ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೆಶ್ ರೈ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವು ತುಂಬಾನೇ ಯಶಸ್ಸು ಕಂಡಿದೆ. ದೇಶ ಕಾಯೋ ವೀರ ಯೋಧರಿಗೂ, ರಾಜ್ಯದಲ್ಲಿ ಆರಕ್ಷಕರಾಗೋರಿಗೂ ಮಾತ್ರವಲ್ಲದೆ ನಾಡಿನ ಉತ್ತಮ ಪ್ರಜೆಗಳನ್ನು ತಯಾರು ಪಡಿಸುವಂತಹ ಶಿಕ್ಷಕ ವೃಂದವನ್ನೂ ಕೂಡ ಸಿದ್ದಪಡಿಸಿಕೊಡುತ್ತಿರುವ ಅಕಾಡೆಮಿ ಅಧ್ಯಕ್ಷರಿಗೆ ನನ್ನ ಸಹಸ್ರ ವಂದನೆಗಳು ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆ.28 ರಂದು ಸುಳ್ಯದಲ್ಲಿ ಪ್ರಾರಂಭಗೊಂಡ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಇದರ ಮೊದಲ ಶಾಖೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಿಂದಲೇ ಮುಂದಿನ ದಿನಗಳಲ್ಲಿ ಐ.ಎ.ಎಸ್, ಐ.ಪಿ.ಎಸ್ ಹುದ್ದೆಗಳು ಸೃಷ್ಟಿಯಾಗಬೇಕು, ಇಲ್ಲವೆಂದಾದರೆ ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಂಡು ಏನು ಪ್ರಯೋಜನ ಎಂದ ಅವರು, ಶೀಘ್ರದಲ್ಲೇ ವಿದ್ಯಾಮಾತಾ ಶಾಖೆ ಮಂಗಳೂರು, ಬಳಿಕ ಉಡುಪಿ ಯಲ್ಲೂ ಪ್ರಾರಂಭವಾಗಲಿ ಎಂದು ಹಾರೈಸಿದರು.
ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮಾನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಯಶಸ್ವಿ ಸಾಧನೆ ಮಾಡಿ, ಇದೀಗ ಸುಳ್ಯದಲ್ಲಿ ಶಾಖೆಯೊಂದು ಆರಂಭಗೊಂಡಿದೆ ಸಂತಸ. ಸುಳ್ಯ ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರಿಗಿಂತಲೂ ಎತ್ತರ ಏರಿದೆ. ಆರ್ಥಿಕ ಸಮಸ್ಯೆಯಿರುವಂತಹ ವಿದ್ಯಾರ್ಥಿಗಳಿಗೂ ಅಕಾಡೆಮಿ ತರಬೇತಿ ನೀಡೋ ಕಾರ್ಯ ಮಾಡುವಲ್ಲಿ ಸೈ ಎನಿಸಿದ್ದು, ಮಂಗಳೂರಿನಲ್ಲಿ ಕೂಡ ಶಾಖೆ ಶೀಘ್ರದಲ್ಲೇ ಉದ್ಘಾಟನೆಯಾಗಲಿಯೆಂದು ಹೇಳಿದರು.
ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಈ ಕಟ್ಟಡದಲ್ಲಿ ಒಳ್ಳೆಯ ತರಬೇತಿ ಕೇಂದ್ರ ಆರಂಭವಾಗಬೇಕುನ್ನುವ ಆಕಾಂಕ್ಷೆಯಿತ್ತು ಅದು ಈಗ ಭಾಗ್ಯೆಶ್ ರೈ ಮೂಲಕ ಪೂರ್ಣವಾಗಿದೆ. ಐ.ಎ.ಎಸ್., ಕೆ.ಎ.ಎಸ್ ತರಬೇತಿ ಕೇಂದ್ರವೇ ಇಲ್ಲದಿರುವ ಸುಳ್ಯಕ್ಕೆ ಅತ್ಯುತ್ತಮ ಭಾಗ್ಯ ಒದಗಿ ಬಂದಿದೆ. ಅಕಾಡೆಮಿ ಯೋಜನೆ, ಯೋಚನೆ ಹಾಗೂ ವ್ಯವಸ್ಥೆಯಿಂದ ಯಶಸ್ಸು ಸಾಧ್ಯವಾಗಲಿಯೆಂದು ಹೇಳಿದರು.
ಭಾಗ್ಯೇಶ್ ರೈಯವರ ತಂದೆ ತಾಯಿ ಎ. ಕೆ. ತಿಮ್ಮಪ್ಪ ರೈ ಕೊಳ್ತಿಗೆ ಕೆಳಗಿನ ಮನೆ ಮತ್ತು ರತ್ನಾವತಿ ಟಿ. ರೈ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯ್ ಚಂದ್ರ, ಪಿ.ಸಿ. ಜಯರಾಮ್, ಜಯಪ್ರಕಾಶ್ ರೈ ಪ್ರೋ. ಬಾಲಚಂದ್ರ ಗೌಡ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಗಣೇಶ್ ಶೆಟ್ಟಿ, ಲಯನ್ಸ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ, ರವಿಪ್ರಸಾದ್ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್. ಬಿ. ಜಯರಾಮ್ ರೈ, ಪಿ.ಎಸ್. ಗಂಗಾಧರ್, ಭಾಗ್ಯೇಶ್ ರೈ ಸಹೋದರ ಯೋಗೀಶ್ ರೈ ಮತ್ತು ಚಿಕ್ಕಪ್ಪ ಎ.ಕೆ. ಜಯರಾಮ್ ರೈ, ಅತ್ತೆ ಮಾವ ಸಂಕಪ್ಪ ಶೆಟ್ಟಿ ಹಾಗೂ ಪ್ರೇಮಾ ಎಸ್ ಶೆಟ್ಟಿ, ಜಯರಾಮ ದೇರಪ್ಪಜ್ಜನ ಮನೆ, ಅರವಿಂದ ಚೊಕ್ಕಾಡಿ, ಡಾ. ಪೂವಪ್ಪ ಕಾಣಿಯೂರು, ವಿನಯ ಕಂದಡ್ಕ, ಪಿ.ಬಿ. ಸುಧಾಕರ ರೈ, ಸುಭಾಶ್ಚಂದ್ರ ರೈ ಸಾರ್ಯ, ಹರಿನಾಥ ರೈ ಕೂಡೇಲು, ವಿದ್ಯಾಮಾತಾ ಅಕಾಡೆಮಿ ಇದರ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿಗಳ ಸಹಿತ ಹಲವರು ಹಾಜರಿದ್ದರು.
ಭಾಗ್ಯೇಶ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರೂಪಿಸಿ ಅಕಾಡೆಮಿಯ ಸಂಚಾಲಕಿ ರಮ್ಯಾ ಭಾಗ್ಯೇಶ್ ರೈ ಹಾಗೂ ಪುತ್ರಿ ದೇವಿದ್ಯಾ ರೈ ವಂದಿಸಿದರು. ಕಾರ್ಯಕ್ರಮದ ನಡುವೆ ಪುತ್ತೂರಿನ ವಿಶ್ವ ಕಲಾ ನಿಕೇತನ ತಂಡದಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ಇದಕ್ಕೂ ಮೊದಲು ವೇದಿಕೆ ಮುಂಭಾಗದ ನಟರಾಜ ಮೂರ್ತಿಗೆ ಗೌರವ ಅರ್ಪಣೆ ನೆರವೇರಿತು. ಸಂಜೆ ದುರ್ಗಾ ನಮಸ್ಕಾರವೂ ನಡೆಯಿತು.