ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ, ಚಿಣ್ಣರಬಿಂಬ, ಮುಂಬಯಿ, ನಾರಾಯಣಾಮೃತ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಚಿಣ್ಣರಬಿಂಬದ ಶಿಕ್ಷಕರ ಸಮಾವೇಶ, ಗೌರವಾರ್ಪಣೆ ಕಾರ್ಯಕ್ರಮ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ದಿನಾಂಕ 17/8/2023ರ ಗುರುವಾರ ಇಳಿಹೊತ್ತು 4ರಿಂದ ಮುಂಬಯಿ ವಿಶ್ವವಿದ್ಯಾಲಯದ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ನಡೆಯಲಿದೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಣ್ಣರಬಿಂಬದ ರೂವಾರಿಗಳಾದ ಶ್ರೀ ಪ್ರಕಾಶ್ ಭಂಡಾರಿ ಹಾಗೂ ಶ್ರೀ ಸುರೇಂದ್ರಕುಮಾರ್ ಹೆಗ್ಡೆ, ನಾರಾಯಣಾಮೃತ ಫೌಂಡೇಶನ್ನಿನ ಎನ್.ಆರ್.ರಾವ್ ಅವರು ಪಾಲ್ಗೊಳ್ಳಲಿರುವರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ. ಅಂದು ಚಿಣ್ಣರಬಿಂಬದ ಸುಮಾರು 56 ಶಿಕ್ಷಕರನ್ನು ಗೌರವಿಸಲಾಗುವುದು. ಚಿಣ್ಣರಬಿಂಬದ ಕೇಂದ್ರ ಸಮಿತಿಯ ಸದಸ್ಯರು, ವಲಯ ಮುಖ್ಯಸ್ಥರು, ಶಿಬಿರ ಮುಖ್ಯಸ್ಥರು, ಸಾಂಸ್ಕೃತಿಕ ಮುಖ್ಯಸ್ಥರು ಹಾಗೂ ಪಾಲಕರು ಉಪಸ್ಥಿತರಿರುವರು ಎಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಚಿಣ್ಣರಬಿಂಬದ
ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
ಚಿಣ್ಣರಬಿಂಬ:- ಕಳೆದ ಇಪ್ಪತ್ತು ವರ್ಷಗಳಿಂದ ಮುಂಬಯಿಯಲ್ಲಿ ಚಿಣ್ಣರಬಿಂಬ ಎಂಬ ಸಂಸ್ಥೆ ಮನೆಮಾತಾಗಿದೆ. ಮುಂಬಯಿಯಲ್ಲಿ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಚಿಣ್ಣರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಚಿಣ್ಣರಬಿಂಬ. ವೃತ್ತಿಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಯಾಗಿದ್ದರೂ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡು ಚಿಣ್ಣರಬಿಂಬದ ಸೇವೆಗಾಗಿ ತಮ್ಮನ್ನು ಮುಡುಪಾಗಿರಿಸಿದವರು ಚಿಣ್ಣರಬಿಂಬದ ರೂವಾರಿಗಳಾಗಿರುವ ಪ್ರಕಾಶ್ ಭಂಡಾರಿ ಅವರು. ಮುಗ್ದ ಮನಸ್ಸಿನ ಮುದ್ದು ಮಕ್ಕಳಿಗೆ ನಾಡು, ನುಡಿ, ಸಂಸ್ಕೃತಿ ಸಂಸ್ಕಾರವನ್ನು ಕಲಿಸಿ ಆ ಮೂಲಕ ಸಶಕ್ತ, ಸದೃಢ ಸಮಾಜ ನಿರ್ಮಾಣಕ್ಕಾಗಿ ಪಣ ತೊಟ್ಟವರು. ಸುಮಾರು 5000 ಪುಟಾಣಿಗಳಿಗೆ ಮುಂಬಯಿಯಂತಹ ಮಹಾನಗರದಲ್ಲಿ ಸುಮಾರು ಇಪ್ಪತ್ತೈದು ಶಿಬಿರಗಳ ಮುಖೇನ ವಿವಿಧ ಕ್ಷೇತ್ರಗಳಲ್ಲಿ ತರಬೇತು ಗೊಳಿಸುವುದು ಕಷ್ಟ ಸಾಧ್ಯವಾದರೂ ಅದನ್ನು ಸಾಧಿಸಿ ತೋರಿಸಿದವರು ಅವರು.
ತವರು ನೆಲದ ಕಂಪನ್ನು, ಸಾಂಸ್ಕೃತಿಕ ವೈಭವವನ್ನು, ಅಧ್ಯಾತ್ಮಿಕ ಒಲವನ್ನು ನಮ್ಮ ಪುಟಾಣಿಗಳಿಗೆ ತಲುಪಿಸುವ, ಅದನ್ನು ಉಳಿಸಿ ಬೆಳೆಸುವ ಮುಖಾಂತರ ಒಂದು ಭವ್ಯ ಸಮಾಜದ ಕನಸನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟ ಸಂಸ್ಥೆ ಚಿಣ್ಣರಬಿಂಬ. ಇಲ್ಲಿ ತರಬೇತಿ ಪಡೆದ ಚಿಣ್ಣರಬಿಂಬದ ಅದೆಷ್ಟೋ ಪ್ರತಿಭೆಗಳು ಹೊರಹೊಮ್ಮಿ ನಾಡಿನೆಲ್ಲೆಡೆ ಹೆಸರು ಮಾಡಿದೆ. ಯಕ್ಷಗಾನ, ನೃತ್ಯ, ಹಾಡು, ನಾಟಕ, ಭಾಷಣ ಕಲೆ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳಲ್ಲಿ ಇಲ್ಲಿನ ಪುಟಾಣಿಗಳು ಮಿಂಚುತ್ತಿದ್ದಾರೆ. ಇಂತಹ ಸಂಸ್ಥೆಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. ಅದು ನಮ್ಮ ಕರ್ತವ್ಯವೂ ಹೌದು. ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ನಮ್ಮ ಚಿಣ್ಣರಿಗೆ ಕನ್ನಡ ಭಾಷೆಯನ್ನು ಕಲಿಸಿ ಆ ನಿಟ್ಟಿನಲ್ಲಿ ಅವರನ್ನು ತರಬೇತುಗೊಳಿಸುವ ಚಿಣ್ಣರಬಿಂಬದ ಕನ್ನಡ ಕಲಿಕಾ ತರಗತಿಯ ಕಾರ್ಯವೈಖರಿ ಅಪೂರ್ವವಾದುದು. ಅದಕ್ಕೆ ಬೇಕಾದ ಅರ್ಹ ಶಿಕ್ಷಕರನ್ನು ನೇಮಿಸಿ ಸುಸಾಂಗವಾಗಿ ತರಗತಿಗಳು ನಡೆಯುತ್ತಿರುವುದು ಈ ಸಂಸ್ಥೆಯ ವಿಶೇಷ. ಆ ಶಿಕ್ಷಕರಿಗೆ ಸರಿಯಾದ ತರಬೇತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಸಹಯೋಗದೊಂದಿಗೆ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ ಪ್ರತಿವರ್ಷ ನೀಡಲಾಗುತ್ತದೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಚಿಣ್ಣರಬಿಂಬದ ಕನ್ನಡ ಶಿಕ್ಷಕರು ಹಾಗೂ ಭಜನೆ ಶಿಕ್ಷಕರನ್ನು ಗೌರವಿಸುವ ಕೆಲಸದಲ್ಲಿಯೂ ಕನ್ನಡ ವಿಭಾಗ ಕೈಜೋಡಿಸುತ್ತಾ ಬಂದಿದೆ.