“ಪರಿಣಾಮಕಾರಿ ನಾಯಕತ್ವ ಗುಣ ಹಾಗೂ ಮುನ್ನುಗ್ಗುವ ಪ್ರವೃತ್ತಿಯಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಬಂಟ ಸಮಾಜದವರು ಮುಖ್ಯವಾಹಿನಿಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವುದು ಅತ್ಯಗತ್ಯ,” ಎಂದು ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ಭಾನುವಾರ ಪಡುಬಿದ್ರಿ ಬಂಟರ ಸಂಘ ಮತ್ತು ಬಂಟ್ಸ್ ವೇಲ್ಫರ್ ಟ್ರಸ್ಟ್ ವತಿಯಿಂದ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ನಡೆದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಶಕ್ತರಿಗೆ ನೆರವು ವಿತರಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಪಡುಬಿದ್ರಿ ಬಂಟರ ಸಂಘದ ಈ ಕಾರ್ಯಕ್ರಮ ಅನುಕರಣೀಯ. ಸಮಾಜದ ಸರ್ವರೂ ಇದನ್ನು ಪ್ರೋತ್ಸಾಹಿಸಬೇಕು. ಅ.28, 29ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು.” ಎಂದರು.
ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, “ಒಗ್ಗಟ್ಟಿನ ಮೂಲಕ ಸಂಘಟನೆ ಬಲಯುತಗೊಳಿಸುವ ಉದ್ದೇಶ ನಮ್ಮದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕರಿಸಲು ಸಂಘ ಬದ್ಧವಾಗಿದೆ” ಎಂದರು.
ಸಿರಿಮುಡಿ ದತ್ತಿನಿಧಿಯ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ ಮಾತನಾಡಿ, “ಸಾಮಾಜಿಕ ಕಳಕಳಿಯೊಂದಿಗೆ 2005 ರಲ್ಲಿ ಆರಂಭಿಸಿದ ಸಿರಿಮುಡಿ ದತ್ತಿನಿಧಿ ಇಂದು 1.25 ಕೋಟಿ ರೂ. ನೊಂದಿಗೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ದತ್ತಿನಿಧಿಯನ್ನು ಶಾಶ್ವತವಾಗಿರಿಸಲು ಹಲವು ಮಹತ್ವಪೂರ್ಣ ಕಾರ್ಯಸೂಚಿಗಳನ್ನು ಹಮ್ಮಿಕೊಳ್ಳಲಾಗಿದೆ.” ಎಂದರು.
ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಚಾಲನೆ ನೀಡಿದ ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, “ಸಮಾಜಕ್ಕೆ ಅತೀ ಅಗತ್ಯವಾದ ಕಾರ್ಯಕ್ರಮ ಸಂಘಟಿಸಿದಕ್ಕೆ ಅಭಿನಂದನೆ,” ಎಂದರು. ಮುಂಬಯಿ ವಿಕೆ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಿಎಂಡಿ ಕೆ. ಎಂ. ಶೆಟ್ಟಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು. ಮುಂಬಯಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಬಂಟಾಶ್ರಯ ಕುಟುಂಬ ಸೇವಾಶ್ರಮದ ನೀಲ ನಕಾಶೆ ಅನಾವರಣಗೊಳಿಸಿ ಶುಭ ಹಾರೈಸಿದರು. ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ಮಾಲೀಕರಾದ ರಾಜೇಂದ್ರ ಶೆಟ್ಟಿ ಸಮಾಜದ ವಿವಿಧ ಸಾಧಕರನ್ನು ಗೌರವಿಸಿದರು.
ಸನ್ಮಾನ : ಕಾಪು ಶಾಸಕರಾಗಿ ಆಯ್ಕೆಯಾದ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ 20 ಲಕ್ಷ ರೂ. ಗೂ ಅಧಿಕ ವಿದ್ಯಾರ್ಥಿ ವೇತನ, ಆಶಕ್ತರಿಗೆ ಸಹಾಯ ಧನ ವಿತರಿಸಲಾಯಿತು.
ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳು ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿನಿಧಿಯ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ವೇದಿಕೆಯಲ್ಲಿದ್ದರು.
ಬಂಟರ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು. ಜಯ ಶೆಟ್ಟಿ ಪದ್ರ ಮತ್ತು ಡಾ. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.