ಮಹಾರಾಷ್ಟ್ರದ ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಉತ್ಸಾಹಿ ಕ್ರಿಯಾಶೀಲ ಯುವಕ ಸವಿನ್ ಶೆಟ್ಟಿ ಈ ಮೊದಲೇ ಯುವ ವಿಭಾಗದ ಹಲವು ಜವಾಬ್ಧಾರಿಯುತ ಸ್ಥಾನವನ್ನು ಅಲಂಕರಿಸಿದವರು. ಜೊತೆ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥ ರೀತಿಯ ಪದ ನಿರ್ವಹಣೆ ಮಾಡಿದ ಸವಿನ್ ಈಗ ಸಮಿತಿಯ ಹಿರಿಯರ ಹಾಗೂ ಯುವ ವಿಭಾಗದ ಸರ್ವ ಸಮ್ಮತಿಯೊಂದಿಗೆ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ.
ಕಡಂದಲೆ ಉಲನಡ್ಕ ಪುತ್ತಿಗೆ ಗುತ್ತು ಜಗನ್ನಾಥ ಶೆಟ್ಟಿ ಮತ್ತು ಮೂಡುಬೆಳ್ಳೆ ಮೇಲ್ಮನೆ ಶೋಭಾ ಶೆಟ್ಟಿ ದಂಪತಿಗೆ ಸುಪುತ್ರರಾಗಿ ಜನಿಸಿದರು. ಸವಿನ್ ಶೆಟ್ಟಿ ತನ್ನ ಎಂ.ಬಿ.ಎ. ವ್ಯಾಸಂಗದ ಸಮಯದಿಂದಲೇ ಬಂಟರ ಸಂಘದ ಸಂಪರ್ಕದಲ್ಲಿದ್ದು, ಸಂಘದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇವರು ಉಮಾಕೃಷ್ಣ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಎಂಡ್ ರಿಸರ್ಚ್ ಮೂಲಕ 2014 ರಲ್ಲಿ ಎಂ.ಬಿ.ಎ ಪದವಿ ಸಂಪಾದಿಸಿದ್ದರು. ತನ್ನ ವೃತ್ತಿ ಜೀವನವನ್ನು ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮೂಲಕ ಪ್ರಾರಂಭಿಸಿದರು. ಇದೀಗ ಬಹು ಪ್ರತಿಷ್ಠಿತ ಎನ್ ಪಿ ಸಿ ಐ ಇದರ ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದಲ್ಲಿ ವೃತ್ತಿ ನಿರತರಾಗಿದ್ದಾರೆ. ಇದರಲ್ಲಿ ಗೂಗಲ್ ಪೇ, ಫೋನ್ ಪೇ ಸಂಬಂಧಿ ವಿಶ್ವಾದ್ಯಂತ ವ್ಯವಹಾರವನ್ನು ನಿರ್ವಹಿಸಲಾಗುತ್ತದೆ.
ತನ್ನ ಕೌಟುಂಬಿಕ ಹಾಗೂ ವೃತ್ತಿ ಜೀವನದಲ್ಲಿ ಸಂತೃಪ್ತಿ ಹೊಂದಿ ಗ್ರಹಸ್ಥಾಶ್ರಮ ಪ್ರವೇಶಿಸಿದ ಸವಿನ್ ಪಾಂಗಾಳ ಶೇಣವರ ಮನೆ ವಿಜಯ್ ಶ್ಯಾಮ ಶೆಟ್ಟಿ ಹಾಗೂ ಅಜೆಕಾರು ದೇವಸ್ಯ ಶ್ರೀಮತಿ ಸುಗಂಧಿ ವಿಜಯ್ ಶೆಟ್ಟಿ ದಂಪತಿಯ ಸುಪುತ್ರಿ ಸಿದ್ಧಿ ಶೆಟ್ಟಿ ಬಾಳ ಸಂಗಾತಿಯಾಗಿ ಬಂದು ಸವಿನ್ ಮನೆ ಬೆಳಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತನೂ, ಪಾಠೇತರ ಚಟುವಟಿಕೆಗಳಲ್ಲಿ ಯಾವಾಗಲೂ ತೊಡಗಿಸಿಕೊಳ್ಳುವವನಾಗಿ ಗುರುತಿಸಿಕೊಂಡು ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರನಾದ ಸವಿನ್ ಅವರಿಗೆ ಸಾಂಘಿಕ, ಸಾಮೂಹಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಉಜ್ವಲ ಭವಿಷ್ಯ ಇದೆ. ಯುವಕ ಸವಿನ್ ಶೆಟ್ಟಿ ನೇತೃತ್ವದಲ್ಲಿ ಬಂಟರ ಸಂಘ ಮುಂಬಯಿಯ ಯುವ ವಿಭಾಗ ಬಹಳಷ್ಟು ಸಾಧನೆಯ ಮೂಲಕ ಗುರುತಿಸಿಕೊಂಡು ಸಂಘದ ಹಿರಿಯ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಪ್ರೀತಿ ಅಭಿಮಾನಿಗಳಿಗೆ ಪಾತ್ರವಾಗಲಿ ಎಂದು ಹಾರೈಸೋಣ.
ಶುಭವಿರಲಿ ಸರ್ವರಿಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು