ಬೆಳ್ತಂಗಡಿ ತಾಲೂಕಿನ ಸವಣಾಲು ಡಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿಗೆ 01-06-1948 ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12 ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ.
ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಪುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು.
ಖಚಿತ ಲಯ ಜ್ಞಾನ, ಲಾಲಿತ್ಯ ಪೂರ್ಣ ನಾಟ್ಯ, ಭಾವನಾತ್ಮಕ ಅಭಿನಯಕ್ಕೆ ಹೆಸರಾದ ದಯಾನಂದ ಶೆಟ್ಟರು, ಪುಂಡು ವೇಷ, ಸ್ತ್ರೀ ವೇಷ, ಇದಿರು ವೇಷ, ಹಾಸ್ಯ, ಬಣ್ಣ, ಹೀಗೆ ಯಕ್ಷರಂಗದ ವಿಭಿನ್ನ ವೇಷಗಾರಿಕೆಯಲ್ಲಿ ಪಳಗಿದ ನಟ. ಅಭಿಮನ್ಯು, ಬಭ್ರುವಾಹನ, ಪರಶುರಾಮ, ಅಶ್ವತ್ಥಾಮ, ವಿಕರ್ಣ, ಸುದೇವ, ನಕ್ಷತ್ರಿಕ, ಜಲಂಧರ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಋತುಪರ್ಣ, ದಾರಿಗಾಸುರ ಮುಂತಾದ ಪೌರಾಣಿಕ ಪಾತ್ರಗಳು ಅವರಿಗೆ ಹೆಸರು ತಂದಿವೆ. ತುಳು ಪ್ರಸಂಗಗಳ ದೇವುಪೂಂಜ, ಬಬ್ಬು, ಚೆನ್ನಯ, ಕಾಂತಣ ಅತಿಕಾರಿಯಂತಹ ಪಾತ್ರಗಳಲ್ಲದೆ ದೇಯಿ, ಕಿನ್ನಿದಾರು, ಭಾಗೀರಥಿ, ಚೇದಿರಾಣಿ, ನೀಲು, ಬ್ಯಾರ್ದಿ, ಮೊದಲಾದ ಸ್ತ್ರೀ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಬೆಳ್ಳಾರೆ ವಿಶ್ವನಾಥ ರೈ ಅವರೊಂದಿಗೆ ಚಂಡ-ಮುಂಡ, ಅರುವ ಕೊರಗಪ್ಪ ಶೆಟ್ಟಿ ಮತ್ತು ದಾಸಪ್ಪ ರೈ ಅವರೊಂದಿಗೆ ಕೋಟಿ- ಚೆನ್ನಯ, ಮಿಜಾರು ಅಣ್ಣಪ್ಪನೊಡನೆ, ಪಯ್ಯ-ಕಿನ್ನಿದಾರು ಇತ್ಯಾದಿ ಅವರ ಜೋಡಿ ವೇಷಗಳು ಯಕ್ಷಗಾನ ಬಯಲಾಟ ರಸಿಕರ ಮನಗೆದ್ದಿವೆ.
ಕರ್ನಾಟಕ ಮೇಳದಿಂದ ನಿವೃತ್ತರಾದ ಬಳಿಕ ಸಸಿಹಿತ್ಲು ಭಗವತೀ ಮೇಳದಲ್ಲಿ ಎಂಟು ವರ್ಷ ತಿರುಗಾಟ ಮಾಡಿದ ದಯಾನಂದ ಶೆಟ್ಟರು ಒಟ್ಟು 52 ವರ್ಷಗಳ ರಂಗಾನುಭವ ಹೊಂದಿದ್ದಾರೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಪೊಳಲಿ ಪ್ರಶಸ್ತಿ, ಆಳಿಕೆ ಮತ್ತು ಬೋಳಾರ ಪ್ರಶಸ್ತಿ, ಯಕ್ಷಗಾನ ಕಲಾರಂಗ ಉಡುಪಿ, ಮಂಗಳೂರಿನ ಶ್ರೀ ಕೃಷ್ಣ ಯಕ್ಷಸಭಾ, ಮುಂಬೈ ತೀಯಾ ಉತ್ಸವ, ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಪುಳಿಂಚ ಸೇವಾ ಪ್ರತಿಷ್ಠಾನ, ಕಟ್ಟೆ ಫ್ರೆಂಡ್ಸ್ ಗಂಜಿಮಠ, ಮಲ್ಲಿಕಾರ್ಜುನ ಸ್ವಯಂ ಸೇವಕ ಸಂಘ ಹೀಗೆ ಹಲವು ಕಡೆಗಳಲ್ಲಿ ಗೌರವ ಸಮ್ಮಾನಗಳನ್ನು ಅವರು ಪಡೆದಿದ್ದಾರೆ. ಯಕ್ಷಗಾನ ಗುರುಗಳಾಗಿ ಮಾನ್ಯ ಸಂತೋಷರಂತಹ ಸಮರ್ಥ ಶಿಷ್ಯರನ್ನು ತಯಾರು ಮಾಡಿದ್ದಾರೆ.
– ಭಾಸ್ಕರ ರೈ ಕುಕ್ಕುವಳ್ಳಿ