ವಿಶ್ವ ಖ್ಯಾತಿಯ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಹೆಸರಾಂತ ಸಂಘಟಕಿ, ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ಚಿತ್ರಾ ರವಿರಾಜ್ ಶೆಟ್ಟಿ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಾಂಗಾಳ ಆದಿ ಆಲಡೆಗೆ ಸಂಬಂಧ ಪಟ್ಟ ಪ್ರತಿಷ್ಠಿತ ಪಾಂಗಾಳ ಮೇಲ್ಮನೆ ಮನೆತನದ ಮುದ್ದಿನ ಮಗಳಾಗಿ ಬಾಲ್ಯದ ದಿನಗಳಿಂದಲೇ ವಿಚಕ್ಷಣ ಪ್ರತಿಭೆಯ ಬಾಲಕಿಯಾಗಿ ಗುರುತಿಸಿಕೊಂಡವರು.
ಪಾಂಗಾಳ ಮೇಲ್ಮನೆ ರಾಧಾ ಡಿ ಶೆಟ್ಟಿ ಮತ್ತು ನಂದಳಿಕೆ ಐಸ್ರಬೆಟ್ಟು ದುಗ್ಗಪ್ಪ ಶೆಟ್ಟಿ ದಂಪತಿಗೆ ಮಗಳಾಗಿ ಹುಟ್ಟಿದ ಚಿತ್ರಾ ಅವರು ಪಾಂಗಾಳದಲ್ಲಿ ಪ್ರಾಥಮಿಕ, ಇನ್ನಂಜೆಯಲ್ಲಿ ಹೈಸ್ಕೂಲು, ಕಟಪಾಡಿಯಲ್ಲಿ ಪದವಿಪೂರ್ವ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಇವರು ಪ್ರತೀ ತರಗತಿಗಳಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸರಕಾರಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದರು. ನೃತ್ಯ, ನಟನೆ, ಭಜನೆ, ಯಕ್ಷಗಾನ, ನಾಟಕ ಇವರ ಆಸಕ್ತಿಯ ವಿಷಯಗಳಾಗಿದ್ದವು. ಶಾಲಾ ಕಾಲೇಜು ದಿನಗಳ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು.
ಸುಲಕ್ಷಣೆ ಹಾಗೂ ಸ್ಫುರದ್ರೂಪಿಯಾಗಿದ್ದ ಚಿತ್ರಾ ಅವರಿಗೆ ಪಡುಬಿದ್ರಿ ಪಾದೆಬೆಟ್ಟು ಪಾಂಡ್ಯಾರು ಬರ್ಪಾಣಿ ಎಂಬ ಗುತ್ತಿನ ಮನೆತನದ ರವಿರಾಜ್ ಶೆಟ್ಟಿ ಅವರೊಂದಿಗೆ ಕಂಕಣ ಬಲ ಕೂಡಿಬಂದು ಹಸೆಮಣೆ ಏರಿದ ಚಿತ್ರಾ ಅವರು ತನ್ನ ಪತಿಯ ಜೊತೆ ಮುಂಬಯಿ ನಗರ ಸೇರಿ ಸಂಸಾರ ಸಾಗಿಸುತ್ತಲೇ ತನ್ನ ಆಸಕ್ತಿಯ ವಿಷಯಗಳಾದ ಸಂಘಟನೆ, ಸಮಾಜ ಸೇವೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡರು. ಇವರ ಪತಿ ದಿವಂಗತ ರವಿರಾಜ್ ಶೆಟ್ಟಿಯವರು ಮುಂಬಯಿ ನಗರದ ಹೆಸರಾಂತ ಹೊಟೇಲ್ ಉದ್ಯಮಿಯಾಗಿದ್ದರು. ತನ್ನ ಧಾರ್ಮಿಕ ಪ್ರವೃತ್ತಿ ದಾನಗುಣ ಸಮಾಜ ಸೇವೆಗೆ ಪ್ರಸಿದ್ಧರಾಗಿದ್ದವರು. ಕಲ್ಯಾಣ್ ನ ಬಹು ಪ್ರಸಿದ್ಧಿಯ ಮಹಾಲಕ್ಷ್ಮಿ ಹೊಟೇಲ್ ಹಾಗೂ ಸಾಗರ್ ಇಂಟರ್ನ್ಯಾಷನಲ್ ಹೋಟೆಲುಗಳ ಮಾಲೀಕರಾಗಿದ್ದರು. ಇವರು ಚಿತ್ರಾ ಅವರ ಆಸಕ್ತಿಗಳು ಇನ್ನಷ್ಟು ಗರಿಗೆದರಿ ಪೂರ್ಣ ರೂಪದಲ್ಲಿ ಬೆಳಕಿಗೆ ಬರುವಂತೆ ಪ್ರೋತ್ಸಾಹಿಸಿದರು. ಇವರ ಪರಸ್ಪರ ಅನುರಕ್ತ ದಾಂಪತ್ಯದ ಫಲವಾಗಿ ಜನಿಸಿದ ಪುತ್ರ ರತ್ನಗಳು ಶೈಲೇಶ್ ಶೆಟ್ಟಿ, ಶ್ರೀಶ ಶೆಟ್ಟಿ, ಡಾ. ಸಾಗರ್ ಶೆಟ್ಟಿ, ಹಾಗೂ ಶಶಿ ಮತ್ತು ಶ್ವೇತಾ ಎಂಬ ಹೆಣ್ಣು ಮಕ್ಕಳು ಚಿತ್ರಾ ರವಿರಾಜ್ ದಂಪತಿಗಳ ಮನೆ ತುಂಬಿದರು. ಎಲ್ಲರಿಗೂ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಬೆಳೆಸಿದರು.
ಶ್ರೀಮತಿ ಚಿತ್ರಾ ಅವರು ಕಳೆದ ಇಪ್ಪತ್ತು ವರ್ಷಗಳಿಂದ ನಗರದ ಕಲ್ಯಾಣ್ ಪರಿಸರ ಹಾಗೂ ತನ್ನ ಹುಟ್ಟೂರಿನಲ್ಲಿ ಸಮಾಜ ಸೇವೆ ಸಂಘಟನೆಗಳ ಮೂಲಕ ಬಹು ಪ್ರಸಿದ್ಧಿಯಲ್ಲಿದ್ದಾರೆ. ಇವರು ಕಲ್ಯಾಣ್ ನಲ್ಲಿ ಜನಪ್ರಿಯತೆ ಪಡೆದ ಓಂ ಶಕ್ತಿ ಮಹಿಳಾ ಸಂಸ್ಥೆಯ ಸ್ಥಾಪಕರಾಗಿದ್ದು, ಗೌರವಾಧ್ಯಕ್ಷೆಯಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ಓಂ ಶಕ್ತಿ ಮಹಿಳಾ ಸಂಸ್ಥೆಯ ಮುಖಾಂತರ ಮಾಡುವ ಜನಪರ ಕಾರ್ಯಕ್ರಮಗಳು, ನೀಡುವ ಸಹಾಯಹಸ್ತ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಗರದಲ್ಲೇ ಪ್ರಸಿದ್ಧಿ ಪಡೆದಿದೆ.
ಇವರು ಬಂಟರ ಸಂಘದ ಕಲ್ಯಾಣ್ ಭಿವಂಡಿ ಬದ್ಲಾಪುರ್ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಯಾಗಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿಯಾಗಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯಾಗಿ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿರುವುದರ ಫಲಶ್ರುತಿ ಎಂಬಂತೆ ಇದೀಗ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಬಂಟರ ಸಂಘದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಸರು ಪಡೆದಿದ್ದಾರಲ್ಲದೆ, ಯಕ್ಷಗಾನ ಪ್ರಸಂಗಗಳ ಪ್ರಮುಖ ಮಹಿಳಾ ಪಾತ್ರಗಳಲ್ಲಿ ಮಿಂಚಿದ್ದಾರೆ.
ಬಹುಮುಖ ಪ್ರತಿಭೆಯ ಸಾಧಕಿಯಾಗಿ, ಸಂಘಟಕಿಯಾಗಿ, ಸಮಾಜ ಸೇವಕಿಯಾಗಿ ಸುದೀರ್ಘ ಜೀವನಾನುಭವ ಹೊಂದಿರುವ ಚಿತ್ರಾ ಆರ್ ಶೆಟ್ಟಿ ಅವರ ಆಯ್ಕೆ ಈ ಸ್ಥಾನದ ಗೌರವ ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿಯಾಗದು. ಇವರ ಅಧಿಕಾರಾವಧಿಯಲ್ಲಿ ಇನ್ನಷ್ಟು ಪ್ರಗತಿಪರ ಜನ ಮೆಚ್ಚುಗೆಯ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರಲಿ. ತನ್ಮೂಲಕ ಚಿತ್ರಾ ಶೆಟ್ಟಿ ಅವರ ಸೇವೆ ಸಾಧನೆ ಬಂಟರ ಸಂಘದ ಇತಿಹಾಸದಲ್ಲಿ ಗುರುತಿಸಲ್ಪಡಲಿ ಎಂಬ ಆಶಯದ ಜೊತೆಗೆ ಅವರ ಭವಿಷ್ಯ, ಜೀವನ, ಸುಖ, ಶಾಂತಿ, ಆರೋಗ್ಯ, ನೆಮ್ಮದಿಯಿಂದ ತುಂಬಿರಲೆಂದು ಭಗವಂತನಲ್ಲಿ ಪ್ರಾರ್ಥನೆ.
ಅರುಣ್ ಶೆಟ್ಟಿ ಎರ್ಮಾಳ್