ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ಹೋಟೆಲ್ ರೆಡ್ ಜಿಂಜರ್ 2 ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಶೈಲೇಶ್ ಶೆಟ್ಟಿಯವರು ಮಾತನಾಡುತ್ತಾ ಜಗತ್ತಿನ ಯಾವ ಮೂಲೆಯಲ್ಲಿ ಸಮಾಜ ಬಾಂಧವರು ಇದ್ದರೂ ಕೂಡ ಸಮಾಜದ ಅಭಿಮಾನ ಒಗ್ಗಟ್ಟು ಗುರುತಿಸಿಕೊಂಡು ಬಂದವರು. ಭಾರತವನ್ನು ಬಿಟ್ಟು ಈ ದೇಶಕ್ಕೆ ಬಂದರೂ ಇಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಆಚರಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಗ್ಗಟ್ಟಿನಲ್ಲಿ ನಮ್ಮ ಸಮಾಜವನ್ನು ಬೆಳೆಸುವಲ್ಲಿ ಎಲ್ಲರೂ ಒಂದಾಗಿದ್ದೇವೆ. ನಮ್ಮೆಲ್ಲರ ಒಗ್ಗಟ್ಟು ಸಮಾಜದ ಮೇಲಿನ ಅಭಿಮಾನ ನಿರಂತರ ಇರಬೇಕು ಎಂದು ನುಡಿದರು.
ಸಂಘದ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಕುಂಜತ್ತೂರು ಇವರಿಂದ ಹಾಗೂ ಸಂಘದ ಸದಸ್ಯರಿಂದ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಕ್ಷಯ ರಾಜೇಶ್ ಶೆಟ್ಟಿ ಇವರ ಸನ್ಮಾನ ಪತ್ರ ವಾಚನದೊಂದಿಗೆ ನಟ ಹಾಗೂ ರಂಗಭೂಮಿ ಕಲಾವಿದರಾದ ರಾಘವೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ತುಳು ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮೂಡಾಯಿ ಆಫ್ರಿಕಾದ ಪೆರ್ಮೆದ ಬಂಟೆರ್ ಆಲ್ಬಮ್ ಹಾಡು ಬಿಡುಗಡೆಗೊಂಡಿತು.
ಶಾಂತಿ ಯಶವಂತ್ ಶೆಟ್ಟಿ, ಶುಭ ಶೈಲೇಶ್ ಶೆಟ್ಟಿ ಪ್ರಾರ್ಥನೆಯನ್ನು ಹಾಡಿದರು. ಸಂಘದ ಎಲ್ಲಾ ಸದಸ್ಯರಿಗೆ ಪ್ರಥಮ ವರ್ಷದ ಸವಿನೆನಪಿಗಾಗಿ ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸಪ್ನ ಅಶೋಕ್ ಭಂಡಾರಿ, ಗಾಯತ್ರಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಭಿಜಿತ್ ಸೂಡ ವಂದಿಸಿದರು.