ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ) ಮಂಗಳೂರು, ಇದರ ವಾರ್ಷಿಕ ಮಹಾಸಭೆ ಮಂಗಳೂರು ಬಾವುಟ ಗುಡ್ಡೆಯ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಹಾಲಿ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ 2023-25ರ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಕರ್ನಲ್ ಜಯಚಂದ್ರನ್, ಕಾರ್ಯದರ್ಶಿಯಾಗಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಜೊತೆ ಕಾರ್ಯದರ್ಶಿಯಾಗಿ ಜೆಡಬ್ಲ್ಯೂಒ ಬಾಲಚಂದ್ರ, ಕೋಶಾಧಿಕಾರಿಯಾಗಿ ಪಿಒ ಸುಧೀರ್ ಪೈ ಮತ್ತು 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಲೆಫ್ಟಿನೆಂಟ್ ಕರ್ನಲ್ ಪ್ರಭಾಕರ್ ರೈಯವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ಚಟುವಟಿಕೆಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಕರ್ನಲ್ ಭಂಡಾರಿ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ ಮತ್ತು ಸಾರ್ಜೆಂಟ್ ಭಗವಾನ್ ದಾಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ರಿಗೇಡಿಯರ್ ಐ ಎನ್ ರೈ ಮತ್ತು ಕರ್ನಲ್ ಶರತ್ ಭಂಡಾರಿಯವರು ಮಾಜಿ ಸೈನಿಕರಿಗೆ ಉಪಲಬ್ಧವಿರುವ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಸಲಹೆಗಳನ್ನು ನೀಡಿದರು. ನೂತನ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸೈನಿಕ ಬಂದುಗಳು ಸಂಘದ ಸದಸ್ಯರಾಗಿ ಸಂಘವನ್ನು ಬಲಪಡಿಸಲು ಕರೆ ನೀಡಿದರು. ಸಿಪಿಒ ವಿಕ್ರಂ ದತ್ತ ನಿರೂಪಿಸಿದರು. ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.