ದಸರಾ ಹತ್ತಿರಬರುತ್ತಿದೆ. ಮಂಗಳೂರು ಮಧುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ನವರಾತ್ರಿ ನವಶಕ್ತಿಯನ್ನು ವಿಶೇಷ ರೀತಿಯಲ್ಲಿ ಆರಾಧಿಸಿ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವ ಪರ್ವಕಾಲ. ಹಿಂದೆ ದಸರಾ ಎಂದರೆ ಮೈಸೂರು ಎನ್ನುವ ಕಾಲವಿತ್ತು. ಆದರೆ ಇಂದು ಜನಾರ್ದನ ಪೂಜಾರಿಯವರ ಕನಸಿನ ಮಂಗಳೂರು ದಸರಾ ವಿಶ್ವದ ಗಮನ ಸೆಳೆದಿರುವುದು ಸುಳ್ಳಲ್ಲ. ಮಂಗಳೂರಿನ ಅಧಿದೇವತೆ ಮಂಗಳಾದೇವಿ ಸನ್ನಿಧಿಯಲ್ಲಿ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಮುಖವಾಗಿ ಅದ್ದೂರಿ ದಸರಾವನ್ನು ನಾವು ಕಾಣಬಹುದು. ಅಲ್ಲದೆ ಮಂಗಳೂರಿನಾದ್ಯಂತ ಶಾರದಾ ಉತ್ಸವದ ಮೆರವಣಿಗೆ ಸೇರಿದಂತೆ ದಸರಾ ಶೋಭಯಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ.
ಶೋಭಾಯಾತ್ರೆಯಲ್ಲಿ ನಮ್ಮ ಸಂಸ್ಕೃತಿ, ಧರ್ಮ, ಪುರಾಣದ ಕಥೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಜೊತೆಗೆ ಹಲವು ಕಲಾ ಪ್ರಕಾರಗಳನ್ನು ನಾವು ಕಾಣಬಹುದು. ಇತ್ತೀಚೆಗೆ ಕುದ್ರೋಳಿ ದಸರಾ ಸಮಿತಿಯ ನಿರ್ಧಾರದ ಒಂದು ವರದಿಯನ್ನು ಓದಿದೆ, ಅದರಲ್ಲಿ ಶೋಭಾಯಾತ್ರೆಯಲ್ಲಿ ದೈವದ ಸ್ತಬ್ಧ ಚಿತ್ರಗಳಿಗೆ ಅವಕಾಶವಿಲ್ಲ. ಅಲ್ಲದೆ ಯಾವುದೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದಿತ್ತು. ಈ ನಿರ್ಧಾರ ಸ್ವಾಗತಾರ್ಹ.
ಆದರೆ ಇಂತಹ ಧಾರ್ಮಿಕ ಶೋಭಯಾತ್ರೆಯಲ್ಲಿ ಡಿ.ಜೆ. ಅವಶ್ಯಕತೆ ಇದೆಯೇ ? ಅನ್ನುವುದು ಒಂದು ಪ್ರಶ್ನೆ. ದೇವರ ಶೋಭಾಯಾತ್ರೆಯ ಮುಂದೆ ಮೈಮೇಲೆ ಪ್ರಜ್ಞೆಯಿಲ್ಲದೆ ಹುಚ್ಚೆದ್ದು ಕುಣಿಯುವುದು ನಮ್ಮ ಸಂಸ್ಕೃತಿಯ ಭಾಗವೇ? ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಬೇಕಾದ ನಾವು, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಸೋಗಿನಲ್ಲಿ ಮೈಮರೆಯುವುದು ಯಾಕಾಗಿ? ಹಾಗೆಂದು ನೃತ್ಯವೂ ನಮ್ಮ ಸಂಸ್ಕೃತಿಯ ಒಂದು ಭಾಗ. ಶೋಭಾಯಾತ್ರೆಯಲ್ಲಿ ಭಜನಾ ಕುಣಿತ, ಜಾನಪದೀಯ ನೃತ್ಯಗಳನ್ನು ಅಳವಡಿಸಿಕೊಳ್ಳಬಹುದು ಮಾತ್ರವಲ್ಲ ಇಸ್ಕಾನ್ ನಂತಹ ಸಂಸ್ಥೆಗಳು ಭಗವನ್ನಾಮ ಸಂಕೀರ್ತನೆಯೊಂದಿಗೆ ನೃತ್ಯದ ಮೂಲಕ ಮೆರವಣಿಗೆಯಲ್ಲಿ ಸಾಗುವುದನ್ನೂ ನಾವು ನೋಡಿದ್ದೇವೆ ಇದ್ದಕ್ಕೆ ನಮ್ಮ ಆಕ್ಷೇಪವೂ ಇಲ್ಲ.
ನಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಡಿ. ಜೆ. ಮೂಲಕ ರಸ್ತೆಯಲ್ಲಿ ಕುಣಿದು ಪ್ರದರ್ಶಿಸುವ ಬದಲಾಗಿ ಮೈಸೂರು ಯುವ ದಸರಾ ಕಾರ್ಯಕ್ರಮದಂತೆ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯನ್ನು ಯಾಕೆ ನಾವು ನಿರ್ಮಾಣ ಮಾಡಬಾರದು? ಮೈಸೂರು ಯುವ ದಸರಾ ಇಂದು ದೇಶ ವಿದೇಶಗಳ ಪ್ರತಿಭಾವಂತ ಕಲಾವಿದರ ಪ್ರದರ್ಶನಕ್ಕೆ ದೊಡ್ಡ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮಂಗಳೂರು ದಸರಾದಲ್ಲೂ ಯಾಕೆ ಮಾಡಬಾರದು? ಇದು ಮತ್ತಷ್ಟು ಜನರನ್ನು ಅಂತೆಯೇ ಪ್ರವಾಸಿಗರನ್ನು ಮಂಗಳೂರು ದಸರಾಕ್ಕೆ ಆಕರ್ಷಿಸಲು ಸಹಕರಿಸುವುದರಲ್ಲಿ ಎರಡು ಮಾತಿಲ್ಲ. ದೈವಿಕವಾಗಿ ನಡೆಯಬೇಕಾದ ಕಾರ್ಯಕ್ರಮಗಳಲ್ಲಿ ಈ ಡಿ.ಜೆ. ಸಂಸ್ಕೃತಿಯ ಆಚರಣೆಗಳು ಸರಿಯಲ್ಲ ಅದಕ್ಕಾಗಿ ಬೇರೆ ವೇದಿಕೆಗಳನ್ನು ಕಲ್ಪಿಸುವುದು ಸೂಕ್ತ. ಶೋಭಾಯಾತ್ರೆಯು ನಮ್ಮ ಸಂಸ್ಕೃತಿ ಸಂಪ್ರದಾಯದ ಕೈಗನ್ನಡಿಯಾಗಲಿ ಎನ್ನುವುದು ನಮ್ಮ ಆಶಯ.
ದಿಲ್ ರಾಜ್ ಆಳ್ವ