ಗೆಳೆಯರ ಸ್ವಾವಲಂಬನ ವೆಲ್ಫೇರ್ ಅಸೋಸಿಯೇಷನ್ ನಿಂದ ಶ್ರಾವಣ ಸಂಭ್ರಮದ ಕವಿಗೋಷ್ಠಿಯು ದಿನಾಂಕ 19/08/23 ಶನಿವಾರ ಇಳಿ ಹೊತ್ತು 04 ರಿಂದ ವಿನಾಯಕ ಸಭಾಗೃಹ ಗಣೇಶ ಮಂದಿರ ಪಡ್ಕೆ ಮಾರ್ಗ ಡೊಂಬಿವಲಿ ಪೂರ್ವ ಇಲ್ಲಿ “ಶ್ರಾವಣ ಸಂಭ್ರಮದ ಕವಿಗೋಷ್ಠಿ” ನೇರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನದಿಂದ ಮಾತನಾಡಿದ ಖ್ಯಾತ ಅಂಕಣಗಾರ್ತಿ, ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕವಿಗೋಷ್ಠಿಯ ಬಗ್ಗೆ ಹರ್ಷ ವಕ್ಯಪಡಿಸುತ್ತಾ, 7 ಜನ ಕವಿಗಳು ಓದಿದ ಬೇರೆ ಬೇರೆ ಕವನಗಳು ಬಗೆ ಬಗೆಯ ಅನುಭವವನ್ನು ನೀಡಿತು. ಯಾರ ಕವನವು ಜಳಾಗಿಲ್ಲ. ಶ್ರಾವಣವೇ ಹಾಗೆ ತಾನೆ ಸಂಭ್ರಮದ ಸಂಕೇತ. ದೇವತೆಗಳು ಸಮುದ್ರ ಮಂಥನ ಮುಗಿಸಿ ಭೂವಿಯಲ್ಲಿ ನೆಲೆ ನಿಂತ ಸಮಯ. ವರ್ಷದ ಹನ್ನೆರಡು ಮಾಸಕ್ಕೆ ತನ್ನದೆ ಆದ ಪ್ರಾಮುಖ್ಯತೆ ಇದೆಯಾದರೂ ಶ್ರಾವಣಕ್ಕೆ ಅದರದ್ದೆ ಆದ ಮಹತ್ವ ಇದೆ. ಇಂದಿಲ್ಲಿ ಶ್ರಾವಣ ತಿಂಗಳಲ್ಲಿ, ಶ್ರಾವಣದ ಬಗ್ಗೆ ಕವನ ವಾಚಿಸಿದ ಕವಿಗಳಿಗೆ ಅಭಿನಂದನೆಯೊಂದಿಗೆ ಶುಭ ಕೋರಿದರು ಹಾಗೂ ಆಯೋಜಕರಿಗೆ ವಂದನೆಗಳನ್ನು ಸಲ್ಲಿಸಿದರು.
ಕವಿಗೋಷ್ಠಿಯ ಅಧ್ಯಕ್ಷರಾದ ಲತಾ ಸಂತೋಷ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ಕವಿಗಳ ಕವಿತೆ ತನ್ನ ಅರಿವಿನಂತೆ ಹೇಗಿತ್ತು ಎಂದು ಅರಹುತ್ತಾ ಶ್ರೀಮತಿ ವೇದಾವತಿ ಭಟ್ ವಾಚಿಸಿದ “ಶ್ರಾವಣದ ಸಂಭ್ರಮ” ಕವನ ಅಂದರೆ ಒಬ್ಬ ಶಿಲ್ಪಿಯ ಕೈಗೆ ಒಂದು ಕರಿ ಕಲ್ಲು ಕೊಟ್ಟರೂ ಅವನು ಅದನ್ನು ತಿದ್ದಿ, ತಿಡಿ ಸುಂದರವಾದ ಮೂರ್ತಿಯನ್ನು ಮಾಡುತ್ತಾನೆ ಹಾಗೆ ನಿಮಗೆ ಕೊಟ್ಟ ಶ್ರಾವಣ ಎಂಬ ವಿಷಯಕ್ಕೆ ಇಡೀ ಶ್ರಾವಣ ತಿಂಗಳನ್ನು, ಅದರ ಸಿರಿಸೊಬಗನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದ್ದೀರಿ. ಎಲ್ಲೆಡೆ ಸಂತಸದ ಹೊನಲು ಎನ್ನುತ್ತಾ, ಹಬ್ಬದ ಹೋಳಿಗೆಯನ್ನು ನೆನಪಿಸುತ್ತಾ ಕವನಕ್ಕೆ ಜೀವ ಕಳೆ ನೀಡಿದಿರಿ. ನಿಮ್ಮ ಕಾವ್ಯ ಜಗಕ್ಕೆ ಶರಣು ಎಂದರು.
ಶ್ರೀಮತಿ ಕುಮುದಾ ಶೆಟ್ಟಿಯವರು ವಾಚಿಸಿದ ಬಾಗಿನ ಕವನಕ್ಕೆ ಪ್ರತಿಕ್ರಿಯೆಯಾಗಿ ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಪ್ರಾಸ ಬದ್ದವಾಗಿ, ಶಬ್ದಗಳನ್ನು ಪೋಣಿಸಿ, ಪ್ರಕೃತಿಯ ಸೊಬಗಿನ ವಿಭಿನ್ನ ಮಗ್ಗುಲುಗಳ ಸುಂದರ ಚಿತ್ರಣದ ಕವಿತೆ ನಿಮ್ಮದಾಗಿತ್ತು. ತನ್ನ ಆಲೋಚನಾ ಶಕ್ತಿಯೊಂದಿಗೆ, ಕಲ್ಪನೆಯ ಲಹರಿಯಿಂದ ಭಾವನೆಗಳ ಬೀಜ ಬಿತ್ತಿ, ಕವಿತೆ ಎಂಬ ವಿಶಿಷ್ಟ ಫಲವನ್ನು ನಮ್ಮೆಲ್ಲರ ಮುಂದೆ ತೆರೆದಿಟ್ಟಿದ್ದೀರಿ ಎಂದು ಶುಭಕೊರಿದರು.
ಪ್ರಕೃತಿಯೊಂದಿಗೆ ಮಾತಾಡುವುದು ಇದೆಯಲ್ಲ ಅದರ ಪ್ರತಿರೂಪವೇ ಇಂದು ಶ್ರೀಮತಿ ಲಲಿತಾ ಪ್ರಭು ಅಂಗಡಿ ವಾಚಿಸಿದ ಚೆಲುವ ಶ್ರಾವಣ ಎಂಬ ಕವಿತೆ. ಹಲವಾರು ವರ್ಷಗಳಿಂದ ಕವನ ರಚಿಸಿ, ಕವನ ರಚನೆ ಕರಗತ ಮಾಡಿಕೊಂಡು ಕವನದಲ್ಲಿ ಬಳಸಿದ ಶಬ್ದಗಳ ಸಿಂಚನದಿಂದ ಕವನ ಗೆದ್ದಿದೆ. ಪ್ರಕೃತಿಯನ್ನು ನಿರೂಪಿಸುವ ಜಾಣ್ಮೆ, ನಿಮ್ಮ ಕಾವ್ಯ ಪ್ರೇಮ ಹಾಗೂ ಗ್ರಹಿಕೆಯ ಶಕ್ತಿಗೆ ಶರಣು ಎಂದು ಲಲಿತ ಅಂಗಡಿಯವರಿಗೆ ಶುಭಕೊರಿದರು.
ಶ್ರೀಮತಿ ಗಾಯತ್ರಿ ನಾಗೇಶ್ ಓದಿದ ಸ್ವಾಣಿ ತಿಂಗಳ್ ಕವನ ತಮ್ಮ ಅರಿವಿಗೆ, ಅನುಭವಕ್ಕೆ ನಿಲುಕಿದ ವಿಷಯದ ಸ್ಥಿತಿಗತಗಳನ್ನು ವರ್ಣಿಸುತ್ತಾ ವಸ್ತು ಸ್ಥಿತಿಯನ್ನು ಅರಹುತ್ತಾ, ಸೂಕ್ಷ್ಮವಾಗಿ ಮನಕ್ಕೆ ತಲುಪಿಸುವ ಕವನ ತಮ್ಮದಾಗಿತ್ತು. ಕವಿಯತ್ರಿಯ ಮನದ ಭಾವನೆ, ಕಲ್ಪನೆ ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಮಣ್ಣಿನ ಕಂಪಿನಲ್ಲಿ ಕವಿತೆ ಸಹಜವಾಗಿ ವೈತಳೆದಿದೆ ಎಂದು ಅಭಿಪ್ರಾಯ ಪಟ್ಟರು.
ಶ್ರೀಮತಿ ಸರೋಜಾ ಅಮಾತಿ ಸುಂದರ ಕವನ ವಾಚನದೊಂದಿಗೆ ಅಚ್ಚುಕಟ್ಟಾಗಿ ಸಹಜತೆಯನ್ನು ತುಂಬಿಕೊಂಡು ನಿರೂಪಣೆಯನ್ನು ಮಾಡಿಕೊಂಡು ಶರಣು ಎನ್ನೊ ಮನವೆ ಎನ್ನುತ್ತಾ ಆಷಾಡದ ಗಾಳಿಯೊಂದಿಗೆ ತೂಗಾಡಿಸಿದಂತೆ ಲೋಕ ಜ್ಞಾನ ಮತ್ತು ಜೀವನಾನುಭವಗಳ ಪರಿಪಾಠ ಸಮರಸವಾಗಿ ಬೆರೆಸಿ, ಅನುಭವಿಸಿ, ಕವನಕ್ಕೆ ಭಾವಾಭಿವ್ಯಕ್ತಿಯು, ಬಹಿರಂಗದ ಕಲಾರೂಪವು ಅಗತ್ಯವಾಗಿ ಬೇಕು ಎನ್ನುವುದನ್ನು ಕಾವ್ಯ ಜಗದೊಳಗೆ ಹಸಿಯಾಗಿ, ಹಸಿರಾಗಿ ನಿಲ್ಲಬಲ್ಲ ಶಬ್ದಗಳ ನರ್ತನದೊಂದಿಗಿನ ಸರೋಜಾ ಅವರು ಕವನ ವಾಚಿಸಿದರು ಎಂದು ತನ್ನ ಮನದ ಭಾವನೆ ವ್ಯಕ್ತಪಡಿಸಿದರು.
ಶ್ರೀ ಆನಂದ ಭಾವಿಕಟ್ಟಿ ಶ್ರಾವಣ ಬಂತು ಎಂಬ ಕವನದಲ್ಲಿ ತನ್ನ ಅನುಭವವನ್ನು ಕವನದ ಮೂಲಕ ಸುಲಭವಾಗಿ ಕೇಳುಗರಿಗೆ ದಾಟಿಸಿ ಬಿಟ್ಟಿದ್ದಿರಿ. ಕವನ ರಚನೆಯು ಅದನ್ನು ಪ್ರಸ್ತುತಪಡಿಸುವುದು ಒಂದು ಕಲೆ. ನಿಮ್ಮ ಕವನದಲ್ಲಿ ಭಾಷಾ ಶೈಲಿ ಸೊರಗಿಲ್ಲ. ಸಾಗರದಷ್ಟು ವಿಶಾಲವಾದ ಶ್ರಾವಣವನ್ನು ಬಿಂದು ಒಂದರಲ್ಲಿ ತೋರಿಸುವುದು ಅಷ್ಟು ಸುಲಭವೂ ಅಲ್ಲ ಸರಳವೂ ಅಲ್ಲ. ಆದರೆ ನೀವು ನಿಮ್ಮ ಕವನದಲ್ಲಿ ಅತಂಹ ಜಾಣ್ಮೆಯನ್ನು ತೋರಿಸಿದಿರಿ ಎಂದು ಕವನದ ಬಗ್ಗೆ ಲತಾ ಸಂತೋಷ ಅರುಹಿದರು.
ಲಕ್ಷ್ಮಿ ಹೇರೂರು ವಾಚಿಸಿದ ಕವನ ಅರಸಿ ಮತ್ತು ಹಕ್ಕಿ. ಆ ಕವನದಲ್ಲಿನ ಸಾಲುಗಳು ಶ್ರಾವಣದ ಬಣ್ಣ ಬಣ್ಣದ ಬಿಡಿ ಮೊಗ್ಗುಗಳನ್ನು ನೇಯ್ದು ಮಾಡಿದ ಹೂವಿನ ಮಾಲೆಯಂತೆ ಅನ್ನಿಸಿತು. ನಿಮ್ಮ ಕವನ ಇಂದಿನ ಈ ವೇದಿಕೆಗೆ ಪ್ರಸುತ್ತವಾಗಿರುವುದು ಅಲ್ಲದೆ ಕವನದಲ್ಲಿನ ಶಬ್ದಗಳು ನಿತ್ಯ ನೂತನವಾಗಿತ್ತು ಎಂದು ತನಗಾದ ಅನುಭವವನ್ನು ಅಧ್ಯಕ್ಷರು ವ್ಯಕ್ತಪಡಿಸಿದರು.
ಎಲ್ಲಾ ಕವಿಗಳ ಕವನ ರಚನೆಯ ಶೈಲಿಯು ಚೆನ್ನಾಗಿತ್ತು. ನಿಮ್ಮೆಲ್ಲರ ಕವನಗಳು ಕಾವ್ಯ ಜಗದೊಳಗೆ ಸುಳಿದಾಡಲಿ. ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿ ನಡೆಯಲಿ, ನಿರಂತರ ಕವನ ರಚಿಸುತ್ತಾ, ಪ್ರಸ್ತುತ ಪಡಿಸುತ್ತಾ ನಿಮ್ಮೆಲ್ಲರ ಕವನದ ಕಂಪು ಎಲ್ಲೆಡೆ ಪಸರಿಸಲಿ. ಎಲ್ಲರಿಗೂ ಶುಭವಾಗಲಿ ಎಂಬ ಹಾರೈಕೆಯೊಂದಿಗೆ ಇಂದು ಕವನ ವಾಚನ ಮಾಡಿದ ಕವಿಗಳ ಕಲ್ಪನೆಯ ಕವನದ ಸಾಲುಗಳಿಗೆ ಕಿವಿಯಾದ ಸಭಾಸದರಿಗೆ ಕಾರ್ಯಕ್ರಮ ಆಯೋಜಕರಿಗೂ ವಂದಿಸಿ ಲತಾ ಸಂತೋಷ ಶೆಟ್ಟಿ ತನ್ನ ಸ್ವರಚಿತ ಕವನ ಶ್ರಾವಣದ ಸೊಬಗು ಕವಿತೆ ವಾಚಿಸಿದರು.
ಸ್ವಾವಲಂಬನ ಕೇಂದ್ರ ಹಾಗು ವರಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಇವರಿಂದ ಭಜನೆ, ಕುಣಿತ ಭಜನೆ, ಹೂ ಕಟ್ಟುವ ಸ್ಪರ್ಧೆ, ನೃತ್ಯ, ಯುವ ಪ್ರತಿಭಾನ್ವಿತರಾದ ಶ್ರೀ ರತನ್ ಪ್ರಭು ಹಾಗು ಶ್ರೀ ಜಯಪ್ರಕಾಶ ಜೈನ್ ಇವರಿಗೆ ಸನ್ಮಾನ ನೇರವೇರಿತು. ಗೆಳೆಯರ ಸ್ವಾವಲಂಬನ ವೆಲ್ಫೇರ್ ಅಸೋಸಿಯೇಷನ್ (ರಿ) ಅಧ್ಯಕ್ಷರಾದ ಪ್ರೋ ವೆಂಕಟೇಶ ಪೈ ಮತ್ತು ಉಪಾಧ್ಯಕ್ಷ ವಿಶ್ವನಾಥ ದೊಡ್ಡಮನೆಯವರು ವೇದಿಕೆಯಲ್ಲಿದ್ದರು.