ಕರುನಾಡ ಶ್ರೀಮಂತ ಪರಂಪರೆಯ ಪ್ರತೀಕವಾಗಿ ಸಂಪೂರ್ಣ ಶ್ರೀ ಗಂಧದ ಎಣ್ಣೆಯಿಂದಲೇ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಮೈಸೂರು ಸ್ಯಾಂಡಲ್ ಸೋಪು. ದೇಶ ವಿದೇಶದೆಲ್ಲೆಡೆ ಮೈಸೂರು ಸ್ಯಾಂಡಲ್ ಸೋಪ್ ಲಭ್ಯವಿದ್ದರೂ ಅದರ ಬಳಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಂಚೂಣಿಯಲ್ಲಿದೆ.
ಮೈಸೂರಿನ ಅರಸರಾದ ನಾಲ್ವಡಿ (ನಾಲ್ಮಡಿ) ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ಹೇರಳವಾಗಿ ಶ್ರೀಗಂಧದ ಮರಗಳು ಬೆಳೆಯುತ್ತಿದ್ದು, ಯೂರೋಪ್ ರಾಷ್ಟ್ರಗಳಿಗೆ ಮೈಸೂರಿನಿಂದ ಶ್ರೀಗಂಧದ ಕೊರಡುಗಳನ್ನು ರಪ್ತು ಮಾಡಲಾಗುತಿತ್ತು. ಈ ಮಧ್ಯೆ ಪ್ರಪಂಚದ ಮೊದಲನೆಯ ಮಹಾಯುದ್ದ ಶುರುವಾಗಿದ್ದುದರಿಂದ ಗಂಧದ ಕೊರಡುಗಳನ್ನು ರಫ್ತು ಮಾಡಲು ಸಾಧ್ಯವಾಗಲಿಲ್ಲ. ಆಗಾಧ ಪ್ರಮಾಣದಲ್ಲಿ ಸಂಗ್ರಹವಾಗಿರುವ ಪರಿಮಳಯುಕ್ತ ಶ್ರೀಗಂಧದ ಕೊರಡುಗಳನ್ನು ಬಳಸಿಕೊಳ್ಳುವುದು ಹೇಗೆ ? ಎಂಬ ಯೋಚನೆಗೆ ಒಳಗಾದ ಅರಸರು ಆಸ್ಥಾನದ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಇತರರಲ್ಲಿ ಸಮಾಲೋಚಿಸಿ ಒಂದು ತೀರ್ಮಾನಕ್ಕೆ ಬಂದರು.
ಶ್ರೀಗಂಧದ ಎಣ್ಣೆಯನ್ನು ತಯಾರಿಸಿ ರಪ್ತು ಮಾಡಲು ಉದ್ದೇಶಿಸಿ ಮೈಸೂರು ನಗರದಲ್ಲಿ ಗಂಧದೆಣ್ಣೆ ತಯಾರಿಸುವ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಿದ್ದರು. ಆದರೆ ಹೀಗೇ ಉತ್ಪಾದಿಸಿದ ಗಂಧದೆಣ್ಣೆಯನ್ನು ಯುರೋಪ್ ರಾಷ್ಟ್ರಗಳಿಗೆ ರಪ್ತು ಮಾಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಮೈಸೂರಿಗೆ ಬಂದ ವಿದೇಶಿ ಪ್ರವಾಸಿಗರೊಬ್ಬರು ಮಹಾರಾಜರಿಗೆ ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ಅಪರೂಪದ ಸೋಪುಗಳನ್ನು ಕೊಡುಗೆಯಾಗಿ ನೀಡಿದರು. ಅದನ್ನು ಕಂಡ ಮಹಾರಾಜರಿಗೆ ನಾವೇಕೆ ಇಂತಹ ಸೋಪುಗಳನ್ನು ತಯಾರಿಸಬಾರದು? ಎಂಬ ಆಲೋಚನೆ ಬಂದುದರಿಂದ ಸಾಬೂನು ತಯಾರಿಕೆಗೆ ನಾಂದಿಯಾಯಿತು.
ಸಾಬೂನು ತಯಾರಿಕಾ ತಜ್ಞರನ್ನು ಮತ್ತು ತಾಂತ್ರಿಕ ಪರಿಣಿತರನ್ನು ಮುಂಬಯಿಯಿಂದ ಕರೆಸಿಕೊಂಡು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ (ಟೆಕ್ನಾಲಜಿ) ಸೋಪ್ ತಯಾರಿಕೆಯ ಪ್ರಯೋಗ ಮಾಡಲಾಯಿತು. 1916 ರ ಮೇ ತಿಂಗಳಲ್ಲಿ ಬೆಂಗಳೂರಿನ ಕೆ ಆರ್ ವೃತ್ತದ ಬಳಿ ಮೈಸೂರು ಸಂಸ್ಥಾನದ ಅಪ್ಪಟ ಗಂಧದೆಣ್ಣೆ ಬಳಸಿಕೊಂಡು ಸಾಬೂನು ತಯಾರಿಸುವ ಕಾರ್ಖಾನೆ ಸ್ಥಾಪಿಸಲಾಯಿತು. ಸಾಬೂನು ಹಾಗೂ ಗಂಧದೆಣ್ಣೆಗೆ ಬೇಡಿಕೆ ಹೆಚ್ಚಿದ್ದರಿಂದ ಇನ್ನೂ ಕೆಲವು ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಮೈಸೂರು ಸ್ಯಾಂಡಲ್ ವುಡ್ ಸೋಪು ಉತ್ಪಾದಿಸುವ ಬೆಂಗಳೂರಿನಲ್ಲಿರುವ ಮೈಸೂರು KSDL ಕಾರ್ಖಾನೆ ದೇಶದ ಬಹುದೊಡ್ಡ ಕಾರ್ಖಾನೆಗಳಲ್ಲೊಂದು. ಇದು ವರ್ಷಕ್ಕೆ ಸರಿ ಸುಮಾರು 26,000 ಟನ್ ಗೂ ಮಿಕ್ಕಿ ಸೋಪು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಆನೆಯ ತಲೆ ಹಾಗೂ ಸಿಂಹದ ದೇಹವನ್ನು ಹೊಂದಿರುವ ಸಂಕೇತವೇ ಈ ಈ ಸಾಬೂನಿನ ಲೋಗೊ. ಭೌಗೋಳಿಕ ಸೂಚಕ (ಜಿ ಐ ) ಮಾನ್ಯತೆ ದೊರೆತಿದೆ. ಇಂದು ಮಾರುಕಟ್ಟೆಯಲ್ಲಿ ಅದೆಷ್ಟೋ ಬಗೆ ಬಗೆ ಬಣ್ಣದ ಸಾಬೂನುಗಳಿದ್ದರೂ ಮೈಸೂರು ಸ್ಯಾಂಡಲ್ ವುಡ್ ಸೋಪ್ ಗೆ ಅದೇ ಸಾಟಿ ಹೊರತು ಬೇರೆ ಯಾವುದೇ ಸಾಬೂನು ಸಾಟಿಯಿಲ್ಲ.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಕ ಘಟಕದ ಒಳಗೆ ಸುತ್ತಾಡಿ ಸೋಪ್ ತಯಾರಿಕೆ, ಪ್ಯಾಕಿಂಗ್ ಎಲ್ಲವನ್ನೂ ನೋಡಲು ಸಾರ್ವಜನಿಕರಿಗೆ ಅವಕಾಶವಿದೆ. ಮೈಸೂರು ಸ್ಯಾಂಡಲ್ ಸೋಪ್ ಶೇ 100 ರಷ್ಟು ಗಂಧದ ಎಣ್ಣೆಯಿಂದಲೇ ಉತ್ಪಾದಿಸಲ್ಪಡುತ್ತದೆ.
20O6 ರಲ್ಲಿ ಮೈಸೂರು ಸ್ಯಾಂಡಲ್ ವುಡ್ ಸೋಪ್ ಪ್ರಚಾರಕ್ಕಾಗಿ ಮೊದಲ ಬಾರಿ ಮಹೇಂದ್ರ ಸಿಂಗ್ ಧೋನಿಯನ್ನು ರಾಯಭಾರಿಯನ್ನಾಗಿಸಿತು. ಆದರೆ ಧೋನಿ ವಾಣಿಜ್ಯ ಬದ್ಧತೆಯನ್ನು ಮುರಿದರು ಎಂಬ ಅಪವಾದಗಳು ಪತ್ರಿಕೆಯಲ್ಲಿ ವರದಿಯಾಗಿತ್ತು. ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಮೈಸೂರು ಸ್ಯಾಂಡಲ್ ಸೋಪ್ ಜನಮಾನಸದಲ್ಲಿ ಉಳಿದುಕೊಂಡು ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿರುತ್ತದೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ