ಪ್ರಾಚೀನ ಮತ್ತು ಆದುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ ಪರಂಪರೆ ಮತ್ತು ವೈವಿದ್ಯಮಯ ಹಿನ್ನೆಲೆ ಹೊಂದಿರುವ ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ಹೊಂದದೆ ಅಭಿಮಾನ ಗೌರವದೊಂದಿಗೆ ಉಳಿಸಿಕೊಳ್ಳುವವರು ತುಳು ನಾಡಿನ ನಂಬಿಕೆ – ನಡುವಳಿಕೆಗಳು ಆಚಾರ, ವಿಚಾರಗಳು ಸಂದಿ, ಪಡ್ಡಾನಗಳು, ತಾಳಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲಿಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಸಾಮರಸ್ಯದ ಮಾರ್ಗದರ್ಶಕವಾಗಿ ಭಾರತೀಯ ಸಂಸ್ಕೃತಿ ನಮ್ಮ ನಾಡಿನ ಜನ ಜೀವನ ದಿನ ನಿತ್ಯದ ನಡೆ ನುಡಿಗಳಲ್ಲಿ ಜಾಗ್ರತವಾಗಿದೆ. ದಕ್ಷಿಣ ಪತದ ಅಂಗವಾದ ಕರ್ನಾಟಕ ಅದರಲ್ಲಿಯೂ ತುಳುನಾಡು ಘನವಾದ ಐತಿಹಾಸಿಕ ಪರಂಪರೆಯನ್ನು ಪಡೆದಿದೆ. ಭಾರತೀಯ ಸಂಸ್ಕೃತಿಯ ಜೀವ ಸತ್ವವಾದ ಭಕ್ತಿ ಹುಟ್ಟಿ ಬೆಳೆದದ್ದೇ ಕನ್ನಡ ನಾಡಿನಲ್ಲಿ ಎಂದು ಪದ್ಮ ಪುರಾಣ ತಿಳಿಸುತ್ತದೆ.
ನಮಗೆ ಜನ್ಮ ನೀಡಿದ ತಂದೆ ತಾಯಿಯಂತೆ ನಮ್ಮ ಮಾತೃ ಭಾಷೆ ನಮ್ಮ ಸಂಸ್ಕೃತಿ ರಕ್ಷಿಸುವ ನಮ್ಮ ಕರ್ತವ್ಯ ನಮ್ಮದಾಗಿದೆ. ಇನ್ನೊಬ್ಬರ ಯಶಸ್ಸಿನ ಬಗ್ಗೆ ಚಿಂತಿಸುತ್ತಾ ಅವರಿಗೆ ಎಲ್ಲಾ ರೀತಿಯ ಪ್ರೊತ್ಸಾಹ, ಸಹಕಾರ ನೀಡುವ ಶಶಿಧರ ಕೆ ಶೆಟ್ಟಿ ಇನ್ನಂಜೆ ಯವರು ಚಿಕ್ಕ ಪ್ರಾಯದಲ್ಲಿಯೇ ತುಂಬು ಸಂಸಾರದ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸತ್ತಾ, ತನ್ನನ್ನು ತಾನು ಬಿಡುವಿನಲ್ಲಿ ಸಮಾಜ ಸೇವೆಗಾಗಿ ವಿನಿಯೋಗಿಸುತ್ತಿದ್ದರು. ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲರೊಂದಿಗೆ, ಎಲ್ಲಾ ಸಮಾಜ ಬಾಂಧವರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿ ಕೊಂಡವರು. ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ದುಡಿದು ಜನಮನ್ನಣೆ ಪಡೆದವರು.
ಮುಂಬಯಿಯ ಗ್ರಾಮೀಣ ಪದೇಶವಾದ ನಾಲಾಸೋಪಾರದಲ್ಲಿ ತುಳು ಕೂಟ ಫೌಂಡೇಶನ್ (ರಿ) ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಮೂರು ವರ್ಷ ಸಂಸ್ಥೆಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೇ ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಸಂಸ್ಥೆಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್ ಮತ್ತು ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ನಂದಿಕೂರು ಇವರಿಬ್ಬರ ಮುಂದಳುತ್ವದಲ್ಲಿ 2018 ರಿಂದ 2022 ವರೆಗೆ ತಲಾ 2500 ಸಾವಿರ ದಿಂದ 4000 ಸಾವಿರ ತನಕ ಸುಮಾರು 746 ಮಕ್ಕಳಿಗೆ ಆರ್ಥಿಕ ಸಹಾಯಧನ, ವಿಧವಾ ವೇತನ ನೀಡುತ್ತಾ ಬಂದಿದೆ. ಸಂಸ್ಥೆಯ ವತಿಯಿಂದ ಸುಮಾರು 10 ಮಂದಿಗೆ ಅರೋಗ್ಯ ನಿಧಿ ಸರಕಾರದ ಯೋಜನೆಯಿಂದ 2,50,000 ದಿಂದ 9,00,000 ವರೆಗಿನ ಅನುದಾನವನ್ನು ತುಳುಕೂಟ ಫೌಂಡೇಶನ್ ನಾಲಾಸೋಪಾರ ಇದರ ಗೌ ಪ್ರದಾನ ಕಾರ್ಯದರ್ಶಿ ಜಗನಾಥ್ ಡಿ ಶೆಟ್ಟಿಯವರ ಸಹಕಾರದಿಂದ ತೆಗೆದುಕೊಟ್ಟು ರೋಗಿಗಳ ಚಿಕಿತ್ಸೆಗೆ ಸಹಕರಿಸಿದ್ದು ಅಭಿನಂದನೀಯ. ಅದಲ್ಲದೆ ಪ್ರತಿ ತಿಂಗಳು 3-4 ಜನರಿಗೆ ಆರ್ಥಿಕ ಸಹಾಯಾರ್ಥ ಹಾಗೂ ಪ್ರತಿ ತಿಂಗಳು ಕೆಲವೊಂದು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ನೀಡುತ್ತಿರುವುದು ಪ್ರಸಂಶನಿಯ. ಈ ಸಂಸ್ಥೆಯು ಇಷ್ಟರ ತನಕ ಸದಸತ್ವ ನೋಂದಣಿ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಪಳ್ಳಿ ಇವರ ನೇತೃತ್ವದಲ್ಲಿ ಸುಮಾರು 1437 ಸದಸ್ಯರನ್ನು ಹೊಂದಿದೆ ಎನ್ನಲು ಸಂತೋಷವಾಗುತ್ತಿದೆ. ಈ ಸಂಸ್ಥೆಯ ಆರೋಗ್ಯ ಮತ್ತು ವೈದ್ಯಕೀಯ (ಮೆಡಿಕಲ್) ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಬೊಂಟ್ರ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಸಿ 107 ಕ್ಕಿಂತಲೂ ಹೆಚ್ಚು /ಬಾಟಲ್ ರಕ್ತ ಹೂಡಿಕೆ ಮಾಡಿ, ರಕ್ತದಾನ ಮಾಡಲಾಗಿದೆ ಹಾಗೂ ಉಚಿತ ಕಣ್ಣಿನ ತಪಾಸಣೆ ಮಾಡಿ, ಉಚಿತ ಕನ್ನಡಕ ವಿತರಣೆ ಮತ್ತು ಎಲ್ಲಾ ರೀತಿಯ ಉಚಿತ ಅರೋಗ್ಯ ತಪಾಸಣೆ ಮಾಡಲಾಗಿದ್ದು, ಅಲ್ಲದೇ ಮಹಿಳೆಯರ ವಿವಿಧ ರೀತಿಯಲ್ಲಿ ಕಂಡು ಬರುವ ಕ್ಯಾನ್ಸರ್ ರೋಗದ ಬಗ್ಗೆ ವಿಶೇಷ ಲಕ್ಷಣಗಳ ವಿವರಣೆಯನ್ನು ಡಾ. ಸತ್ಯ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ಕೊಟ್ಟು, ಸುಮಾರು 62 ಕ್ಕಿಂತಲೂ ಹೆಚ್ಚು ಮಹಿಳೆಯರ ಕ್ಯಾನ್ಸರ್ ಟೆಸ್ಟನ್ನೂ ಮಾಡಿಸಿದೆ ಎಂದು ಹೇಳಲು ಸಂತೋಷವಾಗುತ್ತದೆ.
ಸಂಸ್ಥೆಯ ಸಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣರವರ ಮುಂದಾಳತ್ವದಲ್ಲಿ ಉತ್ತಮ ಕಾರ್ಯಕ್ರಮ ನೀಡುತ್ತಿದ್ದು, ಸಂತೋಷದ ವಿಚಾರ. ಸಂಸ್ಥೆಯ ಇನ್ನೊಂದು ಅದಾರ ಸ್ಥoಭ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಉಮಾ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಭಜನೆ, ಹಳದಿ ಕುಂಕುಮ, ವಿಶ್ವ ಮಹಿಳಾ ದಿನಾಚರಣೆ, ಆಟಿಡೊಂಜಿ ದಿನ, ಪಾಕ ಶಾಲೆ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ, ತೆಂಗಿನ ಗರಿ ಹೆಣೆಯುವ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತಮ ಕಾರ್ಯ ಮಾಡುತ್ತಿರುವುದು ಅಭಿನಂದನೀಯ. ನಾವು ಎಷ್ಟು ದಿನ ಬದುಕಿದ್ದೇವೆ ಮುಖ್ಯವಲ್ಲ, ಸಮಾಜದ ಮದ್ಯೆ ಯಾವ ರೀತಿ ಹೇಗೆ ಬದುಕಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ಒಂದು ಸಂಸ್ಥೆಯೊಂದನ್ನು ಹುಟ್ಟು ಹಾಕುದು ಮುಖ್ಯವಲ್ಲ. ಅದನ್ನು ನಡೆಸಿಕೊಂಡು ಹೋಗುವುದು ಮುಖ್ಯ. ಶಶಿಧರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಸ್ಥೆ ಉತ್ತಮ ಕಾರ್ಯ ಮಾಡುವುದರಲ್ಲಿ ಸಂಶಯವಿಲ್ಲ. ಹಾಗೆಯೇ ವಸಾಯಿ, ವಿರಾರ್ ನಾಲಾಸೋಪಾರ ಪರಿಸರದಲ್ಲಿ ಬಲಿಷ್ಠ ಸಂಘಟನೆಯಾಗಿ ಹೊರ ಹೊಮ್ಮಿದೆ. ಈ ಸಂಸ್ಥೆಯ ಸೇವಾ ಮನೋಭಾವವನ್ನು ಗಮನಕ್ಕೆ ತೆಗೆದುಕೊಂಡು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರು “ಹೊರ ರಾಜ್ಯ ಸಂಘಟನಾ ಪುರಸ್ಕೃತ ಪ್ರಶಸ್ತಿ-2021 ನೀಡಿರುವುದು ತುಂಬಾ ಸಂತೋಷದ ವಿಷಯ. ಈ ಸಂಸ್ಥೆ ಎಲ್ಲರನ್ನೂ ಒಗ್ಗಟ್ಟಿನಿಂದ ಜಾತಿ, ಮತ ಬೇದವಿಲ್ಲದೆ ಎಲ್ಲರನ್ನೂ ಬೆರೆತು ಕೊಂಡು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿ ಸನಾತನ ಧರ್ಮವನ್ನು ಉಳಿಸುವುದರ ಜೊತೆಗೆ ಯುವ ಪೀಳಿಗೆಗೆ ಧರ್ಮದ ವೈಶಿಷ್ಟವನ್ನು ತಿಳಿಯಪಡಿಸುವ ಅನಿವಾರ್ಯತೆಯ ಕಾರ್ಯವನ್ನು ಮಾಡುತ್ತಿರುವುದು ಪ್ರಶಂಸನೀಯ. ಶಶಿಧರ ಕೆ ಶೆಟ್ಟಿಯವರು ಈ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಹಲವು ಯೋಚನೆ ಹಾಗೂ ಯೋಜನೆಯೊಂದಿಗೆ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂಸ್ಥೆಗೆ ತನ್ನ ಸ್ವಂತ ಕಛೇರಿ ತೆಗೆದುಕೊಳ್ಳುವ ಒಂದು ಕನಸನ್ನು ಶಶಿಧರ ಶೆಟ್ಟಿ ಇನ್ನಂಜೆಯವರ ಪರಿಶ್ರಮದಿಂದ ಹಾಗೂ ದಾನಿಗಳ ಅದಾರದಿಂದ ತುಳು ಕೂಟ ಫೌಂಡೇಶನ್ ನಾಲಾಸೋಪಾರ ಸ್ವಂತ ಕಛೇರಿ ತೆಗೆದುಕೊಂಡಿದ್ದು, ಇದೆ ಬರುವ 27/1/24 ರಂದು ಶನಿವಾರ ಬಂಟರ ಧೀಮಂತ, ನಾಯಕ, ಬಂಟರ ಧ್ವನಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ದಿವ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ಸಂಸ್ಥೆಯ ಇನ್ನೊಂದು ಕನಸು ತುಳು ಕೂಟ ಫೌಂಡೇಶನ್ ಕ್ರೆಡಿಟ್ ಸೊಸೈಟಿ, ಎಂಬ ಸಂಸ್ಥೆಯನ್ನು ಕೂಡ ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದ್ದು ಇದರ ಕೆಲಸ ಕಾರ್ಯವು ಭರದಿಂದ ಸಾಗುತ್ತಿದೆ. ಹಾಗೆಯೇ ಶಶಿಧರ ಕೆ ಶೆಟ್ಟಿ ಇನ್ನಂಜೆಯವರ ಅದ್ಯಕ್ಷತೆಯಲ್ಲಿ ಮುನ್ನಡೆಯುವ ಇನ್ನೊಂದು ಸಂಸ್ಥೆ “ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್. ಪರಶುರಾಮ ಸೃಷ್ಟಿಯ ಪುಣ್ಯ ಮಣ್ಣಿನ ಶ್ರೇಷ್ಠ ಕಲೆ ಯಕ್ಷಗಾನ. ಈ ಕಲೆಯನ್ನು ಮನೋರಂಜನಾ ದೃಷ್ಟಿಯಿಂದ ನೋಡುವುದಕ್ಕಿಂತಲೂ ಹೆಚ್ಚಾಗಿ ಭಕ್ತಿ ಭಾವದಿಂದ ನಾವು ಕಾಣುತ್ತೇವೆ. ಮುಂಬಯಿ ಮಹಾನಗರದಲ್ಲಿ ಯಕ್ಷಗಾನವನ್ನು ಉಳಿಸುವ ಕಾರ್ಯವನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಿರುವುದು ಅಭಿನಂದನೀಯ. ಜೀವನದಲ್ಲಿ ಸತ್ಯ ಧರ್ಮಗಳನ್ನು ಮಾಡಿದಾಗ ಜನ ನಮ್ಮನ್ನು ಗುರುತಿಸುತ್ತಾರೆ. ಇಂದು ಶಶಿಧರ ಶೆಟ್ಟಿ ಇನ್ನಂಜೆ ಮುಂದಾಳುತ್ವದಲ್ಲಿ ಕಳೆದ 7 ವರ್ಷಗಳಿಂದ ಶ್ರೀ ದೇವಿ ಯಕ್ಷ ಕಲಾ ನಿಲಯ ಎಂಬ ಸಂಸ್ಥೆ ಸುಮಾರು 180 ಮಂದಿ ಮಕ್ಕಳಿಗೆ ಯಕ್ಷಗಾನ, ಭರತನಾಟ್ಯ, ಕನ್ನಡ ಕಲಿಕೆ ಕೇಂದ್ರ, ಫುಟ್ಬಾಲ್, ಭಜನೆ ತರಬೇತಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಎಲ್ಲಾ ಮಕ್ಕಳಿಗೂ ಸಂಸ್ಥೆಯ ವತಿಯಿಂದ ಉಚಿತವಾಗಿ ವಿದ್ಯೆಯನ್ನು ನೀಡುತ್ತಿದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಕಡ್ಡಾಯವಿಲ್ಲ. ಬೆತ್ತ ಹಿಡಿದು ದಂಡಿಸುವ ಗುರುಗಳ ಭಯವಿಲ್ಲ. ಹೊಂ ವರ್ಕ್ ಮಾಡಬೇಕೆಂಬ ಚಿಂತೆ ಇಲ್ಲ. ಬದಲಾಗಿ ಇಲ್ಲಿ ಕಲಿಯುವ ಮುಖದಲ್ಲಿ ಸಂಭ್ರಮ. ಏನೋ ಸಾಧಿಸಬೇಕೆಂಬ ಛಲ. ಯಕ್ಷಗಾನ ಈ ಕಲೆಯ ಗೀತೆ, ನೃತ್ಯ, ಸಾಹಿತ್ಯ ಮಾತುಗಾರಿಕೆಯ ಪ್ರದರ್ಶನಗಳೊಂಡ ಸೌಂದರ್ಯದ ಗುಣ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ರಂಗಕಲೆಗಳು ಆಧುನೀಕತೆಯ ದಾಳಿಯಿಂದ ಕಂಗೆಟ್ಟಿದೆ. ಆದರೆ ಯಕ್ಷಗಾನ ಮಾತ್ರ ತನ್ನ ಮೂಲ ಸೊಗಡನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಯಶಸ್ವಿಯಾಗಿದೆ.
ಶ್ರೀ ದೇವಿ ಯಕ್ಷ ಕಲಾ ನಿಲಯದ ಗರಡಿಯಲ್ಲಿ ಅರಳುತ್ತಿರುವ ಕಲಾ ಕುಸುಮಗಳು ವರ್ಷದಿಂದ ವರ್ಷಕ್ಕೆ ಯುವ ಪ್ರತಿಭೆಗಳು ಸಾಲು-ಸಾಲಾಗಿ ತೆರೆಯ ಮೇಲೆ ಬಂದು ಪೌರಾಣಿಕ ಕಲಾ ರೂಪಕಗಳನ್ನು ಎತ್ತಿ ಹಿಡಿದಿದ್ದಾರೆ. ಇಂತಹ ಒಂದು ಅದ್ಬುತ ಯಕ್ಷಗಾನ ಕಲೆಯನ್ನು ಮತ್ತಷ್ಟು ಮೆರುಗುಗೊಳಿಸುವ ನಿಟ್ಟಿನಲ್ಲಿ ಶ್ರೀ ದೇವಿ ಯಕ್ಷಕಲಾ ನಿಲಯ ಯಕ್ಷಗುರು ನಾಗೇಶ್ ಪೊಳಲಿಯವರ ಮಾರ್ಗದರ್ಶನದಲ್ಲಿ ತನ್ನ ಏಳನೇ ವರ್ಷದ ನೆನಪಿಗಾಗಿ ವಾರ್ಷಿಕೋತ್ಸವನ್ನು “ಮುಂಡ್ಕೂರು ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥೆಯನ್ನು ಆಡಿ ತೋರಿಸಲಿರುವರು. ಈಗಾಗಲೇ ಈ ಸಂಸ್ಥೆ ಪರಿಸರದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದೆ. ಸಂಸ್ಥೆಯಲ್ಲಿ ಕನ್ನಡ ಕಲಿಕೆ ಕೇಂದ್ರದ ಗುರುಗಳಾಗಿ ಶ್ರೀಮತಿ ಮಲ್ಲಿಕಾ ಆರ್ ಪೂಜಾರಿ ಹಾಗೂ ವಿಜಯ ಸಾಲಿಯಾನ್ ಸಂಗಡಿಗರು ಉಚಿತ ಕ್ಲಾಸ್ ನೀಡುತ್ತಿದ್ದು, ಫುಟ್ಬಾಲ್ ತರಬೇತಿಯನ್ನು ಕೂಡ ಸಂಸ್ಥೆಯ ವತಿಯಿಂದ ನಾಗೇಶ್ ಕೋಟ್ಯಾನ್ ನವರು ಉಚಿತವಾಗಿ ನೀಡುತ್ತಿದ್ದಾರೆ. ಭರತ ನಾಟ್ಯ ತರಬೇತಿಯನ್ನು ಶ್ರೀಮತಿ ಸ್ಮಿತಾ ನಾಯರ್ ಕಲಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀಮತಿ ಲಕ್ಷ್ಮಿ ನಾಯರ್ ಕಲಿಸುತ್ತಿದ್ದಾರೆ. ಭಜನೆ ಕ್ಲಾಸನ್ನು ಶ್ರೀಮತಿ ಲೀಲಾವತಿ ಆಳ್ವ ಅವರು ಕಲಿಸುತ್ತಿದ್ದು, ಸಂಸ್ಥೆಯು ಹೀಗೆ ಹಲವಾರು ತರಬೇತಿಯನ್ನು ನೀಡುವ ಮುಖಾಂತರ ಈ ಸಂಸ್ಥೆಯ ಮಕ್ಕಳಲ್ಲಿ ಕಲಿಕೆ ಮನೋಭಾವನೆಯನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತಿದೆ. ಅದರಂತೆಯೇ ಶಶಿಧರ ಶೆಟ್ಟಿ ಇನ್ನಂಜೆಯವರು ಕೂಡಾ ಯಕ್ಷಗಾನವನ್ನು ಬೆಳೆಸಲು ಅದಕ್ಕೆ ಒಂದು ಸ್ವರೂಪ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿ ಈ ಕಲೆಯ ಬಗ್ಗೆ ಗೌರವವಿಟ್ಟು ಇದರ ಬೆಳವಣಿಗೆಗೆ ಸುಮಾರು ಏಳು ವರ್ಷ ಶ್ರಮಿಸುತ್ತಾ ಬಂದಿದ್ದಾರೆ.
ತುಳುಕೂಟ ಫೌಂಡೇಶನ್ ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯ ಇದರ ಜಂಟಿ ಆಶ್ರಯದಲ್ಲಿ ನಾಳೆ 27/1/2024 ರಂದು ಶನಿವಾರ ವಾರ್ಷಿಕೋತ್ಸವವು “ಕಲಾ ಕುಸುಮಗಳ ಕಲಾ ವೈಭವ” ಹೋಟೆಲ್ ಗ್ಯಾಲಕ್ಸಿ ಸಭಾಂಗಣ ಎಸ್. ಟಿ. ಡೆಪೋ ಹತ್ತಿರ ನಾಲಾಸೋಪಾರ (ಪಶ್ಚಿಮ ) ಇಲ್ಲಿ ನಡೆಯಲಿದೆ. ಈ ಜಂಟಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವು ಶಶಿಧರ ಶೆಟ್ಟಿ ಇನ್ನಂಜೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಗೌರವ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬಯಿಯ ಟ್ರಸ್ಟಿ ಮೋಹನ್ ದಾಸ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ ಆರ್ ಕೆ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಅತಿಥಿಗಳಾಗಿ ಉಮೇಶ್. ಡಿ. ನಾಯ್ಕ್ (ಮಾಜಿ ಉಪ ಮಹಾಪೌರ ವಸಾಯಿ ವಿರಾರ್ ಮಹಾನಗರ ಪಾಲಿಕೆ) ಶ್ರೀ ಹರೀಶ್. ಜಿ. ಅಮೀನ್, ಅಧ್ಯಕ್ಷರು ಬಿಲ್ಲವರ ಅಸೋಸಿಯೇಷನ್ ಮುಂಬಯಿ. ಶ್ರೀ ಅನಿಲ್ ಶೆಟ್ಟಿ (ಕಾರ್ಯಾಧ್ಯಕ್ಷರು ಸದಸ್ಯತ್ವ ನೋಂದಣಿ ಸಮಿತಿ ಬಂಟರ ಸಂಘ ಮುಂಬಯಿ) ಶ್ರೀ ಜಗದೀಶ್ ಶೆಟ್ಟಿ ಮೂಲ್ಕಿ (ಅಧ್ಯಕ್ಷರು ತುಳು ಕೂಟ ಐರೋಲಿ ನವಿ ಮುಂಬಯಿ) ಇವರುಗಳು ಆಗಮಿಸಲಿದ್ದಾರೆ.
ಈಗಾಗಲೇ ಸಂಸ್ಥೆಯು ಅನೇಕ ಸಾಧಕರನ್ನು ಗುರುತಿಸಿದ್ದು, ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಡಾ. ಸುನಿತಾ ಶೆಟ್ಟಿ “ತುಳುನಾಡ ಐಸಿರಿ” ಪ್ರಶಸ್ತಿ ಪ್ರದಾನವನ್ನು ಮುಂಬಯಿಯ ಹೆಸರಾಂತ ಸಾಹಿತಿ, ಲೇಖಕಿ ಶ್ರೀಮತಿ ಲತಾ ಶೆಟ್ಟಿ ಮುದ್ದುಮನೆ ಅವರಿಗೆ ನೀಡಿ ಸನ್ಮಾನಿಸಲಿದೆ. ಶ್ರೀದೇವಿ ಯಕ್ಷ ಕಲಾ ನಿಲಯದ ಸಂಸ್ಥೆಯಲ್ಲಿ ಉಚಿತವಾಗಿ ಮಕ್ಕಳಿಗೆ ಕನ್ನಡ ಕಳಿಸಿ, ಅತ್ಯುತ್ತಮ ಕಾರ್ಯಕರ್ತೆ ಎನಿಸಿಕೊಂಡ ಶ್ರೀಮತಿ ವಿನುತಾ. ಬಿ. ಶೆಟ್ಟಿಯವರನ್ನು ಸನ್ಮಾನಿಸಲಿದೆ. ಸಂಸ್ಥೆಯು ಕ್ರೀಡೆಗೂ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ದೇಶ ವಿದೇಶಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಹೆಚ್ಚಿನ ಪ್ರಶಸ್ತಿ ತಣ್ಣದಾಗಿಸಿಕೊಂಡ ಶ್ರೀಮತಿ ಅನಿತಾ ರೈಯವರನ್ನು ಕೂಡ ಸನ್ಮಾನಿಸಲಿದೆ. ಪ್ರತೀ ವರ್ಷವೂ ಶ್ರೀದೇವಿ ಯಕ್ಷ ಕಲಾ ನಿಲಯದ ವತಿಯಿಂದ “ಶ್ರೀದೇವಿ ಯಕ್ಷ ಕಲಾ ಪ್ರಶಸ್ತಿ ನೀಡಿ ಬಾಲ ಕಲಾವಿದರನ್ನು ಗೌರವಿಸಲಾಗುತ್ತಿದೆ. ಈ ವರ್ಷ ಕೂಡಾ ಕುಮಾರಿ ವರ್ಷಾ ಶೆಟ್ಟಿ, ಕುಮಾರಿ ಪ್ರಜ್ಞಾ ಶೆಟ್ಟಿ, ಕುಮಾರಿ ಲಾಸ್ಯ ಆಳ್ವ, ಕುಮಾರಿ ಶ್ರುತಿ ಕೋಟ್ಯಾನ್ ಇವರನ್ನು ಗೌರವಿಸಲಿದೆ. ಅದರಂತೆಯೇ ಕಾರ್ಯಕ್ರಮದ ದಿನ ಬೆಳಗ್ಗೆ 8:00 ಗಂಟೆಗೆ ತುಳುಕೂಟ ಕಚೇರಿಯಲ್ಲಿ ಗಣಹೋಮ, 9:30 ರಿಂದ 11:00 ರ ತನಕ ವಾರ್ಷಿಕ ಮಹಾಸಭೆ, 11:30 ಗಂಟೆಗೆ ತುಳು ಕೂಟ ಫೌಂಡೇಶನ್ (ರಿ) ನಾಲಾಸೋಪಾರ ಕಛೇರಿ ಉದ್ಘಾಟನೆಗೊಂಡು, ನಂತರ 1:00 ತನಕ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮದ್ಯಾಹ್ನ 1:30 ರಿಂದ ಮದ್ಯಾಹ್ನ 2:30 ರ ತನಕ ತುಳುಕೂಟ ಮಹಿಳಾ ವಿಭಾಗದವರಿಂದ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯದ ಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 3:00 ರಿಂದ 4:00 ಗಂಟೆ ತನಕ ತುಳುಕೂಟ ಮಹಿಳಾ ಸದಸ್ಯರು ಹಾಗೂ ಶ್ರೀದೇವಿ ಯಕ್ಷಕಲಾ ನಿಲಯದ ವಿವಿಧ ವಿಭಾಗದವರಿಂದ ವಿವಿಧ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4:00 ರಿಂದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ಬಾಲ ಕಲಾವಿದರಿಂದ “ಮುಂಡ್ಕೂರು ಕ್ಷೇತ್ರ ಮಹಾತ್ಮೆ” ಹಾಗೂ ಇನ್ನಿತರ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಪರಿಸರದ ತುಳು ಕನ್ನಡಿಗರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಇನ್ನಂಜೆ, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಜಗನಾಥ್ ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ರಾಜೇಶ್ ಕರ್ಕೇರ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, ಟ್ರಸ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ಗೌರವಾಧ್ಯಕ್ಷ ಶ್ರೀನಿವಾಸ ನಾಯ್ಡು, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರ್, ಕೋಶಾಧಿಕಾರಿ ಲ| ಕೃಷ್ಣಯ್ಯ ಹೆಗಡೆ ಹಾಗೂ ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಪ್ರವೀಣ್ ಶೆಟ್ಟಿ ಕಣಂಜಾರ್ ವಸಾಯಿ