ಪ್ರವಾಸ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮತ್ತೊಂದು ಹೊಸ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂಥದ್ದು. ಪ್ರವಾಸದಿಂದ ಪ್ರತ್ಯಕ್ಷ ಜ್ಞಾನ ದೊರೆಯುವುದು. ನಮ್ಮಲ್ಲಿದ್ದ ಅಹಂಕಾರ ಹೋಗಲಾಡಿಸಲು, ನಮ್ಮ ಮನಸ್ಸು ಅರಳುವಂತಾಗಲು ವರ್ಷಕ್ಕೊಂದು ಸಲವಾದರೂ ಪ್ರವಾಸ ಕೈಗೊಳ್ಳಬೇಕು. ಪ್ರವಾಸದಿಂದ ಸಿಗುವ ಉಲ್ಲಾಸ ಮತ್ತ್ಯಾವುದರಲ್ಲೂ ದೊರೆಯದು. ನಮ್ಮ ಪರಿಸರದಲ್ಲೂ ಉತ್ತಮ ಪ್ರವಾಸ ತಾಣಗಳು ಇರಬಹುದು. ಹಾಗಾಗಿ ಸಮಯದ ಅನುಕೂಲ ಸಿಕ್ಕಾಗ ಖಂಡಿತಾ ನಿಮಗೆ ಇಷ್ಟವಾದ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಬೇಕು. ಆ ಮೂಲಕ ನಮ್ಮ ಬದುಕಿನ ಜ್ಞಾನ, ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂದು ಕರ್ನಾಟಕ ಮಲ್ಲ ದಿನ ಪತ್ರಿಕೆಯ ಉಪಸಂಪಾದಕರು, ಖ್ಯಾತ ಸಾಹಿತಿ, ಕವಿ ಶ್ರೀನಿವಾಸ ಜೋಕಟ್ಟೆ ಅವರು ಸೃಜನಾ ಬಳಗದ ಲೇಖಕಿಯರ ‘ಪ್ರವಾಸಿಗರ ಅಂತರಂಗ’ ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹತ್ತನೇ ಕೃತಿ ‘ಪ್ರವಾಸಿಗರ ಅಂತರಂಗ’ ಲೋಕಾರ್ಪಣೆ ಕಾರ್ಯಕ್ರಮವು ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹದಲ್ಲಿ ಅಕ್ಟೋಬರ್ 14 ರ ಶನಿವಾರದಂದು ಸಂಜೆ 4.30 ಕ್ಕೆ ಜರಗಿದ ಸಂಧರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ವಹಿಸಿಕೊಂಡಿದ್ದರು. ಅವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಒಂಭತ್ತು ಕೃತಿಗಳಿಂದ ಅಲಂಕಾರಗೊಂಡ ನಮ್ಮ ಸೃಜನಾಳಿಗೆ ಹತ್ತನೇ ಕೃತಿಯಿಂದ ಇನ್ನಷ್ಟು ಅಲಂಕಾರವಾಯಿತು. ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರಿರುವ ಸೃಜನಾ ಬಳಗ ಕಳೆದ 20 ವರ್ಷಗಳಿಂದ ಎಲ್ಲಾ ಸಹೃದಯರ ಸಹಕಾರದಿಂದ ನಡೆ ಮುಂದೆ ನಡೆ ಮುಂದೆ ಎಂಬಂತೆ ನಿರಂತರವಾಗಿ ನಡೆದು, ದಾಪುಗಾಲು ಹಾಕುತ್ತ ಒಳನಾಡು ಹೊರನಾಡಿನಲ್ಲಿ ಜನ ಮೆಚ್ಚುಗೆ ಪಡೆದು ಬೆಳೆಯುತ್ತಿದೆ. ಪ್ರವಾಸಿಗರ ಅಂತರಂಗ ಕೃತಿ ಇಂದು ನಮ್ಮೆಲ್ಲರ ಕೈ ಸೇರಲು ಡಾ. ಸುನೀತಾ ಶೆಟ್ಟಿ ಮತ್ತು ಸಂಪಾದಕ ಮಂಡಳಿ ವಿಶೇಷವಾಗಿ ಶ್ರಮಿಸಿದೆ. ಅನೇಕ ಕಡೆಗಳಿಗೆ ಪ್ರವಾಸ ಮಾಡಿದ ಅನುಭವಿ ಪರ್ತಕರ್ತ ಶ್ರೀನಿವಾಸ ಜೊಕಟ್ಟೆಯವರು ಕೃತಿ ಬಿಡುಗಡೆಗೊಳಿಸಿರುವುದು ನಮಗೆಲ್ಲಾ ಬಹಳ ಸಂತಸವಾಗಿದೆ. ಸಾಹಿತಿ , ರಂಗನಟ, ಕತೆಗಾರ ಗೋಪಾಲ ತ್ರಾಸಿಯವರು ಸಂತಸದಿಂದ ಕೃತಿ ಪರಿಚಯಿಸಲು ಒಪ್ಪಿಕೊಂಡು ಹೋಳಿಗೆಯಿಂದ ಹೂರಣ ತೆಗೆದಂತೆ ಕೃತಿಯ ಒಳ ಸಾರವನ್ನು ತಿಳಿಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸೃಜನಾ ಬಳಗ ಮುಂದೆಯೂ ಗಟ್ಟಿ ಹೆಜ್ಜೆ ಇಡಲು ನಿಮ್ಮೆಲ್ಲರ ನಿರಂತರ ಪ್ರೋತ್ಸಾಹ ದೊರೆಯಲಿ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ನುಡಿದರು.
ಕಥೆಗಾರ, ಸಾಹಿತಿ ಹಾಗೂ ರಂಗಕರ್ಮಿ ಶ್ರೀ ಗೋಪಾಲ್ ತ್ರಾಸಿ ಅವರು ಸೃಜನಾ ಬಳಗದ “ಪ್ರವಾಸಿಗರ ಅಂತರಂಗ” ಪ್ರವಾಸ ಕಥನದ ಕೃತಿ ಪರಿಚಯ ಮಾಡುತ್ತಾ ಈ ಹಿಂದೆ ಸೃಜನಾ ಒಂದು ವರ್ಷದ ಕೂಸು ಇರುವಾಗ ಪ್ರಕಟವಾದ ಕಥಾ ಸಂಕಲನ ಒಂದನ್ನು ಯಶವಂತ ಚಿತ್ತಾಲರು ಬಿಡುಗಡೆಗೊಳಿಸಿದ್ದರು. ಅಂದು ನಾನು ಆ ಕೃತಿ ಪರಿಚಯಿಸಿದ್ದೆ. ಇಂದು 21 ರ ನವ ತರುಣಿಯ ಪ್ರವಾಸ ಕಥನವನ್ನು ಪರಿಚಯಿಸುವ ಅವಕಾಶ ಮತ್ತೆ ಒದಗಿ ಬಂದಿದೆ. ಪ್ರವಾಸಿಗರ ಅಂತರಂಗ ಕೃತಿಯಲ್ಲಿ 46 ಪ್ರವಾಸಿಗರ ಪ್ರವಾಸ ಕಥನವಿದೆ. ಈ 46 ಜನರ ಉತ್ಸಾಹ, ಪ್ರೀತಿಗೆ ಅಭಿನಂದನೆಗಳು. ಸಂಪಾದಕ ಮಂಡಳಿಯ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ಕೃತಿ ಚೆನ್ನಾಗಿ ಮೂಡಿಬಂದಿದೆ. ಈ ಕೃತಿ ಸೃಜನಾಬಳಗದ ಕೀರ್ತಿ ಹೆಚ್ಚಿಸಲಿದೆ.
ಪ್ರವಾಸಕ್ಕೊಂದು ಪ್ರಯಾಣ ಆರಂಭವಾಗಬೇಕು. ಪ್ರವಾಸ ಕಥನ ಅಂದರೆ ನಾವು ನೋಡಿ ಬಂದ ಪ್ರವಾಸವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವುದು. ಕಥೆಯಲ್ಲಿ ಕಲ್ಪನೆ ಇದ್ದರೆ ಪ್ರವಾಸ ಕಥನದಲ್ಲಿ ಅನುಭವಿಸಿಕೊಂಡೆ ಬರೆಯಬೇಕಾಗುತ್ತದೆ. ಪ್ರವಾಸ ಕಥನದಲ್ಲಿ ಸಂತೋಷ ಸಂಭ್ರಮವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರವಾಸ ಕಾಲದಲ್ಲಿ ನಡೆದ ಅವಗಡ, ಮೋಜು, ಮಸ್ತಿಯನ್ನು ಹಂಚಿಕೊಳ್ಳಬೇಕು. ಆಗ ಓದುಗರಿಗೆ ನಿಮ್ಮ ಬರಹದಲ್ಲಿ ಹೆಚ್ಚಿನ ಕುತೂಹಲ ಮೂಡುತ್ತದೆ. ಈ ಕೃತಿಯಲ್ಲಿ ದೇಶ ವಿದೇಶದ ಪ್ರವಾಸವು, ಧಾರ್ಮಿಕ ಕ್ಷೇತ್ರ ದರ್ಶನವು ಇದೆ. ಕೆಲವರು ಅನುಭವದೊಂದಿಗೆ ಅನುಭವಿಸಿದ್ದನ್ನು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹಿರಿಯ ಕಿರಿಯರ ಪ್ರವಾಸಕಾಲದ ಚಿತ್ರಣ ಇಲ್ಲಿದೆ ಎಂದರು. ಪ್ರವಾಸಿಗರ ಅಂತರಂಗದಲ್ಲಿ ಸಂಪಾದಕೀಯ ನುಡಿ ಬರೆದಿರುವ ನಾಲ್ವರು ಸಂಪಾದಕರಲ್ಲಿ ಒಬ್ಬರಾದ ಲತಾ ಸಂತೋಷ್ ಶೆಟ್ಟಿ ಮುದ್ದುಮನೆಯವರು ಸೃಜನಾ ಬಳಗ ನಮ್ಮಲ್ಲಿ ಭರವಸೆ ಇರಿಸಿ ನೀಡಿದ ಸಂಪಾದಕೀಯದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಿದ್ದೇವೆ. ಈ ಕೃತಿ ಸೃಜನಾ ಲೇಖಕಿಯರ ಬಳಗಕ್ಕೆ ಮತ್ತೊಂದು ಮುಕುಟವಿದ್ದಂತೆ ಎನ್ನಬಹುದು. ಕೃತಿ ಹೊರ ಬರುವಲ್ಲಿ ಶ್ರಮಿಸಿದ ಸಂಪಾದಕ ಮಂಡಳಿ ಹಾಗೂ ಕಾಲ ಕಾಲಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತಾ ಬಂದ ಡಾ. ಸುನೀತ ಎಂ ಶೆಟ್ಟಿ ಮತ್ತು ಸೃಜನಾ ಪದಾಧಿಕಾರಿಗಳಿಗೆ, ಲೇಖಕಿಯರಿಗೆ ಮನದಾಳದ ವಂದನೆಗಳನ್ನು ಸಲ್ಲಿಸಿದರು.
ಅಂದು ಕೃತಿ ಬಿಡುಗಡೆಯ ಕಾರ್ಯಕ್ರಮ ಸುಶೀಲ ದೇವಾಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃತಿ ಬಿಡುಗಡೆಗೊಳಿಸಿದ ಶ್ರೀನಿವಾಸ ಜೋಕಟ್ಟೆಯವರ ಪರಿಚಯವನ್ನು ಡಾ. ದಾಕ್ಷಾಯಣಿ ಎಡಹಳ್ಳಿಯವರು,
ಕೃತಿ ಪರಿಚಯಿಸಿದ ಗೋಪಾಲ ತ್ರಾಸಿಯವರ ಪರಿಚಯವನ್ನು ಕುಸುಮ ಚಂದ್ರ ಪೂಜಾರಿ ಓದಿದರು. ಹೊಸ ಕವಯತ್ರಿಯರು ಸ್ವರಚಿತ ಕವನಗಳನ್ನು ಓದಿದರು. ಸರೋಜ ಅಮಾತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಧನ್ಯವಾದಗಳನ್ನು ಅರ್ಪಿಸಿದರು.