಿಸಿದವರಲ್ಲಿ ನವೀನ್ ಶೆಟ್ಟರು ಪ್ರಮುಖ ಪಾತ್ರ ವಹಿಸುತ್ತಲೇ ಅದರ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಸಂಘಟನೆ ಹೊಸ ಚೈತನ್ಯ ಪಡೆಯಿತಲ್ಲದೇ, ಅದರ ಸುವರ್ಣ ಮಹೋತ್ಸವದ ಕಾಲಘಟ್ಟದಲ್ಲಿ ಕಾರ್ಯಾಧ್ಯಕ್ಷರಾಗಿಯೂ ಪದೋನ್ನತಿ ಪಡೆದರು.
ದಾನಿಗಳಾದ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ, ಬಾಬಾ ಗ್ರೂಪ್ ನ ಆಡಳಿತ ನಿರ್ದೇಶಕ ಮಹೇಶ್ ಶೆಟ್ಟಿ ಇವರ ಉದಾರ ದೇಣಿಗೆ ಹಾಗೂ ಇತರ ದಾನಿಗಳ ಸಹಕಾರದಿಂದ ಸಂಸ್ಥೆಯ ಸ್ಥಳಾವಕಾಶವನ್ನು ವಿಸ್ತಾರಗೊಳಿಸಿ ಹೊಸ ಶೋಭೆ ಬರುವಂತೆ ಉತ್ತಮ ಕಾರ್ಯವೆಸಗಿದರು. ಈ ಸಂಸ್ಥೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಶೈಕ್ಷಣಿಕ, ವೈದ್ಯಕೀಯ ಸಹಾಯ, ವಿಧವಾ ವೇತನ ನೀಡುವ ಮೂಲಕ ಮಾನವೀಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಯತ್ನಿಸಿದ್ದಾರೆ. ಈ ಸಂಸ್ಥೆಯ ಆಶ್ರಯದಲ್ಲಿ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಥೆ ನಿರಂತರ ಚಟುವಟಿಕೆಗಳಿಂದ ಗುರುತಿಸಿಕೊಳ್ಳುವಂತೆ ಪ್ರಯತ್ನ ಶೀಲರಾಗಿದ್ದಾರೆ.
ನವೀನ್ ಅವರು ತುಳುವನಾಡಿನ ನೆಲ ಜಲದ ಸಂಸ್ಕೃತಿಯ ಆರಾಧಕರು. ಓರ್ವ ಅಪ್ಪಟ ತುಳು ಭಾಷಾಭಿಮಾನಿಯಾಗಿ ಇಲ್ಲಿನ ಆಚರಣೆ, ಸಂಪ್ರದಾಯ, ಹಬ್ಬ ಹರಿದಿನ, ದೈವನೇಮದ ಸಾಂಪ್ರದಾಯಿಕ ಆಚರಣೆಗಳ ಕುರಿತಂತೆ ಆಳವಾದ ಜ್ಞಾನವನ್ನು ಹೊಂದಿದ್ದು ತನ್ನ ಆಸ್ಖಲಿತ ಮದುವಾಕ್ಯ, ದೈವ ಪ್ರಾರ್ಥನೆಗಳಿಗೂ ಹೆಸರಾಗಿದ್ದಾರೆ. ನವೀನ್ ಮೂಲತಃ ಓರ್ವ ಕಲಾವಿದ. ನಾಟಕ ರಂಗ ಭೂಮಿಯಲ್ಲಿ ಸುದೀರ್ಘವಾದ ನಟನೆ ನಿರ್ದೇಶನಗಳಲ್ಲಿ ಪಳಗಿದ್ದು, ನಗರದ ಅದೆಷ್ಟೋ ಸಮರ್ಥ ನಿರ್ದೇಶಕರ ನಾಟಕಗಳಲ್ಲಿ ಅಭಿನಯಿಸಿ ತನ್ನ ಪ್ರಭಾವಿ ನಟನೆ ಅಭಿವ್ಯಕ್ತಿಗೆ ಪ್ರಸಿದ್ಧರಾಗಿದ್ದಾರೆ. ಬಂಟರ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾತ್ರವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಬಂಟರ ಸಂಘ ಮುಂಬಯಿ ಇದರ ಸಮಿತಿಯಲ್ಲಿದ್ದು ಅನೇಕ ಗುರುತರ ಜವಾಬ್ದಾರಿ ವಹಿಸಿ ಹಂತ ಹಂತವಾಗಿ ತನ್ನ ಸಂಘಟನಾ ಸಾಮರ್ಥ್ಯವನ್ನು ಪ್ರಕಟಿಸುತ್ತಾ ಇದೀಗ ಪ್ರತಿಷ್ಠಿತ ಸಾಹಿತ್ಯ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಯಕ್ಷ ಕಲಾಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಂದ ಯಕ್ಷಗಾನದ ಕುರಿತಂತೆ ಹೆಜ್ಜೆ ಅಭಿನಯ ಕಲಿತುಕೊಂಡು ಉತ್ತಮ ಯಕ್ಷಗಾನ ಪಾತ್ರ ನಿರ್ವಹಣೆಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ತನ್ನ ಸಮಾನ ಆಸಕ್ತ ಮಿತ್ರರಾದ ಅಶೋಕ ಪಕ್ಕಳ, ಕರ್ನೂರು ಮೋಹನ್ ರೈ ಜೊತೆ ಸೇರಿ ತ್ರಿರಂಗ ಸಂಗಮ ಎಂಬ ಕಲಾ ಪ್ರಧಾನ ಸಂಘಟನೆಯನ್ನು ಸೇರಿಕೊಂಡ ಬಳಿಕ ಈ ಮೂವರು ಬಹುಮುಖ ಪ್ರತಿಭೆಯ ಕಲಾವಿದರು ಅನೇಕ ಕಾರ್ಯಕ್ರಮಗಳನ್ನು ನಗರದ ವಿವಿಧೆಡೆ ಸಂಯೋಜಿಸಿ ಜನಮನ್ನಣೆ ಪಡೆದಿದ್ದಾರೆ. ಇತ್ತೀಚೆಗೆ ದುಬಾಯಿಯಲ್ಲಿ ಆಚರಿಸಿದ ವಾರ್ಷಿಕೋತ್ಸವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಾಖಲೆ ನಿರ್ಮಿಸಿದೆ. ಇವರು ಓರ್ವ ಉತ್ತಮ ಸಂಘಟಕರು. ನಾಟಕ ಸಂಘಟನೆಯಲ್ಲಿ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಇವರ ವ್ಯಕ್ತಿತ್ವದ ಇನ್ನೊಂದು ಮುಖ ಪ್ರಾಮಾಣಿಕ ಸಮಾಜಸೇವೆ. ಸಮಾಜದ ಹಿಂದುಳಿದ ಬಡವರ ಕುಟುಂಬಗಳಿಗೆ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರು ತುಳು ಕನ್ನಡಿಗರು ಮಾತ್ರವಲ್ಲದೆ ಅನ್ಯ ಭಾಷೀಯರ ಜೊತೆಗೂ ಉತ್ತಮ ಬಾಂಧವ್ಯದಲ್ಲಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬಂಟರ ಸಂಘ ಮುಂಬಯಿ, ಕನ್ನಡ ವೆಲ್ಫೇರ್ ಸೊಸೈಟಿ ಮಾತ್ರವಲ್ಲದೇ ಅನೇಕ ನಾಟಕ, ಯಕ್ಷಗಾನ, ಸಮಾಜ ಸೇವೆ, ರಾಜಕೀಯ, ಸಾಂಸ್ಕೃತಿಕ ಸಂಘಟನೆಗಳ ಜೊತೆಗೂಡಿ ಸಾರ್ವಜನಿಕ ಜೀವನದಲ್ಲೂ ಸಾಧನಾ ನಿರತರಾಗಿದ್ದಾರೆ. ಅವರು ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಮುಖಾಂತರ ಸಂಘಟಿಸಿದ ತಾಳಮದ್ದಳೆ, ಊರ ಪರವೂರ ನಾಟಕ ತಂಡಗಳ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕ್ರಮ, ದೇವಿ ಮಹಾತ್ಮೆ ಯಕ್ಷಗಾನ, ವಿಚಾರ ಗೋಷ್ಠಿ, ಕವಿಗೋಷ್ಠಿಗಳು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿವೆ. ಇವರು ಕಲಾಕ್ಷೇತ್ರ, ಸಾರ್ವಜನಿಕ ರಂಗಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮುಂಬಯಿ ನಗರ ಉಪನಗರಗಳಲ್ಲಿ ಗೌರವ ಸನ್ಮಾನಗಳನ್ನು ಪಡೆದಿರುತ್ತಾರೆ.
ತರಬಾಳು ಮಠದ ಶ್ರೀಗಳವರ ನೇತೃತ್ವದಲ್ಲಿ ಮುಂಬಯಿ ನಗರಕ್ಕಾಗಮಿಸಿದ ಮುನ್ನೂರು ಜನ ಜಾನಪದ ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ರೀತಿ ಕಲಾವಿದನಾಗಿ, ಕಲಾ ಸಂಘಟಕ ಸಂಯೋಜಕನಾಗಿ, ಸಮಾಜ ಸೇವಕನಾಗಿ, ಯಶಸ್ವಿ ಉದ್ಯಮಿಯಾಗಿ, ಸಮುದಾಯದ ಸಕ್ರೀಯ ಕಾರ್ಯಕರ್ತ ಪದಾಧಿಕಾರಿಯಾಗಿ ನಿರ್ವಹಿಸಿದ ಹಲವು ಜೀವನ ಮಗ್ಗಲುಗಳ ಸಂಕ್ಷಿಪ್ತ ಪರಿಚಯವಷ್ಟೇ ಇದಾಗಿದ್ದು, ಅನೇಕ ಹೊರನಾಡ ಒಳನಾಡ ಪತ್ರಿಕೆಗಳು ಇವರ ವ್ಯಕ್ತಿತ್ವದ ಹಲವು ಮಜಲುಗಳ ಕುರಿತಂತೆ ಲೇಖನಗಳನ್ನು ಪ್ರಕಟಿಸಿರುತ್ತಾರೆ. ನವೀನ್ ಅವರನ್ನು ಅಗಾಧವಾಗಿ ಪ್ರೀತಿಸುವ ಅವರ ಸಮಾಜಮುಖಿ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುತ್ತಿರುವ ಬಾಳಸಂಗಾತಿ ಜೊತೆಗೆ ಇಬ್ಬರು ಪ್ರತಿಭಾವಂತ ಮಕ್ಕಳ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ನವೀನ್ ಶೆಟ್ಟಿ ಇನ್ನ ಬಾಳಿಕೆ ಇವರ ಭವಿಷ್ಯದ ಬಾಳು ಸುಖ ಸಮೃದ್ಧಿಯಿಂದ ಕೂಡಿರಲಿ. ಸಮುದಾಯದಲ್ಲಿ, ಸಮಾಜದಲ್ಲಿ ಇನ್ನಷ್ಟು ಉನ್ನತೋನ್ನತ ಸ್ಥಾನಮಾನಗಳು ಒಲಿದು ಬರಲಿ. ಹೊಸ ವರುಷ ಬಾಳಿನಲ್ಲಿ ಸಂತಸದ ಹೊಂಗಿರಣ ಹೊತ್ತು ತರಲಿ ಎಂಬ ಹಾರೈಕೆಗಳು ನಮ್ಮೆಲ್ಲರಿಂದ. ಬಂಟ ಸಾಧಕರನ್ನು ನಿರಂತರವಾಗಿ ಸಮಾಜಕ್ಕೆ ಪರಿಚಯಿಸುತ್ತಿರುವ ಏಕಮಾತ್ರ ಅಂತರ್ಜಾಲ ಮಾಧ್ಯಮ “ಬಂಟ್ಸ್ ನೌ” ಮಾಧ್ಯಮ ಸಂಸ್ಥೆಯ ವತಿಯಿಂದ ಶುಭಹಾರೈಕೆಗಳು.
ಲೋಕಾ ಸಮಸ್ತ ಸುಖಿನೋ ಭವಂತು
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು