ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮಾಣಿಕ್ಯ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ “ಸೇಂಟ್ ಮೇರಿಸ್ ರೂಬಿ ರನ್ 2023” ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಅಪಾರ ಭಾಗವಹಿಸುವಿಕೆಗೆ ಪಾತ್ರವಾಯಿತು. ಕಿರಿಯರಿಂದ ಹಿಡಿದು ಹಿರಿಯ ನಾಗರೀಕರವರೆಗೂ ಬಹಳಷ್ಟು ಮಂದಿ ಕ್ರೀಡಾ ಸ್ಪೂರ್ತಿಯೊಂದಿಗೆ ಮ್ಯಾರಥಾನ್ನಲ್ಲಿ ಪಾಲ್ಗೊಂಡರು. ಮ್ಯಾರಥಾನ್ ಮುಗಿದ ಮೇಲೆ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ವಿಜೇತರಿಗೆ ಗಣ್ಯರು ನಗದು ಬಹುಮಾನ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜೇತರಿಗೆ ಟ್ರೋಫಿಗಳನ್ನು ಗೌತಮ್ ಶೆಟ್ಟಿ ಅವರಿಂದ ಪ್ರಾಯೋಜಿಸಲಾಯಿತು. ಗೌತಮ್ ಶೆಟ್ಟಿಯವರು ತನ್ನ ವೃತ್ತಿಪರ ಕ್ಯಾರಿಯರ್ ಅನ್ನು ಸೇಂಟ್ ಮೇರಿಸ್ ಉಡುಪಿಯಿಂದ ಪ್ರಾರಂಭಿಸಿದ್ದರು. ಮೊದಲ ಕೆಲಸವನ್ನು ಸೇಂಟ್ ಮೇರಿಸ್ ನಲ್ಲಿ 1997 ಜೂನ್ ನಿಂದ ಆಗಸ್ಟ್ 1998 ರವರೆಗೆ ಮಾಡಿದ್ದರು. 1 ವರ್ಷ 2 ತಿಂಗಳ ಕಾಲ ಕೆಲಸ ಮಾಡಿ ನಂತರ ಎಂ.ಆರ್.ಪಿ.ಎಲ್ ಸೇರಿದರು. ಆಗಿನ ಶಾಲೆಯ ಪ್ರಾಂಶುಪಾಲರಾದ ಲೂಯಿಸ್ ಮರ್ಟಲ್ ಹಾಗೂ ಶಾಲಾ ಮುಖ್ಯಸ್ಥ ಫಾದರ್ ಆಂಟೋನಿ ಸೆರಾನೊ ಅವರನ್ನು ನೆನಪಿಸಿಕೊಂಡರು. ಈ ಸಂದರ್ಭ ಮಾತನಾಡಿದ ಅವರು ”ಈ ಶಾಲೆಯು ಮೊದಲಿನಿಂದಲೂ ಕ್ರೀಡೆ ಮತ್ತು ಆಟಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಬಹಳಷ್ಟು ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದರಿಂದ ಕ್ರೀಡಾ ಜನರೊಂದಿಗೆ ಯಶಸ್ಸಿನ ಅನುಪಾತವು ಯಾವಾಗಲೂ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಕ್ರೀಡಾಪಟುಗಳು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಇತರ ಜನರಿಗಿಂತ ಬಲಶಾಲಿಯಾಗಿರುತ್ತಾರೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸಿನ ಜನರು ಕ್ರೀಡಾ ಹಿನ್ನೆಲೆಯನ್ನು ಹೊಂದಿರುವವರು. ಇದು ಜೀವನ ಕೌಶಲ್ಯ, ಧನಾತ್ಮಕ ವರ್ತನೆ, ಗಟ್ಟಿತನ, ಯಾವುದೇ ಪರಿಸ್ಥಿತಿಯನ್ನು ಅತ್ಯಂತ ಶಾಂತವಾಗಿ ಎದುರಿಸುವುದನ್ನು ಕಲಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
40 ನೇ ವರ್ಷದ ರೂಬಿ ಜುಬಿಲಿ ಆಚರಣೆ ಶಾಲೆಯಲ್ಲಿ ಜರುಗುತ್ತಿರುವ ಕಾರಣ ಈ ಮ್ಯಾರಥಾನ್ ಓಟ ಆಯೋಜಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಸ್ಥರಾದ ಫಾದರ್ ಚಾರ್ಲ್ಸ್ ಮೆನೇಜಸ್ ವಹಿಸಿದ್ದರು. ಜೂಲಿಯಾನ ಡಿಸೋಜಾ, ಶ್ರೀವತ್ಸ ಬಲ್ಲಾಳ್ ಎಜಿಎಂ ಮಾರ್ಕೆಟಿಂಗ್ ಪ್ರಕಾಶ್ ರಿಟೇಲ್ ಪ್ರೈವೇಟ್ ಲಿಮಿಟೆಡ್, ಗೌತಮ್ ಶೆಟ್ಟಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್, ಕಾರ್ತಿಕ್ ಶೆಟ್ಟಿ ವಿ4 ಡೆವಲಪರ್ಸ್, ಮ್ಯಾಕ್ಸಿಮ್ ಡಿಸೋಜಾ ಉಪಾಧ್ಯಕ್ಷ ಪ್ಯಾರಿಷ್ ಪ್ಯಾಸ್ಟೋರಲ್ ಕಮಿಟಿ, ಕಾರ್ಯದರ್ಶಿ ಡಾ.ಆರ್ಥರ್ ರೋಡ್ರಿಗಸ್, ಪ್ರಾಂಶುಪಾಲರಾದ ಸಿಕ್ವೇರಾ, ಉಪಪ್ರಾಂಶುಪಾಲರಾದ ರೀಟಾ ಕ್ವಾಡ್ರಸ್, ದಾಯ್ಜಿವರ್ಲ್ಡ್ ಸಿಬ್ಬಂದಿ ವರದಿಗಾರ ಜಸ್ಟಿನ್ ಡಿಸಿಲ್ವಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರಾದ ಭಾಸ್ಕರ್, ವಿನಯ್, ಅಮೃತಾ, ವಾಲ್ಟರ್ ಕಾರ್ಯಕ್ರಮಗಳನ್ನು ನಿರೂಪಿಸಿದರು.