ಯುವಜನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾಗೂ ಸಾಧಿಸಲು ಲಿಯೋ ಕ್ಲಬ್ ಉತ್ತಮ ವೇದಿಕೆ ಎಂದು ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕುಲಾಯಿ ಬಿಡಿಎಸ್ ಪ.ಪೂ ಕಾಲೇಜಿನಲ್ಲಿ ನಡೆದ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಪ್ರಾಯೋಜಕತ್ವದ ನೂತನ ಲಿಯೋ ಕ್ಲಬ್ ಮಂಗಳೂರು ಕುಡ್ಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಿಯೋ ಸದಸ್ಯರಿಗೆ ಪದಪ್ರದಾನ ಮಾಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ, ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಲಿಯೋ ಸಂಸ್ಥೆಯಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಐಎಎಸ್ ಐಪಿಎಸ್ ನಂತಹ ಉನ್ನತ ಮಟ್ಟದ ಹುದ್ದೆಗೆ ತಯಾರಿಗೊಳ್ಳಬೇಕು ಎಂದರು. ಲಿಯೋ ಕ್ಲಬ್ ಅಧ್ಯಕ್ಷರಾಗಿ ಚಂದಪ್ಪ, ಕಾರ್ಯದರ್ಶಿಯಾಗಿ ಪ್ರತಿಕ್, ಖಜಾಂಚಿಯಾಗಿ ನಿಖಿತ ಮತ್ತು ಸದಸ್ಯರಿಗೆ ಪದಪ್ರದಾನ ಮಾಡಲಾಯಿತು. ಲಿಯೋ ಕ್ಲಬ್ ಬ್ಯಾನರ್ ಹಾಗೂ ಲಿಯೋ ಅಂತಾರಾಷ್ಟ್ರೀಯ ಪ್ರಮಾಣ ಪತ್ರ ಬಿಡುಗಡೆಗೊಳಿಸಿ ಲಿಯೋ ಕ್ಲಬ್ ಗೆ ಹಸ್ತಾಂತರಿಸಲಾಯಿತು.
ಪ್ರಾಂತ್ಯಾಧ್ಯಕ್ಷ ಚಂದ್ರಹಾಸ ರೈ, ಭಾರತಿ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಆದರ್ಶ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಶುಭ ಹಾರೈಸಿದರು. ಅಂತರಾಷ್ಟ್ರೀಯ ಸಂಸ್ಥೆ ಲಯನ್ಸ್ ನ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಚಟುವಟಿಕೆ ಅಂಗವಾಗಿ ಐದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕ್ಲಬ್ ನ ಮಾಜಿ ಅಧ್ಯಕ್ಷ ಹರೀಶ್ ಆಳ್ವ, ಶ್ರೀಧರ್ ರಾಜ್ ಶೆಟ್ಟಿ ಮತ್ತು ಸದಸ್ಯ ಮಹಾಬಲ ಪೂಜಾರಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಅಧ್ಯಕ್ಷ ಸುರೇಶ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮೋದ್ ರೈ ಧ್ವಜ ವಂದನೆಗೈದರು. ರಾಕೇಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ತೃಷಾ ಪ್ರಾರ್ಥಿಸಿ ಲಿಯೋ ಸಲಹೆಗಾರ ಸುನಿಲ್ ಕುಮಾರ್ ವಂದಿಸಿದರು.