ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. ಮೊದಲ ದಿನವಾದ ಡಿ.14ರಂದು ಸಂಜೆ 5.30ಕ್ಕೆ ರಾಜ್ಯಪಾಲರಿಗೆ ಗೌರವ ರಕ್ಷೆ ನಡೆಯಲಿದೆ. ಬಳಿಕ 5.45ಕ್ಕೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಶಾಸಕರಾದ ಉಮನಾಥ ಎ.ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಎಂಜಿಆರ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಪ್ರಸನ್ನ ಶೆಟ್ಟಿ ಬೆಂಗಳೂರು, ರವೀಂದ್ರನಾಥ ಆಳ್ವ ಮಂಗಳೂರು, ರವಿಶಂಕರ್ ಶೆಟ್ಟಿ ಬಂಟ್ವಾಳ, ಮುಸ್ತಫಾ ಎಸ್.ಎಂ, ಪ್ರವೀಣ್ ಕುಮಾರ್, ಶ್ರೀಪತಿ ಭಟ್ ಮೂಡುಬಿದಿರೆ, ಪ್ರಮುಖರಾದ ಜಯಶ್ರೀ ಅಮರನಾಥ ಶೆಟ್ಟಿ ಮೂಡುಬಿದಿರೆ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು.ರಾಧಾ ಉಪಸ್ಥಿತರಿರುವರು.
ಮೆರವಣಿಗೆ: ಸಂಜೆ 6:35ಕ್ಕೆ ಆಳ್ವಾಸ್ ವಿರಾಸತ್ನ ಭವ್ಯ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ರಾತ್ರಿ 8:05ಕ್ಕೆ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀ ಲಕ್ಷ್ಮೀ ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಸಾಂಸ್ಕøತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.15ರಂದು ಸಂಜೆ 6 ರಿಂದ 8ರ ವರೆಗೆ ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ‘ಗಾನ ವೈಭವ’ ಇರಲಿದೆ.
ಡಿ. 16ರಂದು ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ‘ಭಾವ ಲಹರಿ’ ನಡೆಯಲಿದೆ. ಎರಡೂ ದಿನಗಳೂ ಸಂಜೆ 5:45ಕ್ಕೆ ದ್ವೀಪ ಪ್ರಜ್ವಲನ ಹಾಗೂ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ಇರಲಿದೆ.
ಡಿ.17ರಂದು ಸಂಜೆ 5:15ರಂದು ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಬಾರಿ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು. ಬಳಿಕ ಸಂಜೆ 6:30ಕ್ಕೆ ಡಾ. ಮೈಸೂರು ಮಂಜುನಾಥ್ ಮತ್ತು ಡಾ.ಪ್ರವೀಣ್ ಗೋಡ್ಖಿಂಡಿ ಮತ್ತು ವಿಜಯ ಪ್ರಕಾಶ್ ಅವರಿಂದ ‘ತಾಳ-ವಾದ್ಯ- ಸಂಗೀತ’ ನಡೆಯಲಿದೆ. ರಾತ್ರಿ 7:30ಕ್ಕೆ ಚಲನಚಿತ್ರ ಖ್ಯಾತ ಹಿನ್ನೆಲೆಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ಕ್ಕೆ ಆಳ್ವಾಸ್ ಸಾಂಸ್ಕøತಿಕ ವೈಭವ ಇರಲಿದೆ.
ಮೇಳಗಳು:
ಈ ಬಾರಿಯ ಆಳ್ವಾಸ್ ವಿರಾಸತ್ನಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮೇಳವು’ ವಿಶೇಷ ಆಕರ್ಷಣೆಯಾಗಿದೆ. ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯುವ ಪ್ರದರ್ಶನ ಮತ್ತು ಮಾರಾಟ ಮಹಾಮೇಳವು ಗುರುವಾರ ಡಿಸೆಂಬರ್ 14ರಂದು ಬೆಳಿಗ್ಗೆ 10 ಗಂಟೆಗೆ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲ ಪುಷ್ಪ ಮೇಳ ಮತ್ತು ಸ್ಕೌಟ್ಸ್ ಗೈಡ್ಸ್ ಸಾಹಸಮಯ ಚಟುವಟಿಕೆಗಳ ಕೇಂದ್ರದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ ನೆರೆವೇರಿಸಿದರೆ, ಚಿತ್ರಕಲಾ ಮೇಳ, ಕಲಾಕೃತಿ, ಛಾಯಾಚಿತ್ರ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನಗಳ ಉದ್ಘಾಟನೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿಎಲ್ ಶಂಕರ್ ನೆರವೇರಿಸಲಿದ್ದರೆ.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ಆರ್ಶೀವಚನ ನೀಡಲಿದ್ದಾರೆ. ಮೂಲ್ಕಿ- ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಉದ್ಯಮಿ ಕೆ ಶ್ರೀಪತಿ ಭಟ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್, ಎಂಸಿಎಸ್ ಸೊಸೈಟಿ ಎಸ್.ಸಿ.ಇ.ಒ ಚಂದ್ರಶೇಖರ್ ಎಂ, ಕೆವಿವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ ಬಿ ಧನಂಜಯ, ಮಂಗಳೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೆಗೌಡ, ಎಸ್ಕೆಡಿಆರ್ಡಿಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಉಪಸ್ಥಿತರಿರುವರು.
ಕೃಷಿ ಮೇಳ:
ದೇಶದ ಬೆನ್ನೆಲುಬಾಗಿರುವ ರೈತರು ಹಾಗೂ ಕೃಷಿ ಸಂಸ್ಕ್ರುತಿ ಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಆಳ್ವಾಸ್, ವಿಶೇಷವಾಗಿ ‘ಕೃಷಿ ಮೇಳ’ವನ್ನು ಆಯೋಜಿಸಿದೆ. ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಇದು ಕೇವಲ ಪ್ರದರ್ಶನವಲ್ಲ, ಮಾರಾಟ ಮಳಿಗೆಗಳು, ಅನುಭವ ಪ್ರಾತ್ಯಕ್ಷಿಕೆಗಳೂ ಇರಲಿವೆ. ಈ ಮೇಳವು ಕೃಷಿಕರಿಗೆ ಮೌಲ್ಯವರ್ಧನೆಗೆ ಪೂರಕವಾದರೆ, ಕೃಷಿ ಕುಟುಂಬದಿಂದ ಬಂದು ವೃತ್ತಿಗಾಗಿ ನಗರ ಸೇರಿದ ಜನರಿಗೆ ತಮ್ಮ ಬದುಕಿನ ಮೂಲಕ್ಕೆ ಕೊಂಡೊಯ್ಯಲಿದೆ. ಪುಟಾಣಿಗಳನ್ನು ಕೃಷಿಯೆಡೆಗೆ ಸೆಳೆಯಲಿದೆ.
ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು ಈ ಬಾರಿಯ ವಿಶೇಷ ಆಕರ್ಷಣೆ.
ಆಹಾರ ಮೇಳ:
‘ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವನಕ ಪ್ರಾಣವು…’ ಎಂಬ ಸರ್ವಜ್ಞರ ತ್ರಿಪದಿಯಂತೆ ಅನ್ನ ಹಸಿವಿಗೆ ಸೇವಿಸಿದರೂ, ಅದನ್ನು ಸವಿಯುವುದೇ ಒಂದು ಸಂತಸ. ಈ ಆಹಾರಗಳಲ್ಲೂ ಸಸ್ಯಾಹಾರ, ಮಾಂಸಾಹಾರ ಇತ್ಯಾದಿಗಳ ವೈವಿಧ್ಯ. ಈ ಬಾರಿಯ ಆಳ್ವಾಸ್ ವಿರಾಸತ್ನಲ್ಲಿ ಆಹಾರ ಮೇಳದಲ್ಲಿ ಹೊಟ್ಟೆಗೆ ಹಿಟ್ಟು ಮಾತ್ರವಲ್ಲ, ಕಣ್ಣಿಗೆ ಸೌಂದರ್ಯ, ನಾಸಿಕಕ್ಕೆ ಕಂಪು, ಬಾಯಲ್ಲಿ ನೀರೂರಿಸುವ ರುಚಿಗಳಿವೆ. ತುಳುನಾಡಿನ ಪರಂಪರೆಯಿಂದ ಹಿಡಿದು, ಅಪ್ಪಟ ದೇಸೀಯ ತಿನಿಸು, ಇಂದಿನ ಫಾಸ್ಟ್ಫುಡ್ ವರೆಗಿನ ಆಹಾರ ವೈವಿಧ್ಯಗಳು ಲಭ್ಯ. ನಾಲಗೆಯಲ್ಲಿ ಖಾರ, ಹುಳಿ, ಉಪ್ಪು, ಸಿಹಿ…ಗಳ ಸಂಗಮ. ವಿಭಿನ್ನ ಆಹಾರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.
ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ:
ನಮ್ಮ ಸಂಸ್ಕøತಿ ಮತ್ತು ಪರಂಪರೆಯು ಅಮೂರ್ತ ಹಾಗೂ ಮೂರ್ತ ರೂಪದಲ್ಲಿ ಹಾಸು ಹೊಕ್ಕಾಗಿರುತ್ತದೆ. ಸಂಸ್ಕøತಿಯು ಅಮೂರ್ತವಾಗಿ ನಮ್ಮನ್ನು ಆವರಿಸಿದ್ದರೆ, ಪರಂಪರೆಯು ಮೂರ್ತ ರೂಪದಲ್ಲಿ, ಭೌತಿಕ ಸೌಂದರ್ಯದಲ್ಲಿ ಮೈದಳೆಯುತ್ತವೆ. ಅಂತಹ ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.
ಫಲಪುಷ್ಪ ಮೇಳ:
ಫಲ ಹಾಗೂ ಪುಷ್ಪವು ನಮ್ಮ ಸಂಸ್ಕøತಿಯಲ್ಲಿ ಆತಿಥ್ಯ ಹಾಗೂ ಗೌರವದ ದ್ಯೋತಕ. ಆದರೆ, ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೂ, ತರಕಾರಿ, ಹಣ್ಣು ಹಂಪಲುಗಳ ಕೃಷಿ
ಕೊಂಚ ವಿರಳವಾಗಿದೆ.
ಅದಕ್ಕಾಗಿ ಸುಮಾರು 2 ಲಕ್ಷಕ್ಕೂ ಅಧಿಕ ತರಹೇವಾರಿಯ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ- ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ. ಕೇವಲ ಹೂ-ಹಣ್ಣು ಮಾತ್ರವಲ್ಲ, ಅವುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲಿವೆ. ಸುಮಾರು 150 ಕಾರ್ಮಿಕರ ಒಡಗೂಡಿ 150 ಕಲಾಕಾರರು ಇಡೀ ಕೃಷಿ ಮೇಳವನ್ನು ಮೂರು ತಿಂಗಳ ಅವಿರತ ಶ್ರಮದ ಮೂಲಕ ರೂಪಿಸಿದ್ದಾರೆ. ಬಾಲಾದಿವೃದ್ಧರಾಗಿ ಎಲ್ಲರೂ ಬಂದು ಆನಂದಿಸಬಹುದು. ಹೆಣ್ಣು ಮಕ್ಕಳಿಗೆ ಈ ಮೇಳ ಸ್ಪಲ್ಪ ಹೆಚ್ಚು ಖುಷಿ ನೀಡಲಿದೆ. ಒಟ್ಟು ಫಲಪುಷ್ಪ ಮೇಳವು ಸುಮಾರು 2 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಕುಟುಂಬ ಸಮೇತ ಬಂದು ನೋಡಬೇಕು. ನಮ್ಮ ಸೌಂದರ್ಯ ಪ್ರಜ್ಞೆ ಹಾಗೂ ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ.
ಚಿತ್ರಕಲಾ ಮೇಳ:
ವಿರಾಸತ್ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಬಣ್ಣ- ಕುಂಚದ ಮೂಲಕ ರಂಗು ಮೂಡಿಸುವ, ಬಣ್ಣದಾಟದಲ್ಲೇ ಸಂದೇಶ ರವಾನಿಸುವ ಕಲಾವಿದರ ಕೌಶಲ ಹಾಗೂ ಸೃಜನಶೀಲತೆಯೇ ಈ ಕಲಾಕೃತಿಗಳು. ದೇಶ- ವಿದೇಶ ವಿಖ್ಯಾತ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.
ಛಾಯಾಚಿತ್ರಗಳ ಪ್ರದರ್ಶನ:
ಒಂದು ಛಾಯಾಚಿತ್ರ ಸಾವಿರ ಶಬ್ದಗಳಿವೆ ಸಮ ಎಂಬುದು ಉಕ್ತಿ. ಸೃಜನಶೀಲತೆಯಿಂದ ಸೆರೆ ಹಿಡಿದ ಬಣ್ಣ- ಬೆಳಕು-ನೆರಳಿನ ಚಿತ್ತಾರವು ನೈಜತೆಗೂ ಸಾಕ್ಷಿ. ಅಂತಹ ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳ 2 ಸಾವಿರಕ್ಕೂ ಮಿಕ್ಕಿದ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ.
ಕಲಾಕೃತಿಗಳ ಪ್ರದರ್ಶನ:
ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದಲ್ಲಿ ವಿಶೇಷ ಕಲಾಕೃತಿಗಳ ಬೃಹತ್ ಪ್ರದರ್ಶನ ಇರಲಿವೆ. ಇವು ಬಾಲಾದಿವೃದ್ಧರಾಗಿ ಎಲ್ಲರನ್ನು ಸೆಳೆಯಲಿದೆ. ನೈಜ ರೂಪವೇ ಅವತರಿಸಿದ ಸ್ವರೂಪದಲ್ಲಿ ಈ ಕಲಾಕೃತಿಗಳು ಕಂಗೊಳಿಸಲಿವೆ. ಇವುಗಳು ಒಂದು ರೀತಿಯ ಸೆಲ್ಫಿ ಕೇಂದ್ರಗಳೂ ಹೌದು. ಈ ಕಲಾಕೃತಿಗಳ ಎದುರಿನಲ್ಲೊಂದು ಸೆಲ್ಫಿ ಅಥವಾ ಫೋಟೊ ಕ್ಲಿಕ್ಕಿಸಿಕೊಂಡರೆ, ವಿರಾಸತ್ -23ರ ನೆನಪೂ ಶಾಶ್ವತ.
ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ:
ಸುಮಾರು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಈ ಕೇಂದ್ರವು ರೂಪುಗೊಂಡಿದ್ದು, ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಧೈರ್ಯ ಹಾಗೂ ಸ್ಪಂದನೆಯನ್ನು ತುಂಬುವಲ್ಲಿ ಸಹಕಾರಿ. ಇದು ಮಕ್ಕಳ ಆಕರ್ಷಣೆಯ ಆಟೋಟ ತಾಣವೂ ಹೌದು.
ವಿಶೇಷ ಸೂಚನೆ: ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ 15 ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ದೀಪಾಲಂಕಾರದ ಸೊಬಗನ್ನು ಸವಿಯಬಹುದು.
ಮುಖ್ಯಾಂಶಗಳು
- ಡಿಸೆಂಬರ್ 14ರಿಂದ 17ರ ವರೆಗೆ ಆಳ್ವಾಸ್ ವಿರಾಸತ್ ನಡೆಯಲಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆ ‘ಸಪ್ತ ಮೇಳ’ಗಳು ಈ ಬಾರಿಯ ವೈಶಿಷ್ಟ್ಯ
- ಎಲ್ಲರಿಗೂ ವಿರಾಸತ್ಗೆ ಉಚಿತ ಪ್ರವೇಶವಿದ್ದು, 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
- ಈ ಬಾರಿಯ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ.
- ಬೆನ್ನಿದಯಾಲ್, ವಿಜಯಪ್ರಕಾಶ್, ಶ್ರೇಯಾ ಘೋಷಾಲ್ ಸ್ವರ ಮಾಧುರ್ಯ
- ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ನಾದ- ನಿನಾದ
- ಪ್ರತಿನಿತ್ಯ 13 ಗಂಟೆಗಳ ಕಾಲ 750 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಗಳಿದ್ದು, ಪಂಚೇಂದ್ರಿಯಗಳಿಗೆ ರಸದೌತಣ
- ಭವ್ಯ ಸಾಂಸ್ಕøತಿಕ ಮೆರವಣಿಗೆ ಬಳಿಕ ಸಾಂಸ್ಕøತಿಕ ರಥ ಸಂಚಲನ ಮತ್ತು ರಥಾರತಿ
ಕೃಷಿ ಮೇಳ: ಹಣ್ಣು, ತರಕಾರಿ, ಹೂವು ಸೇರಿದಂತೆ ನೆಲ-ಜಲದಲ್ಲಿ ಬೆಳೆಯುವ ಸಸ್ಯ ಹಾಗೂ ಅವುಗಳ ಉತ್ಪನ್ನಗಳು ಹಾಗೂ ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮಾರಾಟ.
ಆಹಾರ ಮೇಳ: ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ವೈವಿಧ್ಯಮಯ ತಿನಿಸುಗಳು. ವಿವಿಧ ಪಾರಂಪರಿಕ ಆಹಾರ ಹಾಗೂ ಆಧುನಿಕ ಫಾಸ್ಟ್ಫುಡ್ ತಿನಿಸುಗಳು.
ಫಲಪುಷ್ಪ ಮೇಳ: 2 ಲಕ್ಷಕ್ಕೂ ಅಧಿಕ ತರಹೇವಾರಿಯ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ- ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ. ಹಣ್ಣು- ಹೂವುಗಳಿಂದ ಮಾಡಿದ ಕಲಾಕೃತಿಗಳೂ ಇರಲಿವೆ.
ಕುರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಆಭರಣಗಳು, ಮೂರ್ತಿಗಳು, ಆಟಿಕೆಗಳು ಸೇರಿದಂತೆ ಕರಕುಶಲ ಮತ್ತು ಪ್ರಾಚ್ಯವಸ್ತುಗಳಸುಮಾರು 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ.
ಚಿತ್ರಕಲಾ ಮೇಳ: ದೇಶ-ವಿದೇಶದ ಖ್ಯಾತ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ
ಕಲಾಕೃತಿಗಳ ಪ್ರದರ್ಶನ: ವಿಭಿನ್ನ ಕಲಾಪ್ರಕಾರಗಳ ಮೂಲಕ ರಚಿಸಿದ ವಿವಿಧ ಕಲಾಕೃತಿಗಳ ಪ್ರದರ್ಶನವು ವಿರಾಸತ್ ನಡೆಯುವ ಆವರಣದಾದ್ಯಂತ ಇರಲಿದೆ.
ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ: ಮಕ್ಕಳಿಗೆ ಮನೋಲ್ಲಾಸ ಹಾಗೂ ದೈಹಿಕ ಸಾಮಥ್ರ್ಯ ವೃದ್ಧಿಗೆ ವಿವಿಧ ಸಾಹಸಮ ಚಟುವಟಿಕೆಗಳ ಕೇಂದ್ರವನ್ನು ಸುಮಾರು 2 ಎಕರೆಯಲ್ಲಿ ಸ್ಥಾಪಿಸಲಾಗಿದೆ.