ಮೂಡುಬಿದಿರೆ: ಸ್ನಾತಕೋತ್ತರ ಹಂತದಲ್ಲಿ ಪ್ರತಿ ವಿದ್ಯಾರ್ಥಿ ತಾನು ಆಯ್ಕೆ ಮಾಡಿಕೊಂಡಿರುವ ವಿಷಯದ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳುವ ನೆಲೆಯಲ್ಲಿ ತನ್ನನ್ನು ತಯಾರಿ ಮಾಡಿಕೊಳ್ಳುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ನುಡಿದರು.
ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುರುವಾರ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಸಕ್ತಿಯ ಕ್ಷೇತ್ರದ ಉದ್ದೇಶಗಳ ಅರಿವು ಅತ್ಯವಶ್ಯಕ. ಯಾವುದೇ ಕ್ಷೇತ್ರಕ್ಕೆ ಹೆಜ್ಜೆಯನ್ನಿಡುವ ಮೊದಲು ಆ ಕ್ಷೇತ್ರಕ್ಕೆ ಸಂಬಂಧಿಸಿದ ಜವಾಬ್ದಾರಿ ಮತ್ತು ಪ್ರಾಯೋಗಿಕ ಕೌಶಲದ ತಿಳುವಳಿಕೆ ಅಪೇಕ್ಷಿಣೀಯ. ಪ್ರತಿಯೊಬ್ಬರು ತಮ್ಮ ಮನೋರಂಜನೆಯ ವ್ಯಾಖ್ಯಾನವನ್ನು ಮರುವ್ಯಾಖ್ಯಾನಿಸಬೇಕು. ಈ ಹಂತದಲ್ಲಿ ಓದು, ಕೌಶಲಗಳ ವೃದ್ಧಿ, ಕ್ರೀಯಾಶೀಲ ಚಟುವಟಿಕೆಗಳು ಬದುಕಿನ ಆನಂದದ ಮೂಲವಾಗಬೇಕು. ಸ್ನಾತಕೋತ್ತರ ಪದವಿ ಆಯ್ಕೆ ಮಾಡಿಕೊಂಡ ನಂತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವುದು ಅತ್ಯಗತ್ಯ. ಭಾರತದಲ್ಲಿ 14 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆ ವರ್ಗದಲ್ಲಿ ತಾವು ಒಳಗೊಂಡಿರುವುದಕ್ಕೆ ಹೆಮ್ಮೆ ಪಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿದ್ಯಾರ್ಥಿಗಳ ಆದ್ಯತೆಯ ಪಟ್ಟಿಯಲ್ಲಿ ಓದಿನೆಡೆಗೆಗಿನ ಆಸಕ್ತಿ ಮೇಲ್ಪಂಕ್ತಿಯಲ್ಲಿರಬೇಕು. ಯಾರು ಪ್ರತಿ ಕ್ಷಣ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೋ, ಅವರು ಬದುಕಿನಲ್ಲಿ ಬೇಗ ಏಳಿಗೆಯನ್ನು ಕಾಣುತ್ತಾರೆ. ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳು ದೂರವ ಮನೋಪ್ರವೃತ್ತಿಯಿಂದ ಸಲಹೆಗಳನ್ನು ನೀಡುವವರಾಗಬೇಕು. ಪ್ರತಿ ನಿಮಿಷವೂ ಜವಾಬ್ದಾರಿ ನಿಮ್ಮನ್ನು ಎಚ್ಚರಿಸುತ್ತಿರಬೇಕು. ಸಿಕ್ಕಂತಹ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವೆಡೆಗೆ ಶ್ರಮಿಸಬೇಕು ಎಂದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಮಿತಿ ಹಾಗೂ ಕೋಶಗಳ ಕುರಿತು ಮಾಹಿತಿ ನೀಡಲಾಯಿತು. ಮಹಿಳಾ ಅಭಿವೃದ್ಧಿ ಕೋಶ, ರ್ಯಾಗಿಂಗ್ ತಡೆಗಟ್ಟುವ ಕೋಶ, ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕೋಶ, ವಿದ್ಯಾರ್ಥಿವೇತನ ಕೋಶ, ಮಾನವ ಹಕ್ಕುಗಳ ಕೋಶ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕೋಶ, ಕಾರ್ಯನಿಯೋಜನ ಮತ್ತು ತರಬೇತಿ ವಿಭಾಗ, ವಿದ್ಯಾರ್ಥಿ ನಿಲಯ ಮತ್ತು ಶಿಸ್ತು ಸಮಿತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕುರಿತು ವಿವಿಧ ಸಂಯೋಜಕರಿಂದ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿ ಅವಿನಾಶ್ ಕಟೀಲ್ ನಿರೂಪಿಸಿ, ರಫಿಯಾ ಸ್ವಾಗತಿಸಿ, ಸಾನಿಧ್ಯ ಶೆಟ್ಟಿ ಪ್ರಾರ್ಥಿಸಿ, ಮೋಕ್ಷ ಎಂ.ಪಿ ವಂದಿಸಿದರು.