ಆಧುನಿಕ ಜೀವನ ಶೈಲಿಯ ಇಂದಿನ ದಿನಗಳಲ್ಲಿ ಎಳೆಯ ಮಕ್ಕಳು ಆಗಾಗ ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಬಡ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಕೆಲವು ಮಾರಕ ವಿಚಿತ್ರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಮಾನವಾಂತಕರಣ ಹೊಂದಿರುವ ಅಪರೂಪದ ವೈದ್ಯರೇ ಡಾ. ಸುಧಾಕರ ಶೆಟ್ಟರು.
ಪುಣೆಯ ಎಫ್ ಸಿ ರೋಡ್ ಹಾಗೂ ಎಂ ಜಿ ರೋಡ್ ನಲ್ಲಿ “ಬೇಬಿ ಫ್ರೆಂಡ್ ಕ್ಲಿನಿಕ್” ಹೊಂದಿರುವ ಇವರು ಇಂಥಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಕಾಯಿಲೆ ಕುರಿತ ಅಧ್ಯಯನ ನಡೆಸಿ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿ ಅದೃಷ್ಟೋ ಅಮೂಲ್ಯ ಜೀವ ಉಳಿಸಿದ ಪುಣ್ಯಾತ್ಮರು. ವೈದ್ಯೋ ನಾರಾಯಣ ಹರಿ: ಎಂಬ ಉಕ್ತಿ ಇವರ ಪಾಲಿಗೆ ಅನ್ವರ್ಥ ಎನಿಸಿದೆ. ರೋಗ ನಿರೋಧಕ ಲಸಿಕೆಗಳಿರಲಿ, ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಮುನ್ನೆಚ್ಚರಿಕೆ ಕ್ರಮದಂತೆ ತನ್ನ ತಂಡದೊಂದಿಗೆ ಗ್ರಾಮಾಂತರ ಪ್ರದೇಶಗಳಿಗೆ ಹಾಗೂ ಆಸ್ಪತ್ರೆ ಸೌಲಭ್ಯ ಸಮೀಪ ಇಲ್ಲದ ಕಡೆ ಸಂಚಾರಿ ಆಸ್ಪತ್ರೆ ಸೌಲಭ್ಯ ಒದಗಿಸಿ ಸದಾ ಸೇವೆಗೆ ಲಭ್ಯರಿರುತ್ತಾರೆ. ಇವರ ಈ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಅನೇಕ ಕಡೆ ಇವರಿಗೆ ಗೌರವ ಸನ್ಮಾನಗಳು ಲಭಿಸಿವೆ. ಇವರ ಸಂಚಾರಿ ಆಸ್ಪತ್ರೆ ಸೌಲಭ್ಯದ ಸೇವೆಯನ್ನು ಹೊಂದುವ ಜನ ಇವರನ್ನು ಆಪತ್ಬಾಂಧವ ವೈದ್ಯನೆಂದೇ ಸಂಬೋಧಿಸುತ್ತಾರೆ.
ಮಕ್ಕಳ ಕ್ಷೇಮಾಭ್ಯುದಯ ಕ್ಷೇತ್ರದಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಶಿಶುರೋಗ ತಜ್ಞ, ಸಮಾಜಪರ ಕಾಳಜಿಯ ಆದರ್ಶ ವೈದ್ಯ ಡಾ.ಸುಧಾಕರ ಶೆಟ್ಟಿಯವರಿಗೆ ಜನವರಿ 17, 2024 ರಂದು ಗುರುದ್ವಾರ ಗುರುನಾನಕ ದರ್ಬಾರ್ ಪುಣೆ ಇಲ್ಲಿ ಪೂನಾ ಕ್ಯಾಂಪ್ ಸಿಖ್ ಅಸೋಸಿಯೇಶನ್ ವತಿಯಿಂದ ಛಾರ್ ಸಾಹಿಬ್ ಝಾದೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸೇವಾಕಾರ್ಯಗಳಿಗೆ ಮೆಚ್ಚುಗೆ ಸಲ್ಲಿಸಿ ಶುಭ ಕೋರಬೇಕಾಗಿ ವಿನಂತಿಸಲಾಗಿದೆ. ಇವರ ಹುಟ್ಟೂರಲ್ಲಿ ಪ್ರಾರಂಭಗೊಂಡ ಕಟೀಲ್ ಬೇಬಿ ಫ್ರೆಂಡ್ ಮಕ್ಕಳ ಸಂಚಾರಿ ಕ್ಲಿನಿಕ್ ಸೇವೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿ ಸಾರ್ವಜನಿಕರಿಂದ ಇವರ ಕುರಿತ ಆದರ ಗೌರವ ಹೆಚ್ಚಿದೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯಬೇಕು. ಇಂಥಹ ಕೆಲಸಗಳಿಗೆ ಸಮಾಜದ ಸಾರ್ವಜನಿಕರಿಂದ ಉತ್ತೇಜನ ದೊರೆತು ಇನ್ನಷ್ಟು ವೈದ್ಯರು ಇವರಿಂದ ಪ್ರೇರಣೆ ಪಡೆಯಬೇಕೆಂಬುವುದು ಎಲ್ಲರ ಆಶಯವಾಗಿದೆ. ಸಂಚಾರಿ ಕ್ಲಿನಿಕ್ ಸೌಲಭ್ಯಗಳನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತಾರಗೊಳಿಸುವ ಉದ್ದೇಶ ಹೊಂದಿದ ಇವರ ಸಂಕಲ್ಪ ಸಿದ್ಧಿಯಾಗಿ ಹೆಚ್ಚೆಚ್ಚು ಪ್ರದೇಶದ ಮಕ್ಕಳು ಇದರ ಸೌಲಭ್ಯ ಪಡೆಯಲಿ ಎಂದು ನಾವೆಲ್ಲ ಹಾರೈಸೋಣ. ಡಾ. ಸುಧಾಕರ್ ಶೆಟ್ಟಿ ಮತ್ತವರ ತಂಡಕ್ಕೆ ರಕ್ಷಾ ಮಂತ್ರಿ ಪ್ರಶಸ್ತಿಯೂ ದೊರಕಿದೆ. ಮುಂದಿನ ತಿಂಗಳು ಫೆಬ್ರವರಿ 25 ರಂದು ಮಂಗಳೂರಿನ ಪುರಭವನದಲ್ಲಿ ಸಮಾಜರತ್ನ ರಾಷ್ಟ್ರೀಯ ಪುರಸ್ಕಾರವನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಸಮಕ್ಷಮದಲ್ಲಿ ಪಡೆಯಲಿದ್ದಾರೆ. 2022 ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಇವರಿಗೆ ಇನ್ನಷ್ಟು ಗೌರವ ಪ್ರಶಸ್ತಿಗಳು ಲಭ್ಯವಾಗಲೆಂದು ಪ್ರಾರ್ಥಿಸೋಣ.