ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಅರಿವನ್ನು ಮೂಡಿಸುವುದರೊಂದಿಗೆ ಆಟಿ ತಿಂಗಳಲ್ಲಿ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಹೇಗೆ ಬದುಕುತ್ತಿದ್ದರು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ತುಳುನಾಡಿನ ಮಹಿಳೆಯರು ಎಲ್ಲ ಕಷ್ಟಗಳನ್ನು ನಿಭಾಯಿಸಿ ಸಂಸಾರವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು ಎಂದು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಉಪ ಕಾರ್ಯಧ್ಯಕ್ಷೆ ಮನೋರಮಾ ಎನ್. ಬಿ. ಶೆಟ್ಟಿ ಅವರು ನುಡಿದರು.
ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಇದರ ಮಹಿಳಾ ವಿಭಾಗದ ವತಿಯಿಂದ ಸಂಘದ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಸಭಾಗೃಹದಲ್ಲಿ ಜರಗಿದ ಜನ್ಮಭೂಮಿಡ್ ಆನಿದ ಆಟಿ ಕರ್ಮ ಭೂಮಿಡ್ ಇನಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಲಾ ಎ. ಶೆಟ್ಟಿ ಅವರ ನೇತೃತ್ವದಲ್ಲಿ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ಮಹಿಳೆಯರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಮಾಲತಿ ಜೆ. ಮೊಯಿಲಿ ಅವರು ಮಾತನಾಡಿ, ತುಳುನಾಡಿನ ಆಟಿ ತಿಂಗಳ ವಿಶೇಷತೆಯನ್ನು ಮುಂಬಯಿಯ ಸಂಘ – ಸಂಸ್ಥೆಗಳು ಆಯೋಜಿಸುತ್ತಿರುವುದು ನಮ್ಮ ಯುವ ಪೀಳಿಗೆಗೆ ನಾಡಿನ ಬುದುಕಿನ ಅರಿವನ್ನು ಮೂಡಿಸುವ ಕೆಲಸವಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಈ ಸಂದರ್ಭದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಬಾಬಾಸ್ ಗ್ರೂಪ್ ಆಫ್ ಕಂಪೆನೀಸ್ ಇದರ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ತನ್ನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಅವರು ಅತಿಥಿ – ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ನಮ್ಮ ಸಂಸ್ಥೆಯ ಮಹಿಳಾ ವಿಭಾಗವು ಸದಾ ಇಂತಹ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಮ್ಮ ಸಂಸ್ಕೃತಿ – ಸಂಸ್ಕಾರವನ್ನು ಉಳಿಸಿ – ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ನುಡಿದು ಸರ್ವ ಸಹಕಾರ ಬಯಸಿದರು.
ತಾರಾ ಕರುಣಾಕರ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಂಗ ನಿರ್ದೇಶಕ ನಾರಾಯಣ್ ಶೆಟ್ಟಿ ನಂದಳಿಕೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಮತ್ತು ಮಕ್ಕಳಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ವೇದಿಕೆಯಲ್ಲಿ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಪ್ರಮೀಳಾ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ, ಕೋಶಾಧಿಕಾರಿ ಧನ್ಯಾಕ್ಷೀ ಶೆಟ್ಟಿ, ಜತೆ ಕಾರ್ಯದರ್ಶಿ ಇಂದಿರಾ ಪೂಜಾರಿ, ಜತೆ ಕೋಶಾಧಿಕಾರಿ ಉಷಾ ಎಚ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.