ದಟ್ಟ ಹಸಿರಿನ ಗಿರಿ ಕಂದರಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗೊಳಿಸುವ ಪ್ರಾಕೃತಿಕ ನೈಸರ್ಗಿಕ ತಾಣ ಕರ್ನಾಟಕದ ಒಂದು ಸುಂದರ ಜಿಲ್ಲೆ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು, ವನ್ಯರಾಶಿ ಕಾಫಿ ತೋಟದ ಕಂಪು, ಕಿತ್ತಳೆ ಏಲಕ್ಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ ಧುಮುಕಿ ಹರಿವ ಜಲಪಾತಗಳು, ಝಳು ಝಳು ಹರಿವ ನದಿ ತೊರೆಗಳು ಹಾಗೂ ಪಚ್ಚೆ ಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಗಳಲ್ಲಿಯೂ ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯದ ಅಚ್ಚರಿಯ ತಾಣವಿದು. ಹಸಿರುಡಿಗೆ ಪಸೆದುಟ್ಟ ಕೊಡಗಿನ ಚೆಲುವಿನ ನಡುವೆ ಹರಿವ ಕನ್ನಡ ನಾಡಿನ ಜೀವ ನದಿಯೇ ಕಾವೇರಿ.
ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೊಡವರ ಕುಲದೇವತೆ, ಕನ್ನಡ ಕುಲನಾರಿ ದಕ್ಷಿಣ ಗಂಗೆ, ಕನ್ನಡ ನಾಡಿನ ಜೀವನದಿ ಕಾವೇರಿ. ಈ ಹೆಸರು ಕೇಳುತ್ತಲೇ ಕೊಡವರು ಪುಳಕಗೊಳ್ಳುತ್ತಾರೆ. ಕಾವೇರಿ ಕೊಡವರ ಆರಾಧ್ಯ ದೇವತೆ. ಪ್ರತಿ ವರ್ಷ ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ತೀರ್ಥೋದ್ಬವದ ಪುಣ್ಯಕಾಲದಲ್ಲಿ ತೀರ್ಥ ರೂಪಿಣಿಯಾಗಿ ಭಕ್ತ ಜನರನ್ನು ಪಾವನಗೊಳಿಸುವ ಕಾವೇರಿ ಮಾತೆ ಸೂರ್ಯನು ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶಿಸಿಸುವ ಪುಣ್ಯ ಸಮಯದಲ್ಲಿ ತಲಕಾವೇರಿಯಲ್ಲಿರುವ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ರೂಪವಾಗಿ ಬರುತ್ತಾಳೆ. ಈ ಪುಣ್ಯ ದಿನದಂದು ಗಂಗೆ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂದು ನದಿಗಳು ಅಂತರ್ವಾಹಿನಿಗಳಾಗಿ ಬಂದು ಕಾವೇರಿಯಲ್ಲಿ ಸೇರುತ್ತಾರೆಂಬ ಪ್ರತೀತಿ ಇದೆ. ಈ ದಿನ ಕೊಡಗಿನ ಮನೆ ಮನೆಗಳಲ್ಲಿ ಕಾವೇರಿ ಸಂಕ್ರಾಂತಿ ಅಥವಾ ತುಲಾ ಸಂಕ್ರಾತಿ ಎಂಬ ಪವಿತ್ರ ಹಬ್ಬವು ಹೌದು. ಇದು ಕೊಡವರ ಏಕೈಕ ಸಸ್ಯಹಾರಿ ಹಬ್ಬ.
ತೀರ್ಥೋದ್ಬವದ ದಿನ ಉಕ್ಕಿ ಬರುವ ನೀರನ್ನು ಕೊಡವರು ಪವಿತ್ರ ತೀರ್ಥದಂತೆ ಬಳಸಲು ಮುಗಿ ಬೀಳುತ್ತಾರೆ. ಕೊಡಗಿನ ಬಹುತೇಕ ಮನೆಯಲ್ಲಿ ಒಬ್ಬರಾದರೂ ತೀರ್ಥೋದ್ಬವ ಸಂದರ್ಭದಲ್ಲಿ ಪಾಲ್ಗೊಂಡು ತೀರ್ಥ ಸಂಗ್ರಹಿಸಿ ತಂದು ತಮ್ಮ ಪೂರ್ವಜರಿಗೆ ಎಡೆ ಇಟ್ಟು ನಂತರ ಮನೆಯವರೆಲ್ಲಾ ಸ್ವೀಕರಿಸುವುದು ಅಲ್ಲದೇ ಕಲ್ಯಾಣಿ ಕೊಳದಲ್ಲಿ ಸ್ನಾನ ಮಾಡಿ ಪಾವನರಾಗುತ್ತಾರೆ.
ದೇವಸ್ಥಾನದ ಸಮೀಪದಲ್ಲಿರುವ ಅಶ್ವಥಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಅಗಸ್ತ್ಯ ಮುನಿಗೆ ದರ್ಶನ ನೀಡಿದ ಸ್ಥಳ. ಅಗಸ್ತ್ಯರು ನೆಲೆಸಿದ ಪುಣ್ಯ ಭೂಮಿ ಎನ್ನಲಾಗುತ್ತದೆ. ಬ್ರಹ್ಮಗಿರಿ ಬೆಟ್ಟದ ಮಡಿಲಲ್ಲಿ ತಲಕಾವೇರಿಯ ಸಣ್ಣ ಬ್ರಹ್ಮಕುಂಡಿಕೆಯಲ್ಲಿ ಹುಟ್ಟಿ ಝರಿಯಂತೆ ಮೇಲುಕ್ಕಿ ಕಲ್ಯಾಣಿಯ ಕೊಳ ಸೇರುತ್ತಾ ಅಲ್ಲಿಂದ ಯಾರ ಕಣ್ಣಿಗೂ ಕಾಣಿಸದೆ ಬೆಟ್ಟದಡಿಯ ಇಳಿಜಾರಿನಲ್ಲಿ ಸದ್ದಿಲ್ಲದೆ ಹರಿಯುತ್ತಾ ಮೇಲ್ಮುಖವಾಗಿ ಕಾಣಿಸಿಕೊಂಡವಳೇ ನಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ ಸುಜ್ಯೋತಿಯರೊಂದಿಗೆ ಸೇರಿಕೋಳ್ಳುತ್ತಾರೆ.
ತುಲಾ ಸಂಕ್ರಮಣದ ವಿಶಿಷ್ಟ ಆಚರಣೆ, ಆಧ್ಯಾತ್ಮಕ ಗುಣ, ಆನಂದದ ಜೊತೆಗೆ ಸಂಸ್ಕ್ರತಿಯ ವಿಶೇಷ ಸಾಮಗಮವು ಹೌದು. ಕೊಡವರ ಸಸ್ಯಹಾರಿ ಹಬ್ಬ ಕಾವೇರಿ ಸಂಕ್ರಮಣಕ್ಕೆ ತನ್ನದೇ ಆದ ಮೌಲ್ಯವಿದ್ದು ಪ್ರಕೃತಿಯನ್ನು ಪ್ರೀತಿಸುವ, ಪೂಜಿಸುವ ದ್ಯೋತಕವಾಗಿ ತುಲಾ ಸಂಕ್ರಮಣವನ್ನು ಆಚರಿಸುತ್ತಾರೆ. ಈ ದಿನ ಗದ್ದೆ, ಬಾವಿ, ಕೆರೆ, ದನದ ಕೊಟ್ಟಿಗೆ, ಗೊಬ್ಬರ ಗುಂಡಿಗಳಲ್ಲಿ ಬಿದಿರಿನ ಕೋಲಿಗೆ ಗುಂಬಳ ಬಳ್ಳಿ ಸುತ್ತಿ ಹೂವಿನಿಂದ ಅಲಂಕರಿಸಿ ನೆಡಲಾಗುತ್ತದೆ. ಈ ಶುಭ ದಿನದಂದು ಮನೆಯಲ್ಲಿ ಕಣಿಪೂಜೆ ಮಾಡುವುದು ಸಂಪ್ರದಾಯ. ಕಣಿ ಪೂಜಿಸುವುದು ಅಂದರೆ ಪ್ರಕೃತಿ ಹಾಗೂ ಭೂಮಿಯನ್ನು ಪೂಜಿಸುವುದು ಎಂದು ಅರ್ಥ. ತುಲಾ ಸಂಕ್ರಮಣದಂದು ಕೊಡಗಿನ ಮಹಿಳೆಯರು ಹೂಗಳನ್ನು ತಂದು ಕಂಚಿನ ಬಟ್ಟಲಲ್ಲಿ ಕೆಂಪು ರೇಷ್ಮೆ ವಸ್ತ್ರವನ್ನು ತ್ರಿಕೋನವಾಗಿ ಮಡಚಿ ಇಟ್ಟು, ಅದರಲ್ಲಿ ತೆಂಗಿನಕಾಯಿ ಮತ್ತು ಸೌತೆಕಾಯಿಯನ್ನು ಸುತ್ತಿ ಹೂ, ಎಲೆ, ಅಡಿಕೆ ಹಾಗೂ ಆಭರಣಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಇಂದು ಕಾವೇರಮ್ಮನ ಜನ್ಮದಿನ ಎಂಬ ಭಕ್ತಿಯಿಂದ ಪೂಜಾದಿಗಳನ್ನು ಸಲ್ಲಿಸುತ್ತಾರೆ.
ಪುಣ್ಯಕ್ಷೇತ್ರಗಳಾದ ನಾಗಮಂಡಲ ಮತ್ತು ತಲಕಾವೇರಿಯತ್ತ ನಾವು ದಂಪತಿಗಳು ಮಗನೊಂದಿಗೆ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ದರ್ಶನ ಮುಗಿಸಿ ಅಲ್ಲೇ ಸಮೀಪದ ಪುರಾತನ ಭಾಗಂಡೇಶ್ವರ ಸ್ವಾಮಿ ದರ್ಶನದ ನಂತರ ಕನ್ನಡ ನಾಡಿನ ಜೀವನದಿ ಕಾವೇರಿಯ ಜನ್ಮ ಸ್ಥಳ ತಲಕಾವೇರಿಗೆ ಬೆಳ್ಳಂಬೆಳಗ್ಗೆ ಹೊರಟೆವು. ದಟ್ಟ ಮಂಜಿನ ತೆರೆ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾಗಿ ಹಬ್ಬಿದ ಇಬ್ಬನಿಯ ಸುತ್ತಲೂ ಮಂಜಿನ ಮೋಡಗಳ ದಿಬ್ಬಣ. ಇಬ್ಬನಿಯ ತುಂತುರು ಹನಿಯಲ್ಲಿ ಒದ್ದೆಯಾಗುತ್ತಾ ಮೇಲೇರಿದರೆ ಆಕಾಶದೆತ್ತರದ ಬ್ರಹ್ಮ ಗಿರಿ ಬೆಟ್ಟದ ತಪ್ಪಲಲ್ಲಿನ ಸಣ್ಣ ಕುಂಡಿಕೆಯಲ್ಲಿ ಚಿಮ್ಮಿ ಕಲ್ಯಾಣಿ ಕೊಳ ಸೇರುವ ಕಾವೇರಿಗೆ ಕೈಮುಗಿದು ಪೂಜೆ ಸಲ್ಲಿಸಿ ಕಾವೇರಿ ನದಿಯ ಉಗಮ ಸ್ಥಾನವನ್ನು ನೋಡಿದ ಸಂತಸ ನಮ್ಮದಾಗಿತ್ತು. ತದನಂತರ 350 ಮೆಟ್ಟಿಲುಗಳನ್ನು ಹೊಂದಿದ ಎತ್ತರದ ಬ್ರಹ್ಮ ಗಿರಿ ಬೆಟ್ಟದ ಶಿಖರವನ್ನೇರಿ ಅಲ್ಲಿಂದ ಕಾಣುವ ಕೊಡಗಿನ ಅವರ್ಣನೀಯ ಅರಣ್ಯ, ನಿಸರ್ಗದ ರಮಣೀಯತೆಯನ್ನು ಮನದಣಿಯೇ ನೋಡಿ ಬಂದೆವು.
ಕಾವೇರಿ ನದಿಯ ಹರಿವಿನಲ್ಲಿ 3 ದ್ವೀಪಗಳು ರಂಗತ್ರಯಗಳೆಂದು ಪ್ರಸಿದ್ಧಿ ಪಡೆದ ಆದಿರಂಗ, ಮಧ್ಯರಂಗ,ಅಂತ್ಯರಂಗ ಎಂದು ಕರೆಯುತ್ತಾರೆ. ಪುರಾಣದ ಪ್ರಕಾರ ಕಾವೇರಿ ಕವೇರ ಮುನಿಯ ಸಾಕುಮಗಳು. ಕೊಡಗಿನ ತಲಕಾವೇರಿಯಲ್ಲಿ ಜನಿಸುವ ಕಾವೇರಿ ಸಪ್ತ ನದಿಗಳಲ್ಲಿ ಒಂದಾದ ಕಾವೇರಿ ದಕ್ಷಿಣ ಭಾರತದ ಗಂಗೆ ಎಂದೇ ಖ್ಯಾತಿ ಪಡೆದಿದೆ. ಆದರೆ ಗಂಗೆಯಂತೆ ಇತ್ತೀಚೆಗೆ ಕಾವೇರಿ ಒಡಲು ಕೂಡ ಕುಲಷಿತಗೊಂಡಿದೆ. ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ವಸ್ತುಗಳು ಚರಂಡಿಗಳ ಕೊಳಚೆ ನೀರು ಕಾವೇರಿ ನದಿಗೆ ಸೇರುತ್ತದೆ. ಮಾಲ್ಯಕಾರಕ ವಸ್ತುಗಳು ನದಿಗೆ ಸೇರದಂತೆ ಎಚ್ಚರವಹಿಸಬೇಕಾದ ಅಗತ್ಯವಿದೆ.
ಕಾವೇರಿ ನದಿ ಉಗಮವಾದ ಹಿನ್ನೆಲೆ:
ಬ್ರಹ್ಮನ ಮಗಳಾದ ಲೋಪಮುದ್ರೆಯು ಲೋಕೋದ್ದಾರಕ್ಕಾಗಿ ಭೂಲೋಕದಲ್ಲಿ ವಾಸಿಸುತ್ತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನ ಕುರಿತು ತಪಸ್ಸನ್ನು ಮಾಡಿ ವರ ಪಡೆದನು.ಅಗಸ್ತ್ಯ ಮಾಹಾಮುನಿಗಳು ಲೋಪಮುದ್ರೆಯನ್ನು ಮದುವೆ ಆಗುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾರೆ. ಲೋಪಮುದ್ರೆ ಮೊದಲು ನಿರಾಕರಿಸಿ ನಂತರ ಅಗಸ್ತ್ಯ ಮುನಿಯ ಬೇಟಿಯಾದಾಗ ತನ್ನನ್ನು ಎಂದೂ ಕಾಯಿಸಬಾರದು. ಕಾಯಿಸಿದರೆ ನಾನು ಸ್ವತಂತ್ರಳು. ಅದಕ್ಕೆ ಒಪ್ಪಿದರೆ ಮದುವೆ ಆಗುವುದಾಗಿ ಹೇಳುತ್ತಾಳೆ. ಮುನಿಗಳು ಒಪ್ಪಿ ಮದುವೆಯಾಗುತ್ತಾರೆ.
ಒಂದು ದಿನ ಅಗಸ್ತ್ಯ ಮುನಿಗಳು ತನ್ನ ಶಿಷ್ಯರಿಗೆ ಪಾಠ ಮಾಡುತ್ತಾ ತಲ್ಲೀನರಾಗಿ ಸಮಯ ಮರೆತು ಬಿಡುತ್ತಾರೆ. ಆಗ ಲೋಪ ಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲಕ್ಕೆ ಹಾರಿ ನದಿಯಾಗಿ ಹರಿಯುತ್ತಾಳೆ ಎಂಬ ಹಿನ್ನಲೆ ಇದೆ. ತುಲಾ ಸಂಕ್ರಮಣದಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಕೊಡವರ ಸಂಸ್ಕೃತಿ ಸಂಪ್ರದಾಯ ಎಷ್ಟು ವೈವಿಧ್ಯಮಯವೋ ಹಬ್ಬ ಹರಿದಿನಗಳ ಆಚರಣೆ ಅಷ್ಟೇ ವಿಶೇಷ. ಕೊಡವರ ಹೆಚ್ಚಿನ ಆಚರಣೆಗಳಲ್ಲಿ ಬ್ರಾಹ್ಮಣರಿಗೆ ಪ್ರಾಶಸ್ತ್ಯವಿರುವುದಿಲ್ಲ. ಆದರೆ ಈ ಹಬ್ಬದಲ್ಲಿ ಬ್ರಾಹ್ಮಣರು ಬೇಕು.
ಬ್ರಹ್ಮ ಕುಂಡಿಯಲ್ಲಿ ಹುಟ್ಟಿ ಕಲ್ಯಾಣಿಯಂತಹ ಕೊಳದಲ್ಲಿ ತುಂಬಿ, ಮೈಸೂರು ಮಂಡ್ಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಗೆ ಸೇರುವ ಕಾವೇರಿ ಜೀವ ಕೋಟಿಗಳ ದಾಹ ಇಂಗಿಸುವ ಕಾವೇರಿ ಮಾತೆಯನ್ನು ಆರಾಧಿಸುವ ಹಬ್ಬ ನಿಜವಾಗಿಯೂ ಅರ್ಥಗರ್ಭಿತ. ತೀರ್ಥೋದ್ಬವದ ಶುಭ ಗಳಿಗೆಯಲ್ಲಿ ಕೊಡಗಿನಾದ್ಯಂತ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ. ಕೊಡವ ಮಹಿಳೆಯರು ಹೊಸ ಸೀರೆ ಉಟ್ಟು ಕಾವೇರಿಯನ್ನು ಪೂಜಿಸುತ್ತಾರೆ. ಒಟ್ಟಿನಲ್ಲಿ ಜೀವನದಿಯ ಜಾತ್ರೆಯ ಸಂಭ್ರಮ. ತುಲಾ ಸಂಕ್ರಮಣ, ತಲಕಾವೇರಿಯಲ್ಲಿ ತೀರ್ಥೋದ್ಬವ ಎಲ್ಲರಲ್ಲಿಯೂ ಹೊಸ ಉಲ್ಲಾಸ ಮೂಡಿಸಲಿ.
ಲತಾ ಸಂತೋಷ್ ಶೆಟ್ಟಿ ಮುದ್ದಮನೆ