ವಿದ್ಯಾಗಿರಿ (ಮೂಡುಬಿದಿರೆ): ‘ವಿದ್ಯಾರ್ಥಿಗಳು ಕಾಕಚೇಷ್ಟ, ಬಕ ಧ್ಯಾನ, ಶ್ವಾನ ನಿದ್ರೆ, ಅಲ್ಪಾಹಾರಿ ಹಾಗೂ ಗೃಹ ತ್ಯಾಗಿ ಎಂಬ ಪಂಚಗುಣಗಳನ್ನು ರೂಢಿಸಿಕೊಳ್ಳಬೇಕು’ ಎಂದು ಮಂಗಳೂರಿನ ಅಲೋಷಿಯಸ್ ಕಾಲೇಜು (ಸ್ವಾಯತ್ತ) ಕುಲಸಚಿವ, ಇಂಗ್ಲಿಷ್ ಸಹ ಪ್ರಾಧ್ಯಾಪಕ ಆಲ್ವಿನ್ ವಿನ್ಸೆಂಟ್ ಡೇಸಾ ಹೇಳಿದರು. ವಿದ್ಯಾಗಿರಿಯ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ – ಕೃಷಿ ಸಿರಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಕೇಂದ್ರೀಯ (ಸಿಬಿಎಸ್ಸಿ) ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಯತ್ನ, ಶ್ರದ್ಧೆ, ಎಚ್ಚರ, ಇಂದ್ರಿಯಗಳ ನಿಯಂತ್ರಣ ಹಾಗೂ ಔದಾಸೀನದ ಚೌಕಟ್ಟಿನಿಂದ ಹೊರಬರುವುದೇ ಈ ಪಂಚ ಗುಣಗಳು’ ಎಂದು ಅವರು ವಿವರಿಸಿದರು. ಡಾ.ಎಂ. ಮೋಹನ ಆಳ್ವ ಅವರು ಬಿತ್ತಿದ ಶೈಕ್ಷಣಿಕ ಬೀಜ ಇಂದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದೆ ಎಂದು ಶ್ಲಾಘಿಸಿದರು. ನೀವು ಕಲಿತ ಶಾಲೆಯನ್ನು
ಎಂದೂ ಮರೆಯಬೇಡಿ. ಶಾಲೆಗೆ ಮರಳಿ ಕೊಡುಗೆ ನೀಡಿ ಎಂದು ಹಿತವಚನ ಹೇಳಿದರು.
ಆಳ್ವಾಸ್ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಶೈಕ್ಷಣಿಕ ಆಡಳಿತಕ್ಕೆ ಹೊಸ ಭಾಷ್ಯ ಬರೆಯುತ್ತಿದ್ದಾರೆ.
ಮಕ್ಕಳೊಂದಿಗೆ ಮಕ್ಕಳಾಗುವ ಅವರ ಗುಣ ಹಾಗೂ ಅವರ ನಡವಳಿಕೆ ನನ್ನ ಮನ ಸೆಳಯಿತು. ಅವರಿಗೆ ಮಕ್ಕಳು ಖುಷಿಯಿಂದ ಹಸ್ತ ಲಾಘವ ನೀಡಲು ಬರುತ್ತಿದ್ದುದು ಮುದ ನೀಡಿತು ಎಂದು ಸಂತಸ ಹಂಚಿಕೊಂಡರು .ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವ್ಯಕ್ತಿತ್ವದಲ್ಲಿ ಬದಲಾವಣೆ ತರುವ ಗುರುಗಳು ದೇವರಿಗಿಂತಲೂ ಮಿಗಿಲು. ಶಿಷ್ಯನಲ್ಲಿ ಮೌಲ್ಯ ಬಿತ್ತುವವನೇ ಗುರು. ಅದಕ್ಕೆ ಆಲ್ಮೆಡಾ ಅವರು ಉತ್ತಮ ನಿದರ್ಶನ. ಅವರು ನನ್ನ ಗುರುಗಳ ಗುರು. ಹಾಗಾಗಿ ಹೆಗ್ಗುರು ಎಂದು ಬಣ್ಣಿಸಿದರು.
‘ನಿಮ್ಮೊಳಗಿನ ಮಗುವನ್ನು ಕೊಲ್ಲಬೇಡಿ, ನೀವು ಬೆಳೆದರೂ ಮಗುತನ ಬಿಡಬೇಡಿ’ ಎಂದ ಅವರು, ‘ನಾನು ಗುರುಗಳ ಬೋಧನೆಗಿಂತ ಹೆಚ್ಚಾಗಿ ಅವರ ನಡವಳಿಕೆಯಿಂದ ಕಲಿತೆ’ ಎಂದು ಬಾಲ್ಯದ ಮೆಲುಕು ಹಾಕಿದರು. ‘ಹೆಸರಿಗಾಗಿ ಯಾವುದೇ ಕೆಲಸ ಮಾಡಬೇಡಿ. ಖುಷಿಯಿಂದ ಕಲಿಯಿರಿ. ಮೊಬೈಲ್ ದಾಸರಾಗಬೇಡಿ’ ಎಂದರು. ಶಾಲೆಯ ವಾರ್ಷಿಕ ವರದಿ ವಾಚಿಸಿದ ಆಳ್ವಾಸ್ ಕೇಂದ್ರೀಯ (ಸಿಬಿಎಸ್ಸಿ) ಶಾಲೆಯ ಪ್ರಾಂಶುಪಾಲ ಮಹಮ್ಮದ್ ಶಫಿ ಶೇಕ್ , 2018-19 ರಲ್ಲಿ ಶಾಲೆ ಆರಂಭವಾಗಿದ್ದು ನಿರಂತರವಾಗಿ ಶೇಕಡಾ 100 ಫಲಿತಾಂಶ ಪಡೆಯುತ್ತಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ (11 ಮತ್ತು 12 ಗ್ರೇಡ್)ಆರಂಭಗೊಳ್ಳುತ್ತಿದೆ. ಎಂದರು.
ಆಳ್ವಾಸ್ ಕೇಂದ್ರೀಯ (ಸಿಬಿಎಸ್ ಸಿ) ಶಾಲೆಯ ಆಡಳಿತಾಧಿಕಾರಿ ಪ್ರೀತಂ ಕುಂದರ್ ಇದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸರ್ವಾಣಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್
ಪಾಯಸ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಶೈಲಜಾ ರಾವ್ ವಂದಿಸಿದರು. ಸಹ ಶಿಕ್ಷಕಿ ಶುಭಾ ಆಚಾರ್ಯ
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.